Categories: ಲೇಖನ

ತಿಳಿವಳಿಕೆ ನಡವಳಿಕೆಯಾದಾಗ……

ಪ್ರಶ್ನೆ – ಉತ್ತರ –

ನಮ್ಮ ಆತ್ಮಸಾಕ್ಷಿ…….

ಅಂಕಲ್,
” ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ” ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?

ಆಂಟಿ,
” ಮದ್ಯಪಾನದಿಂದ ಮನೆಗಳು ಸರ್ವನಾಶ ಆಗುತ್ತದೆ. ದೇಹ ರೋಗಗಳ ಗೂಡಾಗುತ್ತದೆ ” ಎಂದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಹೇಳುತ್ತಾರೆ. ಆದರೂ ಪ್ರತಿ ಬೀದಿಗಳಲ್ಲೂ ಬಾರುಗಳಿವೆ.
ಏಕೆ ?

ಅಣ್ಣ,
ನಮ್ಮ ದೇಶದಲ್ಲಿ ಬಹಳಷ್ಟು ವಿನಾಶಕಾರಿಯಾದ ಮತ್ತು ಕೆಲ ದೇಶಗಳಲ್ಲಿ ನಿಷೇಧಿಸಲಾದ ಆರೋಗ್ಯಕ್ಕೆ ಮಾರಕವಾದ ಔಷಧಿಗಳನ್ನು ಮೆಡಿಕಲ್ ಸ್ಟೋರುಗಳಲ್ಲಿ ಈಗಲೂ ಮಾರಲಾಗುತ್ತಿದೆ. ಏಕೆ ಯಾರೂ ಏನೂ ಮಾಡುತ್ತಿಲ್ಲ.

ಅಕ್ಕ,
ತನ್ನದಲ್ಲದ ಇನ್ನೊಬ್ಬರ ಹಣ ಆಸ್ತಿ ಹೇಸಿಗೆಗೆ ಸಮಾನ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಆದರೆ ಭ್ರಷ್ಟಾಚಾರ ಇಲ್ಲದ ಕ್ಷೇತ್ರವೇ ಇಲ್ಲ. ಹಾಗಾದರೆ ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿಲ್ಲವೇ ?

ಗುರುಗಳೇ,
ಆಹಾರದ ಅಡುಗೆ ಎಣ್ಣೆಯಲ್ಲಿ ಪೆಟ್ರೋಲಿಯಂ ಅಂಶ ಬೆರೆಸಲಾಗುತ್ತದೆ ಎಂದು ಕೇಂದ್ರ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೂ ಅದು ನಿರಂತರವಾಗಿ ನಡೆಯುತ್ತಿದೆ. ಸರ್ಕಾರವೇ ಅದರಲ್ಲಿ ಭಾಗಿಯಾಗಿದೆಯೇ…..

ಅಮ್ಮ,
ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ದೇವರು ನೋಡುತ್ತಲೇ ಇರುತ್ತಾನೆ. ಆತನಿಗೆ ತಿಳಿಯದಂತೆ ಇಲ್ಲಿ ಏನೂ ನಡೆಯುವುದಿಲ್ಲ ಎಂದು ಹೇಳಿದೆಯಲ್ಲ. ಆದರೆ ಇಲ್ಲಿ ಪ್ರತಿನಿತ್ಯ ಕೊಲೆ ಸುಲಿಗೆ ವಂಚನೆ ಅತ್ಯಾಚಾರ ನಡೆಯುತ್ತಲೇ ಇದೆಯಲ್ಲ. ಹಾಗಾದರೆ ದೇವರು ಇರುವುದು ಸುಳ್ಳೇ ?

ಅಪ್ಪ,
ವಿದ್ಯೆ ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡುತ್ತದೆ ಎಂದು ಹೇಳಿದೆ. ಈಗ ಬಹುತೇಕ ಎಲ್ಲರೂ ವಿದ್ಯಾವಂತರೆ. ಆದರೆ ಸಂಸ್ಕಾರ ಮಾತ್ರ ಮಾಯವಾಗಿದೆ. ಹಾಗಾದರೆ ನೀವು ಹೇಳಿದ್ದು ಸುಳ್ಳೇ ?

ಅಜ್ಜ ಅಜ್ಜಿ,
ಪ್ರತಿ ನ್ಯಾಯಾಲಯದ ಪ್ರತಿ ಕೇಸಿನಲ್ಲೂ ಪ್ರತಿ ಕಕ್ಷಿದಾರನೂ
” ನಾನು ಸತ್ಯವನ್ನೇ ಹೇಳುತ್ತೇನೆ. ಸತ್ಯವಲ್ಲದೆ ಬೇರೇನನ್ನೂ ಹೇಳುವುದಿಲ್ಲ ” ಎಂದು ಪ್ರಮಾಣ ಮಾಡುತ್ತಾನೆ. ಆದರೆ ಸುಳ್ಳು ಹೇಳುವುದೇ ಹೆಚ್ಚು. ಹೀಗೇಕೆ ?

ಆ ಬಾಲಕನಿಗೆ ಸರಿಯಾದ ಉತ್ತರ ಹೇಳಬೇಕಿದೆ.

ಇಲ್ಲ,
ಸಮಾಜ ಇರುವುದೇ ಹೀಗೆ. ನೀನು ಇನ್ನೂ ಚಿಕ್ಕವನು. ನಿನಗೆ ಅರ್ಥವಾಗುವುದಿಲ್ಲ. ಇದು ಅವರವರ ಪಾಪ ಕರ್ಮದ ಫಲ, ಹಾಗೆ ಹೀಗೆ ಎಂದು ಮತ್ತೆ ಸುಳ್ಳಿನ ಭ್ರಮಾಲೋಕದ ಪಲಾಯನವಾದದ ಉತ್ತರ ಬೇಡ. ಆತ್ಮಸಾಕ್ಷಿಯ ವಾಸ್ತವ ನೆಲೆಯ ಉತ್ತರ ಹೇಳಬೇಕಿದೆ.

ಬಹುಶಃ ಈ ಪ್ರಶ್ನೆಗಳಿಗೆ ನಿಜವಾದ ಉತ್ತರ ಸಿಕ್ಕಲ್ಲಿ ನಮ್ಮ ಜನರ ಜೀವನಮಟ್ಟ – ಸಮಾಜದ ನೆಮ್ಮದಿಯ ಮಟ್ಟ – ವ್ಯಕ್ತಿತ್ವದ ಉನ್ನತ ಮಟ್ಟ ಸಾಧ್ಯವಾಗಬಹುದು. ಇದನ್ನು ಸಮಷ್ಠಿ ಪ್ರಜ್ಞೆಯ ದೃಷ್ಟಿಯಿಂದ ನೋಡಬೇಕಿದೆ‌.

ತಿಳಿವಳಿಕೆ ನಡವಳಿಕೆಯಾದಾಗ……

ಒಳ್ಳೆಯತನ ಉದಾಹರಣೆಯಾಗದೆ ಸಹಜವಾದಾಗ……..

ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು
ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ.

ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ.

ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮನೆಯವರು ಆತನ, ಎಲ್ಲಾ ಅಂಗಾಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ.

ಅಂಗವಿಕಲ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ವಿದ್ಯಾವಂತ ಯುವಕನೊಬ್ಬ ಆಕೆಗೆ ಸುಂದರ ಬದುಕು ನೀಡುತ್ತಾನೆ.

ಅಧಿಕಾರದ ಅನೇಕ ಹಂತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು,
ಈಗಲೂ ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು ,
ಈಗಲೂ ಸರ್ಕಾರಿ ಬಸ್ಸುಗಳಲ್ಲೇ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ.

ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು, ಬಹಳ ಸರಳವಾಗಿ ಮಂತ್ರ – ಮಾಂಗಲ್ಯದ ರೀತಿಯಲ್ಲಿ ಮಾಡಿದರು.

ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು,
ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ.

ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು ,
ಪರೋಕ್ಷವಾಗಿಯೂ ಲಂಚ ಮುಟ್ಟದ ಶುದ್ಧ ಹಸ್ತರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ.

ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈಗಿನ ಸಮಾಜದಲ್ಲಿಯೇ.

ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು ಮಾತ್ರ.

ನಮ್ಮ ಆಶಯ ಬಹುತೇಕ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು.

ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು.

ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು.

ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ,

ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ,

ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ,

ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ.

ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ.

ಆಗ ಎಲ್ಲವೂ ಸಾಧ್ಯ.

ಕೇವಲ ಮಾತುಗಳು, ಭಾಷಣಗಳು, ಬರಹಗಳು, ಚಿಂತನೆಗಳಿಂದ ಮಾತ್ರ ಸಾಧ್ಯವಿಲ್ಲ.

ಬದುಕು ಈ ಎಲ್ಲವನ್ನೂ ಮೀರಿದ್ದು………….

” ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ” ವಾಸ್ತವ ಪ್ರಜ್ಞೆಗೆ ಮರಳಬೇಕಿದೆ. ಭ್ರಮೆಗಳನ್ನು – ಮುಖವಾಡಗಳನ್ನು ಕಳಚಬೇಕಿದೆ.
ಆಗ ಮಾತ್ರ ನಮ್ಮಲ್ಲಿ, ಸಮಾಜದಲ್ಲಿ ನಾಗರಿಕ ಪ್ರಜ್ಞೆ ಮೂಡಲು ಸಾಧ್ಯ.
ಹಾಗಾಗಲಿ ಎಂದು ನಿರೀಕ್ಷಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಕ್ರಮ ವಲಸೆ ತಪ್ಪು…. ದಯವಿಟ್ಟು ಸಕ್ರಮ ಬದುಕು ನಮ್ಮದಾಗಲಿ…..

ಯಾವುದು ನ್ಯಾಯ...... ಅಕ್ರಮ ವಲಸಿಗರು, ಬುಲ್ಡೋಜರ್ ಸಂಸ್ಕೃತಿ, ಭ್ರಷ್ಟ ಆಡಳಿತ ವ್ಯವಸ್ಥೆ, ಕೆಟ್ಟ ರಾಜಕೀಯ, ತಲೆಬುಡವಿಲ್ಲದ ಗಾಳಿ ಸುದ್ದಿಗಳು, ವಿವೇಚನೆಯಿಲ್ಲದ…

6 hours ago

ಹೊಸ ವರ್ಷ ದಿನದಂದೇ ದೊಡ್ಡಬಳ್ಳಾಪುರದಲ್ಲಿ ಯುವಕನ ಕೊಲೆ…? ನ್ಯೂ ಇಯರ್ ಸೆಲೆಬ್ರೇಷನ್ ನೆಪದಲ್ಲಿ ರೂಮಿನಲ್ಲಿ ಎಣ್ಣೆ ಪಾರ್ಟಿ ಅರೆಂಜ್: ನ್ಯೂ ಇಯರ್ ಪಾರ್ಟಿ ಮಾಡೋಣ ಬಾ ಎಂದು ಫ್ರೆಂಡ್ನ ಕರೆಸಿಕೊಂಡು ಜೀವ ತೆಗೆದ್ನಾ ಆಸಾಮಿ….?

ಒರಿಸ್ಸಾದಿಂದ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಕೆಲಸಕ್ಕೆಂದು ಬಂದು ಹೊಸ ವರ್ಷ ದಿನದಂದೇ ತನ್ನ ಸ್ನೇಹಿತನಿಂದಲೇ ಕೊಲೆಯಾದ್ನಾ ಯುವಕ....? 2025ರ ಡಿಸೆಂಬರ್ 31…

18 hours ago

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ 300ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಪೂರ್ಣ- ನೇತ್ರ ತಜ್ಞ ಡಾ. ಅರುಣ್ ಹನುಮಂತರಾಯ

ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ 2025ನೇ ಸಾಲಿನಲ್ಲಿ 300ಕ್ಕೂ ಹೆಚ್ಚು ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಮೂಲಕ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳಲ್ಲಿ…

19 hours ago

800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು

ಇಂದು ಹೊಸ ವರ್ಷ ಹಿನ್ನೆಲೆ 800 ವರ್ಷಗಳ ಇತಿಹಾಸಯುಳ್ಳ ಆವತಿ ತಿಮ್ಮರಾಯಸ್ವಾಮಿ ಬೆಟ್ಟದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ…

21 hours ago

12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ: ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯ- ಸಿಎಂ ಸಿದ್ದರಾಮಯ್ಯ

ಹೊಸ ವರ್ಷದ ಮೊದಲ ದಿನವಾದ ಇಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದು ನಮ್ಮ ಪದ್ಧತಿ. ಹಿಂದೂ ಪದ್ಧತಿಯಲ್ಲಿ ಯುಗಾದಿ ಹೊಸ ವರ್ಷವಾಗಿದ್ದರೂ,…

22 hours ago

ಬೆಂ. ಗ್ರಾ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ಅಧಿಕಾರ ಸ್ವೀಕಾರ

ಇಂದು ಬೆಂಗಳೂರಿನ ಎಸ್ಪಿ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಂದ್ರಕಾಂತ್ ಎಂ.ವಿ ಅಧಿಕಾರ ವಹಿಸಿಕೊಂಡಿದ್ದಾರೆ.... ​ಬೆಂಗಳೂರು…

22 hours ago