Categories: ಲೇಖನ

ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಜಾರಿಯಾದ ದಿನ….ಒಂದು ಕಹಿ ನೆನಪು ಮತ್ತು ಎಚ್ಚರಿಕೆ…..

ಒಂದು ಕಹಿ ನೆನಪು ಮತ್ತು ಎಚ್ಚರಿಕೆ…..

ಜೂನ್ 25 – 1975,
ಜೂನ್ 25 – 2025….

ಸರಿಯಾಗಿ 50 ವರ್ಷಗಳ ಹಿಂದೆ…..

ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ……

ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ ಅತ್ಯಂತ ಕಹಿ ಘಟನೆಗಳಲ್ಲಿ ರಾಷ್ಟ್ರಪತಿಗಳು ಸಹಿ ಹಾಕಿದ ಈ ದಿನವೂ ಒಂದು. ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ಅಪಾಯವಿದೆ ಎಂಬ ನೆಪದಿಂದ, ತಮ್ಮ ಅಧಿಕಾರ ಉಳಿಸಿಕೊಳ್ಳಲು ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು…..

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸದಸ್ಯರುಗಳು ಅತ್ಯಂತ ಗಂಭೀರವಾಗಿ ಒಂದು ವಿಷಯವನ್ನು ಸಂವಿಧಾನದಲ್ಲಿ ಸೇರಿಸಿರುತ್ತಾರೆ. ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ನಿಜವಾಗಲೂ ದುಷ್ಟ ಶಕ್ತಿಗಳಿಂದ ಅತ್ಯಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾದಾಗ ದೇಶವನ್ನು ರಕ್ಷಿಸಲು ಈ ಒಂದು ಸ್ವಯಂ ವಿವೇಚನೆಯ ಸಂವಿಧಾನಾತ್ಮಕ ಅವಕಾಶವನ್ನು, ಅಧಿಕಾರವನ್ನು ನೀಡಲಾಗಿರುತ್ತದೆ. ದುರಾದೃಷ್ಟವಶಾತ್ ಅಂತಹ ಸಂದರ್ಭ ಸೃಷ್ಟಿಯಾಗದಿದ್ದರೂ ಇಂದಿರಾಗಾಂಧಿಯವರು ಸಂವಿಧಾನದ ಆ ವಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದು ಅಕ್ಷರಶಃ ಸತ್ಯ…….

ಆ ಕಾಲಘಟ್ಟದ ಭಾರತದ ರಾಜಕೀಯ ಪರಿಸ್ಥಿತಿ ಇಷ್ಟೊಂದು ಸಂಕೀರ್ಣವಾಗಿರಲಿಲ್ಲ. ಹಾಗೆಯೇ ಅಪಮೌಲ್ಯಗೊಂಡಿರಲಿಲ್ಲ. ಇದ್ದುದರಲ್ಲಿ ಒಂದಷ್ಟು ಮೌಲ್ಯಯುತ ರಾಜಕಾರಣ ನಡೆಯುತ್ತಿದ್ದ ದಿನಗಳವು. ಆದರೂ ಸ್ವಾತಂತ್ರ್ಯ ಲಭಿಸಿದ ಸುಮಾರು 28 ವರ್ಷಗಳ ನಂತರ ಇಂದಿರಾಗಾಂಧಿಯವರು ಈ ಕಲಂ ಅನ್ನು ದೇಶದ ಮೇಲೆ ಹೇರಿದ್ದಲ್ಲದೆ ಅನೇಕ ಅನೈತಿಕ, ಅಸಂಸದೀಯ, ಹಿಂಸಾತ್ಮಕ ಘಟನೆಗಳಿಗೂ, ರಾಜಕೀಯ ವಿರೋಧಿಗಳ ಬದುಕಿನ ದುರಂತಕ್ಕೂ ಕಾರಣರಾಗುತ್ತಾರೆ……

50 ನೇ ವರ್ಷದ ನೆನಪಿನ ಆ ಘಟನೆ ಬಹುತೇಕ ಜನರ ಮನಸ್ಸಿನಿಂದ ಮರೆಯಾಗಿದೆ. ಅಂದಿನ ಹೋರಾಟಗಾರರಲ್ಲಿ ಅನೇಕರು ಇಂದು ಅಷ್ಟಾಗಿ ಸಕ್ರಿಯವಾಗಿ ಉಳಿದಿಲ್ಲ. ಕೆಲವರು ಮಾತ್ರ ಈಗಲೂ ಆ ಕಹಿ ದಿನಗಳನ್ನು ನೆನಪಿಸಿಕೊಂಡು ಬೆಚ್ಚುತ್ತಾರೆ. ಹಲವರು ಆ ಘಟನೆಯ ಮುಖಾಂತರವೇ ರಾಜಕೀಯ ಮುನ್ನಡೆಗೆ ಬಂದು ದೊಡ್ಡ ದೊಡ್ಡ ಹುದ್ದೆಗೂ ಏರುತ್ತಾರೆ…..

ತುರ್ತು ಪರಿಸ್ಥಿತಿ ಒಂದು ಪಾಠ ಮತ್ತು ಎಚ್ಚರಿಕೆ. 21 ತಿಂಗಳ ಆ ಭಯಂಕರ ಐತಿಹಾಸಿಕ ತಪ್ಪು ನಂತರ ನಲವತ್ತು ವರ್ಷಗಳವರೆಗೆ ಮರುಕಳಿಸುವ ಆತಂಕ ಅಷ್ಟಾಗಿ ಯಾರನ್ನು ಕಾಡಲಿಲ್ಲ. ಆದರೆ ಅದರ ಮುಂದಿನ ಅಂದರೆ ಈಗಿನ ನರೇಂದ್ರ ಮೋದಿಯವರ 11 ವರ್ಷಗಳ ಆಡಳಿತ ಆಗಾಗ ಪರೋಕ್ಷವಾಗಿ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ ಮತ್ತು ಇಂದಿರಾಗಾಂಧಿ ಆಡಳಿತದ ಕೆಲವು ಲಕ್ಷಣಗಳನ್ನು ಹೋಲುತ್ತದೆ ಎಂದು ಇತಿಹಾಸದ ಅಧ್ಯಯನಕಾರರು, ರಾಜಕೀಯ ಚಿಂತಕರು, ಮೋದಿಯವರ ಪ್ರಬಲ ವಿರೋಧಿಗಳು ಸಾಕಷ್ಟು ಉದಾಹರಣೆಗಳೊಂದಿಗೆ ಮಾತನಾಡುತ್ತಾರೆ……

ಅಂದಿನ ಆ ನೇರ ತುರ್ತು ಪರಿಸ್ಥಿತಿ ಮತ್ತು ಸರ್ಕಾರಗಳನ್ನು ಬೇಕಾಬಿಟ್ಟಿ ವಜಾ ಮಾಡುತ್ತಿದ್ದ ರೀತಿ ಈಗ ಇಲ್ಲದಿದ್ದರೂ ಅದೇ ರೀತಿಯ ಆದರೆ ಪರೋಕ್ಷವಾಗಿ ಸಂವಿಧಾನದ ಕಲಂಗಳನ್ನೇ ಉಪಯೋಗಿಸಿಕೊಂಡು ಚುನಾಯಿತ ಸರ್ಕಾರಗಳನ್ನು ಬೀಳಿಸುವುದು, ಇಡಿ, ಐಟಿ, ಸಿಬಿಐ ಮುಂತಾದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಚುನಾವಣಾ ಆಯೋಗ, ರಾಜಭವನ, ರಾಷ್ಟ್ರಪತಿಗಳು ಮತ್ತು ನ್ಯಾಯಾಂಗದ ಕೆಲವು ವಿಭಾಗಗಳಲ್ಲಿ ಒಂದಷ್ಟು ನಿಯಂತ್ರಣ ಪಡೆದು ವಿರೋಧಿಗಳನ್ನು ಹಣಿಯಲು ಉಪಯೋಗಿಸಿಕೊಳ್ಳುತ್ತಾರೆ ಎಂದು ಬಲವಾಗಿ ಆರೋಪಿಸಲಾಗುತ್ತಿದೆ……

ಇದು ನರೇಂದ್ರ ಮೋದಿಯವರಿಗೆ ಮಾತ್ರ ವಿಶೇಷವಾಗಿ ಅನ್ವಯಿಸುತ್ತದೆ. ಏಕೆಂದರೆ ಅದರ ಹಿಂದಿನ 40 ವರ್ಷಗಳ ಯಾವುದೇ ಪಕ್ಷದ ಪ್ರಧಾನಮಂತ್ರಿಗಳ ಮೇಲೂ ಈ ರೀತಿಯ ಆರೋಪ ಅಷ್ಟಾಗಿ ಕೇಳಿ ಬರಲಿಲ್ಲ……

ತುರ್ತು ಪರಿಸ್ಥಿತಿ ಎಂದರೆ ಬಹುತೇಕ ದೇಶದ ಪ್ರಜೆಗಳ ಎಲ್ಲಾ ಮೂಲಭೂತ ಹಕ್ಕುಗಳನ್ನು ಸರ್ಕಾರ ರದ್ದು ಪಡಿಸುತ್ತದೆ. ಯಾವುದೇ ವ್ಯಕ್ತಿಯನ್ನು ಕಾರಣ ನೀಡದೆ ವಿಚಾರಣೆಗೊಳಪಡಿಸಲು ಬಂಧಿಸಬಹುದು. ಮಾಧ್ಯಮಗಳಿಗೇ ಆಗಲಿ ಅಥವಾ ಇನ್ಯಾವುದೇ ಸ್ವಾಯುತ್ತ ಸಂಸ್ಥೆಗಳಿಗೆ ಇರುವ ಸ್ವಾತಂತ್ರ್ಯವನ್ನು ಸಂಪೂರ್ಣ ನಿರ್ಬಂಧಿಸಲಾಗುತ್ತದೆ. ಕೇವಲ ಸರ್ಕಾರಕ್ಕೆ ಮಾತ್ರ ಸಂಪೂರ್ಣ ಪರಮಾಧಿಕಾರವಿರುತ್ತದೆ. ಬಹುತೇಕ ಸರ್ವಾಧಿಕಾರಿ ಆಡಳಿತಕ್ಕೆ ಅತ್ಯಂತ ಸಮೀಪ ಆಡಳಿತ ವ್ಯವಸ್ಥೆ. ಅದು ತಾತ್ಕಾಲಿಕ ಮತ್ತು ಸಂಸತ್ತಿನ ಹಾಗೂ ರಾಷ್ಟ್ರಪತಿಗಳ ಅನುಮೋದನೆ ಪಡೆದಿರಬಹುದು. ಅದರೂ ಪ್ರಜಾಪ್ರಭುತ್ವಕ್ಕೆ ಅದು ದ್ರೋಹ ಬಗೆದಂತೆ…..

ಆದ್ದರಿಂದ ಯಾವುದೇ ಕಾರಣಕ್ಕೂ ಆಗಿನ ತುರ್ತು ಪರಿಸ್ಥಿತಿಯನ್ನು ಸಮರ್ಥಿಸುವುದು ಒಳ್ಳೆಯದಲ್ಲ. ನೇರ ಮಾತುಗಳಲ್ಲೇ ಅದನ್ನು ಖಂಡಿಸಬೇಕು. ಹಾಗೆಯೇ ಈಗಿನ ಒಂದು ರೀತಿಯ ಅಘೋಷಿತ ಸರ್ವಾಧಿಕಾರಿ ಮನೋಭಾವವನ್ನು ಸಹ ಅದೇ ಧ್ವನಿಯಲ್ಲಿ ಟೀಕಿಸಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮದು ಪಕ್ಷಪಾತ ದೃಷ್ಟಿಕೋನದ ನಿಲುವಾಗಿರುವ ಸಾಧ್ಯತೆ ಇದೆ……

ಭಾರತದಂತಹ ಬೃಹತ್ ವೈವಿಧ್ಯಮಯ ದೇಶದಲ್ಲಿ ಸಂವಿಧಾನಾತ್ಮಕ ನೀತಿ ನಿಯಮಗಳನ್ನು ಏಕಪ್ರಕಾರವಾಗಿ ರೂಪಿಸುವುದು ಅಷ್ಟು ಸುಲಭವಲ್ಲ. ಬಾಬಾ ಸಾಹೇಬ್ ಅವರಂತಹ ಅದ್ಭುತ ಪ್ರತಿಭೆಯಿಂದ ಮಾತ್ರ ಈ ರೀತಿಯ ಸಂವಿಧಾನ ರಚಿಸಲು ಸಾಧ್ಯವಾಯಿತು. ಅವರು ಸಹ ತುಂಬಾ ದೂರ ದೃಷ್ಟಿಯಿಂದ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲವು ಕಾನೂನುಗಳನ್ನು ವಿಮಾನದ ಪ್ಯಾರಾಚೂಟ್ ರೀತಿಯಲ್ಲಿ ಅತ್ಯಂತ ತುರ್ತು ಮತ್ತು ಅನಿವಾರ್ಯ ಸಂದರ್ಭದಲ್ಲಿ ರಕ್ಷಣೆಗಾಗಿ ಮಾತ್ರ ಎಂದು ಒಂದು ವಿವೇಚನಾ ಅಧಿಕಾರ ಆಡಳಿತದ ಮುಖ್ಯಸ್ಥರಿಗೆ ಇರಲಿ ಎನ್ನುವ ಸದಾಶಯದಿಂದ ಸಂವಿಧಾನದಲ್ಲಿ ಸೇರಿಸಲಾಯಿತು……

ಆದರೆ ಬಾಬಾ ಸಾಹೇಬರೇ ಸ್ವತಃ ಹೇಳಿದಂತೆ ಸಂವಿಧಾನ ಎಷ್ಟೇ ಬಲವಾದ ನೀತಿ ನಿಯಮಗಳನ್ನು ಹೊಂದಿದ್ದರೂ ಅದನ್ನು ಜಾರಿಗೆ ತರುವವರು ಪ್ರಾಮಾಣಿಕರಲ್ಲದಿದ್ದರೆ ಸಂವಿಧಾನದ ಆಶಯ ಈಡೇರುವುದು ಸಾಧ್ಯವಿಲ್ಲ. ಈಗಲೂ ಅನೇಕ ಘಟನೆಗಳನ್ನು ನೋಡಿದಾಗ ಆ ಮಾತು ನಿಜವೆನಿಸುತ್ತದೆ. ನೂರು ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ಮಹೋನ್ನತ, ಉದಾತ್ತ ಆಶಯ ಇಂದು ನಿಜವಾಗಿಯೂ ನಿರಪರಾಧಿಗೆ ಬಿಡುಗಡೆಯಾಗುತ್ತದೋ ಇಲ್ಲವೋ ಆದರೆ ಅಪರಾಧಿಗಳು ಮಾತ್ರ ತಪ್ಪಿಸಿಕೊಂಡು ಹೋಗಲು ಈ ಒಂದು ವಿವೇಚನಾ ಅಧಿಕಾರವು ಸಹ ಮುಖ್ಯ ಕಾರಣವಾಗಿದೆ. ಅಷ್ಟು ಖಚಿತ ಸಾಕ್ಷಿಗಳು ಸಿಗುವುದು ಕಷ್ಟ ಮತ್ತು ನಿಷ್ಣಾತ ವಕೀಲರು ಅದರ ಲಾಭ ಪಡೆಯುತ್ತಾರೆ…..

ಆದ್ದರಿಂದಲೇ ಪ್ರತಿಬಾರಿಯೂ ಮೌಲ್ಯಗಳ ಬಗ್ಗೆ ಮತ್ತೆ ಮತ್ತೆ ಪ್ರಸ್ತಾಪ ಮಾಡಲಾಗುತ್ತದೆ. ನೈತಿಕತೆ ಮತ್ತು ಮೌಲ್ಯಗಳಿಲ್ಲದ ಯಾವ ಜಾತಿ, ಧರ್ಮ, ಭಾಷೆ, ಕಾನೂನು, ವ್ಯಕ್ತಿ ಎಲ್ಲವೂ ಬಹುತೇಕ ವಿಫಲವಾದಂತೆ ಮತ್ತು ಮೌಲ್ಯಗಳ ದುರುಪಯೋಗವಾದಂತೆ ಎಂದು ಎಚ್ಚರಿಸುತ್ತಾ…….

ನಮ್ಮೆಲ್ಲರ ನಿಜವಾದ ಸ್ವಾತಂತ್ರ್ಯ, ಸಮಾನತೆ, ಅಭಿವೃದ್ಧಿ, ಭದ್ರತೆ, ನೆಮ್ಮದಿ, ಕ್ರಿಯಾತ್ಮಕತೆ, ಭವಿಷ್ಯ ಎಲ್ಲವೂ ಅಡಗಿರುವುದು ಪ್ರಜಾಪ್ರಭುತ್ವದ ಈ ಸಂವಿಧಾನದ ಒಡಲಿನಲ್ಲಿ. ಅದನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ಜವಾಬ್ದಾರಿ ಎಲ್ಲಾ ಭಾರತೀಯರದು ಎಂದು ನೆನಪಿಸಿಕೊಳ್ಳುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

45 minutes ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

4 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

4 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

15 hours ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

16 hours ago

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಿಂದ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಕೋಲಾರ ಇವರ ಸಹಯೋಗದಲ್ಲಿ ರೇಮಂಡ್ ಕಂಪನಿ ಸಮೂಹದ ಸಿಲ್ವರ್ ಸ್ಪಾರ್ಕ್…

16 hours ago