ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಫಲಾನುಭವಿಗಳಾದ ಬಡವರ ಮೇಲೆ- ಸಿಎಂ ಸಿದ್ದರಾಮಯ್ಯ ಕಿಡಿ

ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧವಿದ್ದರೆ ಬಿಜೆಪಿ ನಾಯಕರು ಅದನ್ನು ಕಂತುಗಳಲ್ಲಿ ಹೇಳುವುದನ್ನು ಬಿಟ್ಟು ಒಂದೇ ಬಾರಿ ನೇರವಾಗಿ, ಸ್ಪಷ್ಟವಾಗಿ ಹೇಳಿಬಿಡಬೇಕು, ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಜಾರಿಯಲ್ಲಿರುವ ಎಲ್ಲ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಾಗಿ ಆ ರಾಜ್ಯಗಳಲ್ಲಿ ಘೋಷಣೆ ಮಾಡಬೇಕು. ಈ ಮೂಲಕ ತಮ್ಮ ದಮ್ಮು ತಾಖತ್ ತೋರಿಸಬೇಕು. ಆಗಾಗ ಗೊಣಗಾಡಿಕೊಂಡರೆ ಏನು ಫಲ? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಇದೀಗ ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಹಾ ಅವರು ‘‘ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ’’ ಎಂದು ನಮ್ಮ ಸರ್ಕಾರದ ಬಗ್ಗೆ ಇರುವ ಈರ್ಷ್ಯೆಯನ್ನು ಹೊರಹಾಕಿದ್ದಾರೆ. ಇದು ಅಮಿತ್ ಶಾ ಅವರ ಖಚಿತ ಅಭಿಪ್ರಾಯವಾಗಿದ್ದರೆ ಅವರು ನನ್ನ ಜೊತೆ ಬಹಿರಂಗ ಚರ್ಚೆಯಲ್ಲಿ ಪಾಲ್ಗೊಳ್ಳಲಿ, ಗ್ಯಾರಂಟಿ ಯೋಜನೆಗಳಿಂದ ನಮ್ಮ ಖಜಾನೆ ಬರಿದಾಗಿಲ್ಲ, ಬದಲಿಗೆ ತೆರಿಗೆ ಹಂಚಿಕೆ ಮತ್ತು ಅನುದಾನ ವಿತರಣೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವುದನ್ನು ನಾನು ಸಾಬೀತು ಮಾಡಬಲ್ಲೆ. ಇದು ಅಮಿತ್ ಶಾ ಅವರಿಗೆ ನನ್ನ ಸವಾಲು ಕೂಡಾ ಹೌದು ಎಂದಿದ್ದಾರೆ.

ಕರ್ನಾಟಕದ ಬಗ್ಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿ ನಾಯಕರು ತಮ್ಮ ಆಳ್ವಿಕೆಯ ರಾಜ್ಯಗಳಲ್ಲಿ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಗ್ಯಾರಂಟಿಯ ಯೋಜನೆಗಳನ್ನು ಮಾತ್ರ ಅಲ್ಲ, ಗ್ಯಾರಂಟಿ ಎಂಬ ಹೆಸರನ್ನೂ ಕದ್ದು ಈಗ ಅದೇ ಹೆಸರಲ್ಲಿ ಜಾಹೀರಾತು ನೀಡಿದ್ದಾರೆ. ಇದು ಆ ಪಕ್ಷದ ಬಡಜನ ವಿರೋಧಿ ನಿಲುವು ಮತ್ತು ಬೌದ್ದಿಕ ದಿವಾಳಿತನವನ್ನು ತೋರಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರು ನಿಜವಾಗಿ ವಿರೋಧಿಸುವುದು ಗ್ಯಾರಂಟಿ ಯೋಜನೆಗಳನ್ನಲ್ಲ, ಅವರ ಕೆಂಗಣ್ಣು ಬಿದ್ದಿರುವುದು ಈ ಯೋಜನೆಗಳ ಫಲಾನುಭವಿಗಳಾದ ಬಡವರ ಮೇಲೆ. ಬಡಜನರಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವುಗಳನ್ನು ವಿರೋಧಿಸುತ್ತಲೇ ಬಂದಿರುವ ಇತಿಹಾಸ ಬಿಜೆಪಿ ಮತ್ತು ಸಂಘ ಪರಿವಾರಕ್ಕಿದೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರು “ಗರೀಬಿ ಹಟಾವೋ” ಎಂದು ಕರೆನೀಡಿದಾಗಲೂ ಇದೇ ಪರಿವಾರದವರು ಅದನ್ನು ವಿರೋಧಿಸಿದ್ದರು. ಭೂ ಸುಧಾರಣೆ, ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಕಾರ್ಯಕ್ರಮಗಳಿದ್ದರೂ ಇವರ ವಿರೋಧ ಇದ್ದೇ ಇದೆ. ಇದಕ್ಕೆ ಬಡವರೇ ತಕ್ಕ ಉತ್ತರವನ್ನು ಕೊಡಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಮೊದಲ ಅವಧಿಯಲ್ಲಿ ನಾನು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಮೊದಲಾದ ಬಡವರ ಕಲ್ಯಾಣದ ಕಾರ್ಯಕ್ರಮಗಳ ಬಗ್ಗೆಯೂ ಬಿಜೆಪಿ ನಾಯಕರು ಇದೇ ರೀತಿ ತಮ್ಮ ಅಸಹನೆ ಮತ್ತು ಮತ್ಸರವನ್ನು ಕಾರಿಕೊಂಡಿದ್ದರು. ಬಡವರಿಗೆ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಭಾರತ್ ಬ್ರಾಂಡ್‌ನಲ್ಲಿ ಅದೇ ಅಕ್ಕಿಯನ್ನು ಮಾರಾಟ ಮಾಡುತ್ತಿದೆ. ನಾವು ಕೆ.ಜಿ ಗೆ ರೂ.33 ರಂತೆ ಅಕ್ಕಿ ಕೇಳಿದಾಗ ನಿರಾಕರಿಸಿದ್ದ ಕೇಂದ್ರ ಸರ್ಕಾರ ಈಗ ಕೆ.ಜಿ ಗೆ ರೂ.29ರಂತೆ ಮಾರಾಟ ಮಾಡುತ್ತಿದೆ. ಒಟ್ಟಿನಲ್ಲಿ ಬಿಜೆಪಿಗೆ ಕರ್ನಾಟಕದ ಬಡವರು, ರೈತರು, ಮಹಿಳೆಯರು, ಕಾರ್ಮಿಕರೆಂದರೆ ಅಸಹನೆ ಎಂದು ತಿಳಿಸಿದ್ದಾರೆ.

ನಮ್ಮ ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಕನ್ನಡಿಗರೆಂದರೆ ತಾತ್ಸಾರ. ಕನ್ನಡ ಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆಗೆ ಪ್ರಯತ್ನ, ನಂದಿನಿ ಮೇಲೆ ಅಮುಲ್ ಹೇರುವ ಹುನ್ನಾರ ಇವೆಲ್ಲವೂ ಅಮಿತ್ ಶಾ ಸಾಧನೆಗಳು. ಕೇಂದ್ರ ಸರ್ಕಾರ ಬರಪರಿಹಾರ ನೀಡಬೇಕೆಂದರೆ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತೀರ್ಮಾನಿಸಬೇಕು. ಕನ್ನಡಿಗರ ವಿರೋಧಿಯಾಗಿರುವ ಅಮಿತ್ ಶಾ ಅವರು ಆ ಸಭೆಯನ್ನೇ ಕರೆಯುತ್ತಿಲ್ಲ. ಇಂತಹವರು ರಾಜ್ಯಕ್ಕೆ ಬಂದು ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬಡವರ ಕಷ್ಟ ಕಡಿಮೆ ಮಾಡುವ, ಕಣ್ಣೀರು ಒರೆಸುವ ಕೆಲಸವೇ ನಿಜವಾದ ದೈವ ಭಕ್ತಿ ಎಂದು ತಿಳಿದುಕೊಂಡವನು ನಾನು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿ ಎಷ್ಟು ಬಾರಿ ರಾಮನಾಮ ಹೇಳಿದರೂ ಅದು ವ್ಯರ್ಥ. ಬಡವರಿಗೆ ಅನ್ನವನ್ನೂ ನೀಡದೆ ದೇವರಿಗೆ ನೈವೇಧ್ಯ ನೀಡಿ ಏನು ಫಲ? ಬಡವರಿಗೆ ಮನೆ ಕಟ್ಟಿಕೊಡದೆ ದೇವರಿಗೆ ಗುಡಿ ಕಟ್ಟಿ ಏನು ಫಲ? ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರಿಗೆ ಯಾವ ರಾಮನ ದಯೆಯೂ ಇರಲಾರದು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೂ ಇರಲಾರದು ಎಂದರು.

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

3 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

18 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago