Categories: ಲೇಖನ

ಮಕ್ಕಳಿಗಾಗಿ ಎರಡು ನೀತಿ ಕಥೆಗಳು…….

ಕಥೆ ಹೇಳುವೆ, ಕೇಳಿ….

ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು…….

ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿರಿಯರನ್ನು ನಿರ್ಲಕ್ಷಿಸುವವರ ಆತ್ಮಕ್ಕೆ ನೇರವಾಗಿ ಚುಚ್ಚುತ್ತದೆ…….

ನೀವು ಈಗಾಗಲೇ ಇದನ್ನು ನೋಡಿರಬಹುದು ಅಥವಾ ಕೇಳಿರಬಹುದು‌. ಅದನ್ನು ಮತ್ತೊಮ್ಮೆ ನೆನಪಿಸುತ್ತಾ…………

ಒಂದು ಪಾರ್ಕಿನ ಬೆಂಚಿನ ಮೇಲೆ ಎಳೆ ಬಿಸಿಲಿನ ಬೆಳಗಿನ ಸಮಯದಲ್ಲಿ 75/85 ರ ವಯಸ್ಸಿನ ವೃದ್ದರೊಬ್ಬರು ಕುಳಿತಿದ್ದಾರೆ. ಅವರ ಪಕ್ಕದಲ್ಲೇ ಅವರ ಸುಮಾರು 25 ವರ್ಷದ ಮಗ ಪತ್ರಿಕೆ ಓದುತ್ತಾ ಕುಳಿತಿದ್ದಾನೆ……

ಆ ಪಾರ್ಕಿನ ನಿಶ್ಯಬ್ದ ವಾತಾವರಣದಲ್ಲಿ ಒಂದು ಮರದಿಂದ ಯಾವುದೋ ಪಕ್ಷಿಯ ವಿಚಿತ್ರ ಧ್ವನಿ ಕೇಳಿ ಬರುತ್ತದೆ. ಆ ತಂದೆಗೆ ಕುತೂಹಲ ಉಂಟಾಗುತ್ತದೆ. ಪತ್ರಿಕೆ ಓದುತ್ತಿದ್ದ ಮಗನನ್ನು ” ಕಂದ, ಆ ಧ್ವನಿ ಕೇಳುತ್ತಿದೆಯಲ್ಲ ಅದು ಯಾವ ಹಕ್ಕಿಯ ಧ್ವನಿ ನಿನಗೆ ಗೊತ್ತೆ ” ಎಂದು ಕೇಳುತ್ತಾರೆ……

ಓದುವುದರಲ್ಲಿ ಮಗ್ನನಾಗಿದ್ದ ಮಗ ನಿರ್ಲಕ್ಷ್ಯದಿಂದ ” ಗೊತ್ತಿಲ್ಲ ” ಎಂದು ಉತ್ತರಿಸಿ ಸುಮ್ಮನಾಗುತ್ತಾನೆ……

ಆ ಪಕ್ಷಿಯ ಧ್ವನಿ ಮತ್ತೆ ಮತ್ತೆ ಕೇಳಿಬರುತ್ತದೆ. ಆ ಹಿರಿಯರಿಗೆ ಮತ್ತಷ್ಟು ಕುತೂಹಲ ಹೆಚ್ಚಾಗುತ್ತದೆ. ಯೋಚಿಸಿದಷ್ಟು ಯಾವ ಪಕ್ಷಿ ಎಂಬ ಗೊಂದಲ ಉಂಟಾಗುತ್ತದೆ……

ಮತ್ತೊಮ್ಮೆ ಮಗನನ್ನು ” ಪುಟ್ಟ ಸರಿಯಾಗಿ ಕೇಳು. ಇದರ ಧ್ವನಿ ನಾನು ಬಹಳ ಕೇಳಿದ್ದೇನೆ. ಆದರೆ ಪಕ್ಷಿಯ ಹೆಸರು ನೆನಪಾಗುತ್ತಿಲ್ಲ. ನಿನಗೆ ತಿಳಿದಿರಬಹುದು ” ಎನ್ನುತ್ತಾರೆ…….

ಪತ್ರಿಕೆ ಓದುತ್ತಿದ್ದ ಮಗನಿಗೆ ಸ್ವಲ್ಪ ಅಸಹನೆ ಉಂಟಾಗುತ್ತದೆ. ” ಆಗಲೇ ಹೇಳಿದೆನಲ್ಲಾ ನನಗೆ ಅದೆಲ್ಲಾ ಗೊತ್ತಿಲ್ಲ ” ಎಂದು ಧ್ವನಿ ಏರಿಸಿ ಉತ್ತರಿಸುತ್ತಾನೆ…..

ಹಿರಿಯರು ಸುಮ್ಮನಾಗುತ್ತಾರೆ. ಸ್ವಲ್ಪ ಹೊತ್ತಿಗೆ ಆ ಪಕ್ಷಿಯ ಧ್ವನಿ ಇನ್ನೂ ಹತ್ತಿರವಾಗುತ್ತದೆ ಮತ್ತೂ ಜೋರಾಗಿ ಕೇಳಿಸುತ್ತದೆ. ವೃದ್ದರಿಗೆ ಆ ಧ್ವನಿ ಮಾಡುತ್ತಿರುವ ಹಕ್ಕಿಯ ಹೆಸರು ನೆನಪಾಗುತ್ತಿಲ್ಲ. ಆದರೆ ಅದನ್ನು ಬಹಳ ಹಿಂದೆ ಕೇಳಿದ ನೆನಪು ಮಾತ್ರ ಸ್ಮೃತಿಪಟಲದಲ್ಲಿ ಅಚ್ಚೊತ್ತಿದಂತಿದೆ…..

ಮನಸ್ಸು ತಡೆಯದೆ ವಿಲ ವಿಲ ಒದ್ದಾಡುತ್ತದೆ. ಮತ್ತೆ ಮಗನನ್ನು “ಮಗನೇ ದಯವಿಟ್ಟು ಇನ್ನೊಮ್ಮೆ ಆ ಧ್ವನಿ ಕೇಳು. ನಿನಗೆ ನೆನಪಾಗಬಹುದು. ಆ ಧ್ವನಿ ನನಗೆ ಬಾಲ್ಯದ ದಿನಗಳನ್ನು ಜ್ಞಾಪಿಸುತ್ತಿದೆ. ಹಕ್ಕಿಯ ಹೆಸರು ಗೊತ್ತಾದರೆ ತುಂಬಾ ಖುಷಿಯಾಗುತ್ತದೆ.”…..

ಪದೇ ಪದೇ ತನ್ನ ಪತ್ರಿಕೆಯ ಓದಿಗೆ ಅಡ್ಡಿಪಡಿಸುತ್ತಿದ್ದ ತಂದೆಯ ಬಗ್ಗೆ ಅವನ ಅಸಹನೆ ಮೇರೆ ಮೀರುತ್ತದೆ.
” ಅಪ್ಪಾ ಆಗಲೇ ಹೇಳಿದೆನಲ್ಲ. ನನಗೆ ಗೊತ್ತಿಲ್ಲ ಅಂತ. ಎಷ್ಟು ಸಾರಿ ಹೇಳುವುದು. ಯಾಕೆ ಸುಮ್ಮನೆ ತಲೆ ತಿನ್ನುವೆ. ಅದಕ್ಕೆ ನನಗೆ ನಿನ್ನ ಜೊತೆ ಬರಲು ಇಷ್ಟವಾಗುವುದಿಲ್ಲ ” ಎಂದು ಕೋಪದಿಂದ ಹೇಳಿ ಪತ್ರಿಕೆ ಮುದುಡಿ ಇನ್ನೊಂದು ಬೆಂಚಿನ ಮೇಲೆ ಹೋಗಿ ಕುಳಿತುಕೊಳ್ಳುತ್ತಾನೆ…..

ಆ ವೃದ್ದರಿಗೆ ಬೇಸರವಾದರೂ ಅದನ್ನು ತೋರಿಸಿಕೊಳ್ಳದೆ ಸ್ವಲ್ಪ ಸಮಯದ ನಂತರ ಮಗ ಕುಳಿತಿದ್ದ ಬೆಂಚಿನ ಬಳಿ ಹೋಗಿ
” ಚಿನ್ನ ಕ್ಷಮಿಸು ನನ್ನದು ತಪ್ಪಾಯಿತು. ನಿನಗೆ ಬೇಸರ ಮಾಡಿದ್ದಕ್ಕೆ. ಏನೋ ಮನಸ್ಸು ತಡೆಯಲಿಲ್ಲ ” ಎಂದು ಹೇಳಿ ಪಕ್ಕದಲ್ಲಿ ಕುಳಿತು ಅವನ ಮೈದಡವುತ್ತಾ……

” ಬಂಗಾರ ಆಗಿನ್ನೂ ನಿನಗೆ 5 ವರ್ಷ. ನಿನ್ನ ಅಮ್ಮನಿಗೆ ಖಾಯಿಲೆಯಾಗಿತ್ತು. ನೀನು ಅಮ್ಮನ ಬಳಿ ಹೋಗುವಂತಿರಲಿಲ್ಲ. ತುಂಬಾ ಹಠ ಮಾಡಿ ಅಳುತ್ತಿದ್ದೆ. ಆಗ ನಿನ್ನನ್ನು ಹೊರಗೆ ತಿರುಗಾಡಲು ಭುಜದ ಮೇಲೆ ಹೊತ್ತು ಸಾಗುತ್ತಿದ್ದೆ. ನೀನು ದಾರಿಯಲ್ಲಿ ಕಾಣುತ್ತಿದ್ದ ಪ್ರತಿ ವಸ್ತುಗಳನ್ನು ಪ್ರಾಣಿ ಪಕ್ಷಿಗಳನ್ನು ಇದು ಏನು ಇದು ಏನು ಎಂದು ಮತ್ತೆ ಮತ್ತೆ ನೂರಾರು ಬಾರಿ ಕೇಳುತ್ತಿದ್ದೆ. ನೀನು ಪ್ರತಿ ಬಾರಿ ಕೇಳಿದಾಗಲೂ ನಾನು ಸಂತೋಷದಿಂದಲೇ ನಗುನಗುತ್ತಾ ಮತ್ತೆ ಮತ್ತೆ ಹೇಳುತ್ತಿದ್ದೆ. ಇದು ಕೇವಲ ಒಂದು ದಿನದ ಘಟನೆಯಲ್ಲ. ನೀನು ಕಾಲೇಜಿಗೆ ಸೇರುವವರೆಗೂ ನಾನು ನಿನ್ನ ಎಲ್ಲಾ ಪ್ರಶ್ನೆಗಳಿಗೂ ನಗುನಗುತ್ತಾಲೇ ಉತ್ತರಿಸುತ್ತಿದ್ದೆ ಮತ್ತು ನೀನು ಈಗಲೂ ಕೇಳಿದರೂ ಸಹ…………” ಎಂದು ಆಕಾಶದ ಕಡೆ ದೃಷ್ಟಿ ನೆಡುತ್ತಾರೆ……….

ಈ ದೃಶ್ಯದ ತುಣುಕಿನಲ್ಲಿ ಮಗನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆತ ತಂದೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾನೆ ಮತ್ತು ತನ್ನ ವರ್ತನೆ ಬದಲಾಯಿಸಿಕೊಳ್ಳುತ್ತಾನೆ…….

ಇದನ್ನು ಓದಿದ ( ನನ್ನನ್ನೂ ಸೇರಿ ) ನಾವುಗಳು ಸಹ ಕನಿಷ್ಠ ಪಕ್ಷ ಒಂದಷ್ಟು ಪ್ರಮಾಣದ ತಾಳ್ಮೆ ಮತ್ತು ಪ್ರೀತಿಯನ್ನು ನಮ್ಮ ಹಿರಿಯರ ಬಗ್ಗೆ ತೋರಿಸೋಣ. ಈ ಕಥೆಯ ಸಾರಾಂಶವನ್ನು ಪ್ರಾಯೋಗಿಕವಾಗಿ ಅನುಸರಿಸಲು ಪ್ರಯತ್ನಿಸೋಣ…..

( ಕೆಲವು ತಂದೆ ತಾಯಿ ಮತ್ತು ಹಿರಿಯರು ಸಹ ತಮ್ಮ ಮಕ್ಕಳಿಗೆ ಅವರ ಸ್ವಾತಂತ್ರ್ಯ ಅನುಭವಿಸಲು ಬಿಡದೆ, ಅವರ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ, ಅವರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ಸರ್ವಾಧಿಕಾರಿಗಳಂತೆ ವರ್ತಿಸುವ ಘಟನೆಗಳು ಸಹ ಇವೆ. ಅದೂ ಸಹ ಸ್ವಲ್ಪ ಕಿರಿ ಕಿರಿ ಮಾಡುತ್ತದೆ. ಅದನ್ನೂ ಸಹ ನೆನಪಿಸುತ್ತಾ……..)
**************************

ಇನ್ನೊಂದು ಜಾನಪದ ಕಥೆ…….
*****************

ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ – ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಹೊಡೆಯಲು ಇಟ್ಟಿದ್ದ ವಿವಿಧ ಸುಣ್ಣದ – ಬಣ್ಣದ ಡಬ್ಬಗಳಲ್ಲಿ ಬೀಳುತ್ತದೆ. ಅದರ ದೇಹವೆಲ್ಲಾ ಬಣ್ಣಗಳಿಂದ ತೋಯ್ದು ಹೋಗುತ್ತದೆ. ಗಾಬರಿಯಾದ ತೋಳ ಎದ್ದೆನೋ ಬಿದ್ದೆನೋ ಎಂದು ಅಲ್ಲಿಂದ ಎಗರಿ ಕಾಡಿನತ್ತ ಓಡುತ್ತದೆ.

ಅಲ್ಲಿ ಇಲ್ಲಿ ಅಲೆದು ಬೆಳಗಿನ ಹೊತ್ತಿಗೆ ದಟ್ಟ ಕಾಡಿಗೆ ಹೊಕ್ಕು ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿರುತ್ತದೆ.

ಆಶ್ಚರ್ಯ, ಕಾಡಿನ ಕೆಲವು ಪ್ರಾಣಿಗಳು ಅದರಲ್ಲೂ ತೋಳಕ್ಕಿಂತ ಬಲಿಷ್ಠವಾಗಿರುವವು ಸಹ ಇದನ್ನು ನೋಡಿ ಭಯ ಮತ್ತು ಗೌರವದಿಂದ ನಮಸ್ಕಾರ ಮಾಡುತ್ತವೆ.

ತೋಳಕ್ಕೆ ಆಶ್ಚರ್ಯ ಮತ್ತು ಕುತೂಹಲ ಮೂಡುತ್ತದೆ. ಅರೆ ನನಗೇಕೆ ಈ ಪ್ರಾಣಿಗಳು ನಮಸ್ಕಾರ ಮಾಡುತ್ತಿವೆ. ನಾನು ಕಾಡಿನ ರಾಜನಲ್ಲ. ಸಿಂಹ ಕಾಡಿನ ರಾಜ. ನಾನೊಂದು ಸಣ್ಣ ಪ್ರಾಣಿ. ನನಗೇಕೆ ಮರ್ಯಾದೆ ಎಂದು ಯೋಚಿಸುತ್ತದೆ.

ಸ್ವಲ್ಪ ಸಮಯವಾದ ಮೇಲೆ ಬಿಸಿಲು ಹೆಚ್ಚಾಗುತ್ತದೆ. ತೋಳಕ್ಕೆ ಬಾಯಾರಿಕೆಯಾಗಿ ನೀರು ಕುಡಿಯಲು ಕೆರೆಯ ಬಳಿ ಹೋಗಿ ಬಾಯಿ ಹಾಕುತ್ತದೆ. ಒಂದು ಕ್ಷಣ ಗಾಬರಿಯಾಗುತ್ತದೆ. ನೀರಿನಲ್ಲಿ ತನ್ನ ಪ್ರತಿಬಿಂಬ ಕಂಡು ಅದಕ್ಕೆ ವಿಚಿತ್ರವೆನಿಸುತ್ತದೆ. ಇಡೀ ದೇಹ ವಿವಿಧ ಬಣ್ಣಗಳಿಂದ ಕೂಡಿ ವಿಚಿತ್ರ ರೀತಿಯಲ್ಲಿ ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಅದಕ್ಕೆ ಇತರ ಪ್ರಾಣಿಗಳು ತನಗೆ ನೀಡುತ್ತಿರುವ ಗೌರವಕ್ಕೆ ಕಾರಣ ತಿಳಿಯುತ್ತದೆ.

ಅಲ್ಲಿಂದ ಅದರ ವರ್ತನೆಯೇ ಬದಲಾಗುತ್ತದೆ. ಅಹಂ ಬೆಳೆಯುತ್ತದೆ. ನಾನು ಬಲಿಷ್ಠ ಎಂಬ ಭ್ರಮೆ ಬೆಳೆಸಿಕೊಳ್ಳುತ್ತದೆ.
ಓಹೋ ನಾನೇ ಕಾಡಿನ ರಾಜನಾಗಲು ಅರ್ಹ. ಇನ್ನು ಮೇಲೆ ನಾನೇ ಕಾಡಿನ ಅಧಿಪತಿ ಎಂದು ಭಾವಿಸಿ ಎಲ್ಲಾ ಪ್ರಾಣಿಗಳಿಗೂ ಸಂದೇಶ ರವಾನಿಸುತ್ತದೆ. ಕಾಡಿನ ರಾಜ ಸಿಂಹ ಸೇರಿ ಎಲ್ಲರೂ ಒಪ್ಪಿ ಈ ಬಣ್ಣ ಬಣ್ಣದ ವಿಚಿತ್ರ ಪ್ರಾಣಿಯನ್ನು ರಾಜನಾಗಿ ಒಪ್ಪುತ್ತವೆ. ಅವುಗಳು ಇದು ತೋಳ ಎಂದು ಗುರುತಿಸಲು ವಿಫಲವಾಗುತ್ತವೆ.

ತೋಳ ಸಹ ರಾಜನಂತೆಯೇ ವರ್ತಿಸುತ್ತಾ ಇತರ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುತ್ತಾ ಇಡೀ ಕಾಡನ್ನು ಆಳುತ್ತಿರುತ್ತದೆ.
ಅದರ ಅಹಂಕಾರ ಎಲ್ಲೆ ಮೀರಿರುತ್ತದೆ. ರಾಜನಾಗುವ ಸಾಮರ್ಥ್ಯ ಇಲ್ಲದಿದ್ದರೂ ಆಕಸ್ಮಿಕವಾಗಿ ಅದೃಷ್ಟದ ಬಲದಿಂದ ಆ ಸ್ಥಾನ ಸಿಕ್ಕಿರುತ್ತದೆ.

ಹೀಗಿರುವಾಗ ಒಮ್ಮೆ ಕಾಡಿನಲ್ಲಿ ಈ ಬಣ್ಣದ ತೋಳದ ನೇತೃತ್ವದಲ್ಲಿ ಸಭೆ ನಡೆಯುತ್ತಿರುತ್ತದೆ. ಆಗ ಆಕಾಶದಲ್ಲಿ ಮೋಡಗಳು ಸೇರಿ ಮಳೆ ಬರಲಾರಂಭಿಸುತ್ತದೆ. ಆ ಮಳೆಯ ನೀರಿನ ಕಾರಣಕ್ಕೆ ತೋಳದ ಆ ಕೃತಕ ಬಣ್ಣ ತೊಯ್ದು ಅದರ ನಿಜ ಬಣ್ಣ ಬಯಲಾಗುತ್ತದೆ. ಇದನ್ನು ಗಮನಿಸಿದ ಇತರ ಪ್ರಾಣಿಗಳು ಓ ಹೋ ಇದು ವಿಶೇಷ ಶಕ್ತಿಯ ವಿಶೇಷ ಪ್ರಾಣಿಯಲ್ಲ, ಇದು ಒಂದು ಸಾಮಾನ್ಯ ತೋಳ ಎಂದು ಅರ್ಥಮಾಡಿಕೊಂಡು ಅದನ್ನು ಅಲ್ಲಿಂದ ‌ಓಡಿಸುತ್ತವೆ……..

ತೋಳದ ನಿಜ ಬಣ್ಣ ಒಂದು ದಿನ ಬಯಲಾಗುತ್ತದೆ……..

ಸಾಧ್ಯವಾದರೆ ಇವುಗಳನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

12 hours ago

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

23 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

1 day ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

1 day ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

1 day ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

1 day ago