ಡಿಕ್ರಾಸ್-ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ಬೈಕ್ ಅಪಘಾತದಲ್ಲಿ ಸವಾರ ದುರ್ಮರಣ ಪ್ರಕರಣ: ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಏ.27ರಂದು ದೊಡ್ಡಬಳ್ಳಾಪುರ ನಗರದ ಡಿಕ್ರಾಸ್-ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ನಡೆದಿತ್ತು. ಈ ಭೀಕರ ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ…

ಮೃತನನ್ನು ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆ ನಿವಾಸಿ ರಾಜು (26) ಎಂದು ಗುರುತಿಸಲಾಗಿದ್ದು, ಈತ ಬೈಕಿನಲ್ಲಿ ಹಳೇ ಬಸ್ ನಿಲ್ದಾಣ ಕಡೆಯಿಂದ ಡಿಕ್ರಾಸ್ ಕಡೆಗೆ ಹೆಲ್ಮೆಟ್ ಧರಿಸದೇ ಅತಿವೇಗದಿಂದ ಬಂದು ನಿಂತಿದ್ದ ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಟಾಟಾ ಏಸ್ ಅಡಿಯಲ್ಲಿ ದೇಹ ಸಿಲುಕಿಕೊಂಡರೆ, ಬೈಕ್ ಒಂದಷ್ಟು ಮೀಟರ್ ದೂರದವರೆಗೆ ಜಾರಿ ಹೋಗಿದೆ…

ಬೈಕ್ ಸವಾರನ ಸಾವಿಗೆ ಕಾರಣ ಹೆಲ್ಮೆಟ್ ಧರಿಸದೇ ಅತಿವೇಗವಾಗಿ ಬೈಕ್ ಚಾಲನೆ ಮಾಡಿರುವ ಅಂಶ ಮೇಲ್ನೋಟಕ್ಕೆ ಕಂಡುಬಂದಿದೆ…

ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಭರಸಕ್ಕೆ ಬೈಕ್ ಕೆಳಗೆ ಬಿದ್ದಿದ್ದು, ಬಿದ್ದ ತಕ್ಷಣ ಹೆಲ್ಮೆಟ್ ಧರಿಸದ ಕಾರಣ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿತ್ತು.‌ ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.

ಬೈಕ್ ಚಾಲನೆಯ ವೇಳೆ ಕೆಲವೊಮ್ಮೆ ನಾವು ಸಣ್ಣ ಸಂಗತಿಗಳನ್ನೂ ನಿರ್ಲಕ್ಷಿಸುತ್ತೇವೆ. ಆದರೆ, ಈ ಸಂಗತಿಗಳೇ ಕೆಲವೊಮ್ಮೆ ಅಪಘಾತಕ್ಕೂ ಕಾರಣವಾಗುತ್ತವೆ. ಹೀಗಾಗಿ ವಾಹನ ಚಾಲನೆಯ ವೇಳೆ ನಮ್ಮ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಹೆಲ್ಮೆಟ್‌ಗಳು ಬೈಕ್ ಸವಾರರಿಗೆ ಪ್ರಮುಖ ಜೀವರಕ್ಷಕ ಸಾಧನವೂ ಹೌದು. ಹೀಗಾಗಿ ಯಾವಾಗಲೂ ಗುಣಮಟ್ಟದ ಹೆಲ್ಮೆಟ್ ಧರಿಸಿ. ವೇಗದ ಮೇಲೆ ನಿಗಾ ಇರಲಿ‌. ಹಾಗೂ ಯಾವುದೇ ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮ‌ಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ….

Leave a Reply

Your email address will not be published. Required fields are marked *

error: Content is protected !!