ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ರಾಜ್ಯ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ-ಸಿಎಂ ಸಿದ್ದರಾಮಯ್ಯ‌ ಕಿಡಿ

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ರಾಜ್ಯ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ನಾಯಕರು ಬಾಯಿ ಬಿಟ್ಟರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ‍್ಯ ಎನ್ನುವುದನ್ನು ಇವರೇ ಹೇಳಬೇಕು. ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುವವರಂತೆ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯಕೋರ ಕೇಂದ್ರ ಬಿಜೆಪಿ (BJP) ಸರ್ಕಾರವನ್ನು ಸಮರ್ಥಿಸುತ್ತಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಒಟ್ಟು 1,73,030 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಪಾಲು ಕೇವಲ 6,310 ಕೋಟಿ ರೂಪಾಯಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐದರಷ್ಟು ಕನ್ನಡಿಗರಿದ್ದರೂ ದೇಶದ ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇಕಡಾ 8.4 ಆಗಿದೆ. ಅತೀ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ‍್ಥಾನದಲ್ಲಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡಾ 17ರಷ್ಟು ಹೆಚ್ಚಾಗುತ್ತಿದೆ. ಹೀಗಿದ್ದರೂ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರಲಾಗುತ್ತಿದೆ. ಈ ಅನ್ಯಾಯ ಯಾಕೆ? ಎಂದು ಪ್ರಶ್ನೆ ಮಾಡಿದರು.

2018-19ರಲ್ಲಿ ರೂ. 24.42 ಲಕ್ಷ ಕೋಟಿಗಳಷ್ಟಿದ್ದ ಕೇಂದ್ರದ ಬಜೆಟ್ ಗಾತ್ರ, 2024-25ರಲ್ಲಿ ರೂ.46.28 ಲಕ್ಷ ಕೋಟಿಯಷ್ಟಾಗಿದೆ. 2018-19ರಲ್ಲಿ ಕರ್ನಾಟಕಕ್ಕೆ ನೀಡಿರುವ ತೆರಿಗೆ ಪಾಲು ರೂ.46,288 ಕೋಟಿಗಳಾಗಿದ್ದರೆ, 2024-25ರಲ್ಲಿ ಇದು ರೂ.44,485 ಕೋಟಿ ಮಾತ್ರ. ಅಂದರೆ ಆರು ವರ್ಷಗಳ ಅವಧಿಯಲ್ಲಿ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ಕರ್ನಾಟಕದ ತೆರಿಗೆ ಪಾಲು 15,299 ರೂಪಾಯಿಗಳಷ್ಟು ಮಾತ್ರ ಹೆಚ್ಚಾಗಿದೆ. ಈ ತೆರಿಗೆ ಪಾಲು ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟಾದರೂ ಆಗಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು.

ಕರ್ನಾಟಕದ ಜನತೆ ತೆರಿಗೆ ಮತ್ತು ಸುಂಕದ ಮೂಲಕ ಪ್ರತಿವರ್ಷ ನಾಲ್ಕುವರೆ ಲಕ್ಷ ಕೋಟಿ ರೂಪಾಯಿಗಳನ್ನು ಕೇಂದ್ರದ ಬೊಕ್ಕಸಕ್ಕೆ ನೀಡುತ್ತಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತೆರಿಗೆ ಪಾಲಿನ ರೂಪದಲ್ಲಿ ರೂ.45,000 ಕೋಟಿ ಮತ್ತು ಅನುದಾನವಾಗಿ ರೂ.15,000 ಕೋಟಿ ನೀಡುತ್ತಿದೆ. ಅಂದರೆ ನಾವು ನೀಡುತ್ತಿರುವ ಒಂದು ರೂಪಾಯಿಗೆ ಕೇವಲ 13 ಪೈಸೆಯಷ್ಟು ಮಾತ್ರ ವಾಪಸು ನೀಡುತ್ತಿದೆ ಎಂದರು.

ತೆರಿಗೆ ಹಂಚಿಕೆ ಮಾಡುವಾಗಲೂ ‘’ಬಿಮಾರು’’ ರಾಜ್ಯಗಳೆಂಬ ಅಪಖ್ಯಾತಿಗೀಡಾಗಿರುವ ಬಿಹಾರ (ರೂ.17,403 ಕೋಟಿ), ಮಧ್ಯಪ್ರದೇಶ (ರೂ.13,582 ಕೋಟಿ), ರಾಜಸ್ತಾನ (ರೂ.10,426 ಕೋಟಿ) ಮತ್ತು ಉತ್ತರಪ್ರದೇಶಕ್ಕೆ (ರೂ.31,099 ಕೋಟಿ) ತೆರಿಗೆ ಪಾಲನ್ನು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ ರೂ.6,310 ಕೋಟಿ ನೀಡಿದೆ. ಇದು ಉತ್ತಮ ಆಡಳಿತ, ಸುಸ್ಥಿರ ಅಭಿವೃದ್ದಿ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕಕ್ಕೆ ನೀಡಿರುವ ಶಿಕ್ಷೆಯೇ? ಕನ್ನಡಿಗರ ಬೆವರ ಗಳಿಕೆಯ ತೆರಿಗೆ ಹಣ ಭ್ರಷ್ಟ ರಾಜ್ಯಗಳ ಬೊಕ್ಕಸ ತುಂಬಲು ಯಾಕೆ ಬಳಕೆಯಾಗಬೇಕು? ಎಂದು ಪ್ರಶ್ನೆ ಮಾಡಿದರು.

ಹದಿನೈದನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲನ್ನು ಶೇ.4.73ರಿಂದ ಶೇಕಡಾ 3.64ಕ್ಕೆ ಇಳಿಸಿದೆ. ಇದರಿಂದ ಕಳೆದ ಐದು ವರ್ಷಗಳಲ್ಲಿ 79,770 ಕೋಟಿ ರೂಪಾಯಿಯನ್ನು ಕರ್ನಾಟಕ ಕಳೆದುಕೊಂಡಿದೆ. ಈ ಅನ್ಯಾಯಕ್ಕೆ ಪರಿಹಾರವಾಗಿ ರೂ.5,495 ಕೋಟಿ ವಿಶೇಷ ಅನುದಾನ ನೀಡಬೇಕೆಂಬ ಹಣಕಾಸು ಆಯೋಗದ ಶಿಫಾರಸನ್ನು ಕೂಡಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿ ಕರ್ನಾಟಕಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಹೇಳಿದರು.

ಇದು ಕರ್ನಾಟಕದ ಪ್ರಾಮಾಣಿಕ ತೆರಿಗೆದಾರರಿಗೆ ಮಾಡಿರುವ ಘೋರ ಅನ್ಯಾಯವಲ್ಲವೇ? ಈ ಅನ್ಯಾಯವನ್ನು ಖಂಡಿಸಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ನಿರ್ಲಜ್ಜರಾಗಿ ಸಮರ್ಥಿಸುತ್ತಿರುವುದು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಇವರ ಆರ್ಭಟವೇನಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಬೀದಿಗಳಲ್ಲಿ ಪರಸ್ಪರ ಕಚ್ಚಾಡಲು ಸೀಮಿತವಾಗಿದೆ ಎಂದರು.

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ನ್ಯಾಯ ಕೇಳುವ ಕನಿಷ್ಠ ಧೈರ್ಯವೂ ಇಲ್ಲದೆ ದೆಹಲಿ ಸರ್ಕಾರದ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ಜನದ್ರೋಹಿಗಳಾದಾಗ ಅವರನ್ನು ಜನರೇ ವಿಚಾರಿಸಿಕೊಳ್ಳಬೇಕಾಗುತ್ತದೆ. ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಕನ್ನಡಿಗರೆಲ್ಲರೂ ಜಾತಿ, ಧರ್ಮ, ಪಕ್ಷ ಪಂಥಗಳನ್ನು ಮೀರಿ ದನಿ ಎತ್ತಬೇಕಾಗಿದೆ. ಇಂತಹದ್ದೊಂದು ಸಂಕಲ್ಪವನ್ನು ಸಂಕ್ರಮಣದ ಶುಭದಿನದಂದು ಪ್ರತಿಯೊಬ್ಬ ಕನ್ನಡಿಗರು ಕೈಗೊಂಡು ಕರ್ನಾಟಕವನ್ನು ಅನ್ಯಾಯ ಮತ್ತು ಅವಮಾನದಿಂದ ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.

Ramesh Babu

Journalist

Recent Posts

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

2 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

2 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

7 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

19 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

19 hours ago

ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಂಡರ್ ಪಾಸ್ ಅವೈಜ್ಞಾನಿಕ- ಮೇಲ್ಸೇತುವೆ ಅಗತ್ಯ- ಸಂಸದ ಡಾ. ಕೆ. ಸುಧಾಕರ್

ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ…

19 hours ago