ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ‌ ವಿಚಾರ: ಬೆಲೆ ಏರಿಕೆ ಹಿಂಪಡೆಯಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು ರಾಜ್ಯ ಸರ್ಕಾರ ಖಂಡಿಸಲಿದ್ದು, ಬೆಲೆ ಏರಿಕೆಯನ್ನು ಹಿಂಪಡೆಯಲು ಒತ್ತಾಯಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಸುವ ನಿರೀಕ್ಷೆ ಇತ್ತು.‌ ನಿರೀಕ್ಷೆಯಂತೆಯೇ ಹೆಚ್ಚಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಇತರೆ ರಾಜ್ಯಗಳಿಗಿಂತ ಗಣನೀಯವಾಗಿ ಕಡಿಮೆಯಿರುವ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದ್ದರ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದ್ದರು. ಈಗ ಏನು ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವುದನ್ನು ನೋಡಬೇಕು ಎಂದರು.

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ನಂತರ ಹಲವು ಬಾರಿ ಪೆಟ್ರೋಲ್ ಡೀಸೆಲ್ ದರಗಳನ್ನು ಹೆಚ್ಚಿಸಿದ್ದಾರೆ. ಈ ಬೆಲೆಯೇರಿಕೆ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ವಿಶೇಷವಾಗಿ ಕಾರ್ಮಿಕರು, ರೈತರು, ಬಡವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರದ ಈ ಬೆಲೆ ಏರಿಕೆಯ ಕ್ರಮವನ್ನು ನಮ್ಮ ಸರ್ಕಾರ ಖಂಡಿಸುವುದಲ್ಲದೇ, ಈ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.

ಪ್ರಧಾನಿ ಮೋದಿಯವರ ಆಡಳಿತ ಪ್ರಾರಂಭವಾಗುವ ಮುಂಚೆ 413 ರೂ.ಗಳಿದ್ದ ಗೃಹಬಳಕೆಯ ಎಲ್ ಪಿ ಜಿ ದರ,  ಈಗ 1000 ರೂ.ಗಳನ್ನು ದಾಟಿದೆ. ಈ ಬೆಲೆಯೇರಿಕೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೂ ಕಾರಣವಾಗಲಿದೆ. ಎಲ್ ಪಿ ಜಿ ಪೂರೈಕೆ ವ್ಯತ್ಯಯವಾಗಿರುವ ನಡುವೆಯೇ ಬೆಲೆ ಏರಿಕೆಯು ಜನಜೀವನವನ್ನು ಇನ್ನಷ್ಟು ಅಸ್ತವ್ಯಸ್ತಗೊಳಿಸಲಿದೆ ಎಂದರು.

ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ಎಸ್ ಐ ಆರ್ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಇದಕ್ಕೆ ಬೇಕಾದ ಸಿದ್ದತೆಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ ಎಂದು ಕಿಡಿಕಾರಿದರು.

ನಾವು ಅಂದುಕೊಂಡಂತೆ ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ. ಒಂದಕ್ಕೆ 106 ರೂ. ದಾಟಿದೆ. ಡೀಸೆಲ್‌ ದರವು 94 ರೂ. ಆಗಿದೆ. ಈ ಏರಿಕೆಯು ಕೇವಲ ಬಂಕ್‌ಗಳಿಗೆ ಸೀಮಿತಗೊಳ್ಳುವುದಿಲ್ಲ. ಇದರೊಂದಿಗೆ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತದೆ. ಇದರಿಂದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರು  ದೈನಂದಿನ ಬದುಕು ನಡೆಸುವುದು ಮತ್ತಷ್ಟು ದುಸ್ತರವಾಗಲಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಕಡಿಮೆಯಿದ್ದಾಗ ಅದರ ಲಾಭವನ್ನು ಮೋದಿ ಸರ್ಕಾರ ಎಂದಿಗೂ ಜನತೆಗೆ ಬಿಟ್ಟುಕೊಡಲೇ ಇಲ್ಲ. ಆಗಲೂ ಜನತೆಯಿಂದ ದೊಡ್ಡ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ತನ್ನ ಬೊಕ್ಕಸವನ್ನು ತುಂಬಿಕೊಂಡಿತ್ತು. ಇನ್ನು ದರ ಏರಿಕೆಯಾದಾಗ ಅದರ ಸಂಪೂರ್ಣ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸಿ ಕೈತೊಳೆದುಕೊಳ್ಳುತ್ತಿದೆ. ಇದು ಆಡಳಿತ ನಡೆಸುವ ಕ್ರಮವಲ್ಲ, ಇದು ದೇಶದ ಜನತೆಯ ಮೇಲಿನ ಘೋರ ಶೋಷಣೆಯಾಗಿದೆ ಎಂದು ಹೇಳಿದರು.

ಮೋದಿ ಸರ್ಕಾರವು ಹಣದುಬ್ಬರ ನಿಯಂತ್ರಣ ಮಾಡುವಲ್ಲಿ, ಡಾಲರ್‌ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವಲ್ಲಿ, ದೇಶದ ಆರ್ಥಿಕ ನಿರ್ವಹಣೆಯಲ್ಲಿ ಹಾಗೂ ಒಟ್ಟಾರೆ ಸಾಮಾನ್ಯ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಲಿ ಎಂಬುದು ನಮ್ಮ ಮನವಿ ಎಂದರು.

ಪೆಟ್ರೋಲ್‌, ಡೀಸೆಲ್‌ ದರ ತಲಾ 3 ರೂ. ಏರಿಕೆಯ ಜನವಿರೋಧಿ ನಡೆಯನ್ನು ನಾನು ಕಠಿಣವಾಗಿ ವಿರೋಧಿಸುತ್ತಿದ್ದೇನೆ. ತಕ್ಷಣವೇ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದೇನೆ. ನಿರಂತರವಾಗಿ ಬೀಳುತ್ತಿರುವ ರೂಪಾಯಿ ಮೌಲ್ಯ, ಆರ್ಥಿಕ ನಿರ್ವಹಣೆಯ ವೈಫಲ್ಯ ಮತ್ತು ಸಾಮಾನ್ಯ ನಾಗರಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದರ ಹೊಣೆಯನ್ನು ಹೊತ್ತು ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

Ramesh Babu

Journalist

Recent Posts

ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ಮನೆಯವರಿಗೆ ವಿಡಿಯೋ ಕಾಲ್ ಮಾಡಿದ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

7 hours ago

ಮಣ್ಣಿನಡಿ ಹುದುಗಿಹೋಗುತ್ತಿದ್ದ ವಿಜಯನಗರ ಕಾಲದ 6 ವೀರಗಲ್ಲುಗಳಿಗೆ ಮರುಜೀವ: ರಸ್ತೆ ವಿಸ್ತರಣೆ ವೇಳೆ ಪತ್ತೆ; ಪುರಾತತ್ವ ಇಲಾಖೆ ತ್ವರಿತ ಕಾರ್ಯಾಚರಣೆ

ದೊಡ್ಡಬಳ್ಳಾಪುರ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ…

7 hours ago

ಅರಳುಮಲ್ಲಿಗೆ ಕ್ಷೇತ್ರದಿಂದ ಸ್ಪರ್ಧೆಗೆ ಕೃಷ್ಣಪ್ಪ ಒಲವು

ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು…

8 hours ago

ಮಳೆ ಕೊರತೆ, ಟೊಮೆಟೊ ದರ ಕುಸಿತ: ಸಾಲದ ಸುಳಿಯಲ್ಲಿ ರೈತ!

ದೊಡ್ಡಬಳ್ಳಾಪುರ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಕುಸಿತವೂ ರೈತರನ್ನು ಕಂಗಾಲಾಗಿಸಿದೆ. ಬೆಳೆ…

12 hours ago

ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ; 130 ಗ್ರಾಂ ಚಿನ್ನದೊಂದಿಗೆ ಸಿಕ್ಕಿಬಿದ್ದ ಕಳ್ಳ!

ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿ 130 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯೊಬ್ಬ, ಮನೆ ಮಾಲೀಕನ…

13 hours ago

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ……..

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ........ ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ…

20 hours ago