ಬೆಂಗಳೂರಿನಲ್ಲಿ 2 ದಿನ ಅದ್ಧೂರಿ ಕುಂದಾಪ್ರ ಕನ್ನಡ ಹಬ್ಬ

ಬೆಂಗಳೂರು: ʼಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರುʼ ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ 2 ದಿನಗಳ ಅದ್ಧೂರಿ ʼಕುಂದಾಪ್ರ ಕನ್ನಡ ಹಬ್ಬʼವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.17ರ ಸಂಜೆ 5ಕ್ಕೆ ಉದ್ಘಾಟಿಸಲಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ. 3ರಲ್ಲಿರುವ ವೈಟ್‌ ಪೆಟಲ್ಸ್‌ನಲ್ಲಿ ಆ. 17 ಮತ್ತು 18ರಂದು ನಡೆಯಲಿರುವ ಈ ಹಬ್ಬದ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಶನಿವಾರ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಅಂದು ಮುಖ್ಯ ಅತಿಥಿಗಳಾಗಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ ಇರಲಿದ್ದಾರೆ.

ಭಾನುವಾರ ಸಂಜೆ 5ರ ಸಮರೋಪ ಸಮಾಂಭದಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಡಾ.ಮಾಲತಿ ಕೆ. ಹೊಳ್ಳ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಆ ದಿನ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಯುನಿವರ್ಸಲ್ ಗ್ರೂಪ್‌ನ ಉಪೇಂದ್ರ ಶೆಟ್ಟಿ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ಸೌತ್‌ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ ಇರಲಿದ್ದಾರೆ.

• ಒಂದು ಲಕ್ಷ ಜನರು ಸೇರುವ ನಿರೀಕ್ಷೆ

ಇದು ಕುಂದಾಪ್ರ ಕನ್ನಡ ಹಬ್ಬವಾದರೂ ಸಮಸ್ತ ಕನ್ನಡಿಗರ ಸಂಭ್ರಮ. ಹೀಗಾಗಿ ಈ ಹಬ್ಬಕ್ಕೆ ನಾವು ಎಲ್ಲರನ್ನೂ ಆಹ್ವಾನಿಸುತ್ತಿದ್ದು, ಎರಡು ದಿನಗಳ ಹಬ್ಬದಲ್ಲಿ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಒಂದು ಸಾವಿರ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಅದಾಗ್ಯೂ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಮೂಲಕ ಆಗಮಿಸುವುದು ಉತ್ತಮ. ಶನಿವಾರ ಮಧ್ಯಾಹ್ನ 2ರಿಂದ ರಾತ್ರಿ 10.30 ಮತ್ತು ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 10.30ರ ವರೆಗೆ ನಿರಂತರ ಕಾರ್ಯಕ್ರಮಗಳಿದ್ದು, ಈ ಹಬ್ಬಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ ಎಂದು ದೀಪಕ್ ಹೇಳಿದರು.

• ಹಬ್ಬಕ್ಕೆ ತಾರಾ ಮೆರುಗು
ಕುಂದಾಪುರ ಕನ್ನಡ ಹಬ್ಬದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರೂ ಬರುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

• ಇದೇ ಮೊದಲು
ಈ ಹಬ್ಬ ಕುಂದಾಪುರ ಸಂಸ್ಕೃತಿಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತಿ ಪಡಿಸುವ ಪ್ರಯತ್ನ. ಆ ಪೈಕಿ ಪ್ರಮುಖ ಆಕರ್ಷಣೆ ಆಗಿ ಜೋಡಾಟ ಇರಲಿದೆ. ಇದು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಒಂದೇ ಪ್ರಸಂಗ ಏಕಕಾಲದಲ್ಲಿ ಎರಡು ರಂಗಸ್ಥಳಗಳಲ್ಲಿ ಸ್ಪರ್ಧೆಯ ಮೇಲೆ ನಡೆಯುವ ಈ ಪ್ರದರ್ಶನವನ್ನು ನೋಡಲು ಊರಿನಿಂದಲೇ 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ ಭಾನುವಾರ ಸಂಜೆ 7.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಂದ ʼರವಿ ಬಸ್ರೂರ್ ನೈಟ್ಸ್ʼ ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಇರಲಿದೆ. ಇದು ಕೂಡ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ಮಾಹಿತಿ ನೀಡಿದರು.
ದಿನವಿಡೀಯ ವಿಶೇಷ: ʼಹೊಟ್ಟಿ ಕಂಡದ್ದ್ ನಾವೇ ಸೈʼ ಎಂಬ ಹೆಸರಿನಲ್ಲಿ ಕರಾವಳಿ ಖಾದ್ಯಮೇಳ ಇರಲಿದ್ದು, ವಿಶೇಷ ತಿಂಡಿ-ತಿನಿಸುಗಳು ಲಭ್ಯ ಇರಲಿವೆ. ಅಲ್ಲದೆ ಕಡಲೂರಿನ ವಸ್ತು, ಒಡವೆ, ವಸ್ತ್ರಪ್ರದರ್ಶನ ಮತ್ತು ಮಾರಾಟದ ʼಕುಂದಾಪ್ರ ಸಂತಿʼ ಕೂಡ ಇರಲಿದೆ.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಲೆಕ್ಕಪರಿಶೋಧಕ ವಿಜಯ್ ಶೆಟ್ಟಿ, ಕ್ರೀಡಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.

ಕುಂದಾಪುರ ಕನ್ನಡ ಹಬ್ಬದ ಇತರ ಕಾರ್ಯಕ್ರಮಗಳು
• ಆಗಸ್ಟ್ 17, ಶನಿವಾರ
ಮಧ್ಯಾಹ್ನ 3: ದಿಬ್ಬಣ- ನಗರದ ವಿವಿಧ ಭಾಗಗಳಿಂದ ಆಗಮಿಸುವ ಜನರ ಪುರ ಮೆರವಣಿಗೆ.
ಸಂಜೆ 4: ನಾಕ್ ಘನಾ ಸುರ್ಲ್- ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ನಿಂದ ಜಾನಪದ, ರಂಗ ಹಾಗೂ ಕುಂದಾಪ್ರ ಕನ್ನಡ ಗೀತಗಾಯನ.
ಸಂಜೆ 6.30: ಜೋಡಾಟ- ಕರಾವಳಿ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರ ಮೇಳೈಸುವಿಕೆ.

• ಆಗಸ್ಟ್ 18, ಭಾನುವಾರ
ಬೆಳಗ್ಗೆ 10: ಬಯಲಾಟ- ಗ್ರಾಮೀಣ ಉತ್ಸವ
ಬೆಳಗ್ಗೆ 10: ತಾರೆಯರ ಜೊತೆ ಮಾತುಕತೆ, ಕವಿತೆ.
ಬೆಳಗ್ಗೆ 11: ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼ
ಬೆಳಗ್ಗೆ 11.15: ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.
ಮಧ್ಯಾಹ್ನ 12: ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ.
ಮಧ್ಯಾಹ್ನ 1.30: ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼ
ಮಧ್ಯಾಹ್ನ 2.30: ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼ
ಸಂಜೆ 4.30: ರಥೋತ್ಸವ
ರಾತ್ರಿ 7.30: ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ.

Ramesh Babu

Journalist

Recent Posts

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

5 hours ago

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

6 hours ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

7 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

17 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

17 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

20 hours ago