
ಬೆಂಗಳೂರು ಗ್ರಾಮಾಂತರ: ಈ ಬಾರಿ ಬೇಸಿಗೆಯ ಬಿರು ಬಿಸಿಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಯರ್ ಮಾರಾಟಕ್ಕೆ ಹೊಸ ಉತ್ತೇಜನ ನೀಡಿದೆ. ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 2,82,554 ಲೀಟರ್ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 70,582 ಲೀಟರ್ ಹೆಚ್ಚುವರಿ ಮಾರಾಟ ದಾಖಲಾಗಿದೆ.
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಬಿಯರ್ ಮಾರಾಟದಲ್ಲಿ ಶೇ.33.30ರಷ್ಟು ಏರಿಕೆ ಕಂಡುಬಂದಿದೆ.
ರಾಜ್ಯಾದ್ಯಂತ ತಾಪಮಾನ ಏರಿಕೆಯಿಂದ ಜನರು ತಂಪು ಪಾನೀಯಗಳತ್ತ ಮುಖ ಮಾಡಿದರೆ, ಮದ್ಯಪ್ರಿಯರು ಕೋಲ್ಡ್ ಬಿಯರ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಜಿಲ್ಲೆಯಲ್ಲೂ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಸಮೀಪ ದಾಖಲಾಗಿದ್ದರಿಂದ ಬಿಯರ್ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ.
ಕಳೆದ ವರ್ಷಕ್ಕಿಂತ ಭಾರೀ ಜಿಗಿತ
2025-26ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಟ್ಟು 2,11,972 ಲೀಟರ್ ಬಿಯರ್ ಮಾರಾಟವಾಗಿತ್ತು. ಆದರೆ 2026-27ನೇ ಸಾಲಿನ ಇದೇ ಅವಧಿಯಲ್ಲಿ ಅದು 2,82,554 ಲೀಟರ್‌ಗೆ ಏರಿಕೆಯಾಗಿದೆ.
ಏಪ್ರಿಲ್ ತಿಂಗಳಲ್ಲೇ ಕಳೆದ ವರ್ಷದ 1,06,844 ಲೀಟರ್‌ಗಳ ಮಾರಾಟವಾಗಿತ್ತು. ಈ ಬಾರಿ 1,44,251 ಲೀಟರ್‌ಗೆ ಏರಿಕೆಯಾಗಿದೆ. ಮೇ ತಿಂಗಳಲ್ಲೂ 1,05,128 ಲೀಟರ್‌ನಿಂದ 1,38,303 ಲೀಟರ್‌ಗೆ ಏರಿಕೆ ಕಂಡಿದೆ.
ಮಳೆಗಾಲ ಆರಂಭವಾದರೂ ಬೇಡಿಕೆ ಕುಸಿತವಿಲ್ಲ
ಸಾಮಾನ್ಯವಾಗಿ ಮಳೆಗಾಲ ಆರಂಭವಾದ ಬಳಿಕ ಬಿಯರ್ ಮಾರಾಟದಲ್ಲಿ ಇಳಿಕೆ ಕಂಡುಬರುತ್ತದೆ. ಆದರೆ ಈ ಬಾರಿ ಜೂನ್ ಮೊದಲ ವಾರದವರೆಗೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೇ ಬಿಸಿಲಿನ ತಾಪ ಮುಂದುವರಿದ ಹಿನ್ನೆಲೆಯಲ್ಲಿ ಬಿಯರ್ ಬೇಡಿಕೆ ಕಡಿಮೆಯಾಗಿಲ್ಲ. ಮಳೆಗಾಲದಲ್ಲೂ ಬಿಯರ್ ಮಾರಾಟ ಸ್ಥಿರವಾಗಿದೆ.
ಹೊಸಕೋಟೆ ನಂ.1, ದೊಡ್ಡಬಳ್ಳಾಪುರದಲ್ಲಿ ಅತಿ ಹೆಚ್ಚು ಬೆಳವಣಿಗೆ
ತಾಲೂಕುಗಳವಾರು ಮಾರಾಟದ ಅಂಕಿ-ಅಂಶಗಳನ್ನು ಗಮನಿಸಿದರೆ ಹೊಸಕೋಟೆ ತಾಲೂಕು ಮೊದಲ ಸ್ಥಾನದಲ್ಲಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೊಸಕೋಟೆಯಲ್ಲಿ 85,418 ಲೀಟರ್ ಬಿಯರ್ ಮಾರಾಟವಾಗಿದೆ. ಅದರ ನಂತರ
ದೊಡ್ಡಬಳ್ಳಾಪುರ – 72,536 ಲೀಟರ್
ದೇವನಹಳ್ಳಿ – 63,542 ಲೀಟರ್
ನೆಲಮಂಗಲ – 61,058 ಲೀಟರ್ ಮಾರಾಟವಾಗಿದೆ.
ಆದರೆ ಬೆಳವಣಿಗೆಯ ದೃಷ್ಟಿಯಿಂದ ನೋಡಿದರೆ ದೊಡ್ಡಬಳ್ಳಾಪುರ ತಾಲೂಕು ಅಚ್ಚರಿ ಮೂಡಿಸಿದ್ದು, ಕಳೆದ ವರ್ಷಕ್ಕಿಂತ ಶೇ.43.19ರಷ್ಟು ಮಾರಾಟ ಹೆಚ್ಚಳ ದಾಖಲಿಸಿದೆ.
ವಲಸೆ ಕಾರ್ಮಿಕರ ಸಂಖ್ಯೆಯೂ ಕಾರಣ?
ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅಬಕಾರಿ ಇಲಾಖೆ ಮೂಲಗಳ ಪ್ರಕಾರ, ಈ ವರ್ಗದ ಗ್ರಾಹಕರಿಂದಲೂ ಬಿಯರ್‌ಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಬೇಸಿಗೆಯ ತಾಪಮಾನ, ಕೈಗಾರಿಕಾ ವಲಯಗಳ ವಿಸ್ತರಣೆ ಹಾಗೂ ಜನರ ಖರೀದಿ ಸಾಮರ್ಥ್ಯ ಹೆಚ್ಚಳವು ಮಾರಾಟ ಏರಿಕೆಗೆ ಕಾರಣಗಳಾಗಿವೆ.
ತಾಲೂಕುವಾರು ಬಿಯರ್ ಮಾರಾಟ (ಏಪ್ರಿಲ್-ಮೇ)
ತಾಲೂಕು 2025-26 2026-27
ನೆಲಮಂಗಲ 46,713 ಲೀ 61,058 ಲೀ
ದೊಡ್ಡಬಳ್ಳಾಪುರ 50,658 ಲೀ 72,536 ಲೀ
ದೇವನಹಳ್ಳಿ 49,237 ಲೀ 63,542 ಲೀ
ಹೊಸಕೋಟೆ 65,364 ಲೀ 85,418 ಲೀ
ಒಟ್ಟು 2,11,972 ಲೀ 2,82,554 ಲೀ
ತಜ್ಞರ ಅಭಿಪ್ರಾಯ
ಬೇಸಿಗೆಯ ತೀವ್ರತೆ ಹೆಚ್ಚಾದಂತೆ ಬಿಯರ್ ಸೇರಿದಂತೆ ತಂಪು ಪಾನೀಯಗಳ ಬಳಕೆ ಹೆಚ್ಚಾಗುವುದು ಸಹಜ. ಆದರೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮದ್ಯ ಸೇವನೆ ಮಿತವಾಗಿರಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷದ ಏಪ್ರಿಲ್-ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಬಿಯರ್ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಬಕಾರಿ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಬೇಸಿಗೆ ಸಯಮಯದಲ್ಲಿ ಬಿಯರ್ ವ್ಯಾಪಾರದಲ್ಲಿ ಗಣನೀಯವಾಗಿ ಏರಿಕೆ ಕಂಡಿತ್ತು. ಈಗಲೂ ಬೇಡಿಕೆ ಹಾಗೇ ಇದೆ ಎಂದು ರಾಹುಲ್, ಮದ್ಯದಂಗಡಿ ಮಾಲೀಕ ದೊಡ್ಡಬಳ್ಳಾಪುರ ತಿಳಿಸಿದ್ದಾರೆ.