ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ ಸುಧಾಕರ್ ಅವರು ಸೂಚನೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರವೂ ಆಯುಷ್ಮಾನ ಭಾರತ, ಕಿಸಾನ್ ಸಮ್ಮಾನ್, ವಿಶ್ವಕರ್ಮ, ಪಿಎಂಇಜಿಪಿ ಯೋಜನೆಯಂತಹ ಸಾಕಷ್ಟು ಜನರ ಪರ ಯೋಜನೆಗಳನ್ನು ತಂದಿದ್ದು, ಅದರ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.
ರೈತರಲ್ಲಿ ಫಸಲ್ ಭೀಮಾ ಯೋಜನೆ ಅರಿವು ಮೂಡಿಸಿ:
ಜಿಲ್ಲೆಯಲ್ಲಿ 1.92 ಲಕ್ಷ ರೈತರು ಇದ್ದು, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ವರ್ಷ ಕೇವಲ 6053 ರೈತರು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ರೈತರ ಸಂಖ್ಯೆಯಲ್ಲಿ ತೀರಾ ಕಡಿಮೆಯಾಗಿದ್ದು, ಜಿಲ್ಲೆಯ ರೈತರಲ್ಲಿ ಯೋಜನೆ ಕುರಿತಾಗಿ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.
ವಿಮೆ ಕಟ್ಟಿರುವವರಿಗೆ ಸಾಕಷ್ಟು ಈಗಾಗಲೇ ಅನುಕೂಲವಾಗಿದೆ. ರೈತರಿಗೆ ನಂಬಿಕೆ ಇಲ್ಲದ ಕಾರಣ ವಿಮೆ ಕಟ್ಟಿಲ್ಲ. ಇದರ ಬಗ್ಗೆ ಅರಿವು ಮೂಡಿಸಬೇಕು. ವಿಶೇಷ ಅಭಿಯಾನದ ಮೂಲಕ ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಜಮೀನುಗಳನ್ನು ಕೆಐಎಡಿಬಿ ವಶಪಡಿಸಿಕೊಂಡಿದ್ದಾರೆ. ಇದರಿಂದ ಫಲಾನುಭವಿಗಳಿಗೆ ವಿಮೆ ಸೌಲಭ್ಯ ತಲುಪಿದಾಗ ಅದರ ಬಗ್ಗೆ ಕಾರ್ಯಕ್ರಮ ಮಾಡಿ ರೈತರಿಗೆ ಅರಿವು ಮೂಡಿಸಬೇಕು ಎಂದರು.
ರೈಲ್ವೆ ಇಲಾಖೆ ಕೆಲಸಗಳು ಶೀಘ್ರವಾಗಲಿ. ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಂಡರ್ ಪಾಸ್ ಅವೈಜ್ಞಾನಿಕವಾಗಿದ್ದು, ಇಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ಭಾಗಕ್ಕೆ ಪ್ರಮುಖವಾಗಿ ಮೇಲ್ಸೇತುವೆ ಅಗತ್ಯವಾಗಿದೆ. ಈಗಾಗಲೇ ಶಾಸಕರು, ಅಧಿಕಾರಿಗಳ ಜತೆಗೆ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಇಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ನೆಲಮಂಗಲದಲ್ಲಿ ರೈಲ್ವೆಸ್ಟೇಷನ್ನಲ್ಲಿ ಪ್ಲಾಟ್ ಫಾರ್ಮ್-2 ರ ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸಬೇಕು. ವೇಗವಾಗಿ ರೈಲ್ವೆ ಇಲಾಖೆಯೂ ಕೆಲಸಗಳನ್ನು ಮಾಡಬೇಕು. ರೈಲ್ವೆ ಇಲಾಖೆಯ ಸಾಕಷ್ಟು ಕೆಲಸಗಳು ನಿಧಾನವಾಗಿ ಸಾಗುತ್ತಿದ್ದು, ಅದಕ್ಕೆ ವೇಗ ನೀಡಬೇಕು ಎಂದರು.
ಗರ್ಭಕಂಠ ಕ್ಯಾನ್ಸರ್ ಲಸಿಕಾ ಜಾಗೃತಿ ಹೆಚ್ಚಿಸಿ:
ಕೇಂದ್ರ ಸರ್ಕಾರದಿಂದ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್.ಪಿ.ವಿ ಲಸಿಕೆ ನೀಡುತ್ತಿದ್ದು, ಜಿಲ್ಲೆಯ ನಾಲ್ಕು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು.
ಜಿಲ್ಲೆಯಲ್ಲಿ 12,000 ಲಸಿಕೆಗಳ ಗುರಿಯಿದ್ದು, ಎಲ್ಲಾ ತಾಲೂಕುಗಳಲ್ಲಿ ಶಾಸಕರು, ಸಂಸದರು, ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಮಾಡಿ, ಶಾಲಾ ಮಕ್ಕಳಿಗೂ ಈ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
*ಜಿಲ್ಲೆಯಲ್ಲಿ 22 ಬಾಲ್ಯ ವಿವಾಹ ತಡೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 22 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 4 ಪ್ರಕರಣಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧ ಕೈಗಾರಿಕೆಗಳಿಂದ ಸಿ.ಎಸ್.ಆರ್ ಅನುದಾನದಡಿ ಜಿಲ್ಲೆಗೆ ಬಂದ ಅನುದಾನದ ಕುರಿತು ಮಾಹಿತಿಯನ್ನು ಎರಡು ವಾರದಲ್ಲಿ ಒದಗಿಸುವಂತೆ ಕೈಗಾರಿಕಾ ಜಂಟಿ ನಿರ್ದೇಶಕರಿಗೆ ಸಂಸದರು ಸೂಚಿಸಿದರು.
ಜಿಲ್ಲೆಯಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳಲ್ಲಿ ಕಳಪೆ ಮಟ್ಟದ ವಸ್ತುಗಳನ್ನು ಬಳಕೆ ಆಗಬಾರದು, ಗುಣಮಟ್ಟ ಕಾಯ್ದುಕೊಂಡು ಗ್ರಾಮೀಣ ಜನರಿಗೆ ನೀರು ಕೊಡುವ ಕೆಲಸ ಆಗಬೇಕು ಎಂದ ಸಂಸದರು ಕೋಯಿರಾ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಬೋರ್ ವೇಲ್ ಕೊರೆಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸಕ್ಕೆ ಮುಂದಾಗಿ ಎಂದು ಅಧಿಕಾರಿಗಳಿಗೆ ಹೇಳಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಗಳಿಗೆ ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರು ಸೇರುವುದನ್ನು ಪರೀಕ್ಷೆಯನ್ನು ಆಗಾಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾಡಬೇಕು. ಜತೆಗೆ ಗ್ರಾಮೀಣಿಗರಿಗೆ ಶುದ್ಧ ಕುಡಿಯುವ ನೀರಿನ ಕಲ್ಪಿಸುವಂತ ಕೆಲಸ ಆಗಬೇಕು ಎಂದರು.
ಅಧಿಕಾರಿಗಳು ಕೇವಲ ಕಚೇರಿಗೆ ಕೆಲಸ ಕಾರ್ಯಗಳ ಜತೆಗೆ ಗ್ರಾಮ, ನಗರಗಳಿಗೂ ಭೇಟಿ ನೀಡಿ, ಅಲ್ಲಿನ ಜನರ ಕುಂದು ಕೊರತೆಗಳನ್ನು ಆಲಿಸಬೇಕು. ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರವನ್ನು ಪಾಲಿಸುವ ಕೆಲಸವನ್ನು ಮಾಡಬೇಕು. ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ವಿಕಲಚೇತನರಿಗೆ ಸುಗಮ ಭಾರತ ಅಭಿಯಾನದಡಿ ಅವಶ್ಯಕ ಸೌಕರ್ಯಗಳನ್ನು ಕಲ್ಪಿಸಬೇಕು. ವಿಕಲಚೇತನ ಸ್ನೇಹಿ ಇಳಿಜಾರು ದಾರಿ, ಸುಲಭ ಶೌಚಾಲಯ, ಲಿಫ್ಟ್ ಗಳಲ್ಲಿ ಬ್ರೈಲ್ ಸಂಕೇತ ಮತ್ತು ಶಬ್ದ ಸಂಕೇತ ಸೇರಿ ವಿಕಲಚೇತನ ಸ್ನೇಹಿ ಪೂರಕ ವಾತಾವರಣ ಕಲ್ಪಿಸಲು ಕ್ರಮ ವಹಿಸಲಾಗುವುದು ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಅಪರ ಜಿಲ್ಲಾಕಾರಿ ಸೈಯಿದಾ ಆಯಿಷಾ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್ ಕುಮಾರ್, ದಿಶಾ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…
ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…
ಪೊಲೀಸ್ ಇಲಾಖೆಯಲ್ಲಿ 1000 ಸಬ್ ಇನ್ಸ್ಪೆಕ್ಟರ್ ಹಾಗೂ 8000 ಕಾನ್ಸ್ಟೇಬಲ್ ಗಳನ್ನು ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು…
ಇಂದು ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ…
2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಫಲಿತಾಂಶ ಪ್ರಕಟವಾದ ದಿನವೇ National Academic Depository…
ಯುವಕರು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ಆರೋಗ್ಯಕರ ಮತ್ತು ಸಮೃದ್ಧ ಸಮಾಜದ ನಿರ್ಮಾಣಕ್ಕೂ ಅತ್ಯಗತ್ಯವಾಗಿದೆ ಎಂದು ಹೈಕೋರ್ಟ್…