
ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸಂಪೂರ್ಣ ತಪ್ಪು ಕಲ್ಪನೆ. ಕಾಯ್ದೆಯ ಚೌಕಟ್ಟಿನಲ್ಲೇ ಅನುದಾನ ಬಳಕೆಯಾಗುತ್ತಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಯುಕ್ತ ಸಮತಾ ವೇದಿಕೆ ಆಯೋಜಿಸಿದ್ದ ಚಿಂತನ ಮಂಥನ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎಸ್ ಸಿಪಿ ಮತ್ತು ಟಿಎಸ್ಪಿ ಕಾರ್ಯಕ್ರಮ ಘೋಷಣೆಯಾಗಿ 12 ವರ್ಷಗಳಾಗಿವೆ. ಈ ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷಗಳ ಕಾಲ ಈ ಅನುದಾನವನ್ನು ಹೇಗೆ ಮತ್ತು ಎಲ್ಲಿ ಬಳಸಿದರು ಎಂಬುದನ್ನು ಮೊದಲು ಪರಿಶೀಲಿಸಬೇಕು. ನಾವು ಕಾಯ್ದೆ ಚೌಕಟ್ಟಿನಲ್ಲಿಯೇ ಅನುದಾನವನ್ನು ಸರ್ಕಾರಿ ಯೋಜನೆಗಳಿಗೆ ಬಳಸಿದ್ದೇವೆ ಎಂದು ತಿಳಿಸಿದರು.
ಎಥೆನಾಲ್ ಮಿಶ್ರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಧನದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಮಿತಿಮೀರಿದರೆ ವಾಹನಗಳ ಎಂಜಿನ್ ಹಾಳಾಗುವ ಆತಂಕವಿದೆ. ಈ ಕುರಿತು ಲ್ಯಾಬ್ನಲ್ಲಿ ಪರೀಕ್ಷಿಸಿ ದೃಢಪಡಿಸಲಾಗಿದ್ದು, ಇದರ ಹೊಣೆಗಾರಿಕೆ ಯಾರದ್ದು ಎಂಬುದರ ಬಗ್ಗೆ ಮೊದಲು ಚರ್ಚೆಯಾಗಬೇಕಿದೆ ಎಂದರು.
ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡಿಸಲು ಇಲ್ಲಿನ ಸಂಸದರು ಹಾಗೂ ಸಚಿವರು ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಮರುಪ್ರಶ್ನಿಸಿದರು.
ಸಮುದ್ರ ಸೇರುತ್ತಿರುವ ವ್ಯರ್ಥ ನೀರನ್ನು ಸಂಕಷ್ಟದ ಸಂದರ್ಭದಲ್ಲಿ ಬಳಸಿಕೊಳ್ಳಲು ಮೇಕೆದಾಟು ಯೋಜನೆ ಅತ್ಯಗತ್ಯವಾಗಿದ್ದು, ಇದರಿಂದ ನೆರೆಯ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಐದೇ ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ ಎಲ್ಲಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪಗಳಿಗೆ ಉತ್ತರಿಸಿ, ಆರ್ ಟಿಐ ಮೂಲಕ ಯಾವ ಕ್ಷೇತ್ರದಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬುದನ್ನು ಪರಿಶೀಲಿಸುವಂತೆ ಸವಾಲು ಹಾಕಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರನೇ ಸಾಲಿನಲ್ಲಿ ಕುಳಿತಿದ್ದರ ಬಗ್ಗೆ ವಿರೋಧ ಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿ, ಅವರು ತಡವಾಗಿ ಆಗಮಿಸಿದ್ದರಿಂದ ಆಯೋಜಕರು ಲಭ್ಯವಿದ್ದ ಜಾಗದಲ್ಲಿ ಕೂರಿಸಿದ್ದಾರೆ. ಕಾಂಗ್ರೆಸ್ ಪಕ್ಷವು ತನ್ನ ನಾಯಕರಿಗೆ ಸೂಕ್ತ ಗೌರವ ನೀಡುತ್ತಿದೆ ಎಂದು ಹೇಳಿದರು.