
ದೊಡ್ಡಬಳ್ಳಾಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6 ಕೆಜಿ 126 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಮುಷರಪ್ ಅಲಿ (23) ಎಂದು ಗುರುತಿಸಲಾಗಿದ್ದು, ಆತ ಉತ್ತರ ಪ್ರದೇಶದ ಮುರಾದಾಬಾದ್ ಮೂಲದವನಾಗಿದ್ದಾನೆ. ಪ್ರಸ್ತುತ ದೊಡ್ಡಬಳ್ಳಾಪುರ ನಗರದ ಅರ್ಕಾವತಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.
ಆರೋಪಿ ಉತ್ತರ ಪ್ರದೇಶದಿಂದ ದೊಡ್ಡಬಳ್ಳಾಪುರಕ್ಕೆ ಒಣ ಗಾಂಜಾವನ್ನು ತಂದು ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.
ಡಿವೈಎಸ್ಪಿ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ, ನಗರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಮುತ್ತುರಾಜ್ ನೇತೃತ್ವದಲ್ಲಿ ಸಿಬ್ಬಂದಿ ಪಾಂಡುರಂಗ, ಹುಸೇನ್, ಶಿವಾನಂದ, ಮುನಿರಾಜು, ಪ್ರದೀಪ್ ಹಾಗೂ ರೂಪೇಶ್ ಅವರ ತಂಡ ಕಾರ್ಯಾಚರಣೆ ನಡೆಸಿತು.
ದಾಳಿಯ ವೇಳೆ ಆರೋಪಿಯ ವಶದಲ್ಲಿದ್ದ 6 ಕೆಜಿ 126 ಗ್ರಾಂ ಅಕ್ರಮ ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.