Categories: ಲೇಖನ

ಡಾಕ್ಟರ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು

ಏಪ್ರಿಲ್ ಧಮಾಕಾ…….

ಕನ್ನಡ ಸಿನಿಮಾದ ಡಾಕ್ಟರ್ ರಾಜಕುಮಾರ್ ಏಪ್ರಿಲ್ 24, ಇಂಗ್ಲೀಷ್ ಸಾಹಿತ್ಯದ ವಿಲಿಯಂ ಶೇಕ್ಸ್ಪಿಯರ್ ಏಪ್ರಿಲ್ 23,
ವಿಶ್ವ ಪುಸ್ತಕ ದಿನ ಏಪ್ರಿಲ್ 23….

ಹಾಗೆಯೇ ಕುತೂಹಲಕ್ಕಾಗಿ ಒಂದಷ್ಟು ಏಪ್ರಿಲ್ ಸಡಗರದ ಮಾಹಿತಿ…

ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಚಾರ್ಲಿ ಚಾಪ್ಲಿನ್, ಲಿಯೋನಾರ್ಡ್ ಡಾ ವಿಂಚಿ,
ಎರಡನೇ ರಾಣಿ ಎಲಿಜಬೆತ್ ವಿಲಿಯಂ ವರ್ಡ್ಸ್ ವರ್ತ್,
ವಿಶ್ವ ಆರೋಗ್ಯ ದಿನ, ವರ್ಲ್ಡ್ ಹೆರಿಟೇಜ್ ಡೇ, ವಿಶ್ವ ಭೂ ದಿನ ಇತ್ಯಾದಿ ಇತ್ಯಾದಿ…….

ಡಾಕ್ಟರ್ ರಾಜಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಹೇಳುತ್ತಾ………..

ರಾಜಕುಮಾರನಾದ ಮುತ್ತುರಾಜ……….

ಒಬ್ಬ ಜನಪ್ರಿಯ ವ್ಯಕಿಯ ವ್ಯಕ್ತಿತ್ವವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಸುವುದು ತುಂಬಾ ಕಷ್ಟ. ಜನರ ಕಾಲ್ಪನಿಕ ಲೋಕವೇ ಬೇರೆ. ಅದರಲ್ಲೂ ಸಿನಿಮಾ ನಟನನ್ನು ರಂಗುರಂಗಿನ ಬೆಳಕಿನಲ್ಲಿ, ಬಣ್ಣ ಬಣ್ಣದ ಚಿತ್ತಾರದಲ್ಲಿ, ವಿವಿಧ ರೀತಿಯ ರಮ್ಯ ಪಾತ್ರಗಳಲ್ಲಿ, ದೇವ ಮಾನವ – ಸೂಪರ್ ಮ್ಯಾನ್ ಶೈಲಿಯಲ್ಲಿ ಜನರ ಭಾವನೆಗಳ ಮೇಲೆ ನಾಲ್ಕೈದು ದಶಕಗಳ ಕಾಲ ಸವಾರಿ ಮಾಡಿರುವ ರಾಜ್ ಕುಮಾರ್ ಅವರನ್ನು ಈಗಿನ ತಲೆಮಾರಿಗೆ ವಿವರಿಸುವುದು ಸ್ವಲ್ಪ ಕಷ್ಟ……..

ಬೆರಳ ತುದಿಯಲ್ಲಿ ಒತ್ತಿ ವಿಶ್ವದ ಎಲ್ಲವನ್ನೂ ನೋಡುವ ಸೌಲಭ್ಯಗಳು ಈಗ ಇರುವ ಸಂದರ್ಭದಲ್ಲಿ……

ಅಂದು ಬಡತನದ ಜೊತೆಗೆ ಮನರಂಜನೆಯ ಬಹುಮುಖ್ಯ ಮಾಧ್ಯಮವಾಗಿದ್ದ ಸಿನಿಮಾದ ಪ್ರತಿ ಹಾಡು, ಸಂಭಾಷಣೆ, ದೃಶ್ಯಗಳು ಮನಸ್ಸಿನೊಳಗೆ ಇಳಿದು ಮತ್ತೆ ಹೊರಬಂದು ಬದುಕಿನಲ್ಲೂ ಪ್ರವೇಶಿಸುತ್ತಿದ್ದವು. ನೋಡುಗರೇ ಪಾತ್ರಗಳಾಗಿ ತಮ್ಮನ್ನು ಕಲ್ಪಸಿಕೊಳ್ಳುತ್ತಿದ್ದರು…….

ತಂದೆ ತಾಯಿ ಅಕ್ಕ ತಮ್ಮ ಅಣ್ಣ ತಂಗಿ ಮುಂತಾದ ರಕ್ತ ಸಂಬಂಧಗಳು, ಪ್ರೀತಿ ಪ್ರೇಮ ಪ್ರಣಯ ಹಾಸ್ಯ ಭಕ್ತಿ ವಿರಹ ಭಯ ಭೀಭತ್ಸ ಮುಂತಾದ ನವರಸಗಳ ಸರಮಾಲೆಯೇ ದೃಶ್ಯಗಳಾಗಿ ಜೋಡಣೆಗೊಂಡು ಆಗಿನ ಸಾಮಾಜಿಕ ಜನಜೀವನವನ್ನು ಪ್ರಭಾವಿಸುತ್ತಿದ್ದವು……

ಇಂತಹ ವಾತಾವರಣದಲ್ಲಿ ಬೆಳೆದು ಬಂದ ವ್ಯಕ್ತಿಯೇ ಅಭಿಮಾನಿಗಳಿಂದ
” ಅಣ್ಣಾವ್ರು ” ಎಂದು ಕರೆಸಿಕೊಳ್ಳುವ ‌ಡಾಕ್ಟರ್ ರಾಜ್ ಕುಮಾರ್…….

ಆರಾಧನಾ ಭಾವದಿಂದ ಅಥವಾ ಪೂರ್ವಾಗ್ರಹ ‌ದೃಷ್ಟಿಕೋನದಿಂದ ಅವರನ್ನು ನೋಡಿದರೆ ಅದು ಅವಾಸ್ತವವಾಗಬಹುದು. ಅವರ ಹತ್ತಿರದ ಸಂಬಂಧಿಗಳು, ಅವರ ಜೊತೆಗಾರರು, ಅವರಿಂದ ಲಾಭ ಪಡೆದವರು ಅವರನ್ನು ಚಿತ್ರಿಸುವುದಕ್ಕಿಂತ ಅವರ ‌ಸಿನಿಮಾ ನೋಡಿ, ಮಾಧ್ಯಮಗಳ ಸಂದರ್ಶನ ನೋಡಿ, ಸಭೆ ಸಮಾರಂಭಗಳಲ್ಲಿ ಭಾಷಣ ಕೇಳಿ, ಅವರು ಬಗ್ಗೆ ಇತರರು ಬರೆದ ಪುಸ್ತಕ ಓದಿ ಅವರನ್ನು, ಅವರ ಸಾಧನೆಯ ಆಧಾರದ ಮೇಲೆ ನೋಡಬೇಕಿದೆ.‌….

ಕನ್ನಡ ಭಾಷೆ, ಸಿನಿಮಾ, ಸಂಸ್ಕೃತಿಗೆ ಅವರ ಕೊಡುಗೆ ಏನು ಎಂಬುದನ್ನು ಗಮನಿಸಬೇಕಿದೆ. ಅವರ ಸಾರ್ವಜನಿಕ ನಡವಳಿಕೆಗಳು ಎಷ್ಟು ಆದರ್ಶಪ್ರಾಯವಾದು ಎಂಬುದನ್ನು ನೋಡಬೇಕಿದೆ. ಒಂದು ತಲೆಮಾರಿನ ಮೇಲೆ ಅವರ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕಿದೆ……

ಜನಪ್ರಿಯತೆಯ ದೃಷ್ಟಿಯಲ್ಲಿ ಕನ್ನಡ ನಾಡಿನಲ್ಲಿ ಅತ್ಯಂತ ಹೆಚ್ಚು ಎತ್ತರಕ್ಕೆ ಏರಿದ್ದ ವ್ಯಕ್ತಿ ರಾಜ್ ಕುಮಾರ್. ಅವರ ಹುಟ್ಟು, ಸಾವು, ಬಾಲ್ಯ, ಆರಂಭದ ದಿನಗಳು, ನಟಿಸಿದ ಸಿನಿಮಾಗಳು, ಪ್ರಶಸ್ತಿಗಳು, ಮಕ್ಕಳು, ಸಂಸಾರ, ಹೋರಾಟ ಕುರಿತ ಎಲ್ಲಾ ಮಾಹಿತಿಗಳು ಈಗಾಗಲೇ ಅನೇಕ ಪುಸ್ತಕಗಳಲ್ಲಿ ದಾಖಲಾಗಿದೆ. ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ಮಾಧ್ಯಮಗಳಲ್ಲಿ ಚರ್ಚಿಸಲಾಗಿದೆ.
ಅದರ ಭಾಗವಾಗಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಸಣ್ಣ ಅಭಿಪ್ರಾಯ…..

ಕರ್ನಾಟಕದ ಕನ್ನಡ ಮಣ್ಣಿನ ಯಾರಾದರೂ ಒಬ್ಬ ಅತ್ಯಂತ ಜನಪ್ರಿಯ ಅಥವಾ ಪ್ರಸಿದ್ಧ ಅಥವಾ ಸಾಧಕ ಅಥವಾ ಅಧಿಕಾರಸ್ಥ ವ್ಯಕ್ತಿಗಳ ಸಂಪೂರ್ಣ ಜೀವನ ವೃತ್ತಾಂತವನ್ನು ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲಿಸಿ
” ಹಳ್ಳಿ ಹೈದ ”
ಎಂಬ ಅನ್ವರ್ಥನಾಮಕ್ಕೆ ಸೂಕ್ತ ವ್ಯಕ್ತಿತ್ವದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದರೆ ಅದು ಮುತ್ತುರಾಜನೆಂಬ ಡಾ. ರಾಜ್ ಕುಮಾರ್………..

ನೀವು ಹೇಗೇ ನೋಡಿ, ಹುಟ್ಟಿನಿಂದ ಸಾಯುವತನಕ ಅವರ ಭಾಷೆ, ದೇಹಚಲನೆ, ಉಡುಗೆ ತೊಡುಗೆ, ಊಟ, ಸಾಂದರ್ಭಿಕ ನಿರ್ಧಾರಗಳು ಈ ನೆಲದ ಅಪ್ಪಟ ಮಣ್ಣಿನ ಸೊಗಡಿನ ಗ್ರಾಮೀಣ ಪರಿಸರದ ಹಳ್ಳಿ ಹೈದನಂತೆಯೇ ಕಾಣುತ್ತಾರೆ. ಕೆಲವೊಂದು ಶಿಷ್ಟಾಚಾರದ ಹೊರತಾಗಿಯೂ ಅವರು ಅದನ್ನು ಉಳಿಸಿಕೊಂಡಿದ್ದರು…..

ಇನ್ನೂ ಸೂಕ್ಷ್ಮವಾಗಿ ಗಮನಿಸಿದರೆ,
ಎಷ್ಟೋ ಇಲ್ಲಿನ ಮಣ್ಣಿನ ಮಕ್ಕಳು ಬೆಳೆಯುತ್ತಾ ರೈತ ನಾಯಕರೋ, ರಾಜಕಾರಣಿಗಳೋ, ಕ್ರೀಡಾಪಟುಗಳೋ, ವಿಜ್ಞಾನಿಗಳೋ, ಉದ್ಯಮಿಗಳೋ,
ಹೀಗೆ ಏನೋ ಆಗಿ ದೊಡ್ಡ ಹೆಸರು ಮಾಡಿ, ಅವರೆಲ್ಲ ಕ್ರಮೇಣ ಹಳ್ಳಿ ಸೊಗಡನ್ನು ಮೇಲ್ನೋಟದ ತೋರಿಕೆಗಾಗಿಯೋ ಅಥವಾ ನೆನಪಿನ ಬುತ್ತಿಯಾಗಿಯೋ ಬಳಸುತ್ತಾರೆ ಮತ್ತು ಬಹುತೇಕರು ನಗರೀಕರಣಗೊಂಡು ತಮ್ಮ ತನ ಕಳೆದುಕೊಂಡಿರುತ್ತಾರೆ….

ಆದರೆ ,
ಈ ರಾಜಕುಮಾರ ಅಪ್ಪಟ ಹಳ್ಳಿ ಹೈದನಂತೆಯೇ ಕೊನೆಯವರೆಗೂ ಇದ್ದರು. ಆಂತರಿಕವಾಗಿ ಅವರ ಮನಸ್ಥಿತಿ ಹೇಗಿತ್ತೋ ಅವರೇ ಬಲ್ಲರು. ಆದರೆ ನಡವಳಿಕೆ ಮಾತ್ರ ಅವರು ಎಷ್ಟು ಮುಗ್ಧರೋ ಅಷ್ಟೇ ಒಬ್ಬ ಹಳ್ಳಿ ಪೆದ್ದು ಎಂದು ನಾವೆಲ್ಲ ಹಾಸ್ಯ ಮಾಡುವ ಗ್ರಾಮ್ಯ ಶೈಲಿಯ ಗುಣ ಅವರಲ್ಲಿ ಅಂತರ್ಗತವಾದಂತೆ ಭಾಸವಾಗುತ್ತದೆ.
ನಟನೆಯಲ್ಲೂ ಅದೇ ಮುಗ್ಧತೆ, ಅದೇ ರಸಿಕತೆ, ಭಕ್ತಿಯಲ್ಲೂ ಅದೇ ತನ್ಮಯತೆ, ಹೊಡೆದಾಟಗಳಲ್ಲಿ ಅದೇ ಗ್ರಾಮ್ಯ ಶೈಲಿ, ಕಣ್ಣುಗಳಲ್ಲಿ ಅದೇ ಹಳ್ಳಿಯ ನೋಟ,
ಹೊರ ಪ್ರಪಂಚದ ಆಗುಹೋಗುಗಳಲ್ಲಿ ಅದೇ ಪೆದ್ದುತನ ಎಲ್ಲವೂ ಹಳ್ಳಿಹೈದನ ಗುಣಲಕ್ಷಣಗಳು ಅವರಲ್ಲಿ ಐಕ್ಯವಾದಂತಿವೆ……

ರಾಜಕೀಯವೆಂದರೆ ಏನೋ ಕೆಟ್ಟದ್ದು ಎಂಬಂತೆ ಅದರಿಂದ ಮಾರು ದೂರ, ಮಾಂಸಹಾರ ಊಟವೆಂದರೆ ಪಂಚಪ್ರಾಣ, ಪ್ರಣಯದ ಕಣ್ಣೋಟದಲ್ಲಿ ಅದೇ ಹಳ್ಳಿಯ ಕಿಲಾಡಿತನ, ಹಣದ ವಿಷಯದಲ್ಲಿ ಸ್ವಲ್ಪ ಜಿಪುಣತನ, ಗೊಂದಲವಾದಾಗ ತಲೆ ಕರೆದುಕೊಳ್ಳುವ ಅದೇ ಮಣ್ಣಿನ ಗುಣ ಎಲ್ಲವೂ ಪಕ್ಕಾ ಹಳ್ಳಿ ಹೈದ. ನನಗಂತೂ ವೈಯಕ್ತಿಕವಾಗಿ ಕನ್ನಡ ಮಣ್ಣಿನ ಸಮಷ್ಠಿ ಪ್ರಜ್ಙೆಯಿಂದ ಅವಲೋಕಿಸಿದಾಗ ನಿಜವಾದ ಹಳ್ಳಿ ಹೈದ ಡಾ.ರಾಜ್ ಕುಮಾರ್……

ಆದರೆ ಆ ಮುಗ್ದತೆ ಸ್ವಾಭಾವಿಕವೇ ಅಥವಾ ಜನಪ್ರಿಯತೆಯ ಒತ್ತಡದಿಂದ ಬಂದದ್ದೇ ಎಂಬುದು ಪ್ರಶ್ನಾರ್ಹ. ನವರಸಗಳನ್ನು ಪಾತ್ರಗಳಲ್ಲಿ ಸಮರ್ಥವಾಗಿ ತುಂಬುವ ಸಾಮರ್ಥ್ಯ ಅವರಲ್ಲಿ ಇದ್ದಾಗ ಅಷ್ಟು ಸುಲಭವಾಗಿ ಮುಗ್ದತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಬದುಕಿನ ನಿಜವಾದ ಅನುಭವಗಳು ಅಭಿನಯದ ಭಾಗವಾಗಿರುತ್ತದೆ…..

ಭಾಷೆ, ಸಂಸ್ಕೃತಿ, ಜನಜೀವನದ ಮೇಲೆ ಪ್ರಭಾವ ಎಲ್ಲವನ್ನೂ ಗಮನಿಸಿದಾಗ ಅವರ ಸಾಧನೆ ಎತ್ತರದಲ್ಲಿ ನಿಲ್ಲುತ್ತದೆ. ಅದು ಈಗಾಗಲೇ ಸಾಬೀತಾಗಿರುವ ವಿಷಯ….

ಸಾರ್ವಜನಿಕ ಸೇವೆಗಳ ವಿಷಯ ಬಂದಾಗ, ಚಿತ್ರರಂಗದ ಒಟ್ಟು ನಿಯಂತ್ರಣ ಗಮನಿಸಿದಾಗ, ಅವರ ವಿರೋಧಿಗಳು ಅವರ ಮೇಲೆ ಒಂದಷ್ಟು ಆಪಾದನೆ ಮಾಡುತ್ತಾರೆ. ಅದು ಎಲ್ಲಾ ಕಾಲಕ್ಕೂ ಎಲ್ಲರ ಮೇಲೆಯೂ ಇರುತ್ತದೆ. ಅದು ಅವರವರ ಭಾವಕ್ಕೆ ಬಿಡುತ್ತಾ…..

ಕೆಲವೊಂದು ಒಪ್ಪು ತಪ್ಪುಗಳ ನಡುವೆಯೂ ಕನ್ನಡಿಗರು ಹೆಮ್ಮೆ ಪಡಬಹುದಾದ ಕೆಲವೇ ಅಗ್ರಗಣ್ಯ ವ್ಯಕ್ತಿತ್ವಗಳ ಶ್ರೇಷ್ಠ ಸಾಲಿನಲ್ಲಿ ರಾಜ್ ಕುಮಾರ್ ಅವರೂ ಪ್ರಮುಖವಾಗುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು…..
******************************
ನಾಗರಿಕ ಮನುಷ್ಯ ತಾನು ಬದುಕಿದ ಕಾಲಘಟ್ಟದಲ್ಲಿ ಮಾನವ ಸಮಾಜವನ್ನು ಆತನ ಮಾನಸಿಕ ಪರಿಸ್ಥಿತಿಯನ್ನು, ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಅಕ್ಷರ ರೂಪದಲ್ಲಿ ದಾಖಲಿಸುವ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದಲ್ಲಿ ರಚಿತವಾದ ರಾಮಾಯಣ, ಮಹಾಭಾರತ ಎಂಬ ಎರಡು ಬೃಹತ್ ಗ್ರಂಥಗಳು ಇಡೀ ಭಾರತೀಯ ಜನಜೀವನವನ್ನು ಆ ಕಾಲಘಟ್ಟದ ಎಲ್ಲಾ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ, ಅತ್ಯದ್ಭುತವಾಗಿ ನಮ್ಮ ಮುಂದೆ ಇಡಲಾಗಿದೆ. ಬಹುಶಃ ಸಾಹಿತ್ಯ, ಸಾಮಾಜಿಕ ದೃಷ್ಟಿಕೋನದಲ್ಲಿ, ಭಾರತದಲ್ಲಿ ಅದಕ್ಕಿಂತ ಉತ್ತಮವಾದುದ್ದು ಇಲ್ಲವೇನೋ ಎನಿಸುತ್ತದೆ.

ಹಾಗೆಯೇ ಇಂಗ್ಲಿಷ್ ಸಾಹಿತ್ಯದಲ್ಲಿ ಶೇಕ್ಸ್ಪಿಯರ್. ಅವರ ಸಾಹಿತ್ಯ ಇಂದಿಗೂ ಮನುಷ್ಯ ಸ್ವಭಾವ ಹಾಗೂ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬದಂತೆಯೇ ಇದೆ. ಸಾಹಿತ್ಯವನ್ನು ಮೀರಿ ಅವರು ಆಗಿನ ಕಾಲದ ಬಹುದೊಡ್ಡ ಸಮಾಜಶಾಸ್ತ್ರೀಯ ತತ್ವಜ್ಞಾನಿಯಂತೆ ಕಂಡು ಬರುತ್ತಾರೆ. ಸಾಹಿತ್ಯ ಎಂಬ ಅನಂತ ಆಕಾಶದಲ್ಲಿ ವಿಶ್ವದ ಕೆಲವೇ ಧ್ರುವತಾರೆಗಳಲ್ಲಿ ಷೇಕ್ಸ್ಪಿಯರ್ ಸಹ ಒಬ್ಬರು ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು. ಆಸಕ್ತರು ದಯವಿಟ್ಟು ಅವರ ಸಾಹಿತ್ಯದ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ ನಿಮಗೆ ಅದರ ಹಾಳಾಗಲ್ಲ ಅರ್ಥವಾಗುತ್ತದೆ.
******************************
ಇತ್ತೀಚಿನ ವರ್ಷಗಳ ಶಿಥಿಲವಾದ, ಅಪನಂಬಿಕೆಯ ಮಾನವಿಯ ಸಂಬಂಧಗಳ ನಡುವೆ, ಬಹುಶಃ ಕೆಲವೇ ಅತ್ಯುತ್ತಮ, ಅತ್ಯಾಪ್ತ ಸ್ನೇಹಿತರು, ಬಂಧುಗಳು, ಹಿತೈಷಿಗಳನ್ನು ಹೊರತುಪಡಿಸಿ ಮಾನಸಿಕ ನೆಮ್ಮದಿಗಾಗಿ ನಾವು ಅವಲಂಬಿಸಬಹುದಾದ ಅತ್ಯುತ್ತಮ ಗೆಳೆಯ, ಮನೋರೋಗ ತಜ್ಞ ಎಂದರೆ ಬಹುಶಃ ಅದು ಪುಸ್ತಕಗಳು ಮಾತ್ರ.

ಖಂಡಿತ ಬಹಳಷ್ಟು ಜನರಿಗೆ ಪುಸ್ತಕಗಳ ಮಹತ್ವವೇ ಅರಿವಾಗಿಲ್ಲ. ಅದರ ಉಪಯೋಗದ ಬಗ್ಗೆ ಅವರಿಗೆ ಅರ್ಥವಾಗಿಲ್ಲ. ಸಾಮಾಜಿಕ ಜಾಲತಾಣಗಳು ಅವರನ್ನು ಪುಸ್ತಕಗಳಿಂದ ದೂರ ಸರಿಯುವಂತೆ ಮಾಡಿದೆ. ದಯವಿಟ್ಟು ನಿಧಾನವಾಗಿ ಪುಸ್ತಕಗಳ ಹತ್ತಿರ ಸರಿಯಿರಿ. ಅದನ್ನು ಆತ್ಮೀಯ ಮಿತ್ರರನ್ನಾಗಿ ಮಾಡಿಕೊಳ್ಳಿ. ಅನಾಥ ಪ್ರಜ್ಞೆಯ ಸಂದರ್ಭದಲ್ಲಿ, ಏಕಾಂತದ ಸನ್ನಿವೇಶದಲ್ಲಿ ಎಲ್ಲಕ್ಕಿಂತ ಅತ್ಯಂತ ಆಪ್ತ ಸಂಗಾತಿ ಪುಸ್ತಕವಾಗಬಹುದು. ನಿಧಾನವಾಗಿ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ತೆಗೆದುಕೊಂಡು ಹೋಗಿ ಮನಸ್ಸಿನ ಅಲ್ಲೋಲ ಕಲ್ಲೋಲವನ್ನು ಸ್ವಲ್ಪ ಮಟ್ಟಿಗೆ ತಿಳಿಗೊಳಿಸಬಹುದು.
ಆಯ್ಕೆ ನಿಮ್ಮ ಮುಂದಿದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ ಪ್ರಕಟ: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 95.62% ರಷ್ಟು ಫಲಿತಾಂಶ ಪಡೆಯುವ…

14 hours ago

ಭಗೀರಥ ಜಯಂತಿ ಆಚರಣೆ

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ತಹಶಿಲ್ದಾರ್ ಮಲ್ಲಪ್ಪ ಎರಗೋಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿ…

17 hours ago

ಯಲಹಂಕದ ಮಣಿಪಾಲ್ ಆಸ್ಪತ್ರೆಯಲ್ಲಿ ಸಕಾಲಿಕ ಮತ್ತು ತಜ್ಞ ಆರೈಕೆಯಿಂದ ಆಕಸ್ಮಿಕವಾಗಿ 2 ನೇ ಮಹಡಿಯಿಂದ ಬಿದ್ದ 2 ವರ್ಷದ ಮಗುವಿಗೆ ಜೀವದಾನ

ಜೀವನ ಕೆಲವೊಮ್ಮೆ ಕ್ಷಣಾರ್ಧದಲ್ಲಿ ಬದಲಾಗುತ್ತದೆ. ಒಂದು ಕ್ಷಣದಲ್ಲಿ ಎಲ್ಲವೂ ಸಹಜವಾಗಿರುತ್ತದೆ, ಮುಂದಿನ ಕ್ಷಣದಲ್ಲಿ ಅನಿಶ್ಚಿತತೆ ಆವರಿಸುತ್ತದೆ. ಅಪಘಾತಗಳು ಯಾವುದೇ ಮುನ್ನೆಚ್ಚರಿಕೆ…

18 hours ago

SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ: ಮೂವರು‌ ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

ಇಂದು ಮಧ್ಯಾಹ್ನ 12ಕ್ಕೆ 2026 SSLC ಪರೀಕ್ಷೆ-1ರ ಫಲಿತಾಂಶ ಪ್ರಕಟ ಮಾಡಲಾಗಿದೆ. 7 ಲಕ್ಷದ 24 ಸಾವಿರದ 794 ವಿದ್ಯಾರ್ಥಿಗಳು…

20 hours ago

ನವಜಾತ ಶಿಶುವಿನ ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದ ಪಾಪಿ ತಾಯಿ

ಇಲ್ಲೋರ್ವ ಪಾಪಿ ತಾಯಿ ನವಜಾತ ಶಿಶುವನ್ನು ಕತ್ತು ಕೊಯ್ದು ಟಾಯ್ಲೆಟ್ ಗೆ ಎಸೆದು ಅಮಾನವೀಯತೆ ಮೆರೆದಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ…

21 hours ago

Free Blackjack Online: The Most Effective Means to Practice and Have A Good Time

Blackjack is one of the most prominent gambling enterprise video games on the planet. It's…

22 hours ago