ಪರವಾನಗಿ ಇಲ್ಲದೆ ಪಟಾಕಿ ದಾಸ್ತಾನು: 10 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳ ವಶ: ಏಳು ಮಂದಿ ವಿರುದ್ಧ ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿದ್ದ ಸ್ಥಳದ ಮೇಲೆ ಕ್ರಮ ಕೈಗೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಕೊಡಿಗೆಹಳ್ಳಿ ಗ್ರಾಮದ ಕೆಂಪೇಗೌಡ ಎಂಬುವವರ ಜಮೀನಿನಲ್ಲಿರುವ ಎರಡು ಕೊಠಡಿಗಳಲ್ಲಿ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಒಟ್ಟು 52 ಬಾಕ್ಸ್‌ಗಳಷ್ಟು ಪಟಾಕಿಗಳು ಸೇರಿದಂತೆ ದಾಸ್ತಾನು ಮಾಡಿದ್ದ ಪಟಾಕಿ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಪಟಾಕಿಗಳ ಅಂದಾಜು ಮೌಲ್ಯ ಸುಮಾರು 10 ಲಕ್ಷ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ, ಮಹೇಶ್, ಇಕ್ಬಾಲ್, ಆಯುಬ್ ಪಾಷಾ, ನವೀನ್ ಕುಮಾರ್, ಶಿವಕುಮಾರ್ ಹಾಗೂ ರವಿ ಕುಮಾರ್ ಎಂಬುವವರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!