
ದೇವನಹಳ್ಳಿ: ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಕಟ್ಟದೆ ಸಂಚರಿಸುತ್ತಿದ್ದ ಹೊರರಾಜ್ಯಗಳಲ್ಲಿ ನೋಂದಣಿಯಾದ ಖಾಸಗಿ ಬಸ್ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗಿನ ಜಾವದಿಂದಲೇ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಟೋಲ್ಗೇಟ್ ಬಳಿ ವಿಶೇಷ ತಪಾಸಣಾ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು, ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ಬಸ್ಗಳನ್ನು ಪತ್ತೆಹಚ್ಚಿ, ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ವಸೂಲಿ ಮಾಡಿದ್ದಾರೆ.

ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡು ಕರ್ನಾಟಕದಲ್ಲಿ ಸಂಚರಿಸುತ್ತಿದ್ದ ಕೆಲವು ಖಾಸಗಿ ಬಸ್ಗಳು ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸದೆ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಜಂಟಿ ಆಯುಕ್ತೆ ಶೋಭಾ ಹಾಗೂ ಎಟಿಸಿ ಓಂಕಾರೇಶ್ವರಿ ಅವರ ಮಾರ್ಗದರ್ಶನದಲ್ಲಿ, ದೇವನಹಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಸುರೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ದೇವನಹಳ್ಳಿ, ಯಲಹಂಕ, ಜ್ಞಾನಭಾರತಿ, ರಾಜಾಜಿನಗರ, ಯಶವಂತಪುರ ಹಾಗೂ ಚಿಕ್ಕಬಳ್ಳಾಪುರದ ಒಟ್ಟು ಆರು ಆರ್ಟಿಒ ಘಟಕಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬುಧವಾರ ಬೆಳಗಿನ ಜಾವ 2 ಗಂಟೆಗೆ ಆರಂಭವಾದ ಕಾರ್ಯಾಚರಣೆ ಬೆಳಗ್ಗೆ 10 ಗಂಟೆಯವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ 70ಕ್ಕೂ ಹೆಚ್ಚು ಬಸ್ಗಳನ್ನು ತಪಾಸಣೆ ನಡೆಸಲಾಗಿದ್ದು, 50ಕ್ಕೂ ಹೆಚ್ಚು ಬಸ್ಗಳಿಂದ ರಾಜಸ್ವ ತೆರಿಗೆ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಸಂಚರಿಸುವ ಹೊರರಾಜ್ಯದ ವಾಹನಗಳು ನಿಯಮಾನುಸಾರ ತೆರಿಗೆ ಪಾವತಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಈ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ತೆರಿಗೆ ಪಾವತಿಸದೆ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ತಪಾಸಣೆ ಮುಂದುವರಿಯುವ ಸಾಧ್ಯತೆಯಿದೆ.