Categories: ಲೇಖನ

ಫುಟ್ ಪಾತ್…… (ಗೂಡಂಗಡಿಯ ಜನರ ಕರುಳ ಬಳ್ಳಿಯ ಕರೆ….)

Footpath……
ಫುಟ್ ಪಾತ್……

( ಗೂಡಂಗಡಿಯ ಜನರ ಕರುಳ ಬಳ್ಳಿಯ ಕರೆ….)

ಫುಟ್ ಪಾತ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳನ್ನು ಬೆಂಗಳೂರು ನಗರದಲ್ಲಿ ಜಿಸಿಬಿ ಉಪಯೋಗಿಸಿ ಬುಲ್ಡೋಜ್ ಮಾಡಲಾಗುತ್ತಿದೆ. ಹಲವು, ಕೆಲವು ವಿವಿಧ ಕಾರಣಗಳಿಗಾಗಿ ಒಂದಷ್ಟು ಜನ ಅದರ ಪರವಾಗಿಯೂ ಇನ್ನೊಂದಷ್ಟು ಜನ ಅದರ ವಿರೋಧವಾಗಿ ಚರ್ಚೆ ಮಾಡುತ್ತಾ, ಕಾನೂನಾತ್ಮಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು, ನಾಗರಿಕ ಮೌಲ್ಯಗಳನ್ನು ತುಲನೆ ಮಾಡುತ್ತಾ, ವಾದ ವಿವಾದಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅದರ ಸಮಗ್ರ ಚಿಂತನೆಯ ಅವಶ್ಯಕತೆಯೂ ಇದೆ…

ಪಾದಚಾರಿ ರಸ್ತೆಗಳಲ್ಲೇ ಬದುಕು ಕಟ್ಟಿಕೊಂಡ ಇಡೀ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳು ಹಿಂದೆ ಇದ್ದವು, ಈಗಲೂ ಇವೆ, ಮುಂದೆಯೂ ಇರುತ್ತವೆ. ಏಕೆಂದರೆ ಇದು ಭಾರತ. 150 ಕೋಟಿ ಜನಸಂಖ್ಯೆಯ, ಅಭಿವೃದ್ಧಿ ಹೊಂದುತ್ತಿರುವ, ಅತ್ಯಂತ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ, ಒಂದಷ್ಟು ಭ್ರಷ್ಟತೆಯ, ಮೌಢ್ಯದ ದೇಶ. ಅನೇಕ ಶ್ರೇಷ್ಠತೆಯ ನಡುವೆ ಸಾಕಷ್ಟು ದೌರ್ಬಲ್ಯಗಳನ್ನು ಹೊಂದಿರುವ ದೇಶ.

ಬಹುತೇಕ ಕೆಳ ಮಧ್ಯಮ, ಕೂಲಿ ಕಾರ್ಮಿಕರ, ಬಡತನದ ಜನರ ದಿನನಿತ್ಯದ…..

ಬೆಳಗಿನ ಉಪಹಾರದ ಇಡ್ಲಿ, ವಡೆ, ಬೋಂಡಾ, ದೋಸೆ, ಚಿತ್ರಾನ್ನ, ಸಮೋಸ, ವಡಾ ಪಾವ್, ಬ್ರೆಡ್ ಆಮ್ಲೆಟ್, ಚನ್ನಾ ಬಟೂರ, ಕಾಫಿ, ಟೀ ಎಲ್ಲವೂ ಆಗುವುದು ಪಾದಚಾರಿ ರಸ್ತೆಯ ಗೂಡಂಗಡಿಗಳಲ್ಲಿಯೇ….

ಬೀಡಿ, ಸಿಗರೇಟ್, ಪಾನ್ ಮಸಾಲ, ಗುಟ್ಕಾ, ವಿಮಲ್, ಬನ್ನು, ಟೀ ಬಿಸ್ಕತ್ತು, ಸಿಗುವುದು ಫುಟ್ಪಾತಿನ ಮೇಲೆಯೇ……

ಬೆಳ್ಳಂ ಬೆಳಗ್ಗೆಯೇ ಖರೀದಿಸುವ ಹಣ್ಣು ತರಕಾರಿಗಳು, ಅನೇಕ ರೀತಿಯ ಸೊಪ್ಪುಗಳು, ವಿವಿಧ ದವಸ ಧಾನ್ಯಗಳು, ಎಳನೀರು ಮುಂತಾದ ಎಲ್ಲಾ ವ್ಯವಹಾರ ನಡೆಯುವುದು ಪಾದಚಾರಿ ರಸ್ತೆಯ ಮೇಲಿನ ಚಿಕ್ಕಪುಟ್ಟ ಅಂಗಡಿಗಳಲ್ಲಿಯೇ…..

ಬಡವರ ಒಳ ಉಡುಪುಗಳು, ಮೇಲ್ ಉಡುಪುಗಳು, ಕೈಕಾಲು ಚೀಲಗಳು, ಬೆಚ್ಚನೆಯ ಉಡುಪುಗಳು, ಕರ್ಚೀಫು ಟವಲುಗಳು, ಶಾಲು ಹೊದಿಕೆಗಳು ಎಲ್ಲವೂ ಸಿಗುವುದು ಪುಟ್ ಪಾತಿನಲ್ಲೇ……

ಮಧ್ಯಾಹ್ನವಾಗುತ್ತಿದ್ದಂತೆ ಊಟಕ್ಕೆ ಅನ್ನ ಸಾಂಬರ್, ಚಪಾತಿ, ಮುದ್ದೆ, ರೊಟ್ಟಿ, ರೋಟಿ, ದಾಲ್, ಚಿಕನ್, ಮಟನ್, ಫಿಶ್, ತಲೆ ಮಾಂಸ, ಬೋಟಿ, ಕಬಾಬ್ ಸಿಗುವುದು ಪಾದಚಾರಿ ಮಾರ್ಗದ ಅಕ್ಕಪಕ್ಕದಲ್ಲಿಯೇ..,..

ಸಂಜೆಯ ಪಾನಿಪುರಿ, ಮಸಾಲಾಪುರಿ, ಸೇವ್ ಪುರಿ, ದಹಿಪುರಿ, ಬೇಲ್ ಪುರಿ, ಟಿಕ್ಕಿ ಪುರಿ, ಕಚೋರಿ, ಜಿಲೇಬಿ ಮುಂತಾದ ಸ್ಯ್ನಾಕ್ಸ್ ಸಿಗುವುದು ಫುಟ್ಪಾತಿನಲ್ಲೇ……

ಬೋಂಡಾ, ಬಜ್ಜಿ, ಪಕೋಡ, ವಡೆ, ಗೋಬಿಮಂಚೂರಿ, ಪಾಪ್ಕಾರ್ನ್, ಜೋಳ, ಮಂಡಕ್ಕಿ ಮಿರ್ಚಿ, ಐಸ್ ಕ್ರೀಮ್ ಕೊಂಡು ಬಾಯಿ ಚಪ್ಪರಿಸುವುದು ಪಾದಚಾರಿ ಅಂಗಡಿಗಳಲ್ಲಿಯೇ…

ಸಂಜೆಯ ಮತ್ತೊಂದು ಸುತ್ತಿನ ಕಾಫಿ, ಟೀ, ಬಾದಾಮಿ ಹಾಲು, ಸೋಡಾ, ಕಬ್ಬಿನರಸ, ಬ್ಲಾಕ್ ಟೀ, ಗ್ರೀನ್ ಟೀ ಕುಡಿಯುವುದು ಸಹ ಪುಟ್ಪಾತಿನ ಅಂಗಡಿಗಳಲ್ಲಿಯೇ…..

ರಾತ್ರಿಯ ತರಹೇವಾರಿ ಊಟದ ಮೆನುಗಳಾದ ಇಡ್ಲಿ, ದೋಸೆ, ಅನ್ನ ಸಾಂಬಾರ್, ಎಗ್ ರೈಸ್, ಬಿರಿಯಾನಿ, ಫ್ರೈಡ್ ರೈಸ್ ಹೊಟ್ಟೆ ತುಂಬಿಸಿಕೊಳ್ಳುವುದು ಪಾದಚಾರಿ ರಸ್ತೆಯ ತೆರೆದ ತಳ್ಳುಗಾಡಿಗಳಲ್ಲಿಯೇ……

ಚಿಕ್ಕ ಮಕ್ಕಳ ಬಗೆ ಬಗೆಯ ಆಟದ ಸಾಮಾನುಗಳ, ಬಲೂನುಗಳ, ಹೆಣ್ಣು ಮಕ್ಕಳ ವಿವಿಧ ಅಲಂಕಾರಿಕ ವಸ್ತುಗಳ ವ್ಯಾಪಾರ ನಡೆಯುವುದು ಈ ಬೀದಿ ಬದಿಯಲ್ಲಿಯೇ……

ಇದನ್ನೆಲ್ಲಾ ಮಾರುವವರು ನಮ್ಮವರೇ, ಕೊಳ್ಳುವವರು ನಮ್ಮವರೇ, ತಿನ್ನುವವರು ನಮ್ಮವರೇ, ಜೀವನ ಸಾಗಿಸುತ್ತಿರುವವರು ನಮ್ಮವರೇ…….

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತದಲ್ಲಿ ಬಹುತೇಕ ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಈ ಪಾದಚಾರಿ ಮಾರ್ಗಗಳಲ್ಲಿ, ದೊಡ್ಡ ಕಂಪನಿ, ಕಾರ್ಖಾನೆ, ಶಾಲೆ, ಆಸ್ಪತ್ರೆ, ಗಾರ್ಮೆಂಟ್ಸ್ ಇತ್ಯಾದಿ ಉದ್ಯೋಗಿಗಳಿರುವ ಜಾಗಗಳಲ್ಲಿ, ಪ್ರವಾಸೋದ್ಯಮ ಸ್ಥಳಗಳಲ್ಲಿ ಈ ರೀತಿಯ ವ್ಯಾಪಾರಿಗಳ ಬಹುದೊಡ್ಡ ಸಂಖ್ಯೆ ಇದೆ. ಇದರಿಂದ ಭಾರತದ ಜಿಡಿಪಿಗೆ ಬಹುದೊಡ್ಡ ಕಾಣಿಕೆಯೂ, ಅನೇಕರ ಬದುಕಿಗೆ ಆಸರೆಯೂ ಆಗಿದೆ.

ಹಾಗೆಯೇ ಇದರಿಂದಾಗಿ ಅನೇಕ ರೀತಿಯ ತೊಂದರೆಗಳು, ದುಷ್ಪರಿಣಾಮಗಳು ಜೊತೆ ಜೊತೆಗೇ ಬೆಳೆಯುತ್ತಿದೆ. ನಾಗರಿಕರ ಸಹಜ ಓಡಾಡುವ ಹಕ್ಕಿಗೆ ತೊಂದರೆಯಾಗುತ್ತಿದೆ. ಬಹಳಷ್ಟು ಅಪಘಾತಗಳಿಗೆ ಇದು ಕಾರಣವೂ ಆಗುತ್ತಿದೆ. ಕೆಲವು ಕಡೆ ಈ ಸಣ್ಣಪುಟ್ಟ ವ್ಯಾಪಾರಿಗಳ ದೊಡ್ಡ ಮಟ್ಟದ ಮಾಫಿಯಾ ಕೂಡ ಕೆಲಸ ಮಾಡುತ್ತಿದೆ. ಅಕ್ರಮ ಬಡ್ಡಿ ವ್ಯವಹಾರಗಳಿಗೆ ದಾರಿ ಮಾಡಿಕೊಟ್ಟಿದೆ. ಬೆಲೆಗಳ ಏರಿಳಿತಗಳಿಗೂ ಕಾರಣವಾಗಿದೆ. ಕಾಲ್ ಮನಿಯಂತಹ ವೇಶ್ಯಾವಾಟಿಕೆ ದಂಧೆಗಳಿಗೂ ಕಾರಣವಾಗಿದೆ. ತೆರಿಗೆ ಕಳ್ಳತನವು ನಡೆಯುತ್ತಿದೆ.
ಹೀಗೆ ಇನ್ನೂ ಹಲವಾರು ತೊಂದರೆಗಳು ಸಹ ಇದರಿಂದಾಗಿ ಉಂಟಾಗಿದೆ…

ಈಗ ಸರ್ಕಾರ ಅಥವಾ ವ್ಯವಸ್ಥೆಯ ಮುಂದೆ ಬಹುದೊಡ್ಡ ಸವಾಲು ಇದೆ. ಕೇವಲ ಕಾನೂನಾತ್ಮಕವಾಗಿ ಅಕ್ರಮಗಳನ್ನೆಲ್ಲಾ ಸರಿಪಡಿಸಲು ಬುಲ್ಟೋಜರ್ ನಿಂದ ಹೊಡೆದುರುಳಿಸುವುದು ಒಳ್ಳೆಯ ನಡೆಯಲ್ಲ. ಪಾದಚಾರಿ ಮಾರ್ಗವನ್ನು ತೆರವು ಮಾಡಿಸಿ, ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುವುದು, ಆ ಪ್ರದೇಶಗಳ ಸೌಂದರ್ಯ ಕಾಪಾಡುವುದು, ಅಕ್ರಮಗಳಿಗೆ ತಡೆ ಹಾಕುವುದು ಎಲ್ಲವೂ ಉತ್ತಮ ಯೋಜನೆಗಳೇ. ಆದರೆ ಅದಕ್ಕಾಗಿ ಮಧ್ಯಮ, ಕೆಳಮದ್ಯಮ ಮತ್ತು ದಿನದ ವ್ಯಾಪಾರ ನಂಬಿಕೊಂಡೇ ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿರುವ ನಮ್ಮದೇ ಜನರನ್ನು ಬೀದಿ ಪಾಲು ಮಾಡುವುದು ಮಾತ್ರ ಅತ್ಯಂತ ಹೇಯವಾದದ್ದು. ಅವರನ್ನು ಹೊಡೆದುರುಳಿಸುವ ಮೊದಲು ಪುನರ್ವಸತಿ ಕಲ್ಪಿಸಿ ಕೊಡಬೇಕಾದ ಬಹುದೊಡ್ಡ ಜವಾಬ್ದಾರಿ ಸರ್ಕಾರಕ್ಕೆ ಇದೆ…….

ಇದನ್ನು ಪರಿಹರಿಸಲು ಅನೇಕ ಪರ್ಯಾಯ ಮಾರ್ಗಗಳಿವೆ ಮತ್ತು ಇದಕ್ಕೆ ವಾಸ್ತವ ಪ್ರಜ್ಞೆ ಸಹ ಬೇಕಾಗುತ್ತದೆ. ಇಚ್ಛಾಶಕ್ತಿಯ ಅನುಷ್ಠಾನವು, ಮಾನವೀಯ ಅಂತಃಕರಣವೂ ಇರಬೇಕಾಗುತ್ತದೆ.

ಭಾರತದಂತಹ ಅತ್ಯಂತ ಜನನಿಬಿಡ ದೇಶದಲ್ಲಿ ಅಷ್ಟು ಸುಲಭವಾಗಿ ಪಾದಚಾರಿಗಳಿಗೆ ರಸ್ತೆ ಮುಕ್ತಗೊಳಿಸಲು ವ್ಯಾಪಾರಿಗಳನ್ನು ಹೊರದೂಡುವುದು ಸುಲಭವಲ್ಲ. ಇಲ್ಲಿನ ಬದುಕು ಸಂಕೀರ್ಣವಾಗಿದೆ ಮತ್ತು ಕಡುಬಡತನದಿಂದ ಕೂಡಿದೆ. ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಳ್ಳಲು, ಒಂದು ವ್ಯಾಪಾರ ಮಾಡಲು ಸುಸಜ್ಜಿತವಾದ, ಕ್ರಮಬದ್ಧವಾದ, ಕಟ್ಟಡಗಳಾಗಲಿ, ಸುಲಭ ಅನುಮತಿಯಾಗಲಿ, ಹಣಕಾಸಿನ ವ್ಯವಸ್ಥೆಯಾಗಲಿ ಸಿಗುವುದಿಲ್ಲ.

ಹೇಗೋ ಏನೋ ಉಚಿತವಾಗಿ ಸಿಗುವ ಜಾಗದಲ್ಲಿ, ಜನರು ಓಡಾಡುವ ಸ್ಥಳದಲ್ಲಿ ಸಣ್ಣಪುಟ್ಟ ವ್ಯಾಪಾರ ಶುರು ಮಾಡಿ ಅಲ್ಲಿಯೇ ಬದುಕು ಸಾಗಿಸುತ್ತಿರುತ್ತಾರೆ. ಆದ್ದರಿಂದ ಸ್ವಲ್ಪಮಟ್ಟಿಗೆ ಅವರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯೂ ಇದೆ. ಇದನ್ನು ನಿಯಂತ್ರಿಸುವ ಇಡೀ ದೇಶ ಅಥವಾ ರಾಜ್ಯಕ್ಕೆ ಅನ್ವಯವಾಗುವ ಕಾನೂನುಗಳನ್ನು ಮಾಡುವುದು ಸಹ ಉಚಿತವೂ ಅಲ್ಲ, ನಿಷ್ಪ್ರಯೋಜಕ ಕೂಡ.

ಏಕೆಂದರೆ ಭಾರತದ ಭೌಗೋಳಿಕ ಮತ್ತು ಪ್ರಾದೇಶಿಕ ವೈವಿಧ್ಯತೆ ಸಾಕಷ್ಟು ಇದೆ. ಅದಕ್ಕಾಗಿ ಎಲ್ಲರಿಗೂ ಸಮನಾಗಿ ಅನ್ವಯವಾಗುವ ನಿಯಮ ರೂಪಿಸಿದರೆ ಯಶಸ್ವಿಯಾಗುವುದು ಕಷ್ಟ. ಅದಕ್ಕೆ ಬದಲಾಗಿ ಸ್ಥಳೀಯ ಆಡಳಿತಗಳೇ ವಾರ್ಡ್ ಮಟ್ಟದಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಏನಾದರೂ ಕ್ರಮ ಕೈಗೊಳ್ಳಬೇಕು ಅವರಿಗೆ ಅಲ್ಲಿನ ಸಮಸ್ಯೆಗಳ ಅರಿವು ಇರುತ್ತದೆ. ಹಾಗೆಯೇ ನಗರ ಪ್ರದೇಶಗಳಲ್ಲಿರುವ ಅನೇಕ ಉದ್ಯಾನವನಗಳಲ್ಲಿ ಕೆಲವನ್ನು ಈ ರೀತಿಯ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಬಹುದು. ಜೊತೆಗೆ ಅನೇಕ ಕಡೆ ನಿರ್ಧಿಷ್ಟವಾದ ಸಮಯವನ್ನು ನಿಗದಿಪಡಿಸಿ ಅಲ್ಲಿಯೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಹುದು.

ಜೊತೆಗೆ ಸರ್ಕಾರದ ಜಮೀನುಗಳಲ್ಲಿ ತಾತ್ಕಾಲಿಕವಾಗಿ ಶೆಡ್ರೂಪದ ಕಡಿಮೆ ಬೆಲೆಯ ಅಂಗಡಿಗಳನ್ನು ನಿರ್ಮಿಸಿ ಉಚಿತವಾಗಿ ಬಾಡಿಗೆ ಕೊಡಬಹುದು ಅಥವಾ ಇಡೀ ದೇಶದ ಅನೇಕ ಭಾಗಗಳಲ್ಲಿ ನಿರ್ದಿಷ್ಟ ವ್ಯಾಪಾರಿ ಗೂಡಂಗಡಿಗಳನ್ನು ನಿರ್ಮಿಸಿ ಕೊಡಬಹುದು. ಈಗಲೂ ಈ ರೀತಿಯ ಯೋಜನೆಗಳಿವೆ ನಿಜ, ಆದರೆ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಾಗಿದೆ. ಅದನ್ನು ಸರಿಪಡಿಸಬೇಕಿದೆ.

ಈ ಸಲಹೆಗಳು ಮಾತ್ರವಲ್ಲ, ಅದರಲ್ಲೇ ವಿಶೇಷ ಪರಿಣಿತಿ ಹೊಂದಿದ ತಜ್ಞರ ಅನೇಕ ಸಲಹೆಗಳನ್ನು ಪಡೆಯಬಹುದು. ಅದನ್ನು ಹಂತ ಹಂತವಾಗಿ ಜಾರಿಗೊಳಿಸಬೇಕೆ ಹೊರತು ದಿಢೀರನೆ ಅವರನ್ನು ಒಕ್ಕಲೆಬ್ಬಿಸಿದರೆ ನಗರದ ಸೌಂದರ್ಯಕ್ಕಿಂತ ನಗರವಾಸಿಗಳ ಹೊಟ್ಟೆಪಾಡೇ ಬಹಳ ಮುಖ್ಯ.

ದಯವಿಟ್ಟು ಸಾರ್ವಜನಿಕರು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಸಿಮೆಂಟ್ ಲಾರಿ; ಚಾಲಕ ಸ್ಥಳದಲ್ಲೇ ಸಾವು ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಮುಂಜಾನೆ ದುರಂತ | ರಸ್ತೆಗೆ ಚೆಲ್ಲಾಪಿಲ್ಲಿಯಾದ ಸಿಮೆಂಟ್ ಮೂಟೆಗಳು

  ದೊಡ್ಡಬಳ್ಳಾಪುರ: ಕಡಿದಾದ ತಿರುವಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…

2 minutes ago

ಬಸ್ ಏರಿದ್ರೆ ಗಮ್ಯಸ್ಥಾನ ಸೇರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ!: ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…

32 minutes ago

ಕೃಷ್ಣ ಜನ್ಮಾಷ್ಟಮಿಯ ನೆಪದಲ್ಲಿ ಒಂದಷ್ಟು ಚಿಂತನೆ……

ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು…

3 hours ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ: ಪಿಡಿಒ ರಾಜಶೇಖರ್ ಆಚಾರ್

  ಚಿಕ್ಕನಾಯಕನಹಳ್ಳಿ: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

13 hours ago

ರೈತರ ವಿಕಸನಕ್ಕೆ ವಿಬಿ-ಜಿ ರಾಮ್ ಜಿ ಯೋಜನೆ : ಕಾರ್ಯದರ್ಶಿ ಹೇಮಂತ್

  ಚಿಕ್ಕನಾಯಕನಹಳ್ಳಿ: ರೈತರ ವಿಕಸನಕ್ಕೆಂದೇ ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

13 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಕೇರ್ ಬೈ ಬಿಎಲ್‌ಆರ್’ ವೈಯಕ್ತಿಕ ಪ್ರಯಾಣಿಕ ಸೇವೆ ಆರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹೊಂದುವಂತೆ…

16 hours ago