
ರಾಜ್ಯ ರಾಜಧಾನಿಯಲ್ಲಿ ಅಬ್ಬರಿಸಿದ ಬಿರುಗಾಳಿ ಸಹಿತ ಭಾರಿ ಮಳೆ ಇಂದು ಮಹಾ ದುರಂತವನ್ನೇ ಸೃಷ್ಟಿಸಿದೆ. ನಗರದ ಬೌರಿಂಗ್ ಆಸ್ಪತ್ರೆ ಸಮೀಪದ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ, ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಒಟ್ಟು 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಬೌರಿಂಗ್ ಆಸ್ಪತ್ರೆಯ ಹೊರಗಿನ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಬೀದಿಬದಿಯ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದರು. ಸಂಜೆ ಸುರಿದ ಭಾರಿ ಬಿರುಗಾಳಿ ಮಳೆಗೆ ಹಳೆಯದಾಗಿದ್ದ ಈ ಕಾಂಪೌಂಡ್ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗೋಡೆಯ ಕೆಳಗೆ ಸಿಲುಕಿದ ವ್ಯಾಪಾರಿಗಳು ಮತ್ತು ಅಲ್ಲಿ ನಿಂತಿದ್ದ ಸಾರ್ವಜನಿಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು ಸೇರಿರುವುದು ಘಟನೆಯ ತೀವ್ರತೆಯನ್ನು ಹೆಚ್ಚಿಸಿದೆ.

ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ :
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೃತರ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದರು.
ಸ್ಥಳದಲ್ಲಿ ಪೂರ್ವ ವಿಭಾಗದ ಡಿಸಿಪಿ, ಎಸಿಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಬೆವರು ಸುರಿಸಿ ದುಡಿಯುತ್ತಿದ್ದ ಬೀದಿಬದಿ ವ್ಯಾಪಾರಿಗಳ ಬದುಕನ್ನು ವರುಣನ ಆರ್ಭಟ ಕಿತ್ತುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಹಳೆಯ ಕಟ್ಟಡ ಮತ್ತು ಗೋಡೆಗಳ ಬಗ್ಗೆ ಬಿಬಿಎಂಪಿ ವಹಿಸಿದ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.