
ದೊಡ್ಡಬಳ್ಳಾಪುರ ನಗರದ ರಸ್ತೆ ಬದಿ, ಖಾಲಿ ಜಾಗಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಾಣುವುದು ಸಾಮಾನ್ಯ ದೃಶ್ಯವಾಗಿತ್ತು. ಸ್ವಚ್ಛತಾ ಅಭಿಯಾನಗಳು, ಜಾಗೃತಿ ಕಾರ್ಯಕ್ರಮಗಳು ನಡೆದರೂ ಕಸ ಎಸೆಯುವ ಪ್ರವೃತ್ತಿಗೆ ಕಡಿವಾಣ ಬೀಳದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ನಗರಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಕಸದ ಬ್ಲಾಕ್ಸ್ಪಾಟ್ಗಳನ್ನು ಸ್ವಚ್ಛಗೊಳಿಸಿ, ಅಲ್ಲಿಗೆ ಬಣ್ಣದ ಚಿತ್ರಗಳನ್ನು ಬಿಡಿಸುವುದು, ಅನುಪಯುಕ್ತ ವಸ್ತುಗಳಿಂದ ಅಲಂಕರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದು, ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಗಮನ ಸೆಳೆದಿದೆ.
ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳು ಬ್ಲಾಕ್ಸ್ಪಾಟ್ಗಳ ತೆರವಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಶಾಶ್ವತ ಫಲಿತಾಂಶ ದೊರಕಿಲ್ಲ. ಆದರೆ ದೊಡ್ಡಬಳ್ಳಾಪುರ ನಗರಸಭೆ ಸ್ವಚ್ಛತೆಯ ಜೊತೆಗೆ ಪರಿಸರ ಸುಂದರೀಕರಣಕ್ಕೂ ಒತ್ತು ನೀಡುವ ಮೂಲಕ ವಿಭಿನ್ನ ಮಾದರಿಯನ್ನು ಅಳವಡಿಸಿಕೊಂಡಿದೆ.

52 ಬ್ಲಾಕ್ಸ್ಪಾಟ್ಗಳು ಕಸಮುಕ್ತ:
ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 110 ರಿಂದ 120 ಬ್ಲಾಕ್ಸ್ಪಾಟ್ಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಈಗಾಗಲೇ 52 ಸ್ಥಳಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಮತ್ತೆ ಕಸ ಹಾಕದಂತೆ ಗೋಡೆಗಳ ಮೇಲೆ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಜೊತೆಗೆ ಜಾಗೃತಿ ಮೂಡಿಸುವ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಉಳಿದ ಸ್ಥಳಗಳನ್ನೂ ಇದೇ ಮಾದರಿಯಲ್ಲಿ ಕಸಮುಕ್ತಗೊಳಿಸುವ ಗುರಿಯೊಂದಿಗೆ ಕಾರ್ಯ ನಡೆಯುತ್ತಿದೆ. ಈ ಕುರಿತು ಪೌರಕಾರ್ಮಿಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಬ್ಲಾಕ್ಸ್ಪಾಟ್ಗಳ ಮೇಲೆ ನಿರಂತರ ನಿಗಾ ವಹಿಸಲು ಅಧಿಕಾರಿಗಳು ಸೂಚನೆ ನೀಡಲಾಗಿದೆ.
ಜಾನುವಾರುಗಳ ಆರೋಗ್ಯಕ್ಕೂ ಕಸವೇ ಅಪಾಯ:
ಕಸವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ಜಾನುವಾರುಗಳ ಆರೋಗ್ಯಕ್ಕೂ ಗಂಭೀರ ಸಮಸ್ಯೆ ಎದುರಾಗುತ್ತಿದೆ. ಆಹಾರಕ್ಕಾಗಿ ಕಸದ ರಾಶಿಗಳ ಬಳಿ ಬರುವ ದನಗಳು ಹಾಗೂ ನಾಯಿಗಳು ಪ್ಲಾಸ್ಟಿಕ್ ಸೇರಿದಂತೆ ಅಪಾಯಕಾರಿ ತ್ಯಾಜ್ಯವನ್ನು ಸೇವಿಸುವ ಸಾಧ್ಯತೆ ಹೆಚ್ಚಿದೆ.
ಜಿಲ್ಲೆಯಲ್ಲಿ ಜಾನುವಾರುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾದ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ಒಣ ಮತ್ತು ತೇವ ಕಸವನ್ನು ಪ್ರತ್ಯೇಕವಾಗಿ ನಗರಸಭೆಯ ವಾಹನಗಳಿಗೆ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.
ಸಿಸಿಟಿವಿ ಕಣ್ಗಾವಲು, ನಿಯಮ ಉಲ್ಲಂಘಿಸಿದವರಿಗೆ ದಂಡ:
ನಗರಸಭೆಯ 31 ವಾರ್ಡ್ಗಳಲ್ಲಿ ಅವಕಾಶ ಇರುವ ಬ್ಲಾಕ್ಸ್ಪಾಟ್ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ, ಕಸ ಎಸೆಯುವವರನ್ನು ಗುರುತಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಮನೆ ಮನೆಗಳಿಂದ ಕಸ ಸಂಗ್ರಹಣೆಯ ಮಾಹಿತಿ ಪರಿಶೀಲಿಸಲಾಗುತ್ತಿದೆ. ನಗರಸಭೆಯ ವಾಹನಗಳಿಗೆ ಕಸ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ಮೊದಲು ಎಚ್ಚರಿಕೆ ನೀಡಲಾಗುತ್ತಿದ್ದು, ಬಳಿಕವೂ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರ ಸಹಕಾರ ಅಗತ್ಯ:
ನಗರದಲ್ಲಿ ವ್ಯಾಪಾರಿಗಳು ಹಾಗೂ ಕೆಲವು ನಿವಾಸಿಗಳು ರಾತ್ರಿ ವೇಳೆ ಕಸವನ್ನು ತಂದು ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಎಸೆಯುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ನಗರವನ್ನು ಸ್ವಚ್ಛವಾಗಿಡಲು ನಗರಸಭೆಯ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಬ್ಲಾಕ್ಸ್ಪಾಟ್ ತೆರವಿಗೆ ದೊಡ್ಡಬಳ್ಳಾಪುರ ನಗರಸಭೆ ವಿನೂತನ ಮಾದರಿಯನ್ನು ಅನುಸರಿಸಿದೆ. ಇದುವರೆಗೆ 52 ಬ್ಲಾಕ್ಸ್ಪಾಟ್ಗಳನ್ನು ಕಸಮುಕ್ತಗೊಳಿಸಲಾಗಿದೆ. ಉಳಿದ ಸ್ಥಳಗಳಲ್ಲೂ ಇದೇ ರೀತಿಯ ಕಾರ್ಯ ಮುಂದುವರಿಯಲಿದೆ ಎಂದು ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಕಾತೀಕೇಶ್ವರ್ ಹೇಳಿದ್ದಾರೆ.
ಬ್ಲಾಕ್ಸ್ಪಾಟ್ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಕಸದ ನಿರ್ವಹಣೆ ಕುರಿತು ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿಳಿಸಿದ್ದಾರೆ.