ತೈಲ ಬೆಲೆ ಏರಿಕೆ ವಿಚಾರ: ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ- ಸಂಕಷ್ಟಕ್ಕೆ ಸಿಲುಕಿದ ಕೃಷಿಕರು ಹಾಗೂ ಜನಸಾಮಾನ್ಯರು- ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ದೇವನಹಳ್ಳಿ: ತೈಲ ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ತೀವ್ರ ವಾಗ್ದಾಳಿ ನಡೆಸಿದರು.

ದೇವನಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಸಚಿವರು, “ಮಾನ್ಯ ಪ್ರಧಾನಿ ಮೋದಿಯವರಿಗೆ ಮುಂದಾಲೋಚನೆ ಇಲ್ಲ. ಸುಮಾರು ಆರು ತಿಂಗಳ ಹಿಂದೆಯೇ ಯುದ್ಧದ ಮುನ್ಸೂಚನೆ ಇದ್ದರೂ ಕೂಡ ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿದರು.

“ಭಾರತಕ್ಕೆ ರಷ್ಯಾ ದೇಶದೊಂದಿಗೆ ಮೊದಲಿನಿಂದಲೂ ಸ್ನೇಹ ಸಂಬಂಧವಿದೆ. ರಷ್ಯಾ ದೇಶದಲ್ಲಿ ತೈಲ ಸಂಪತ್ತು ಹೆಚ್ಚಿದ್ದು, ಆ ದೇಶದೊಂದಿಗೆ ಸರಿಯಾದ ರೀತಿಯಲ್ಲಿ ಸಂಬಂಧವನ್ನು ನಿರ್ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಹೇಳಿದರು.

ತೈಲ ಬೆಲೆ ಏರಿಕೆಯಿಂದ ಕೃಷಿಕರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಸಚಿವರು, “ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ತೈಲ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ. ಅದನ್ನು ತಹಬಂದಿಗೆ ತರುವ ಶಕ್ತಿ ಕೇಂದ್ರ ಸರ್ಕಾರಕ್ಕಿಲ್ಲ” ಎಂದು ಟೀಕಿಸಿದರು.

ತೈಲ ಬೆಲೆ ಏರಿಕೆಯನ್ನು ಹತೋಟಿಗೆ ತರಲು ಕೇಂದ್ರ ಸರ್ಕಾರ ಸಮರ್ಥ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೆ.ಎಚ್. ಮುನಿಯಪ್ಪ ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!