
ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಗತ್ ಸಿಂಗ್ ಕ್ರೀಡಾಂಗಣದ ಸಮೀಪದಲ್ಲಿಯೇ ಅಂಚೆ ಕಚೇರಿ (ಪೋಸ್ಟ್ ಆಫೀಸ್) ಇದ್ದು, ಇಲ್ಲಿಗೆ ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಯೋವೃದ್ಧರು ವಿವಿಧ ಕೆಲಸಗಳಿಗಾಗಿ ಆಗಮಿಸುತ್ತಾರೆ. ರಸ್ತೆಯಲ್ಲಿನ ಗುಂಡಿಗಳಿಂದಾಗಿ ಅಂಚೆ ಕಚೇರಿಗೆ ಬರುವ ಹಿರಿಯ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಇದಲ್ಲದೆ, ಸೋಮೇಶ್ವರ ಬಡಾವಣೆ ಸೇರಿದಂತೆ ನಗರದ ವಿವಿಧ ವಾರ್ಡ್ಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿರುವುದರಿಂದ ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಗುಂಡಿಗಳಿಂದಾಗಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಹಿರಿಯ ನಾಗರಿಕರು ಅಪಾಯದ ನಡುವೆಯೇ ಸಂಚರಿಸುವಂತಾಗಿದೆ.

ರಸ್ತೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ಹಲವು ಬಾರಿ ಗಮನ ಸೆಳೆದಿದ್ದರೂ ಅಧಿಕಾರಿಗಳು ಸ್ಪಂದಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಇನ್ನಷ್ಟು ಅನಾಹುತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.