Categories: ಲೇಖನ

ಜ್ಞಾನದ ಮರುಪೂರಣ…… ಮಾನಸಿಕ ಸಂಪನ್ಮೂಲಗಳ ಬಗ್ಗೆ ಸದಾ ಎಚ್ಚರವಿರಲಿ

ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ…..

ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ‌ ಸಹ ನಮ್ಮ ಅರಿವಿಗೇ ಬರುವುದಿಲ್ಲ. ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ……

ನಾವು ಸಂಪಾದಿಸಿರುವ ಜ್ಞಾನವೆಂಬ ಇಂಧನವನ್ನು ಉಪಯೋಗಿಸುವ ಜೊತೆಗೆ ‌ಕಾಲ ಕಾಲಕ್ಕೆ ಮತ್ತೆ ಮತ್ತೆ ಮರು ಭರ್ತಿ ಮಾಡಿಕೊಳ್ಳುತ್ತಿರಬೇಕು. ಅರಿವಿನ ಬ್ಯಾಟರಿಯನ್ನು ಮತ್ತೆ ಮತ್ತೆ ಚಾರ್ಜ್ ಮಾಡುತ್ತಿರಬೇಕು…..

ಅದು ಓದಿನ ಮುಖಾಂತರ ಇರಬಹುದು, ಚರ್ಚೆಗಳ ಮೂಲಕ ಇರಬಹುದು, ಬದುಕಿನ ಅನುಭವಗಳ ಮೂಲಕ ಇರಬಹುದು, ಪ್ರವಾಸದ ಮುಖಾಂತರ ಇರಬಹುದು, ಕಾಯಕದ ಮುಖಾಂತರ ಇರಬಹುದು, ಮಾಧ್ಯಮಗಳ ಮೂಲಕ ಇರಬಹುದು, ಬರವಣಿಗೆಯ ಮುಖಾಂತರ ಇರಬಹುದು, ಅಭ್ಯಾಸದ ಮೂಲಕ ಇರಬಹುದು, ಯೋಗ ಧ್ಯಾನ ಏಕಾಂತ ಗುರು ಹಿರಿಯರ ಮೂಲಕ ಇರಬಹುದು ಒಟ್ಟಿನಲ್ಲಿ ನಮಗೆ ಸಿಗುವ ಮತ್ತು ಆಸಕ್ತಿ ಇರುವ ಮಾರ್ಗಗಳ ಮೂಲಕ ಅದನ್ನು ತುಂಬಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಬೇಕು. ಇಲ್ಲದಿದ್ದರೆ ನಿಧಾನವಾಗಿ ಖಾಲಿಯಾಗುತ್ತಿರುತ್ತದೆ. ದುರಂತವೆಂದರೆ ಬಹಳಷ್ಟು ಬಾರಿ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ.‌…..

ಆ ಜ್ಞಾನವೆಂಬ ಇಂಧನ ಖಾಲಿಯಾಗುತ್ತಿದ್ದಂತೆ ಆ ಜಾಗದಲ್ಲಿ ದುರಹಂಕಾರ, ದುರಾಸೆ, ಆಲಸ್ಯ, ಬೇಜವಾಬ್ದಾರಿ, ಸಣ್ಣತನ, ಸ್ವಾರ್ಥ, ಮೂರ್ಖತನವೆಂಬ ಇಂಧನಗಳು ಆಕ್ರಮಿಸಿಕೊಳ್ಳತೊಡಗುತ್ತವೆ.

ಈ ಗುಣಗಳು ಹೆಚ್ಚಾಗುತ್ತಿದ್ದಂತೆ ನೋವು ನಿರಾಸೆ ಕೋಪ ಅಸಹನೆ ಅನಾರೋಗ್ಯ ಸಿಡುಕು ಅತೃಪ್ತಿಗಳು ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ನಮ್ಮ ನೆಮ್ಮದಿಯ ಮಟ್ಟ ಕುಸಿಯುತ್ತಾ ಹೋಗುತ್ತದೆ. ದುಃಖದ ಭಾವ ಹೆಚ್ಚಾಗುತ್ತಾ ಹೋಗುತ್ತದೆ…….

ಸರ್ಕಾರದಲ್ಲಿ ಕೆಲಸ ಮಾಡುವ ಬಹಳಷ್ಟು ಐಎಎಸ್‌, ಐಪಿಎಸ್, ಕೆಎಎಸ್ ಮುಂತಾದವರು ಸೇರಿ ಎಲ್ಲಾ ಹಂತದ ಅಧಿಕಾರಿಗಳು, ಸರ್ಕಾರಿ ಡಾಕ್ಟರ್, ಇಂಜಿನಿಯರ್, ಲಾಯರ್ ಗಳು, ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹವಾಮಾನ ಮುಂತಾದ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸೇರುವಾಗ ತುಂಬಾ ಕಷ್ಟಪಟ್ಟು ಓದಿ ಎಲ್ಲಾ ಮೂಲಗಳಿಂದ ವಿಷಯ ಗ್ರಹಿಸಿ ಹೆಚ್ಚು ಅಂಕ ಪಡೆದು, ಸಂದರ್ಶನಗಳಲ್ಲಿ ಜಾಣ್ಮೆಯಿಂದ ಉತ್ತರಿಸಿ ಉದ್ಯೋಗ ಪಡೆದಿರುತ್ತಾರೆ. ತುಂಬಾ ಎಚ್ಚರಿಕೆಯಿಂದ ಮುಂದಿನ ನಡೆ ಇಡುತ್ತಾರೆ…..

ಒಮ್ಮೆ ಅಧಿಕೃತವಾಗಿ ಕೆಲಸ ಖಾಯಂ ಆದ ನಂತರ ಅವರ ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಮನೆ, ಸಂಸಾರ, ಹಣ, ಅಧಿಕಾರದ ದರ್ಪ, ಗೆಳೆಯರು, ಸಂಜೆಯ ಪಾರ್ಟಿಗಳು ಎಲ್ಲವೂ ತನ್ನಿಂದ ತಾನೇ ಸಹವಾಸ ದೋಷದಿಂದ ಒಲಿದು ಬರುತ್ತದೆ. ಜ್ಞಾನ ಸಂಪಾದನೆಗೆ ಪ್ರಯತ್ನಿಸುವುದೇ ಇಲ್ಲ. ಟಿವಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ಅವರ ಜ್ಞಾನದ ಮೂಲಗಳು ಮತ್ತು ಸರ್ಕಾರಿ ಆದೇಶಗಳೇ ಅವರ ತಿಳಿವಳಿಕೆಯ ಸಾಧನಗಳು. ಅಲ್ಲಿಂದ ಮುಂದೆ ಸಾಗುವವರು ತೀರಾ ಅಪರೂಪ……

ಬಹಳಷ್ಟು ಜನರಿಗೆ ತಮ್ಮ ಬಾಲ್ಯದಿಂದಲೂ ಬೆಳೆದು ಬಂದ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಆದರೆ ತಿಂಗಳ ಸಂಬಳ ಅವರ ಜೀವನವನ್ನು ಭದ್ರಪಡಿಸುವುದರಿಂದ ಕ್ರಮೇಣ ಎಲ್ಲದರ ಬಗ್ಗೆ ನಿರಾಸಕ್ತಿ ಮೂಡುತ್ತದೆ. ಸ್ವಂತ ಮನೆ, ಸ್ವಂತ ವಾಹನ, ಮಕ್ಕಳು, ಅವರ ಶಿಕ್ಷಣ, ಮದುವೆ ಎಂಬಲ್ಲಿಗೆ ನಿವೃತ್ತಿಯ ಅಂಚಿಗೆ ಬಂದಿರುತ್ತಾರೆ……

ಹಾಗೆಯೇ ಕಲೆ, ಅಧ್ಯಾತ್ಮ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ನಿರತರಾದರು ಸಹ ಕಾಲ ಕಾಲಕ್ಕೆ Update ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಸ್ಪರ್ಧೆಯಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಮಾನಸಿಕ ವ್ಯಕ್ತಿತ್ವವೂ ಅಸಹನೀಯವಾಗುತ್ತದೆ. ಕೀಳರಿಮೆ ಬೆಳೆಯುತ್ತದೆ……

ಈ ಜ್ಞಾನದ ಮರು ಪೂರಣ ಕ್ರಿಯೆ ಆಗಿಂದಾಗ್ಗೆ ಮಾಡುತ್ತಲೇ ಇರಬೇಕು. ಖಾಲಿ ಅಥವಾ ಕಡಿಮೆಯಾಗಲು ಬಿಡಬಾರದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಆರಂಭ ಅಂತ್ಯಗಳಿಲ್ಲ. ಕನಿಷ್ಠ ನಿಮ್ಮ ಯೋಚನಾ ಶಕ್ತಿಯನ್ನು ವಿಶಾಲಗೊಳಿಸಿಕೊಳ್ಳುವ ಮೂಲಕವಾದರೂ ಪ್ರಯತ್ನಿಸಬೇಕು……

ಯೋಚಿಸಿ ಯೋಚಿಸಿ ಯೋಚಿಸಿ 360 ಡಿಗ್ರಿ ಕೋನದಲ್ಲಿ ಯೋಚಿಸಿ. ಇಡೀ ಭೂಮಂಡಲದ ಆಗುಹೋಗುಗಳನ್ನು ಗಮನಿಸಿ, ಭೂತ ವರ್ತಮಾನ ಭವಿಷ್ಯದ ಬಗ್ಗೆ ಯೋಚಿಸಿ, ನಿಮ್ಮ ಸುತ್ತ ಮುತ್ತಲಿನ ಎಲ್ಲವುಗಳ ಬಗ್ಗೆಯೂ ಯೋಚಿಸಿ. ನಿಮಗಿಂತ ಕೆಳಗಿರುವವರು, ನಿಮ್ಮ ಜೊತೆ ಇರುವವರು, ನಿಮಗಿಂತ ಮೇಲಿರುವವರು ಎಲ್ಲರ ಬಗ್ಗೆಯೂ ಯೋಚಿಸಿ. ಯೋಚನೆಗೆ ಯಾವುದೇ ಮಿತಿ ಹಾಕಿಕೊಳ್ಳಬೇಡಿ. ಸತ್ಯದ ಹುಡುಕಾಟಕ್ಕೆ ಇದು ಅತ್ಯವಶ್ಯಕ…..

ಕಲಿಕೆಯೆಂಬುದು ನಿರಂತರ ಪ್ರಕ್ರಿಯೆ. ಕಲಿಕೆಯ ಮಾರ್ಗಗಳು ಸಹ ಅಗಣಿತ.

ಹೇಗೋ, ಎಲ್ಲಿಂದಲೋ ನಮಗೆ ಗೋಚರಿಸುತ್ತಲೇ ಇರುತ್ತದೆ. ಅದನ್ನು ಗ್ರಹಿಸುವುದಷ್ಟೇ ನಮ್ಮ ಕೆಲಸ. ಈ ಪ್ರಕ್ರಿಯೆ ನಮಗೆ ಹಣವನ್ನು, ಅಧಿಕಾರವನ್ನು, ಜನಪ್ರಿಯತೆಯನ್ನು, ಸಂಬಂಧಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ವಿನಯ ಸ್ಥಿತಪ್ರಜ್ಞತೆ ಕಲಿಸಿ, ಈ ಸೃಷ್ಟಿಯಲ್ಲಿ ನಮ್ಮ ಸ್ಥಾನ ಮತ್ತು ಕರ್ತವ್ಯ ನಮಗೆ ಅರ್ಥ ಮಾಡಿಸಿ ನಮ್ಮ ನೆಮ್ಮದಿಯ ಮಟ್ಟವನ್ನು ಹೆಚ್ಚಿಸುತ್ತದೆ…..

ಆದ್ದರಿಂದ ದಯವಿಟ್ಟು ಕಲಿಕೆಯ ಮುಖಾಂತರ ನಮ್ಮ ಜ್ಞಾನದ ಸಂಪನ್ಮೂಲಗಳನ್ನು ತುಂಬಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಜೀವಿತದುದ್ದಕೂ ಜಾರಿಯಲ್ಲಿರಲಿ. ಅದೇ ನಾವು ಬಯಸುವ ಬದುಕನ್ನು ರೂಪಿಸುತ್ತದೆ.

ಎಂದೂ ನಮ್ಮನ್ನು ನಿರಾಸೆಯ ಅಹಂಕಾರದ ಕೂಪಕ್ಕೆ ತಳ್ಳುವುದಿಲ್ಲ ಅಥವಾ ಅದಕ್ಕೆ ಬಿದ್ದರೂ ಮತ್ತೆ ಪುಟಿದೇಳುವಂತೆ ಮಾಡುತ್ತದೆ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

1 hour ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

2 hours ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

2 hours ago

10.50 ಕೋಟಿ ಸಾಲ ವಂಚನೆ ಆರೋಪ: ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 10.50 ಕೋಟಿ ಸಾಲ ಮಂಜೂರು ಮಾಡಿ ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ ಆರ್ಥಿಕ…

4 hours ago

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

12 hours ago

ಸೆ.28ರಿಂದ 30ರವರೆಗೆ ಬ್ಯಾಂಕ್ ನೌಕರರ ಮುಷ್ಕರ: ಭಾನುವಾರ ಬ್ಯಾಂಕ್‌ ಸೇವೆ ಲಭ್ಯ

ಬ್ಯಾಂಕ್ ನೌಕರರ ಒಕ್ಕೂಟವು ಸೆ.28ರಿಂದ 30ರವರೆಗೆ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ…

1 day ago