ಪಕ್ಷ ರಾಜಕಾರಣ ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಿ- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲಿ‌ ಸಿಎಂ ಸಿದ್ದರಾಮಯ್ಯ ಮನವಿ

ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ. ವೈಯಕ್ತಿಕವಾಗಿ ಇದು ನನ್ನ ಅಭಿಪ್ರಾಯವಾಗಿದ್ದು, ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹತ್ತು ದಿನಗಳ ಅವಧಿಯಲ್ಲಿ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ ಎಂದು‌ ಹೇಳಿದ್ದಾರೆ.

ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ ಇದಕ್ಕಿಂತಲೂ ಮುಖ್ಯವಾಗಿ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದರು.

ನೀರಾವರಿ ವಿಚಾರದಲ್ಲಿ ನ್ಯಾಯ ಪಕ್ಷಪಾತಿಯಾಗಿ ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ಮಾಡಬೇಕಾಗಿದ್ದ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸತತವಾಗಿ ಕನ್ನಡಿಗರ ಹಿತವನ್ನು ಬಲಿಗೊಡಲು ಹೊರಟಿರುವುದನ್ನು ಸನ್ಮಾನ್ಯ ದೇವೇಗೌಡರಿಗೆ ನಾನು ಬಿಡಿಸಿ ಹೇಳಬೇಕಾಗಿಲ್ಲ ಎಂದು ತಿಳಿದುಕೊಂಡಿದ್ದೇನೆ ಎಂದಿ ತಿಳಿಸಿದರು.

ಮಹದಾಯಿ ಜಲಾನಯನ ಪ್ರದೇಶದ ಕಳಸಾ ನಾಲೆ ಯೋಜನೆಯ ರೂ.995.30 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಗೆ 2023ರ ಮಾರ್ಚ್ ನಲ್ಲಿಯೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿ 26,925 ಹೆಕ್ಟೇರ್  ಅರಣ್ಯಪ್ರದೇಶದ ಸ್ವಾಧೀನ ಪ್ರಕ್ರಿಯೆ ಗೋವಾ ರಾಜ್ಯದ ಆಕ್ಷೇಪದ ಕಾರಣದಿಂದಾಗಿ ಕುಂಟುತ್ತಾ ಸಾಗಿದೆ. ಪ್ರಸ್ತುತ ಈ ಪ್ರಕ್ರಿಯೆ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ ಬಿಡಬ್ಯುಎಲ್ ) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ)ದ ಪರಿಶೀಲನೆಯಲ್ಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಅನುಮೋದನೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟೀಕರಣ ನೀಡಿರುವ ಕಾರಣ ಶೀಘ್ರವಾಗಿ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಾಗಿದೆ ಎಂದರು.

ಬಂಡೂರಿ ನಾಲೆ ತಿರುವು ಯೋಜನೆಗೆ ಅಗತ್ಯವಿರುವ 28 ಹೆಕ್ಟೇರ್ ಅರಣ‍್ಯ ಪ್ರದೇಶದ ಸ್ವಾಧೀನಕ್ಕಾಗಿ 2024ರ ಆಗಸ್ಟ್ ನಲ್ಲಿಯೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬೇಡಿಕೆಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಸಂಪೂರ್ಣಗೊಳಿಸಲಾಗಿದ್ದು ಈ ನದಿ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ ಎಂದು ಹೇಳಿದರು.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ 173 ಟಿಎಂಸಿ ನೀರಿನ ಪಾಲನ್ನು ನೀಡಿ 2010ರಲ್ಲಿಯೇ ಐತೀರ್ಪು ನೀಡಿದೆ. ಈ ನೀರಿನ ಪಾಲಿನಲ್ಲಿ 130 ಟಿಎಂಸಿಯನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಏಳು ಜಿಲ್ಲೆಗಳಿಗೆ ನೀರುಣಿಸುವ ರೂ.51,148 ಸಾವಿರ ವೆಚ್ಚದ ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗಿದೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿರುವ ಪ್ರತಿವಾದಿ ರಾಜ್ಯಗಳ ಆಕ್ಷೇಪಣಾ ಅರ್ಜಿಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ನ್ಯಾಯಮಂಡಳಿಯ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಲು ನಿರಾಕರಿಸುತ್ತಾ ಬಂದಿದೆ. ಈ ಯೋಜನೆಯ ಅನಿವಾರ್ಯತೆಯನ್ನು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ಶೀಘ್ರವಾಗಿ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಿದರೆ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂಬ ಪ್ರಸ್ತಾವವನ್ನು ಸಲ್ಲಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದರೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ. ಈ ಘೋಷಣೆಯ ಪ್ರಸ್ತಾವಕ್ಕೆ ಸಾರ್ವಜನಿಕ ಹೂಡಿಕೆ ಸಮಿತಿ ಈಗಾಗಲೇ ಅಂಗೀಕಾರ ನೀಡಿದೆ. ಆದರೆ ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಾ ಕೂತಿದೆ ಎಂದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ  ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವಿವರಗಳೆಲ್ಲ ನಿಮಗೆ ಬಾಯಿಪಾಠದಲ್ಲಿರಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ ಎಂದಿದ್ದಾರೆ.

ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆಯ ಬಗ್ಗೆ ನಿಮ್ಮ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿ.ಕೆ.ಶಿವಕುಮಾರ್ ಮಾತ್ರವಲ್ಲ ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ. ಆದರೆ ಹೊಸ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಅಪೂರ್ಣ ಸ್ಥಿತಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿಕೊಳ‍್ಳುತ್ತಿದ್ದೇನೆ ಎಂದರು.

ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಸದ್ಯ ನೀರಾವರಿ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಇನ್ನು ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ಕೂಡಾ ನಿಮಗೆ ಗೊತ್ತಿರುವುದರಿಂದ ಸಂಸತ್ ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು ಎಂದು ಹೇಳಿದರು.

ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ನೀವು ಮುಲಾಜಿಗೆ ಬೀಳದೆ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದವರು. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಆದರೆ ಈಗಿನ ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ ಎಂದು ತಿಳಿಸಿದ್ದಾರೆ.

ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ ಎಂದರು.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

15 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

1 day ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

2 days ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

2 days ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago