ಭಾವಿ ಸಿಎಂ ಡಿಕೆಶಿಗೆ ಸಿದ್ದರಾಮಯ್ಯ ಶುಭ ಹಾರೈಕೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸಂಗಾತಿ ಡಿ.ಕೆ.ಶಿವಕುಮಾರ್ ಅವರಿಗೆ ಹಾರ್ದಿಕವಾದ ಅಭಿನಂದನೆಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಿಯ ಶಿವಕುಮಾರ್, ನಿಮ್ಮಲ್ಲಿರುವ ಅದಮ್ಯವಾದ ಕ್ರಿಯಾಶೀಲತೆ, ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಸಂಶಾಯತೀತ ನಿಷ್ಠೆಯನ್ನು ಒಬ್ಬ ಸಹದ್ಯೋಗಿಯಾಗಿ ನಾನು ಸಮೀಪದಿಂದ ಗಮನಿಸಿದ್ದೇನೆ. ಇವೆಲ್ಲದರ ಸದುಪಯೋಗ ರಾಜ್ಯದ ಜನತೆಗೆ ಆಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುವೆ ಎಂದು ತಿಳಿಸಿದ್ದಾರೆ.

ಇಂದು ಕರ್ನಾಟಕ ತಲಾವಾರು ಆಧಾಯದಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿರುವುದು ಮಾತ್ರವಲ್ಲ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ನಾವು ಪ್ರಾರಂಭಿಸಿರುವ ಪ್ರತಿಯೊಂದು ಯೋಜನೆಯನ್ನೂ ಉಳಿದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ‍್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗಾತಿಯಾಗಿದೆ ಎಂದರು.

ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು  ಒದಗಿಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ದ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ದಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ದಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು ಎಂದು ಹೇಳಿದರು.

ಇಡೀ ದೇಶ ಇಂದು ಆರ್ಥಿಕ ಅಭದ್ರತೆಯಲ್ಲಿ ಭೀತಿಗೊಳಗಾಗಿರುವ ಸ್ಥಿತಿಯಲ್ಲಿ ರಾಜ್ಯದ ಜನತೆ ಕೂಡಾ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಸಮರ್ಥ ಆಡಳಿತದ ಮೂಲಕ ಅವರಲ್ಲಿ ಭರವಸೆಯನ್ನು ಹುಟ್ಟಿಸುವ ಜೊತೆಯಲ್ಲಿ ರಾಜ್ಯವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು.

 

ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ರಾಜಕೀಯವಾಗಿ ಸ್ವಲ್ಪ ಹಿನ್ನಡೆಯಾಗಿದೆ. ನಾವು ಚುನಾವಣೆಯಲ್ಲಿ ಸೋಲಬಹುದು, ಗೆಲ್ಲಬಹುದು. ಆದರೆ  ಸೈದ್ಧಾಂತಿಕವಾಗಿ ಎಂದೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ನಾಶವಾಗುತ್ತದೆ ಎಂದು ನಂಬಿದವನು ನಾನು ಎಂದರು.

ರಾಜ್ಯದ ಅಭಿವೃದ್ಧಿಯ ಜೊತೆಯಲ್ಲಿ ನಮ್ಮೆಲ್ಲರ ಮಾತೃಸ್ವರೂಪಿಯಾಗಿರುವ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆಗಾರಿಕೆ ಕೂಡಾ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷ ಇಂತಹ ಸವಾಲಿನ ಅನೇಕ ಅಗ್ನಿದಿವ್ಯಗಳನ್ನು ಯಶಸ್ವಿಯಾಗಿ ದಾಟಿ ಬಂದಿರುವ ಇತಿಹಾಸ ನಮಗೆಲ್ಲರಿಗೂ ಪ್ರೇರಣೆಯಾಗಲಿ. ನಿಮ್ಮ ನಾಯಕತ್ವ ಬಲ ಈ ಪ್ರಯತ್ನವನ್ನು ಸಫಲಗೊಳಿಸಲಿ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದು ಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ ಎಂದರು.

ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ  ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.

ನಿಮಗೆ ಸದಾ ಯಶಸ್ಸು ಸಿಗಲಿ ಡಿಕೆ ಶಿವಕುಮಾರ್ ಎಂದು ಶುಭ‌ ಹಾರೈಸಿದ್ದಾರೆ.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

10 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

15 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

18 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago