Categories: ಲೇಖನ

ನೇಪಾಳದ ದಂಗೆ……

ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ ಚಟುವಟಿಕೆಗಳು, ಹೆಚ್ಚುತ್ತಿರುವ ಪ್ರಾಕೃತಿಕ ವೈಪರೀತ್ಯಗಳು ಮತ್ತು ಮುಖ್ಯವಾಗಿ ಸಣ್ಣ ದೇಶಗಳಲ್ಲಿ ಜನ ಅಸಮಾಧಾನಗೊಂಡು ದಂಗೆಯ ಸ್ವರೂಪದ ಗಲಭೆಗಳಾಗುತ್ತಿರುವುದನ್ನು ಗಮನಿಸಬಹುದು.

ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ. ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ ಪ್ರಕಾರ ಅವುಗಳ ಪ್ರಮಾಣ ಕಡಿಮೆ ಇತ್ತು. ತಾನು ತನ್ನ ಸುರಕ್ಷತೆಗಾಗಿ ಮಾತ್ರ ರಕ್ಷಣಾತ್ಮಕವಾಗಿ ಹೋರಾಡುತ್ತಿದ್ದ…..

ಆದರೆ ಮಧ್ಯಕಾಲೀನ ಯುಗದಲ್ಲಿ ವಿಶ್ವದ ಬಹುತೇಕ ನಾಗರಿಕತೆಗಳಲ್ಲಿ ಹಿಂಸೆ ತಾಂಡವವಾಡುತ್ತಿತ್ತು. ಮನುಷ್ಯನ ವಿಸ್ತರಣಾ ಸ್ವಭಾವ ಮತ್ತು ತನ್ನ ಅಹಂ ಎಲ್ಲೆ ಮೀರಿತ್ತು. ಎಲ್ಲೆಲ್ಲಿಯೂ ರಕ್ತದ ಕೋಡಿಗಳು ಹರಿದವು. ಹತ್ತೊಂಬತ್ತನೆಯ ಶತಮಾನದ ಎರಡು ಮಹಾಯುದ್ಧಗಳ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಆದರೂ ಕೆಲವು ಯುದ್ಧಗಳು ನಡೆಯುತ್ತಿದ್ದವು.

ತದನಂತರ ಬಹುಶಃ ಜಾಗತೀಕರಣದ ಪರಿಣಾಮ, ವಿಶ್ವ ಒಂದು ಮಾರುಕಟ್ಟೆಯಾದ ಮೇಲೆ ಕಾರ್ಪೊರೇಟ್ ಸಂಸ್ಕೃತಿ, ವಸ್ತು ಸಂಸ್ಕೃತಿಯನ್ನು ಕೊಳ್ಳುಬಾಕ ಸಂಸ್ಕೃತಿಯಾಗಿ ಪರಿವರ್ತಿಸಿ ಉದ್ಯೋಗ ನೀಡುವ ನೆಪದಲ್ಲಿ, ಗುಲಾಮಿ ಮನೋಭಾವವನ್ನು ಬೆಳೆಸಿ, ಅತಿಯಾದ ಬೆಲೆ ಏರಿಕೆಯಿಂದ ಜೀವನವನ್ನು ದುಸ್ಥಿತಿಗೆ ತಳ್ಳಿ, ಜನರ ಮಾನಸಿಕ ಪರಿಸ್ಥಿತಿಯನ್ನು ಅಸಹನೀಯಗೊಳಿಸಿ, ಇತರರ ಬಗ್ಗೆ ಅಸಹಿಷ್ಣುತೆ ಬೆಳೆಸಿದ ಪರಿಣಾಮ ಇದೀಗ ಅದು ಸ್ಪೋಟಗೊಳ್ಳುವ ಹಂತ ತಲುಪಿದೆ.

ಪ್ರಾರಂಭದಲ್ಲಿ ಉದ್ಯೋಗ ನೀಡುವ ನಂಬಿಕೆ ಹುಟ್ಟಿಸುವ ಈ ಕಂಪನಿಗಳು, ನಿರುದ್ಯೋಗಕ್ಕೂ ಕಾರಣವಾಗುತ್ತಿವೆ. ಅವರು ನೀಡುವ ಉದ್ಯೋಗಗಳು ತಾತ್ಕಾಲಿಕ ಪರಿಸ್ಥಿತಿಯನ್ನಷ್ಟೇ ನಿಭಾಯಿಸುತ್ತದೆ. ದೀರ್ಘಕಾಲದಲ್ಲಿ ಇವು ನಮ್ಮ ಸಹಜ ಬದುಕನ್ನೇ ಕಸಿಯುತ್ತಿದೆ. ಅದನ್ನು ಮತ್ಯಾರೋ ದುಷ್ಟ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತವೆ.

ಅದರಲ್ಲೂ ಭಾರತದ ಸುತ್ತಮುತ್ತಲಿರುವ ಶ್ರೀಲಂಕಾ, ಬಾಂಗ್ಲಾದೇಶ,‌ ಮಾಲ್ಡೀವ್ಸ್, ಮ್ಯಾನ್ಮಾರ್ ಮತ್ತು ಈಗ ನೇಪಾಳ ದೇಶದಲ್ಲಿ ಜನರೇ ಅಲ್ಲಿನ ಸರ್ಕಾರಗಳ ವಿರುದ್ಧ ಬೇರೆ ಬೇರೆ ಕಾರಣಗಳಿಗಾಗಿ ದಂಗೆ ಹೇಳುತ್ತಿರುವುದನ್ನು ಕಾಣಬಹುದಾಗಿದೆ.

ವ್ಯವಸ್ಥೆಯ ವಿರುದ್ಧದ ದಂಗೆಗಳು ಸಾಕಷ್ಟು ಸಂದರ್ಭಗಳಲ್ಲಿ ಘಟಿಸಿರುವುದನ್ನು ಇತಿಹಾಸದ ಪುಟಗಳಲ್ಲಿ ಹುಡುಕಬಹುದು. ಅದಕ್ಕೆ ಕಾರಣಗಳು ಏನೇ ಇರಬಹುದು, ಆದರೆ ಅಸ್ತಿತ್ವದಲ್ಲಿದ್ದ ಆಡಳಿತವನ್ನೇ ಬುಡಮೇಲು ಮಾಡಿರುವ ಅನೇಕ ಘರ್ಷಣೆಗಳು ನಡೆದಿದೆ. ರಕ್ತ ರಹಿತ ಮತ್ತು ರಕ್ತ ಸಹಿತ, ಒಳ್ಳೆಯದಕ್ಕಾಗಿ ಅಥವಾ ದುಷ್ಟರ ಕುತಂತ್ರದಿಂದಲೂ ಈ ಸನ್ನಿವೇಶ ಉದ್ಭವಿಸಿದೆ.

ಈ ಘಟನೆಗಳು ಮೇಲ್ನೋಟಕ್ಕೆ ದಿಢೀರನೆ ಯಾವುದೋ ಒಂದು ಕಾರಣದ ಪ್ರಭಾವದಿಂದ ನಡೆದಿದೆ ಎಂದೆನಿಸಿದರು, ಅದರ ಹಿಂದೆ ಪರೋಕ್ಷವಾಗಿ ಸಾಕಷ್ಟು ಸಮಯದ ಅಸಹನೆ ಒಟ್ಟುಗೂಡುತ್ತಿರುವುದನ್ನು ಗಮನಿಸಬಹುದು. ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದ ಘಟನೆಗಳಲ್ಲಿ ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ.

ಈ ಘಟನೆಗಳು ಸಂಭವಿಸಿರುವುದು ಪ್ರಜಾಪ್ರಭುತ್ವದಿಂದ ಅಧಿಕಾರಕ್ಕೇರಿದ ಸರ್ಕಾರಗಳ ಭ್ರಷ್ಟಾಚಾರವನ್ನು ಜನ ಗಮನಿಸುತ್ತಿದ್ದು ಅದಕ್ಕೆ ಪ್ರತ್ಯುತ್ತರ ಕೊಡುವ ರೀತಿಯಲ್ಲಿ ಇವು ನಡೆಯುತ್ತಿವೆ. ಭ್ರಷ್ಟಾಚಾರ ಒಂದೇ ಕಾರಣವೇ ಎಂದರೆ ಖಂಡಿತ ಅಲ್ಲ. ಅದರ ಜೊತೆಗೆ ಆ ಭ್ರಷ್ಟಾಚಾರ ಹೆಚ್ಚಾಗಲು ಅವರು ನಿರ್ವಹಿಸುತ್ತಿದ್ದ ಆಡಳಿತದ ವಿಧಾನಗಳು, ಅವರುಗಳ ಜೀವನ ಶೈಲಿ, ಸಮಾಜದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ, ಬಡವರು ಮತ್ತು ಶ್ರೀಮಂತರ ನಡುವಿನ ವ್ಯತ್ಯಾಸಗಳು ಸೇರಿದಂತೆ ಅನೇಕ ಸಮಸ್ಯೆಗಳು ಈ ಜನರ ಮನಸ್ಸಿನಲ್ಲಿ ಆಕ್ರೋಶ ಉಂಟುಮಾಡುತ್ತಿತ್ತು.

ಈ ಆಕ್ರೋಶಗಳಿಗೆ ವೇದಿಕೆಯಾಗಿ ಕೆಲಸ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಏಕೆಂದರೆ ಇಂದು ಬಹುತೇಕ ಎಲ್ಲಾ ಸಾರ್ವಜನಿಕರ ಕೈಯಲ್ಲಿ ಮೊಬೈಲ್ ಬಂದಿದೆ. ಆ ಮೊಬೈಲ್ ಎಲ್ಲರನ್ನೂ ಒಂದುಗೂಡಿಸುತ್ತಿದೆ. ಕೆಲವೇ ನಿಮಿಷಗಳಲ್ಲಿ ಒಂದು ಆಸಕ್ತಿಕರ ವಿಷಯ ಕೋಟ್ಯಂತರ ಜನರನ್ನು ಬೆಸೆಯುತ್ತದೆ. ಸಮಾನ ಮನಸ್ಕರನ್ನು ಹುಟ್ಟು ಹಾಕುತ್ತದೆ. ಜೊತೆಯಲ್ಲಿಯೇ ವಿಧ್ವಂಸಕಾರಿ ಶಕ್ತಿಗಳಿಗೂ ಧ್ವನಿ ನೀಡುತ್ತದೆ. ಇದರ ಪರಿಣಾಮ ಈ ರೀತಿಯ ದಂಗೆಗಳು ನಡೆದು ಸರ್ಕಾರಗಳು ಪಲ್ಲಟಗೊಳ್ಳುತ್ತಿವೆ.

ಹಾಗಾದರೆ ಈ ಬೆಳವಣಿಗೆಗಳು ಉತ್ತಮ ಲಕ್ಷಣಗಳೇ, ಸರ್ಕಾರಗಳನ್ನು ಬಡಿದೆಬ್ಬಿಸಲು ಈ ರೀತಿಯ ದಂಗೆಗಳ ಅವಶ್ಯಕತೆ ಇದೆಯೇ ಅಥವಾ ಇದು ಪ್ರಜಾಪ್ರಭುತ್ವ ವಿರೋಧಿಯೇ ಜೊತೆಗೆ ಇದು ಮತ್ತೆ ಈ ಸಮಾಜವನ್ನು ಒಡೆಯುತ್ತದೆಯೇ ಮುಂತಾದ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಉತ್ತರವನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಈ ದಂಗೆಗಳು ಜನರಿಂದ ಸಹಜವಾಗಿಯೇ ಉದ್ಭವಿಸುವ ಆಕ್ರೋಶಗಳಿಗೆ ಉತ್ತರವೇ ಅಥವಾ ಯಾವುದಾದರೂ ಶಕ್ತಿಗಳು ಉದ್ದೇಶಪೂರ್ವಕವಾಗಿಯೇ ಆಡಳಿತ ಯಂತ್ರವನ್ನು ಬುಡಮೇಲು ಮಾಡಲು ಈ ಕೃತ್ಯಗಳನ್ನು ಸಂಘಟಿಸುತ್ತಿರಬಹುದೇ.

ಸಮಾಜಶಾಸ್ತ್ರೀಯ ಅಧ್ಯಯನದ ಪ್ರಕಾರ ಈ ರೀತಿಯ ದಿಢೀರ್ ಗುಂಪುಗಳಿಗೆ ನಿರ್ಧಿಷ್ಟವಾದ, ಕ್ರಮಬದ್ಧವಾದ ಯೋಜನೆ ಹೊಂದಿರುವುದಿಲ್ಲ. ಈ ಗುಂಪುಗಳಿಗೆ ವಿವೇಚನೆ ಇರುವುದಿಲ್ಲ, ಈ ಗುಂಪುಗಳಿಗೆ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಕಾಣುವುದಿಲ್ಲ. ಅದರ ಉದ್ದೇಶ ಒಳ್ಳೆಯದಿದ್ದರೂ ಅವು ಸಹಜತೆಯನ್ನು ಮೀರಿ ಉದ್ವಿಗ್ನತೆಯನ್ನು ಬೆಂಬಲಿಸಿ ಅರಾಜಕತೆಯತ್ತ ಮುನ್ನಡೆಯುವುದೇ ಹೆಚ್ಚು. ಅಂದರೆ ಗುಂಪುಗಳು ಸಂವೇದನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವಿಫಲವಾಗುತ್ತದೆ.

ಹಾಗಾದರೆ ಭ್ರಷ್ಟಾಚಾರದ ವಿರುದ್ಧದ ಹೋರಾಟಗಳನ್ನು ಬೆಂಬಲಿಸಬಾರದೇ, ದುಷ್ಟ ಸರ್ಕಾರಗಳ ದುಷ್ಟತನವನ್ನು ಸಹಿಸಿಕೊಂಡಿರಬೇಕೇ ಎಂಬ ಪ್ರಶ್ನೆ ಏಳುತ್ತದೆ.

ಆಫ್ರಿಕಾದ ಕೆಲವು ದೇಶಗಳು, ದಕ್ಷಿಣ ಅಮೆರಿಕಾದ ಕೆಲವು ದೇಶಗಳು, ಏಷ್ಯಾದ ಕೆಲವು ಚಿಕ್ಕ ದೇಶಗಳನ್ನು ಗಮನಿಸಿದರೆ ಈ ರೀತಿಯ ದಂಗೆಗಳು ಕಡಿಮೆ ಜನಸಂಖ್ಯೆಯ ಚಿಕ್ಕ ದೇಶಗಳಲ್ಲಿ ನಡೆದಿದೆ ಮತ್ತು ಯಶಸ್ವಿಯಾಗಿದೆ. ಭಾರತ, ಚೀನಾ, ರಷ್ಯಾ, ಅಮೆರಿಕಾ, ಕೆನಡಾ, ಬ್ರೆಜಿಲ್, ಅರ್ಜೆಂಟೈನಾದಂತ ಬೃಹತ್ ಜನಸಂಖ್ಯೆಯ ದೇಶಗಳಲ್ಲಿ ಸಣ್ಣಪುಟ್ಟ ಅಕ್ರೋಶಗಳು ಚಳುವಳಿಗಳಾಗಿ ಹೊರಹಾಕಲ್ಪಟ್ಟಿವೆಯೇ ಹೊರತು ಆಡಳಿತವನ್ನೇ ಬುಡಮೇಲು ಮಾಡುವ ದಂಗೆಗಳು ನಡೆದಿಲ್ಲ. ಅಲ್ಲದೆ ಚೀನಾ ಹೊರತುಪಡಿಸಿ ಇತರ ದೇಶಗಳಲ್ಲಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಚುನಾವಣೆಗಳಲ್ಲಿ ಮತದಾನವೆಂಬ ಅಸ್ತ್ರವಿದೆ. ಜನ ತಮ್ಮ ಅಕ್ರೋಶವನ್ನು ಮತ ಚಲಾವಣೆಯ ಮೂಲಕ ಸರ್ಕಾರ ಬದಲಾಯಿಸಲು ಉಪಯೋಗಿಸುತ್ತಾರೆ.

ಆದರೆ ಈ ಸಣ್ಣ ದೇಶಗಳಲ್ಲಿ ಅದಕ್ಕೆ ಅವಕಾಶವಿದ್ದರೂ ಸಹ ಇತ್ತೀಚಿನ ವರ್ಷಗಳಲ್ಲಿ ಇದ್ದಕ್ಕಿದ್ದಂತೆ ಜನ ಆಕ್ರೋಶಗೊಂಡು ರಾಷ್ಟ್ರದ ಮುಖ್ಯ ಆಡಳಿತ ಸ್ಥಳಗಳಿಗೆ ನುಗ್ಗಿ ನಾಶ ಮಾಡುತ್ತಿದ್ದಾರೆ. ನೇಪಾಳದಲ್ಲಿ ನಡೆದಿರುವುದು ಒಂದು ಹಿಂಸಾತ್ಮಕ ಕ್ರಾಂತಿ ಎಂಬುದೇನೋ ನಿಜ. ಜನ ಅಲ್ಲಿನ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧಿಸಿದ ಕಾರಣದಿಂದ ಒಮ್ಮೆಲೇ ಸರ್ಕಾರವನ್ನೇ ಕಿತ್ತಸೆದು ಮುನ್ನುಗ್ಗಿದರು. ಅಂದರೆ ಅವರೊಳಗಿದ್ದ ಅಸಹನೆ ವ್ಯಕ್ತಪಡಿಸಲು ವೇದಿಕೆಯಾಗಿದ್ದ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಅಲ್ಲಿನ ಸರ್ಕಾರ ಸರ್ವಾಧಿಕಾರಿ ಮೆರೆಯಲು ಹೊಂಚು ಹಾಕಿತು. ಅದರ ಪರಿಣಾಮ ಅಲ್ಲಿನ ಪ್ರಧಾನಿಯೇ ರಾಜೀನಾಮೆ ಕೊಡುವಂತೆ ಮಾಡಲಾಯಿತು. ಇದರ ಒಟ್ಟು ಸಾರಾಂಶ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರಗಳು ಮಾಡಿದರೆ ಜನ ಅದನ್ನು ಸಹಿಸುವುದಿಲ್ಲ.

ಇದು ಭಾರತಕ್ಕೆ ಒಂದು ಪಾಠವಾಗಬೇಕು. ಭಾರತ ಬಹುತ್ವದ ವೈವಿಧ್ಯಮಯ ದೇಶ. ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು, ಸಂವಿಧಾನದ ಆಶಯಗಳನ್ನು ದಾರಿ ತಪ್ಪಿಸುವ ಪರೋಕ್ಷ ಪ್ರಯತ್ನ ಅಪಾಯಕಾರಿಯಾಗಬಹುದು. ಆದ್ದರಿಂದ ನಾವುಗಳು ಆ ಘಟನೆಯಿಂದ ಪ್ರಚೋದನೆಗೆ ಒಳಗಾಗುವುದು ಬೇಡ.
ಭಾರತ ವಿಶ್ವಕ್ಕೆ ಗುರುವಾಗುವುದು ಮಾನವೀಯತೆ, ಸಮಾನತೆ, ತ್ಯಾಗ, ಬಲಿದಾನ, ಕ್ಷಮಾ ಗುಣಗಳಿಂದಲೇ ಹೊರತು ಹಿಂಸೆಯಿಂದಲ್ಲ ಎಂಬುದನ್ನು ಸದಾ ನೆನಪಿಟ್ಟುಕೊಳ್ಳೋಣ. ಪ್ರಚೋದನೆಗೆ ಒಳಗಾಗುವುದಾದರೆ ಸತ್ಯ, ನ್ಯಾಯ, ಅಹಿಂಸೆ, ಸರಳತೆಯಿಂದ ಪ್ರಚೋದನೆಗೊಳಗಾಗೋಣ ಹಿಂಸೆಯಿಂದಲ್ಲ……

ನಮ್ಮ ನೆರೆಯ ದೇಶ ನೇಪಾಳದಲ್ಲಿ ಮತ್ತೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರ ಆಯ್ಕೆಯಾಗಿ ಅಲ್ಲಿ ಶಾಂತಿ ನೆಮ್ಮದಿ ನೆಲೆಸುವಂತಾಗಲಿ ಎಂದು ಆಶಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

8 hours ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

19 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

19 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

23 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

1 day ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

1 day ago