
ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಗುಂಡಮಗೆರೆ ಸಮೀಪದ ಮಾಕಳಿ ಗ್ರಾಮದ ಗಂಗರಾಜು (34) ಎಂದು ಗುರುತಿಸಲಾಗಿದೆ. ಅವರು ಮಾಕಳಿ ಬೆಟ್ಟದಲ್ಲಿ ಟ್ರಕ್ಕಿಂಗ್ ಗೈಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ನಿಮಿತ್ತ ಬೆಳಗ್ಗೆ ಮನೆಯಿಂದ ಬರುವ ವೇಳೆ, ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಇವರ ಬೈಕ್ ಗೆ ಡಿಕ್ಕಿ ಹೊಡೆಯಲಾಗಿ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ಜಖಂಗೊಂಡಿದ್ದು, ಗಂಗರಾಜು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನ ಸವಾರ, ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಮೂಲದವರು ಎನ್ನಲಾಗಿದ್ದು, ಅವರ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಕಾಲು ಮುರಿತವಾಗಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಹಾಗೂ ಹೆಚ್ಚಿನ ವಿವರಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.