Categories: ಲೇಖನ

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು‌ ಊಹಿಸಿ….

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ……..

ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ…..

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಅಂಬೇಡ್ಕರ್ ಅವರಲ್ಲದೆ ಬೇರೆ ಯಾರಾದರೂ ಭಾರತದ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಿದ್ದರೆ ಅದರ ಮೂಲ ಸ್ವರೂಪ ಏನಾಗಿರುತ್ತಿತ್ತು…….

1) ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಅದೇ ವಾತಾವರಣದಲ್ಲಿ ಬೆಳೆದು ಬಂದವರು. ಅವರ ವಯಸ್ಸು ಮತ್ತು ಶಿಕ್ಷಣ ಬೆಳೆದಂತೆಲ್ಲಾ ಅವರಿಗೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಅಸಮಾನತೆ, ಅಮಾನವೀಯತೆ ಸ್ವತಃ ಅರಿವಾಗತೊಡಗಿತು. ಅದೃಷ್ಟವಶಾತ್ ಅವರು ಹುಟ್ಟಿನಿಂದಲೇ ಪ್ರತಿಭಾವಂತ ವಿದ್ಯಾರ್ಥಿ ಮತ್ತು ಸಹಜವಾಗಿ ಕೆಲವು ಮಕ್ಕಳಲ್ಲಿ ಕಂಡುಬರುವ ಪ್ರತಿಭೆ ಮತ್ತು ಶ್ರದ್ಧೆ ಅವರಲ್ಲಿ ಅಂತರ್ಗತವಾಗಿತ್ತು.

2) ಅಂಬೇಡ್ಕರ್ ಕೇವಲ ಭಾರತೀಯ ಸಮಾಜದ ಬಗ್ಗೆ ಮಾತ್ರ ಅಧ್ಯಯನ ಮಾಡಲಿಲ್ಲ. ಇಲ್ಲಿನ ವೇದಾಧ್ಯಯನ, ಮನುಸ್ಮೃತಿಗಳು ಮಾತ್ರ ಓದಿನ ವಿಷಯಗಳಾಗಿರಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಗಳನ್ನು ಅವರದೇ ನೆಲದಲ್ಲಿ ಓದಿ ಡಾಕ್ಟರೇಟ್ ಮೀರಿದ ಅಧ್ಯಯನ ಮಾಡಿದರು. ನಮ್ಮ ಸಂಸ್ಕೃತಿಗೆ ಭಿನ್ನ ಸಂಸ್ಕೃತಿಯ ಅಧ್ಯಯನ ಅವರಲ್ಲಿ ಉಂಟುಮಾಡಿರುವ ಮಾನಸಿಕ ಘರ್ಷಣೆಯನ್ನು ಊಹಿಸುವುದು ಕಷ್ಟ.

3) ಓದು ಅಧ್ಯಯನ ಮಾತ್ರವಲ್ಲದೆ ವಿಶಾಲ ಅರಿವಿನ ಮನಸ್ಥಿತಿ ಮತ್ತು ಅದನ್ನು ಪ್ರಕಟಿಸಲು ಸಾರ್ವಜನಿಕ ಜೀವನದ ಪ್ರವೇಶವೂ ಅವರ ಬದುಕಿನಲ್ಲಾದ ಮಹತ್ವದ ಘಟನೆ. ಏಕೆಂದರೆ ಒಬ್ಬ ಪ್ರತಿಭಾವಂತ ವ್ಯಕ್ತಿ ಆ ಪ್ರತಿಭೆಯನ್ನು ತನ್ನ ಔನತ್ಯಕ್ಕೆ ಮಾತ್ರ ಬಳಸುವ ಸಾಧ್ಯತೆಯೇ ಹೆಚ್ಚು. ಸಾರ್ವಜನಿಕ ಜೀವನ ಸ್ವಲ್ಪ ತಲೆನೋವಿನ ಕೆಲಸ.

4) ಐತಿಹಾಸಿಕ ಅದೃಷ್ಟವೂ ಅವರ ಪಾಲಿಗೆ ಒದಗಿ ಬಂದಿತು. ಈ ಜಗತ್ತು ಕಂಡ ಕೆಲವೇ ಶ್ರೇಷ್ಠ ಮಾನವ ಪ್ರಾಣಿಗಳಲ್ಲಿ ಒಬ್ಬರಾದ ಮಹಾತ್ಮ ಗಾಂಧಿಯವರ ಸಮಕಾಲೀನತೆ, ಒಡನಾಟ, ತೀವ್ರ ಚರ್ಚೆ, ವಿರೋಧ ಎಲ್ಲವನ್ನೂ ಅನುಭವಿಸುವ ಅವಕಾಶ ಬಾಬಾ ಸಾಹೇಬರಿಗೆ ಸಿಕ್ಕಿತು. ಶೋಷಿತ ಸ್ವಾತಂತ್ರ್ಯ ಮತ್ತು ಭಾರತ ದೇಶದ ಸ್ವಾತಂತ್ರ್ಯ ಎಂಬ ಎರಡು ಬೃಹತ್ ಹೋರಾಟಗಳ ಸಮಯದಲ್ಲಿ ತಮ್ಮ ಚಿಂತನೆಗಳನ್ನು ರೂಪಿಸಿಕೊಳ್ಳುವ ಸುವರ್ಣಾವಕಾಶ ಅವರ ಪಾಲಿಗೆ ದೊರೆಯಿತು. ಅಲ್ಲದೆ ಗಾಂಧಿ ಎಂಬ ಮಹಾತ್ಮ ( ಅಂಬೇಡ್ಕರ್ ಅವರನ್ನು ಮಹಾತ್ಮ ಎಂದು ಒಪ್ಪಿಕೊಳ್ಳಲಿಲ್ಲ. ಅದು ಅವರ ಅಭಿಪ್ರಾಯ ಮತ್ತು ಸ್ವಾತಂತ್ರ್ಯ ) ಅಂಬೇಡ್ಕರ್ ಅವರನ್ನು ಯಾವ ಕಾರಣದಿಂದಲೂ ನಿರ್ಲಕ್ಷಿಸದೆ ಅವರೊಂದಿಗೆ ಕೆಲವು ವಿಷಯಗಳಲ್ಲಿ ವಿರೋಧ ಇದ್ದರೂ ಅವರಿಗೆ ಹೆಚ್ಚಿನ ಮಹತ್ವ ನೀಡಿದರು. ಆಗಿನ ಕಾಲಕ್ಕೆ ಅಂಬೇಡ್ಕರ್ ಅವರನ್ನು ಸ್ವಲ್ಪ ಮಟ್ಟಿಗೆ ನಿರ್ಲಕ್ಷಿಸಬಹುದಾದಷ್ಟು ದೈತ್ಯ ಶಕ್ತಿ ಗಾಂಧಿಗೆ ಇದ್ದರೂ ಪೂನಾ ಒಪ್ಪಂದದ ಸಮಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ಸ್ವತಃ ಉಪವಾಸ ಮಾಡಿದರು ಎಂದರೆ ಅವರಿಗೆ ಅಂಬೇಡ್ಕರ್ ಅವರ ಪ್ರತಿಭೆ ಮತ್ತು ಸಂಘಟನಾ ಶಕ್ತಿಯ ಬಗ್ಗೆ ಬಹುದೊಡ್ಡ ಗೌರವವಿತ್ತು ಎನಿಸುತ್ತದೆ.

5 ) ವಿಶ್ವದ ಆಧ್ಯಾತ್ಮಿಕ ತವರೂರು ಎಂದು ಕರೆಯಲಾಗುವ, ಅಸ್ಪೃಶ್ಯತೆ ಎಂಬ ಕೆಟ್ಟ ಕೊಳಕ ಸಾಮಾಜಿಕ ವ್ಯವಸ್ಥೆ ಹೊಂದಿದ್ದ ಭಾರತದ ಸಂವಿಧಾನ ರಚಿಸುವ ನೇತೃತ್ವ ವಹಿಸುವ ಅವಕಾಶ ಅದೇ ಜನಾಂಗದ ಒಬ್ಬ ವ್ಯಕ್ತಿಗೆ 1945/46 ರ ಆಸುಪಾಸಿನಲ್ಲಿ ದೊರೆಯಿತು ಎಂಬುದು ಈಗಲೂ ನಂಬಲಾಸಾಧ್ಯ ಎನಿಸುತ್ತದೆ ಮತ್ತು ಅಂಬೇಡ್ಕರ್ ದೈತ್ಯ ಶಕ್ತಿಯ ಅರಿವಾಗುತ್ತದೆ.

ಇದು ಅಂಬೇಡ್ಕರ್ ಅವರ ಜ್ಞಾನದ ಅಗಾಧತೆಯನ್ನು ತೋರಿಸುತ್ತದೆ ಮತ್ತು ಅವರು ಕರಡು ಸಮಿತಿಯ ಅಧ್ಯಕ್ಷರಾಗಲು ಇದ್ದ ಅರ್ಹತೆ ಮಾತ್ರ. ಅದು ಅವರ ವೈಯಕ್ತಿಕ ಸಾಮರ್ಥ್ಯ. ಈಗ ಸಂವಿಧಾನದಲ್ಲಿ ಅವರು ನಮಗೆ ನೀಡಿರುವ ಹಕ್ಕುಗಳು ನಾವು ಹೇಗೆ ಅರ್ಥೈಸಿಕೊಳ್ಳಬೇಕು…………

1) ಮನುಸ್ಮೃತಿಗಳ ಆಧಾರದ ಮೇಲೆ ನಿರ್ಮಾಣವಾಗಿದ್ದು ಭಾರತೀಯ ಸಮಾಜ. ಮಹಿಳೆಯರಿಗೆ ಗೌರವ ನೀಡಲಾಗಿತ್ತು ನಿಜ, ಆದರೆ ಅದು ಅಧಿಕಾರಯುತ, ಷರತ್ತು ಬದ್ಧ ಮತ್ತು ನಿಯಂತ್ರಿತವಾಗಿತ್ತು. ಸ್ವಾತಂತ್ರ್ಯ ಮತ್ತು ಸಮಾನತೆ ಇರಲೇ ಇಲ್ಲ. ಮುಸ್ಲಿಂ ದಾಳಿಕೋರರ ನಂತರ ಅದು ಮತ್ತಷ್ಟು ಕಠಿಣವಾಯಿತು. ಬ್ರಿಟಿಷರ ಕಾಲದಲ್ಲಿ ಒಂದು ಚೂರು ಸಡಿಲವಾಯಿತು. ಅಂಬೇಡ್ಕರ್ ಅವರಲ್ಲದೆ ಬೇರೆ ಯಾರೇ ಸಂವಿಧಾನ ರಚಿಸುವ ಅಧಿಕಾರ ಪಡೆದಿದ್ದರೆ ಖಂಡಿತ ನಾವು ನಮ್ಮ ಹೆಣ್ಣು ಮಕ್ಕಳ ಈ ರೀತಿಯ ಸ್ವಾತಂತ್ರ್ಯ ಸಮಾನತೆ ಮತ್ತು ಅಭಿವೃದ್ಧಿ ಕಾಣುವುದು ಸಾಧ್ಯವಿರಲಿಲ್ಲ ಮತ್ತು ಅದಕ್ಕಾಗಿ ಇನ್ನೂ ಅನೇಕ ವರ್ಷಗಳ ಹೋರಾಟ ಮಾಡಬೇಕಾಗಿತ್ತು. ಅದನ್ನು ಕಾನೂನಿನ ಮೂಲಕ ಒದಗಿಸಿಕೊಟ್ಟ ಅಂಬೇಡ್ಕರ್ ಅವರಿಗೆ ಎಲ್ಲಾ ಜಾತಿ ಸಮುದಾಯಗಳ ಹೆಣ್ಣು ಮಕ್ಕಳು ಕೃತಜ್ಞರಾಗಿರಬೇಕು. ಇಂದಿನ ರಾಜಕೀಯ ವ್ಯವಸ್ಥೆ ಹೇಗೇ ಇರಲಿ ಹೆಣ್ಣು ಮಕ್ಕಳ ಕನಿಷ್ಠ ನೆಮ್ಮದಿಯ ಬದುಕಿಗೆ ನಿಜವಾದ ಅಡಿಪಾಯ ಹಾಕಿದವರು ಬಾಬಾ ಸಾಹೇಬ್. ಪಾಶ್ಚಾತ್ಯ ನಾಗರಿಕತೆಯ ಅಧ್ಯಯನ ಅದಕ್ಕೆ ಕಾರಣ.

2) ಇದೇ ಅಂಶಗಳು ಎಲ್ಲಾ ವರ್ಗದ ಕಾರ್ಮಿಕರಿಗೂ ಅನ್ವಯಿಸುತ್ತದೆ. ಕೈಗಾರಿಕಾ ಕ್ರಾಂತಿಯ ವಿಷಯಗಳು, ಮಾರ್ಕ್ಸ್ ಸಿದ್ದಾಂತಗಳನ್ನು ಅಧ್ಯಯನ ಮಾಡಿದ ಕಾರಣದಿಂದಾಗಿಯೇ ಕಾರ್ಮಿಕ ಕಾನೂನುಗಳು ಸಂವಿಧಾನದಲ್ಲಿ ಅಡಕವಾಗಲು ಸಾಧ್ಯವಾಯಿತು. ಮಾರ್ಕ್ಸ್ ಓದದ ಯಾರಿಗೂ ಈ ರೀತಿಯ ಕಾನೂನು ಮಾಡಲು‌ ಸಾಧ್ಯವೇ ಇಲ್ಲ. 8 ಗಂಟೆಗಳ ಕೆಲಸ ಮತ್ತು ವಾರದ ರಜಾ ಮಾರ್ಕ್ಸ್ ಪ್ರೇರಿತ ಎಂಬುದು ಸ್ಪಷ್ಟ. ಬಂಡವಾಳಶಾಹಿ ವ್ಯವಸ್ಥೆ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳಲು ಇದ್ದ ಅನಿಯಮಿತ ಅಧಿಕಾರಕ್ಕೆ ಮಿತಿ ಹೇರಿದೆ ನಮ್ಮ ಕಾನೂನುಗಳು.

3) ಅತಿ ಮುಖ್ಯವಾಗಿ ಸಾಮಾನ್ಯ ಜನರು ಗಮನಹರಿಸಬೇಕಾದ ವಿಷಯ ಅಂಬೇಡ್ಕರ್ ಕೇವಲ ತಾವು ಅನುಭವಿಸಿದ ಜಾತಿ ದೌರ್ಜನ್ಯದ ಬಗ್ಗೆ ಮಾತ್ರ ಒತ್ತುಕೊಡಲಲ್ಲಿ. ಈ ಸಮಾಜದಲ್ಲಿ ಬೆಳೆದು ಬಂದಿದ್ದ ಆರ್ಥಿಕ ಮತ್ತು ಧಾರ್ಮಿಕ ದೌರ್ಜನ್ಯವೂ ಅವರ ವಿಶಾಲ ಹೃದಯದಲ್ಲಿ ಜಾಗ ಪಡೆಯಿತು. ಶ್ರೀಮಂತರು ಬಡವರನ್ನು ಶೋಷಿಸಬಹುದು ಎಂಬ ಕಾರಣದಿಂದಾಗಿಯೇ ನಾಗರಿಕ ಹಕ್ಕುಗಳು ಮತ್ತು ಅಪರಾಧ ಸಂಹಿತೆಯಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಅಸಹಾಯಕರಿಗೂ ಅವಕಾಶ ಕಲ್ಪಿಸುವ ನ್ಯಾಯಾಂಗದ ಕೆಲವು ಸೂಕ್ಷ್ಮ ಅಂಶಗಳನ್ನು ಸೇರಿಸಿದರು. ಬಹುಶಃ ಯಾರಾದರೂ ವಕೀಲರು ಅದರ ತಾಂತ್ರಿಕ ಅಂಶಗಳನ್ನು ಇನ್ನಷ್ಟು ಕೂಲಂಕಷವಾಗಿ ಹೇಳಬಹುದು.

ಭಾರತದ ಧಾರ್ಮಿಕ ವೈವಿಧ್ಯತೆಯನ್ನು ಕಾಪಾಡಲು ಭಾರತದ್ದೇ ವಿಶಿಷ್ಟ ಧಾರ್ಮಿಕ ಸ್ವಾತಂತ್ರ್ಯದ ಅಂಶಗಳನ್ನು ಸೇರಿಸಿದ್ದಕ್ಕಾಗಿ ಎಲ್ಲಾ ಧಾರ್ಮಿಕ ನಾಯಕರು ಅವರಿಗೆ ಋಣಿಯಾಗಿರಬೇಕು. ಜಾತಿ ಮೀಸಲಾತಿಯ ಕಾರಣದಿಂದ ಮೇಲ್ವರ್ಗದವರಿಗೆ ಸ್ವಲ್ಪ ಅಸಮಾಧಾನ ಇರಬಹುದೇ ಹೊರತು ಅವರ ಮಾನವೀಯ ತುಡಿತ ಮತ್ತು ಸಮಾನತೆಯ ನಡೆಯ ಬಗ್ಗೆ ಮನುಷ್ಯರಾದವರಿಗೆ ಯಾವುದೇ ತಕರಾರು ಇರುವುದಿಲ್ಲ.

4) ಬಾಬಾ ಸಾಹೇಬರ ಮತ್ತೊಂದು ಹೆಗ್ಗಳಿಕೆ ಭಾರತೀಯ ಸಮಾಜದ ಮೂಲ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಸನಾತನ ಧರ್ಮದ ಮೌಲ್ಯಗಳನ್ನು ಗೌರವಿಸುತ್ತಾ ಕೇವಲ ಅದರಲ್ಲಿ ಇರಬಹುದಾದ ಕೆಟ್ಟ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ತಿದ್ದುಪಡಿ ತಂದು ಅನೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಮೇಲ್ವರ್ಗದ ಮೇಲೆ ಯಾವುದೇ ಸೇಡಿನ ಕ್ರಮದ ಲವಲೇಷವೂ ಅದರಲ್ಲಿ ಕಾಣಬರುವುದಿಲ್ಲ. ಬದುಕಿನ ವಿವಿಧ ಹಂತಗಳಲ್ಲಿ ಸಾಕಷ್ಟು ಅಸಮಾನತೆಯ ನೋವು ಅವರಿಗೆ ಕಾಡಿದೆ. ಆದರೆ ಸಂವಿಧಾನ ಕರಡು ರಚಿಸುವ ಜವಾಬ್ದಾರಿ ದೊರೆತಾಗ ಅದು ತಮ್ಮ ಮನಸ್ಸಿನಲ್ಲಿ ಸುಳಿಯದಂತೆ ನೋಡಿ ಕೊಂಡಿದ್ದಾರೆ. ಈಗಲೂ ಭಾರತ ಬಹುಸಂಖ್ಯಾತರು ಸಂವಿಧಾನದ ಅಡಿಯಲ್ಲಿ ಹಿಂದೂ ಸಂಸ್ಕೃತಿಯ ಜೀವನ ಶೈಲಿಯನ್ನೇ ಅಳವಡಿಸಿಕೊಂಡಿದ್ದಾರೆ.

5) ಕಾಲದ ಸಂಘರ್ಷದಲ್ಲಿ ಒಂದಷ್ಟು ಬದಲಾವಣೆಯ ಅವಶ್ಯಕತೆ ಇರಬಹುದು. ಸ್ವತಃ ಅಂಬೇಡ್ಕರ್ ಹೇಳುವಂತೆ ನೀತಿ ನಿಯಮಗಳ ನಿಜವಾದ ಯಶಸ್ಸು ಅದನ್ನು ಜಾರಿಗೊಳಿಸುವವರ ಪ್ರಾಮಾಣಿಕತೆಯ ಮೇಲೆ ಅವಲಂಬಿಸಿರುತ್ತದೆ. ಸುಮಾರು 75 ವರ್ಷಗಳ ನಂತರ ತಿರುಗಿ ನೋಡಿದಾಗ ಭಾರತದ ಏಕತೆ, ವೈವಿಧ್ಯತೆ ಮತ್ತು ಸಮಗ್ರತೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಅದಕ್ಕೆ ಸಂವಿಧಾನದ ಮೂಲ ಸ್ವರೂಪ ಮತ್ತು ಬಾಬಾ ಸಾಹೇಬರ ಅಧ್ಯಯನ, ಚಿಂತನೆ, ದೂರದೃಷ್ಟಿ ಮತ್ತು ವಿಶಾಲ ಮನಸ್ಥಿತಿ ಕಾರಣ.

ಮೊದಲು ಹೇಳಿದ್ದನ್ನೇ ಮತ್ತೆ ನೆನಪಿಸುತ್ತೇನೆ. ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು ಊಹಿಸಿ ನೋಡಿ. ಬಹುಶಃ ಈಗಿನಷ್ಟು ಸಾಮಾಜಿಕ ನೆಮ್ಮದಿ ಸಿಗುತ್ತಿರಲಿಲ್ಲ. ಆದ್ದರಿಂದ ಅಂಬೇಡ್ಕರ್ ಎಲ್ಲಾ ಭಾರತೀಯರು ಗೌರವಿಸಲೇ ಬೇಕಾದ ವ್ಯಕ್ತಿತ್ವ ಹೊಂದಿರುವವರು.

ಹಾಗೆಂದು ಸಂಪೂರ್ಣ ತೃಪ್ತಿ ಇದೆಯೇ ?
ಖಂಡಿತ ಇಲ್ಲ. ನಮ್ಮ ರಾಜಕೀಯ ಆಡಳಿತ ವ್ಯವಸ್ಥೆ ಭ್ರಷ್ಟಗೊಂಡಿದೆ. ನ್ಯಾಯ ಬಹುತೇಕ ಉಳ್ಳವರ ಪಾಲಾಗುತ್ತಿದೆ. ಅನೇಕ ವರ್ಗಗಳು ತಮ್ಮದೇ ಕಾರಣದಿಂದಾಗಿ ಅಸಮಾಧಾನ ಹೊಂದಿವೆ. ಕೆಲವು ಕಾನೂನುಗಳು ದುರುಪಯೋಗವಾಗುತ್ತಿದೆ. ಅದಕ್ಕೆ ಮೂಲ ಕಾರಣ ಮಾನವೀಯ ಮೌಲ್ಯಗಳ ಕುಸಿತ. ಅದನ್ನು ಮತ್ತೆ ನಾವು ಹಳಿಗೆ ತಂದರೆ ಮುಂದಿನ ದಿನಗಳು ನಮ್ಮ ಪಾಲಿಗೆ ಶಾಂತಿ ನೆಮ್ಮದಿ ಮೂಡಿಸುತ್ತದೆ. ಈಗ ನಮ್ಮೆಲ್ಲರ ಆದ್ಯತೆ ಮಾನವೀಯ ಮೌಲ್ಯಗಳ ಪುನರುಜ್ಜೀವನ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಒಂದು ವರ್ಷದೊಳಗೆ ಎತ್ತಿನಹೊಳೆ ನೀರು- ಸಚಿವ ಕೆ.ಎಚ್ ಮುನಿಯಪ್ಪ

ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…

12 hours ago

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…

18 hours ago

ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…

19 hours ago

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

22 hours ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

23 hours ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

2 days ago