ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಫಲಾನುಭವಿಗಳಾದ ಬಡವರ ಮೇಲೆ- ಸಿಎಂ ಸಿದ್ದರಾಮಯ್ಯ ಕಿಡಿ

ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ಒಂದೇ ಬಾರಿ ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು, ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು ತಾಖತ್ ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರು ‘‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’’ ಎಂದು ನಮ್ಮ ಸರ್ಕಾರದ ಬಗ್ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ, ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ, ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶಾ ಅವರಿಗೆ ನನ್ನ ಸವಾಲು ಕೂಡಾ ಹೌದು ಎಂದಿದ್ದಾರೆ.

ಕರ್ನಾಟಕದ ಬಗ್ಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ನಾಯಕರು ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿಯ ಯೋಜನೆಗಳನ್ನು ಮಾತ್ರ ಅಲ್ಲ, ಗ್ಯಾರಂಟಿ ಎಂಬ ಹೆಸರನ್ನೂ ಕದ್ದು ಈಗ ಅದೇ ಹೆಸರಲ್ಲಿ ಜಾಹೀರಾತು ನೀಡಿದ್ದಾರೆ. ಇದು ಆ ಪಕ್ಷದ ಬಡಜನ ವಿರೋಧಿ ನಿಲುವು ಮತ್ತು ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಅವರ ಕೆಂಗಣ್ಣು ಬಿದ್ದಿರುವುದು ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆ. ಬಡಜನರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ವಿರೋಧಿಸುತ್ತಲೇ ಬಂದಿರುವ ಇತಿಹಾಸ ಬಿಜೆಪಿ ಮತ್ತು ಸಂಘ ಪರಿವಾರಕ್ಕಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು “ಗರೀಬಿ ಹಟಾವೋ” ಎಂದು ಕರೆನೀಡಿದಾಗಲೂ ಇದೇ ಪರಿವಾರದವರು ಅದನ್ನು ವಿರೋಧಿಸಿದ್ದರು. ಭೂ ಸುಧಾರಣೆ, ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಕಾರ್ಯಕ್ರಮಗಳಿದ್ದರೂ ಇವರ ವಿರೋಧ ಇದ್ದೇ ಇದೆ. ಇದಕ್ಕೆ ಬಡವರೇ ತಕ್ಕ ಉತ್ತರವನ್ನು ಕೊಡಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ ಬಿಜೆಪಿ ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು. ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಭಾರತ್ ಬ್ರಾಂಡ್‌ನಲ್ಲಿ ಅದೇ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ನಾವು ಕೆ.ಜಿ ಗೆ ರೂ.33 ರಂತೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಕೆ.ಜಿ ಗೆ ರೂ.29ರಂತೆ ಮಾರಾಟ ಮಾಡುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ಕರ್ನಾಟಕದ ಬಡವರು, ರೈತರು, ಮಹಿಳೆಯರು, ಕಾರ್ಮಿಕರೆಂದರೆ ಅಸಹನೆ ಎಂದು ತಿಳಿಸಿದ್ದಾರೆ.

ನಮ್ಮ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕನ್ನಡಿಗರೆಂದರೆ ತಾತ್ಸಾರ. ಕನ್ನಡ ಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆಗೆ ಪ್ರಯತ್ನ, ನಂದಿನಿ ಮೇಲೆ ಅಮುಲ್ ಹೇರುವ ಹುನ್ನಾರ ಇವೆಲ್ಲವೂ ಅಮಿತ್ ಶಾ ಸಾಧನೆಗಳು. ಕೇಂದ್ರ ಸರ್ಕಾರ ಬರಪರಿಹಾರ ನೀಡಬೇಕೆಂದರೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತೀರ್ಮಾನಿಸಬೇಕು. ಕನ್ನಡಿಗರ ವಿರೋಧಿಯಾಗಿರುವ ಅಮಿತ್ ಶಾ ಅವರು ಆ ಸಭೆಯನ್ನೇ ಕರೆಯುತ್ತಿಲ್ಲ. ಇಂತಹವರು ರಾಜ್ಯಕ್ಕೆ ಬಂದು ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಡವರ ಕಷ್ಟ ಕಡಿಮೆ ಮಾಡುವ, ಕಣ್ಣೀರು ಒರೆಸುವ ಕೆಲಸವೇ ನಿಜವಾದ ದೈವ ಭಕ್ತಿ ಎಂದು ತಿಳಿದುಕೊಂಡವನು ನಾನು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿ ಎಷ್ಟು ಬಾರಿ ರಾಮನಾಮ ಹೇಳಿದರೂ ಅದು ವ್ಯರ್ಥ. ಬಡವರಿಗೆ ಅನ್ನವನ್ನೂ ನೀಡದೆ ದೇವರಿಗೆ ನೈವೇಧ್ಯ ನೀಡಿ ಏನು ಫಲ? ಬಡವರಿಗೆ ಮನೆ ಕಟ್ಟಿಕೊಡದೆ ದೇವರಿಗೆ ಗುಡಿ ಕಟ್ಟಿ ಏನು ಫಲ? ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರಿಗೆ ಯಾವ ರಾಮನ ದಯೆಯೂ ಇರಲಾರದು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೂ ಇರಲಾರದು ಎಂದರು.

Ramesh Babu

Journalist

Recent Posts

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

9 hours ago

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

10 hours ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

10 hours ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

10 hours ago

10.50 ಕೋಟಿ ಸಾಲ ವಂಚನೆ ಆರೋಪ: ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 10.50 ಕೋಟಿ ಸಾಲ ಮಂಜೂರು ಮಾಡಿ ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ ಆರ್ಥಿಕ…

13 hours ago

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

21 hours ago