ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳ ಸರಣಿ: ಜನರಲ್ಲಿ ಆತಂಕ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಮುಂದುವರಿದಿದ್ದು, ಎರಡು ದಿನಗಳ ಅಂತರದಲ್ಲಿ ಎರಡು ಮನೆಗಳ ಕಳ್ಳತನ ಹಾಗೂ ಬೈಕ್ ಕಳವು ಯತ್ನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ತಲೆದಿಂಬು, ಮಂಚ, ಹಾಸಿಗೆ, ಟಿವಿ ಕಳವು

ತೂಬಗೆರೆ ಹೋಬಳಿಯ ಎಸ್. ನಾಗೇನಹಳ್ಳಿ ಬಳಿ ಎರಡು ದಿನಗಳ ಹಿಂದೆ ಮನೆಗೆ ನುಗ್ಗಿದ ಕಳ್ಳರು ತಲೆದಿಂಬು, ಮಂಚ, ಹಾಸಿಗೆ, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೈಕ್ ಕದಿಯಲು ಯತ್ನ

ಇದಾದ ಬಳಿಕ ಕಳೆದ ರಾತ್ರಿ ತೂಬಗೆರೆಯಲ್ಲಿ ಪಂಚಾಯಿತಿ ಸಮೀಪ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ ಅನ್ನು ಕದ್ದು ತಳ್ಳಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರ ಗಮನಕ್ಕೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರು ಗಮನಿಸುತ್ತಿರುವುದನ್ನು ಕಂಡು ಬೈಕ್‌ ಅನ್ನು ಸ್ಥಳದಲ್ಲೇ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

32 ಗ್ರಾಂ ಚಿನ್ನಾಭರಣ ಕಳವು

ಇದೇ ವೇಳೆ ತಾಲ್ಲೂಕಿನ ದೊಡ್ಡರಾಯಪ್ಪನಹಳ್ಳಿಯ ರಾಜಶೇಖರ್ ಅವರ ತೋಟದ ಮನೆಯಲ್ಲಿ ಸೋಮವಾರ ರಾತ್ರಿ ಸುಮಾರು 32 ಗ್ರಾಂ ಚಿನ್ನಾಭರಣ ಕಳವು ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ರಾಜಶೇಖರ್ ಅವರು ರಾತ್ರಿ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕುವುದನ್ನು ಮರೆತಿರುವುದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.

ತಾಲೂಕಿನಲ್ಲಿ ಸತತವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸಿ, ಕಳ್ಳತನ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!