Categories: ಲೇಖನ

ಭ್ರಮಾಲೋಕದ ಬದುಕಿಗಿಂತ, ವಾಸ್ತವ ಜೀವನದ ಅರಿವಿನ ಜೀವನ ಶೈಲಿ ನಿಮ್ಮದಾಗಬೇಕು…

ತೆಲುಗು ತಮಿಳು ಹಿಂದಿ ಕನ್ನಡ ಮುಂತಾದ ಸಿನಿಮಾಗಳ ನಾಯಕ ನಟರು ಪೊಲೀಸ್ ಪಾತ್ರದಲ್ಲಿ ಈ ರೀತಿ ಕ್ರಿಮಿನಲ್ ಗಳನ್ನು ಹಿಡಿದು, ಬಟ್ಟೆ ಬಿಚ್ಚಿ, ರಸ್ತೆಯಲ್ಲಿ ಮೆರವಣಿಗೆ ಮಾಡುವ ದೃಶ್ಯಗಳು ಮೂಡಿದಾಗ ಸಿನಿಮಾ ಮಂದಿರದ ಎಲ್ಲ ಜನರು ಶಿಳ್ಳೆ ಕೇಕೆ ಹಾಕಿ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಅದು ಸಾಧ್ಯವಾಗುವುದೇ ಇಲ್ಲ. ಸಾಮಾನ್ಯ ಜನರೊಂದಿಗೆ ಮಾತ್ರ ಅತ್ಯಂತ ಕೆಟ್ಟದ್ದಾಗಿ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ…….

ಕೆಲವರಿಗೆ ಎಷ್ಟೊಂದು ದುರಹಂಕಾರ, ಎಷ್ಟೊಂದು ಕ್ರೌರ್ಯ ಇವರಲ್ಲಿ ಮನೆ ಮಾಡಿರಬಹುದು. ಕಾನೂನಿನ ಬಗ್ಗೆ ಎಷ್ಟೊಂದು ತಾತ್ಸಾರ ಇರಬಹುದು. ಏನನ್ನು ಮಾಡಿದರೂ, ಕೊನೆಗೆ ಕೊಲೆ ಮಾಡಿದರು ಗೆಲ್ಲಬಹುದು ಎಂದುಕೊಂಡಿರುವ ಕೊಬ್ಬಿದ ಈ ಕೊಲೆಗಡುಕರನ್ನು ನೋಡಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಸೇರುತ್ತಾರೆ. ಲಾಠಿ ಚಾರ್ಜ್ ಮಾಡಿಸಿಕೊಂಡು ದರ್ಶನ ಪಡೆಯಲು ನೂಕುನುಗ್ಗಲಿನಲ್ಲಿ ಬೆವರು ಸುರಿಸುತ್ತಾರೆ…..

ಹೌದು ಈ ದೇಶದಲ್ಲಿ ಪ್ರತಿಕ್ಷಣವೂ ಅನೇಕ ಕಾರಣಗಳಿಗಾಗಿ ಕೊಲೆಗಳು ನಡೆಯುತ್ತಲೇ ಇರುತ್ತದೆ. ಆ ಕೊಲೆಗಡುಕರಿಗೆ ಕಾರಣಗಳು ಸಾಕಷ್ಟು ಇರುತ್ತವೆ. ಆದರೆ ಈ ದರ್ಶನ್ ಎಂಬ ವ್ಯಕ್ತಿ ಕೇವಲ ಸಾಮಾಜಿಕ ಜಾಲತಾಣದಲ್ಲಿ ಆಕೆಯ ವಿರುದ್ಧ ಮಾನಹಾನಿ ಹೇಳಿಕೆಗಳು, ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ ಎಂಬ ಒಂದೇ ಕಾರಣದಿಂದ ಅವನನ್ನು ಕರೆಸಿ ಶೆಡ್ ನಲ್ಲಿ ಕೂಡಿಹಾಕಿ ಇಷ್ಟೊಂದು ಬರ್ಬರವಾಗಿ ಆ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ತಾನು ಹೊಡೆಯುವ ಏಟು ಆ ವ್ಯಕ್ತಿಯಲ್ಲಿ ಎಷ್ಟು ನೋವು ಉಂಟು ಮಾಡುತ್ತಿರಬಹುದು ಎಂಬ ಪರಿಕಲ್ಪನೆಯೂ ಇಲ್ಲದೆ ಕೊಂದಿದ್ದಾನೆಂದರೆ ಆತನು ಒಳಗಿರುವ ರಾಕ್ಷಸತ್ವ ಎಷ್ಟಿರಬಹುದು…..

ನಮಗೆ ತೊಂದರೆ ಕೊಡುವ ಜನರಿಂದ ರಕ್ಷಣೆ ಪಡೆಯಲು ಅಥವಾ ಶಿಕ್ಷಿಸಲು ಈ ಆಧುನಿಕ ಕಾಲದಲ್ಲಿ ಎಷ್ಟೊಂದು ಪರ್ಯಾಯ ಮಾರ್ಗಗಳಿವೆ.  ಅದರಲ್ಲೂ ಅಂತಹ ಜನಪ್ರಿಯ ವ್ಯಕ್ತಿಗೆ ಪೋಲಿಸರ ಸಹಾಯ, ನ್ಯಾಯಾಲಯದ ಸಹಾಯ, ಬೆದರಿಕೆ ಒಡ್ಡುವ ಅವಕಾಶ ಎಲ್ಲವೂ ಇರುತ್ತದೆ. ಅದೆಲ್ಲವನ್ನು ಮೀರಿ ಹೀಗೆ ಮುಂದೆ ತೊಂದರೆಯಾಗುತ್ತದೆ ಎಂಬ ಅರಿವಿದ್ದರೂ ಕೊಲ್ಲುತ್ತಾರೆಂದರೆ ಅವರ ಮನಸ್ಥಿತಿ ಎಷ್ಟು ಕ್ರಿಮಿನಲ್ ಆಗಿರಬೇಕು ಊಹಿಸಿ…..

ಸುಮಾರು ಹತ್ತು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಅನೇಕ ಸಂದರ್ಭಗಳಲ್ಲಿ ಹಾಗೂ ವೇದಿಕೆಗಳಲ್ಲಿ ಮಾತನಾಡುವ ಅನೇಕ ಸನ್ನಿವೇಶಗಳಲ್ಲಿ ಮಾನವೀಯ ಮೌಲ್ಯಗಳಿಗೆ ಮತ್ತು ಸಮಾಜದ ಆದರ್ಶಗಳಿಗೆ ಅತಿಹೆಚ್ಚು ಅಪಾಯವಿರುವುದು ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸಿನಿಮಾ ನಟನಟಿಯರು, ಧಾರ್ಮಿಕ ನಾಯಕರು ಮುಂತಾದವರೆಂದು ಪದೇಪದೇ ಹೇಳುತ್ತಲೇ ಇರುತ್ತೇನೆ. ನಿಜವಾಗಲೂ ಈ ಸಮಾಜದ ರೋಲ್ ಮಾಡೆಲ್ ಗಳು ನಮ್ಮ ಹುಟ್ಟಿಸಿದ ಅಪ್ಪ ಅಮ್ಮ ಮತ್ತು ಶಿಕ್ಷಕರು ಆಗಬೇಕೆ ಹೊರತು ಸಿನಿಮಾ ನಟರಲ್ಲ ಎಂಬುದು ಸ್ವತಃ ಅನುಭವದ ಪಾಠ. ಅದು ಮತ್ತೆ ಮತ್ತೆ ದೃಢಪಡುತ್ತಲೇ ಇದೆ…

ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ ಮತ್ತು ಸಾಮಾನ್ಯ. ಇವರೇ ಕಾಳುಗಳು….

ಆದರೆ ಆ ನಟರನ್ನೇ ಆರಾಧ್ಯ ದೈವ ಎಂದು ಭಾವಿಸಿ, ಅವರನ್ನು ಅತಿ ಮಾನವರಂತೆ ಭ್ರಮಿಸಿ, ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ, ರಸ್ತೆ ಬೀದಿಗಳಲ್ಲಿ ಅತ್ಯಂತ ಕ್ಷುಲ್ಲಕ ವಿಷಯಗಳಿಗೆ ಬಡಿದಾಡುವ – ಹೊಡೆದಾಡುವ ಮೂರ್ಖರೇ ಜೊಳ್ಳುಗಳು….

ಸಮಾಜ ಕಾಳುಗಳನ್ನು ಆರಿಸಿಕೊಂಡು ಜೊಳ್ಳುಗಳನ್ನು ತೂರಬೇಕಿದೆ. ಜೊಳ್ಳುಗಳು ನಿಷ್ಪ್ರಯೋಜಕ ಮತ್ತು ಕೆಲವೊಮ್ಮೆ ಅಪಾಯಕಾರಿ…..

ಸುಂದರ ಯುವತಿಯರೊಂದಿಗೆ ಹಾಡುತ್ತಾ ಹಾರಾಡುತ್ತವೆ ಎಲ್ಲೆಲ್ಲೂ, ನಿಮಿಷಕ್ಕೊಂದು ವೇಷ ಬದಲಿಸುತ್ತಾ, ಭೂಮಿ, ಆಕಾಶ, ಪಾತಾಳ ಒಂದು ಮಾಡುತ್ತವೆ, ಸೋಲಿಲ್ಲದ, ಸಾವಿಲ್ಲದ ಜಗದ್ ರಕ್ಷಕರು ಇವರು, ಸಾವಿರಾರು ಜನರೇ ಬರಲಿ, ಬಂದೂಕು, ಬಾಂಬುಗಳೇ ಇರಲಿ, ದೊಡ್ಡ ಅಪಘಾತಗಳೇ ಆಗಲಿ, ಮಚ್ಚು, ಲಾಂಗುಗಳ ಹೊಡೆತಗಳಾಗಲಿ ಏನಾಗುವುದಿಲ್ಲ ಇವರಿಗೆ….

ಇವರಿಗೆ ದೇವರಿಗಿಂತ ಹೆಚ್ಚಾಗಿ, ದೊಡ್ಡ ದೊಡ್ಡ ಕಟೌಟ್ ಗಳು, ಮೆರವಣಿಗೆಗಳು, ಹಾಲಿನ ಅಭಿಷೇಕ, ಜ್ಯೆಕಾರ ಘೋಷಣೆಗಳು, ಅಭಿಮಾನಿ ಭಕ್ತರುಗಳು, ನೋಡಲು ನೂಕುನುಗ್ಗಲು, ಲಾಠಿ ಪ್ರಹಾರಗಳು, ಮೊದಲನೇ ದಿನದ, ಮೊದಲನೇ ಪ್ರದರ್ಶನ ನೋಡಲು ಗಲಭೆಗಳು.ಅಬ್ಬಾ….

ಸಾಮಾಜಿಕ ಜಾಲತಾಣಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಅವರ ಬಗ್ಗೆ ಬಹುದೊಡ್ಡ ಚರ್ಚೆಯಂತೆ…..

ಯಾಕಪ್ಪಾ, ಏನಾಗಿದೆ ಸಮಸ್ಯೆ,ಪ್ರಾಕೃತಿಕ ವಿಕೋಪ ನಿಯಂತ್ರಿಸಲು ಈ ಜಗಳವೇ ? ಆರ್ಥಿಕ ಕುಸಿತ ತಡೆಯಲು ಈ ತಂತ್ರಗಳೇ ? ರಾಜ್ಯ ದೇಶದ ಘನತೆ ಕಾಪಾಡಲು ಈ ಬೈದಾಟಗಳೇ ? ಸಮಾಜದಲ್ಲಿ ಶಾಂತಿ ಸೌಹಾರ್ದತೆ ಉಂಟುಮಾಡಲು ಈ ವಿವಾದವೇ ? ಶಿಕ್ಷಣ – ಆರೋಗ್ಯದ ಗುಣಮಟ್ಟ ಕಾಪಾಡಲು ಈ ಕ್ರಮಗಳೇ ?

ರೀ, ಸ್ವಾಮಿ ಇದು 2024 ನೇ ಇಸವಿ. ಇನ್ನೇನು ಚಂದ್ರನಲ್ಲಿ ವಾಸ ಮಾಡುವ ದಿನಗಳು ದೂರವಿಲ್ಲ. ಇಡೀ ವಿಶ್ವ ನಮ್ಮ ಬೆರಳ ತುದಿಯಲ್ಲಿ ಇದೆ.

ಅಂತಹ ಸಂದರ್ಭದಲ್ಲಿ ವಾಸಿಸುತ್ತಿರುವ ನಮಗೆ ಚಲನಚಿತ್ರ ಒಂದು ಕಲಾ ಮಾಧ್ಯಮ – ಮನರಂಜನೆಯ – ವ್ಯಾಪಾರ ವ್ಯವಹಾರದ ಒಂದು ಉದ್ಯಮ ಎನ್ನುವ ಪ್ರಜ್ಞೆ ಬೇಡವೇ ?….‌

ಗುರು, ಸಿನಿಮಾ ಒಂದು ಕೃತಕ ಸೃಷ್ಟಿ. ಅದರ ಪಾತ್ರಗಳು ಕಾಲ್ಪನಿಕ. ಅದನ್ನು ಯಾರೋ ವ್ಯಕ್ತಿಗಳು ಭಾವ ತುಂಬಿ ನಿರ್ದೇಶಕರು ಹೇಳಿದಂತೆ ನಟಿಸುತ್ತಾರೆ. ಅವರನ್ನು ನಟ ನಟಿಯರು ಎನ್ನುತ್ತಾರೆ. ಕೆಲವರಲ್ಲಿ ಒಂದಷ್ಟು ಅಭಿನಯ ಸಾಮರ್ಥ್ಯ ಚೆನ್ನಾಗಿರಬಹುದು. ಕೆಲವರು ಆ ಬಣ್ಣ, ವೇಷ, ಸನ್ನಿವೇಶ ಮತ್ತು ಇತರ ಪೂರಕ ಪಾತ್ರಗಳ ಬೆಂಬಲದಿಂದ ನೋಡಲು  ಮೇಲ್ನೋಟಕ್ಕೆ ಚೆನ್ನಾಗಿ ಕಾಣಬಹುದು. ಹೊಡೆದಾಟ ಬಡಿದಾಟ ದುಃಖ ಪ್ರೀತಿ ಹಾಸ್ಯ ದೃಶ್ಯಗಳಲ್ಲಿ ವಾಸ್ತವಕ್ಕಿಂತ ನಮ್ಮ ಮನೋ ಕಲ್ಪನೆಯಲ್ಲಿ ಮೂಡುವ ಆದರೆ ನಮ್ಮಿಂದ ನಿಜ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದ ಸನ್ನಿವೇಶಗಳು ನಮಗೆ ಮಜಾ ಅಥವಾ ಸ್ಪೂರ್ತಿ ಕೊಡಬಹುದು…..

ಅಷ್ಟು ಬಿಟ್ಟರೆ ಸಾಮಾನ್ಯ ಪರಿಕಲ್ಪನೆಯಲ್ಲಿ ಅವರು ಯಾವ ಅತಿಮಾನುಷ ಅಥವಾ ವಿಶೇಷ ಅಧಿಕಾರ ಅಥವಾ ಶಕ್ತಿ ಹೊಂದಿಲ್ಲ..‌‌…

ಅಂತಹವರಿಗೆ ಮೆಚ್ಚುಗೆ ಪ್ರಶಂಸೆ ಒಂದಷ್ಟು ಗೌರವ ಹೊರತುಪಡಿಸಿ ಇದೇನ್ರಿ ಅಸಹ್ಯ……

ಹೌದು, ಸ್ವಲ್ಪ ಹಿಂದೆ ನಾಟಕ, ಸಿನಿಮಾ ಹೊರತುಪಡಿಸಿ ಬೇರೆ ಮನರಂಜನೆಗಳೇ ಇಲ್ಲದಿದ್ದಾಗ, ಬಡತನ, ಅಜ್ಞಾನ ತುಂಬಿ ತುಳುಕುತ್ತಿದ್ದಾಗ ಸಿನಿಮಾ ಸಾಹಿತ್ಯ ಮತ್ತು ಅದರ ಪಾತ್ರಗಳು, ವರ್ತನೆಗಳು ಅಂದಿನ ಯುವ ಜನಾಂಗದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರಿರುವುದು ನಿಜ. ಅಲ್ಲದೆ ಅಂದಿನ ಸಾಮಾಜಿಕ ಮೌಲ್ಯಗಳನ್ನು ಜನರಿಗೆ ನೆನಪಿಸುವ ಮಾಧ್ಯಮವೂ ಇದಾಗಿತ್ತು ಅದನ್ನು ಅಲ್ಲಗಳೆಯುವಂತಿಲ್ಲ…..

ಆದರೆ ಈಗ ಎಲ್ಲವೂ ಬದಲಾಗಿದೆ. ಅರಿವಿನ ಮಟ್ಟ, ತಂತ್ರಜ್ಞಾನ, ಸಂಪರ್ಕ ಎಲ್ಲವೂ ಹೆಚ್ಚಾಗಿದೆ.  ನಟನಟಿಯರಿಗಿಂತ ಮಹತ್ವದ ವ್ಯಕ್ತಿಗಳು, ವೃತ್ತಿಗಳು ಈ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದೆ ಮತ್ತು ಉತ್ತಮ ಬೆಳವಣಿಗೆ ಹೊಂದಿದೆ. ಹೀಗಿರುವಾಗ ಈ ತಿಕ್ಕಲುತನ ಬೇಕೆ……

ಬೇಜಾರಾಯ್ತ ಶಿವ,

ನಿಮ್ಮ ಹೀರೋಗೆ ಈ ರೀತಿ ಹೇಳಿದ್ದಕ್ಕೆ……ಸಾರಿ ಬ್ರದರ್, ನಮಗೂ ಮೈ ಎಲ್ಲಾ ಉರಿಯುತ್ತೆ…..

ಹಾಲು ಹಣ್ಣು ತರಕಾರಿಗಳನ್ನು ರೈತರು ‌ಎಷ್ಟು ಕಷ್ಟ ಪಟ್ಟು ಬೆಳೆಯುತ್ತಾರೆ. ಅದನ್ನು ಆಹಾರವಾಗಿ ತಿನ್ನಲು ಉಪಯೋಗಿಸದೆ, ಎಷ್ಟೋ ಬಡವರು ಪೌಷ್ಟಿಕಾಂಶದ ಕೊರತೆಯಿಂದಾಗಿ ನರಳುತ್ತಿರುವಾಗ ಕೃತಕ ಪಾತ್ರ ಮಾಡುವ ನಟನ ಪ್ರತಿಮೆಗೆ ಇದನ್ನು ಸುರಿಯುವುದನ್ನು ನೋಡಿದಾಗ…..

ಯಾರೋ ಒಬ್ಬ ಹುಚ್ಚು ಅಭಿಮಾನಿ ಎಲ್ಲಿಂದಲೋ ಸಾಮಾಜಿಕ ಜಾಲತಾಣಗಳಲ್ಲಿ ಏನೋ ಅಭಿಪ್ರಾಯ ವ್ಯಕ್ತಪಡಿಸಿದಾಗ ಆತನನ್ನು ಕೊಂದು ವಿಷಯ ತಿಳಿದಾಗ….

ನಟರಾದವರು ಸಾಮಾಜಿಕ ಜವಾಬ್ದಾರಿಯಿಂದ ಈ ರೀತಿಯ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿ, ಹೇಗೆ ಜನರು ತಮ್ಮ ಸ್ವಾಭಿಮಾನ ಮತ್ತು ಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸದೆ, ಅಭಿಮಾನಿಗಳು ಎಂಬುವವರ ಹೊಗಳಿ ಭ್ರಮೆಯಲ್ಲಿಟ್ಟು, ತಾವು ನಿಜ ಜೀವನದ ಹಿರೋಗಳಂತೆ ಬಿಲ್ಡಪ್ ಕೊಡುವುದನ್ನು ನೋಡಿದಾಗ…….

ಪೈಲ್ವಾನ್ – ಚಕ್ರವರ್ತಿ – ರಾಕಿಬಾಯ್ ಇವೆಲ್ಲವೂ ಜನರನ್ನು ಆಕರ್ಷಿಸಲು ಪಾತ್ರಗಳಿಗೆ ಇಡುವ ಹೆಸರುಗಳೇ ಹೊರತು ಅದು ನಿಜ ಜೀವನದ ಅವರ ವ್ಯಕ್ತಿತ್ವಗಳಲ್ಲ ಎಂದು ಗೊತ್ತಿದ್ದರೂ, ಇಂದಿನ ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಾಯಕ ನಟನ ಹಿರೋ ಗಿರಿ ಸಾಧ್ಯವಿಲ್ಲ ಎಂದು ಅರ್ಥವಾಗಿದ್ದರೂ, ಅವರಲ್ಲಿ ಅತಿಮಾನುಷ ಶಕ್ತಿ ಇದೆ ಎಂಬಂತೆ ಆರಾಧಿಸುವುದನ್ನು ನೋಡಿದಾಗ……..

ಈ ಸಮಾಜದ ಮಾನಸಿಕ ಸ್ಥಿತಿಯ ಬಗ್ಗೆ ಮರುಕ ಉಂಟಾಗುತ್ತದೆ…..

ಅಭಿಮಾನಿಗಳೇ,

ನಿಜ ಜೀವನದಲ್ಲೇ ಸಾಕಷ್ಟು ರೋಚಕ, ಸಾಹಸ, ತ್ಯಾಗದ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತವೆ. ದನ ಕಾಯುತ್ತಿದ್ದ ಹುಡುಗ ಮುಖ್ಯಮಂತ್ರಿಯಾದರೆ, ಟೀ ಮಾರುತ್ತಿದ್ದ ಹುಡುಗ ಪ್ರಧಾನ ಮಂತ್ರಿಯಾಗುತ್ತಾರೆ.

ಅಪಘಾತದಲ್ಲಿ ಎರಡೂ ಕಾಲಿಲ್ಲದ ಅರುಣಿಮಾ ಪರ್ವತಾರೋಹಣ ಮಾಡುತ್ತಾರೆ, ಅಭಿನಂದನ್ ವರ್ತಮಾನ್ ಶತ್ರುವಿನ ಕೈಗೆ ಸೆರೆ ಸಿಕ್ಕಿ ಧೈರ್ಯದಿಂದಲೇ ಅವರಿಗೆ ಉತ್ತರಿಸಿ ಸಾವಿನಿಂದ ಪಾರಾಗಿ ಬಂದು ಮತ್ತೆ ಸೈನ್ಯ ಸೇರುತ್ತಾರೆ. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತಿದ್ದ ಒಬ್ಬ ವಯೋವೃದ್ದೆ ಪ್ರಖ್ಯಾತ ಗಾಯಕಿಯಾಗಿ ರಾಷ್ಟ್ರಾಧ್ಯಂತ ಜನಪ್ರಿಯವಾಗುತ್ತಾರೆ. ಬಾಕ್ಸರ್ ಮೇರಿ ಕೋಮ್ ಮೂರು ಮಕ್ಕಳ ತಾಯಿಯಾಗಿಯೂ ವಿಶ್ವ ಚಾಂಪಿಯನ್ ಆಗುತ್ತಾರೆ. ಎಷ್ಟೋ ಪುಟ್ಟ ಮಕ್ಕಳ ನೆನಪಿನ ಶಕ್ತಿ ಅತಿಮಾನುಷ ಬುದ್ದಿ ಮತ್ತೆಯಂತೆ ಭಾಸವಾಗುತ್ತದೆ……

ಹೀಗೆ ವಾಸ್ತವ ಬದುಕಿನ ಘಟನೆಗಳೇ ಇರುವಾಗ ಅದನ್ನು ಸ್ಪೂರ್ತಿಯಾಗಿ ಪಡೆಯುವುದು‌ ಅರ್ಥಪೂರ್ಣವೋ ಅಥವಾ ಸಿನಿಮಾ ನಟರ ಕಾಲ್ಪನಿಕ ವ್ಯಕ್ತಿತ್ವವನ್ನು ನೋಡಿ ಅವರ ನಿಜ ಜೀವನವನ್ನು ಅನುಸರಿಸುವುದೋ ನೀವೇ ನಿರ್ಧರಿಸಿ. ಅವರ ನಿಜ ಜೀವನದ ಕೌಟುಂಬಿಕ ವ್ಯವಹಾರಗಳೂ ಸೇರಿ ಎಲ್ಲಾ ಏರಿಳಿತಗಳು ನಮ್ಮಂತೆ ಇರುವಾಗ ಅವರನ್ನು  ಆರಾಧಿಸುವುದು ಸರಿಯೇ ?….

ಗೆಳೆಯ ಗೆಳತಿಯರೆ,

ಸಿನಿಮಾ ಮಾಧ್ಯಮದ ಬಗ್ಗೆ ಯಾವುದೇ ತಕಾರಾರಿಲ್ಲ. ಅಲ್ಲಿನ ಕ್ರಿಯಾತ್ಮಕತೆಯ ಬಗ್ಗೆ, ಕಲಾವಿದರ ಬಗ್ಗೆ , ಅದರ ಪ್ರಭಾವದ ಬಗ್ಗೆ ಯಾವುದೇ ಅಸಮಾಧಾನವಿಲ್ಲ.

ಆದರೆ ಈ ಹುಚ್ಚುತನದ ಅತಿರೇಕಗಳು, ಸ್ವಾಭಿಮಾನವಿಲ್ಲದ ಗುಲಾಮಗಿರಿ, ಪಾತ್ರಗಳಲ್ಲಿ ನಟಿಸುವವರನ್ನು ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿಗಳಂತೆ ಪೂಜಿಸುವುದು, ಬಪೂನ್ ಗಿರಿ ಮುಂತಾದ ಚಮಚಾ ಕೆಲಸಗಳು ಮಾತ್ರ ಆರೋಗ್ಯ ಪೂರ್ಣ ಸಮಾಜಕ್ಕೆ ಅಪಾಯಕಾರಿ ಅದನ್ನು ದಯವಿಟ್ಟು ಮಾಡಬೇಡಿ ಎಂದು ಮನವಿ ಮಾಡಿಕೊಳ್ಖುತ್ತಾ………..

ಭ್ರಮಾಲೋಕದ ಬದುಕಿಗಿಂತ,ವಾಸ್ತವ ಜೀವನದ ಅರಿವಿನ ಜೀವನ ಶೈಲಿ ನಿಮ್ಮ ಜೀವನಮಟ್ಟ ಸುಧಾರಿಸಲು ಸಹಾಯಕಾರಿ……

ಗೌರವಿಸಿ, ಪ್ರೋತ್ಸಾಹಿಸಿ, ಎಲ್ಲರಂತೆ. ಆದರೆ,ಮಾರಿಕೊಳ್ಳಬೇಡಿ ಸ್ವಾಭಿಮಾನ ಬಪೂನ್ ಗಳಂತೆ.ವಾಸ್ತವ ಪ್ರಜ್ಞೆ ಸದಾ ಜಾಗೃತಾವಸ್ಥೆಯಲ್ಲಿರಲಿ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

1 hour ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

3 hours ago

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

16 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

16 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

17 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

23 hours ago