ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 40 ವರ್ಷಗಳಿಂದ ರಾಜಕಾರಣ ಮಾಡುತ್ತಾ, ಮನೆ ಮಾತಾಗಿರುವ ಹುಸ್ಕೂರು ಟಿ. ಆನಂದ್ ಜೆಡಿಎಸ್ ಪಕ್ಷದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುವ ಜೆಡಿಎಸ್ ಪಕ್ಷದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬಿ.ಫಾರಂ ಕೊನೆಗಳಿಗೆಯಲ್ಲಿ ಚನ್ನಗಪ್ಪಗೆ ಹೈಕಮಾಂಡ್ ವಿತರಿಸಿದಾಗ ಪಕ್ಷದ ಸೂಚನೆಯಂತೆ ಪಕ್ಷದ ಅಧಿಕೃತ ಅಭ್ಯರ್ಥಿ ಚನ್ನಿಗಪ್ಪ ಪರವಾಗಿ ಕೆಲಸ ಮಾಡಿದರು. ಕೆಸ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷಕ್ಷೆ ಅತಿ ಹೆಚ್ಚು ಮತಗಳು ಬರವಲ್ಲಿ ಮಹತ್ತರ ಪಾತ್ರ ವಹಿಸಿದರು. ಬಳಿಕ ಬದಲಾದ ರಾಜಕೀಯ ಸಮಯದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಹುಸ್ಕೂರು ಆನಂದ್ ತಮ್ಮ ಧರ್ಮಪತ್ನಿ ಕಲ್ಪನಾ ಆನಂದ್ ಅವರನ್ನು ಕಾಂಗ್ರೆಸ್ ಚಿನ್ಹೆಯಡಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧೆ ಮಾಡಿಸಿ ಅತ್ಯಂತ ಹೆಚ್ಚು ಮತಗಳಿಂದ ವಿಜಯಪತಾಕೆ ಹಾರಿಸುವಲ್ಲಿ ಯಶಸ್ವಿಯಾದರು. ಐದು ವರ್ಷಗಳ ಅಧಿಕಾರವಾಧಿಯಲ್ಲಿ ತಮ್ಮ ಕ್ಷೇತ್ರಾದ್ಯಂತ ಜನಪರವಾದ ಕೆಲಸದ ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ‘ಜನಾರ್ದನ ಸೇವೆಯೇ ಜನಸೇವೆ’ ಎಂದು ಜನಪರವಾದ ಕೆಲಸಗಳನ್ನು ಮಾಡಿದರು. ಕಾಂಗ್ರೆಸ್ ನಲ್ಲಿ ಉಂಟಾದ ಗೊಂದಲಗಳಿಂದಾಗಿ ಪುನಃ ಮಾತೃಪಕ್ಷ ಜೆಡಿಎಸ್ ಪಕ್ಷಕ್ಕೆ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮರಳಿ ಬಂದರು. ಅಲ್ಲಿಂದ ಈವರೆಗೂ ಜೆಡಿಎಸ್ ಪಕ್ಷದ ಸಂಘಟನೆ, ಗೆಲುವಿಗೆ ಟೊಂಕ ಕಟ್ಟಿ ನಿಂತಿರುವ ಹುಸ್ಕೂರು ಆನಂದ್ ನಿಷ್ಠಾವಂತ ಕಾರ್ಯಕರ್ತರ ‘ಧೈರ್ಯ’ವಾಗಿದ್ದಾರೆ. ಅವರ ಕೋರ್ಟ್, ಕೇಸ್, ಕಚೇರಿ, ಸಂತೋಷ-ದುಃಖದಲ್ಲಿ ಭಾಗಿಯಾಗುವ ಮೂಲಕ ಜನರ ‘ಹೃದಯ’ದಲ್ಲಿ ನಮ್ಮಣ್ಣ ‘ಆನಂದಣ್ಣ’ ಎಂದು ಪ್ರೀತಿಯ ‘ಅಚ್ಚೆ’ ಹೊತ್ತಿದ್ದಾರೆ. ಈ ಮೂಲಕ ರಾಜಕೀಯ ವಿರೋಧಿಗಳಿಗೆ ಜನಪರವಾದ ಕೆಲಸಗಳ ಮೂಲಕವೇ ‘ಉತ್ತರ’ಗಳನ್ನು ನೀಡುತ್ತಿದ್ದಾರೆ. ಫೊಟೋ ಫೊಸ್ ಗಾಗಿಯೇ ಸಹಾಯ ಮಾಡುವ ದಿನಗಳಲ್ಲಿ ‘ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು’ ಎಂಬ ಗಾದೆಯಂತೆ ತಾಲ್ಲೂಕಿನ ವಿವಿಧ ದೇಗುಲಗಳಿಗೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕ ಸಹಾಯ ಮಾಡುತ್ತಿರುವ ‘ಆನಂದ್’ ಅವರಿಗೆ ಪಕ್ಷಾತೀತವಾಗಿ ಜನಬೆಂಬಲ ವ್ಯಕ್ತವಾಗುತ್ತಿದೆ. ಹೀಗೆ ‘ಪ್ರಬಲ.. ಬಲಿಷ್ಠ.. ಭರವಸೆ’ಯ ನಾಯಕನಾಗಿ ಹೊರಹೊಮ್ಮುತ್ತಿರುವ ಹುಸ್ಕೂರು ಆನಂದ್ ಅವರು ಜೆಡಿಎಸ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ರಾಜಕೀಯ ಗುರಿ.. ಉದ್ದೇಶ.. ಧ್ಯೇಯಗಳ ಬಗ್ಗೆ ಮಾತನಾಡಿದ್ದಾರೆ…
1. ಜೆಡಿಎಸ್ 2013ರಲ್ಲಿದ್ದ ಶಕ್ತಿ ಸಾಮರ್ಥ್ಯವನ್ನು ಉಳಿಸಿಕೊಂಡಿದೆಯೆ..?
ತಾಲ್ಲೂಕಿನಲ್ಲಿ ಎಲ್ಲಾ ಪಕ್ಷಗಳಿಂತ ಜೆಡಿಎಸ್ ಪಾರ್ಟಿಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ದೊಡ್ಡಮಟ್ಟದಲ್ಲಿ ಹಿಂದೆಯೂ ಇತ್ತು.. ಈಗಲೂ ಇದೆ.. ಕನಿಷ್ಟ 23-25 ಸಾವಿರ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರನ್ನೊಳಗೊಂಡ ತಂಡವನ್ನು ಮುನ್ನೆಡೆಸಿ ಜೆಡಿಎಸ್ ಪಕ್ಷದ ಶಾಸಕರನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇನೆ. ನಾನು ಯಾವುದೇ ಅಧಿಕಾರವನ್ನು ಪಡೆಯದೆ, ಕಾರ್ಯಕರ್ತರ ಮಧ್ಯೆಯೇ ಇದ್ದು ಕಾರ್ಯಕರ್ತರಿಂದಲೇ ನಾಯಕತ್ವವನ್ನು ಹುಟ್ಟಹಾಕಿ, ಒಗ್ಗೂಡಿಸಿ ೨೦. ವರ್ಷಗಳಿಂದಲೂ ಹೋರಾಟ ಮಾಡುತ್ತಿರುವ ಶಾಸಕ ಸ್ಥಾನಕ್ಕೆ ಪ್ರಬಲ ತಂಡ ಕಟ್ಟಲಾಗುವುದು. ಸದ್ಯ ಈ ಕೆಲಸದಲ್ಲಿ ನಾನು ನಿರತನಾಗಿದ್ದೇನೆ.
2. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿರುವುದರಿಂದ 2028ಕ್ಕೆ ಜೆಡಿಎಸ್ ಪಕ್ಷಕ್ಕೆ ಅವಕಾಶ ಸಿಗಲಿದೆಯಾ?
ಕೇಂದ್ರದಲ್ಲಿ ಎನ್.ಡಿ.ಎ ಇರುವುದರಿಂದ ನಮ್ಮ ವರಿಷ್ಠರಾದ ಎಚ್.ಡಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಬೆಂಬಲವಾಗಿ ನಿಂತಿದ್ದಾರೆ. ಯಾವ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಬಿಜೆಪಿ ಮೀರಿಸುವ ಶಕ್ತಿ ಪ್ರದರ್ಶನ ಮಾಡಿದರೆ ನಾನು ಎನ್.ಡಿ.ಎ ಟಿಕೆಟ್ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಂತಹ ವಾತವಾರಣ ಸೃಷ್ಟಿಸಲು ಕಾರ್ಯೋನ್ಮುಖನಾಗಿದ್ದೇನೆ. ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನೂ ಸಂಘಟನೆ ಮಾಡುತ್ತಿದ್ದೇನೆ.
3. ಬಿ.ಮುನೇಗೌಡರು ಸ್ವತಂತ್ರ ಅಭ್ಯರ್ಥಿಯಾದರೆ ನೀವು ಪಕ್ಷದ ಪರವೋ ? ಅಥವಾ ವ್ಯಕ್ತಿಯ ಪರವೋ..?
ಬಿ.ಮುನೇಗೌಡರು ಪಕ್ಷವನ್ನು ತಾಲ್ಲೂಕಿನಲ್ಲಿ ತಳಮಟ್ಟದಿಂದ ೧೫ ವರ್ಷಗಳಿಂದ ಸಂಘಟನೆ ಮಾಡಿದ್ದಾರೆ. ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾದರೆ ನಾನು ತನು, ಮನು, ಧನವನ್ನು ಅರ್ಪಿಸಿ ಶತಾತಗತಾಯ ಗೆಲುವಿಗೆ ಶ್ರಮವಹಿಸುತ್ತೇನೆ. ಒಂದು ವೇಳೆ ಬಿ.ಮುನೇಗೌಡರು ಸ್ವತಂತ್ರ ಅಭ್ಯರ್ಥಿಯಾದರೆ ನಾನು ಆಗ ಪಕ್ಷದ ಪರವಾಗಿ ಇರುತ್ತೇನೆ ಹೊರೆತು ಮುನೇಗೌಡರ ಪರವಾಗಿ ಹೋಗೋದಿಲ್ಲ. ಪಕ್ಷವೇ ನನಗೆ ಮುಖ್ಯವಾಗುತ್ತದೆ.
4. ನಾಲ್ಕು ಬಾರಿ ಸೋತಿರುವ ಬಿ.ಮುನೇಗೌಡರ ಬೆನ್ನಿಗೆ ನಿಲ್ಲುವಿರೇ..? ಅಥವಾ ನಿಮ್ಮ ನಡೆಯೇನು..?
ಬಿ.ಮುನೇಗೌಡರು ದೊಡ್ಡಬಳ್ಳಾಪುರದಲ್ಲಿ ಸಾಕಷ್ಟು ದುಡಿದ್ದಾರೆ. ಅವರು ಮನೆ ಹಾಳು ಮಾಡಿಕೊಂಡಿದ್ದಾರೆ ಎಂಬ ಮಾತಿದೆ. ಒಂದು ವೇಳೆ ಅವರು ಪಕ್ಷ ಬಿಟ್ಟು ಬೇರೆ ತೀರ್ಮಾನ ಮಾಡಿದರೆ ಆಗಿನ ಪರಿಸ್ಥಿತಿಗೆ ತಕ್ಕಂತೆ ನಾನು ನಿರ್ಧಾರಕ್ಕೆ ಬರುತ್ತೇನೆ. ಆದರೆ ಈಗ ನಾನು ಅವರಿಗೆ ಸಹಕಾರ ನೀಡುತ್ತೇನೆ. ನಾವೆಲ್ಲಾ ಈಗ ಜೆಡಿಎಸ್ ನಲ್ಲಿದ್ದೇವೆ. ಪಕ್ಷ ವಿರೋಧಿ ಚಟಿವಟಿಕೆ ಮಾಡಬಾರದು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮುನೇಗೌಡರ ಮನೆ ಹಾಳು ಮಾಡಿದ್ದಾರೆ. ಪದೇ ಪದೇ ಮನೆ ಹಾಳು ಮಾಡಿಕೊಳ್ಳುವುದು ಬೇಡ ಎಂದು ನಾನು ಅವರಿಗೆ ಬುದ್ಧಿವಾದ ಹೇಳಿದ್ದೇನೆ.
5. ತಾಲ್ಲೂಕಿನಲ್ಲಿ ನಡೆದ ಬೆಳ್ಳಿಹಬ್ಬ ಕಾರ್ಯಕ್ರಮ ಯಶಸ್ವಿಯಾಯಿತೆ?
ಜನರೊಂದಿಗೆ ಜನತಾಳ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ. ನಿಖಿಲ್ ಕುಮಾರಸ್ವಾಮಿ ಮಾತಾಡುವಾಗ ಜನರೇ ಇರಲಿಲ್ಲ. ಅದರಿಂದ ನನಗೆ ತುಂಬಾ ನೋವಾಯಿತು. ನಿಖಿಲ್ ಮಾತಾಡುವ ಮುಂಚೆ ಜನ ಇದ್ದರು, ಅವರು ಮಾತಾಡೋದಕ್ಕೆ ಬಂದ ಮೇಲೆ ಜನ ಇರಲಿಲ್ಲ. ಅಷ್ಟೋಂದು ಜನ ಇದ್ದವರು ಎಲ್ಲೋದರು, ಕಾರ್ಯಕ್ರಮಕ್ಕೆ ಬಂದಿದ್ದು ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾ…? ಅಥವಾ ಅಲ್ವಾ ಎಂಬುದು ನನಗೆ ಈಗಲೂ ಅನುಮಾನ ಇದೆ. ನಾನು ಹೇಳುತ್ತಿರುವುದು ಇದನ್ನೇ ನಿಷ್ಠಾವಂತರಿಗೆ ಮಣೆ ಹಾಕಿದರೆ ಮಳೆ, ಗಾಳಿ, ಚಳಿ ಎನ್ನದೆ ಪಕ್ಷಕ್ಕಾಗಿ ದುಡಿಯುತ್ತಾರೆ. ಅಂತವರನ್ನು ಗುರುತಿಸಬೇಕಾಗಿದೆ.
6. ತಾಲ್ಲೂಕು ಜೆಡಿಎಸ್ ನಲ್ಲಿ ಒಡಕಿರುವುದು ನಿಜವೇ?
ತಾಲೂಕು ಜೆಡಿಎಸ್ ಘಟಕದಲ್ಲಿ ಒಡಕು ಇಲ್ಲ. ಆದರೆ ಎರಡು ಗುಂಪು ಇದೆ. ಒಂದು ವಿರೋಧಿ ಚಟುವಟಿಕೆ ಮಾಡುವ ಬಣ, ಇನ್ನೊಂದು ನಿಷ್ಠಾವಂತ ಬಣ ಇದೆ. ವಿರೋಧಿ ಚಟುವಟಿಕೆ ಮಾಡೋರು ತಮ್ಮ ತಪ್ಪು ತಿದ್ದುಕೊಂಡು ಪಕ್ಷ ಸಂಘಟನೆ ಮಾಡಿದರೆ ನಾನು ಸ್ವಾಗತ ಮಾಡುತ್ತೇನೆ. ಹಣ, ಅಧಿಕಾರ ಆಸೆಗೆ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆ. ಜಿಲ್ಲಾ, ತಾಲ್ಲೂಕಿನಲ್ಲಿ ಪಕ್ಷವನ್ನು ಮುನ್ನಡೆಸಲು ಯಾರೂ ಇಲ್ಲದೇ ಇದ್ದಾಗ ಪಂಚಾಯಿತಿಯನ್ನೂ ಗೆಲ್ಲಲು ಆಗದೇ ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ದೇವನಹಳ್ಳಿಯಲ್ಲಿ ಬಲವಾಗಿ ನಿಸರ್ಗ ನಾರಾಯಣಸ್ವಾಮಿ ಇದ್ದಾರೆ, ದೊಡ್ಡಬಳ್ಳಾಪುರದಲ್ಲಿ ಸದ್ಯಕ್ಕೆ ಯಾರು ಇಲ್ಲ ಎಂದುಕೊಂಡಿದ್ದಾರೆ. ಆದ್ದರಿಂದ ಕೆಲವರು ಪಕ್ಷ ಬಿಡಲು ನಿರ್ಧಾರ ಮಾಡಿದ್ದಾರೆ. ಅವರನ್ನು ಪಕ್ಷ ಬಿಡದಂತೆ ಮನವೊಲಿಸಲು ಯತ್ನ ಮಾಡುತ್ತಿದ್ದೇನೆ. ಅವರೆನ್ನೆಲ್ಲಾ ಒಗ್ಗೂಡಿಸಿ ಜೆಡಿಎಸ್ ಗೆ ಒಳ್ಳೆ ಭವಿಷ್ಯ ಇದೆ ಎಂದು ಹೇಳಿ, ಸಮಾಧಾನ ಮಾಡಿ ಪಕ್ಷದಲ್ಲಿ ಇರುವಂತೆ ಮಾಡುತ್ತಿದ್ದೇನೆ.
7. ನಿಷ್ಠಾವಂತ ಕಾರ್ಯಕರ್ತರಿಗೆ ನೀಡುವ ಸಂದೇಶವೇನು?
ನಾನು ಧೀರಜ್ ಮುನಿರಾಜ್ ರೀತಿ ದೇವಸ್ಥಾನಗಳಿಗೆ ಕಳುಹಿಸಿ ವೋಟ್ ಹಾರಿಸಿಕೊಳ್ಳಲ್ಲ. ಜೆಡಿಎಸ್ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸಲು ವಕೀಲರ ತಂಡ ಕಟ್ಟಿದ್ದೇನೆ. ಕೋರ್ಟ್, ಕಚೇರಿ, ಪೊಲೀಸ್ ಠಾಣೆಗಳಲ್ಲಿ ನೊಂದ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸಲು ನಿರ್ಧರಿಸುತ್ತೇನೆ. ಪೊಲೀಸ್ ಠಾಣೆ, ತಾಲೂಕು ಕಚೇರಿಗಳಲ್ಲಿ ಉಚಿತ ಕೆಲಸಗಳನ್ನು ಮಾಡಿಸುವ ಮೂಲಕ ಕಾರ್ಯಕರ್ತರ ಪರ ಕೆಲಸ ಮಾಡುತ್ತೇನೆ. ಹುಸ್ಕೂರ ಆನಂದ್ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳಲ್ಲ. ನಾನಂತೂ ಯಾವತ್ತೂ ಎಂ.ಎಲ್.ಎ ಆಕಾಂಕ್ಷಿ ಅಲ್ಲ. ಅಧಿಕಾರಕ್ಕಾಗಿ ನಾನು ಸಂಘಟನೆ ಮಾಡಲ್ಲ. ಕಾರ್ಯಕರ್ತರಿಗಾಗಿ ಮಾಡುತ್ತೇನೆ.
8. ನವೆಂಬರ್ – ಡಿಸೆಂಬರ್ ನಲ್ಲಿ ನಡೆಯಬಹುದಾದ ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ನಿಮ್ಮ ನಡೆ?
ತಾಲ್ಲೂಕಿನಾದ್ಯಂತ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಚುನಾವಣೆಗೆ ನಿಲ್ಲುವಂತೆ ಯಾರಿಗೂ ಬಲವಂತ ಮಾಡುವುದಿಲ್ಲ. ನಮ್ಮ ಪಕ್ಷದ ನಿಷ್ಠಾವಂತ ಯಾರೇ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿಯ ಯಾವುದೇ ಚುನಾವಣೆಗೆ ಸ್ಪರ್ಧಿಸಿದರೂ ಅಂತಹ ಅಭ್ಯರ್ಥಿಗಳ ಮಾರ್ಗದರ್ಶನ ಮಾಡಿ ಅವರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ.
9. ತಾಲ್ಲೂಕಿನಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿಮ್ಮ ನಿಲುವು..?
ಮತದಾರರು ಮನಸ್ಸು ಮಾಡಿದರೆ ಮಹಿಳಾ ಅಭ್ಯರ್ಥಿಯನ್ನು ತಂದೇ ತರುತ್ತೇನೆ. ಮಹಿಳಾ ಅಭ್ಯರ್ಥಿಯನ್ನು ತರುವ ಆಸೆ ಇದೆ. ಇದಕ್ಕೆ ಮತದಾರರು ಸಹಕಾರ ನೀಡಬೇಕು. ಆ ಮಹಿಳಾ ಅಭ್ಯರ್ಥಿ ಯಾರು ಎಂಬ ಗುಟ್ಟು ಬಿಟ್ಟು ಕೊಡುವುದಿಲ್ಲ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎಲ್ಲರನ್ನೂ ಎದುರಿಸುವ ಶಕ್ತಿ ಇರುವ ಹೆಣ್ಣು ಮಗಳನ್ನು ತರುತ್ತೇನೆ.
10. ಜೆಡಿಎಸ್ ಬಲಪಡಿಸಲು ಹುಸ್ಕೂರು ಆನಂದ್ ಅವರ ನೀಲಿನಕ್ಷೆ ಏನಿದೆ?
ಇತ್ತೀಚಿನ ಚುನಾವಣೆಗಳನ್ನು ಗಮನಿಸಿದಾಗ ಜೆಡಿಎಸ್ ಅಷ್ಟೊಂದು ಗಟ್ಟಿ ಇಲ್ಲದೇ ಇರುವುದು ಕಂಡುಬಂದಿದೆ. ಏಕೆಂದರೆ ಧೀರಜ್ ಮುನಿರಾಜ್ ಹಣ ಬಲದ ಮುಂದೆ ಜೆಡಿಎಸ್ ಕುಗ್ಗಿದೆ. ಜೆಡಿಎಸ್ ನಲ್ಲಿ ಹಣ ಖರ್ಚು ಮಾಡುವವರು ಯಾರೂ ಇಲ್ಲ. ನಾನು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಿಡಿತದಲ್ಲಿ ಇಟ್ಟುಕೊಂಡಿದ್ದೆ. ಆದರೆ ದಿಕ್ಕು ತಪ್ಪಿಸಿ ಹಾಳು ಮಾಡಿದರು. ಕೆಸ್ತೂರು ವಿಎಸ್ಎಸ್ಎನ್ ನಲ್ಲಿ ಜೆಡಿಎಸ್ ಪಕ್ಷಕ್ಕೆ ಹಾನಿ ಮಾಡಲು ನಮ್ಮವರೇ ಬಂದಿದ್ದರು. ಅದನ್ನು ಮೀರಿ ವಿಎಸ್ಎಸ್ಎನ್ ಗೆಲ್ಲಿಸಿಕೊಂಡಿದ್ದೇನೆ. ಡೇರಿ ಚುನಾವಣೆಯಲ್ಲಿ ನಮ್ಮ ನಾಯಕರು ಸಹಕಾರ ನೀಡಲಿಲ್ಲ. ಮುನೇಗೌಡರು ಜೆಡಿಎಸ್ ಮತಗಳ ಹಿಡಿತದಲ್ಲಿ ಇಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ನಾನು ಯಾವುದೇ ಅಧಿಕಾರ ಆಸೆ ಪಡದೇ ಪಕ್ಷ ಉಳಿಸಲು ನಿಷ್ಠಾವಂತ ಕಾರ್ಯಕರ್ತರ ತಂಡ ಕಟ್ಟಲು ನಿರ್ಧಾರ ಮಾಡಿದ್ದೇನೆ. ಬಿಜೆಪಿಗಿಂತ ಜೆಡಿಎಸ್ ಗೆ ಹೆಚ್ಚು ಶಕ್ತಿ ಇದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ.
11. ನೂತನ ತಾಲ್ಲೂಕು ಅಧ್ಯಕ್ಷರ ವಿರುದ್ಧ ನಿಮ್ಮ ಅಪಸ್ವರ ಏಕೆ ?
ನನಗೂ ತಾಲೂಕು ಅಧ್ಯಕ್ಷ ಸ್ಥಾನದ ಆಫರ್ ಇತ್ತು. ಅದನ್ನು ನನಗೆ ಬೇಡವೆಂದು ನಾನೇ ತಿರಸ್ಕಾರ ಮಾಡಿದ್ದೇನೆ. ಪ್ರಸ್ತುತ ತಾಲೂಕು ಅಧ್ಯಕ್ಷರಾಗಿರುವವರು ಪಕ್ಷ ವಿರೋಧಿ ಚಟುವಟಿಕೆ ಮಾಡೋದನ್ನು ಬಿಡಬೇಕು. ಕಳೆದ ಸಂಸದರ ಚುನಾವಣೆಯಲ್ಲಿ ಎನ್.ಡಿ.ಎ ಮತಗಳ ಪ್ರಮಾಣ ಕಡಿಮೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಗೆ ಬಂದ ಮತಗಳ ಸಂಖ್ಯೆಗೂ ಸಂಸದರ ಚುನಾವಣೆಗು ಬಂದ ಸಂಖ್ಯೆಗೂ ಅಜಗಜಾಂತರ ಇದೆ. ಇದನ್ನು ಸರಿಪಡಿಸಲು ತಾಲ್ಲೂಕು ಅಧ್ಯಕ್ಷರು ಶ್ರಮಿಸಲಿ.
12. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಅವಕಾಶ ಸಿಗಲಿದೆಯಾ ? ಅಥವಾ ಎನ್.ಡಿ.ಎ?
2028ರ ಎಂ.ಎಲ್.ಎ ಚುನಾವಣೆ ಬಂದಾಗ ನಿರ್ಧಾರ ಮಾಡಬೇಕು. ಬಿ.ಮುನೇಗೌಡರ ಬಳಿ ಮಾತನಾಡಿದ್ದೇನೆ. ಜೆಡಿಎಸ್ ಪಕ್ಷ ಸಂಘಟನೆ ಮಾಡೋಣ, ಪಕ್ಷ ಸಂಘಟನೆ ಆದಾಗ ನಮ್ಮ ಶಕ್ತಿ ಹೆಚ್ಚಾಗುತ್ತದೆ. ಆಗ ಕುಮಾರಣ್ಣನ ಬಳಿ ಹೋಗೋಣ ಆವಾಗ ಯಾರಿಗಾದರು ಒಬ್ಬರಿಗೆ ಟಿಕೆಟ್ ಕೊಡ್ತಾರೆ ಆಗ ಎಲ್ಲಾರು ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸೋಣ ಎಂದು ಹೇಳಿದ್ದೀನಿ ಅವರು ಏನು ನಿರ್ಧಾರ ತೆಗೆದುಕೊಳ್ಳೊತ್ತಾರೋ ಗೊತ್ತಿಲ್ಲ. ನಾನಂತೂ ಜೆಡಿಎಸ್ ನಿಷ್ಠಾವಂತನಾಗಿ ಇರುತ್ತೇನೆ. ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ ಅದಕ್ಕೆ ನಾನು ಬದ್ಧನಾಗಿರುತ್ತೇನೆ.
13. ನಾಯಕರ ಗುಂಪುಗಾರಿಕೆಯಿಂದ ಕಾರ್ಯಕರ್ತರಿಗೆ ನಷ್ಟವಾಗುವುದಿಲ್ಲವೇ?
ಸಹಜವಾಗಿಯೇ ಮನೆಯೊಂದು ಮೂರು ಬಾಗಿಲು ಎಂಬಂತೆ ಕಾರ್ಯಕರ್ತರು ಧಿಕ್ಕು ತೋಚದಂತಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನಗರಸಭೆಯಲ್ಲಿ ಕೊಟ್ಟ ಮಾತಿನಂತೆ ಎರಡೂವರೆ ವರ್ಷ ಅಧಿಕಾರ ಕೊಡಿಸುವಲ್ಲಿ ನಾಯಕರು ವಿಫಲರಾಗಿದ್ದಾರೆ. ಇದನ್ನು ಸರಿಪಡಿಸುವ ಕಾರ್ಯ ಆಗಬೇಕು.
ಕಾರ್ಯಕರ್ತರಲ್ಲಿ ಮನವಿ..
ಜಾತ್ಯಾತೀತ ಜನತಾದಳ ಪಕ್ಷವು ಪ್ರಾದೇಶಿಕ ಅಸ್ಮಿತೆಯನ್ನು ಹೊಂದಿ, ತಾಲ್ಲೂಕಿನಲ್ಲಿ ಅತ್ಯಂತ ಬಲಿಷ್ಠವಾಗಿದೆ. ಪ್ರತಿ ಬೂತ್ ಮಟ್ಟದಲ್ಲಿಯೂ ನೂರಾರು, ಸಾವಿರಾರು ಪ್ರಾಮಾಣಿಕ ಕಾರ್ಯಕರ್ತರಿದ್ದೀರಿ. ನಿಮಗೆಲ್ಲಾ ಇಷ್ಟು ವರ್ಷಗಳ ಕಾಲ ಶಾಸಕ ಸ್ಥಾನ ಗೆಲ್ಲುವ ಅವಕಾಶವಿದ್ದರೂ ನಾಯಕರು, ಮುಖಂಡರ ಗೊಂದಲಗಳಿಂದಾಗಿ ತುಂಬಾ ಅನ್ಯಾಯವಾಗಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಮುಂದಿನ ದಿನಗಳಲ್ಲಿ ನಿಷ್ಠಾವಂತ ಕಾರ್ಯಕರ್ತರಿಗಾಗಿ, ಜೆಡಿಎಸ್ ಪಕ್ಷ ಸಂಘಟನೆಗಾಗಿ ನಾನು ಸದಾ ನಿಲ್ಲುತ್ತೇನೆ. ಮುಂದೆ ಬಿ.ಮುನೇಗೌಡರು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದರೆ ನನ್ನೆಲ್ಲಾ ಶಕ್ತಿಯನ್ನು ಧಾರೆ ಎರೆದು ವಿಜಯದ ಮಾಲೆ ಹಾಕಲು ಕಾಯ, ವಾಚ, ಮನಸಾ ದುಡಿಯುತ್ತೇನೆ. ಪ್ರಾಮಾಣಿಕ ಸಾಮಾನ್ಯ ಕಾರ್ಯಕರ್ತರು ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ನಾನು ವೈಯಕ್ತಿಕವಾಗಿ ಮಾರ್ಗದರ್ಶನ ನೀಡುವುದರೊಂದಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ. ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ. ಯಾವುದೇ ಕಾರಣಕ್ಕೂ ಉಂಡ ಮನೆಗೆ ದ್ರೋಹ ಮಾಡುವಂತ ಪಕ್ಷ ವಿರೋಧಿ ಕೆಲಸಗಳಿಗೆ ನನ್ನಲ್ಲಿ ಆಸ್ಪದವಿಲ್ಲ.. ಜೈ ಜೆಡಿಎಸ್.. ಜೈ ದೇವೇಗೌಡ ಅಪ್ಪಾಜಿ, ಜೈ ಕುಮಾರಣ್ಣ.. ಜೈ ನಿಖಿಲ್ ಗೌಡ ಎಂದು ಹುಸ್ಕೂರು ಟಿ. ಆನಂದ್ ಹೇಳಿದ್ದಾರೆ.
ವೇಶ್ಯಾವಾಟಿಕೆ...... ಒಂದು ವೃತ್ತಿಯೇ, ಜೀವನ ನಿರ್ವಹಣೆಯ ಒಂದು ಮಾರ್ಗವೇ, ಒಂದು ಉದ್ಯೋಗವೇ, ಸಹಜ ಪ್ರಾಕೃತಿಕ ವಿಧಾನವೇ, ಹೆಣ್ಣಿನ ಶೋಷಣೆಯೇ, ಗಂಡಿನ…
ದೊಡ್ಡಬಳ್ಳಾಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳ ರಸ್ತೆಗುಂಡಿಗಳ ಸಮಸ್ಯೆ ಮತ್ತೆ ತಲೆದೋರಿದ್ದು, ವಾಹನ ಸವಾರರು ಜೀವ…
ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ರಾತ್ರಿ ದೊಡ್ಡಬಳ್ಳಾಪುರ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೃಷಿಚಟುವಟಿಕೆಗಳು ಬಿರುಸುಗೊಂಡಿದ್ದು, ರೈತರು ಡಿಎಪಿ ರಸಗೊಬ್ಬರ ಬದಲಿಗೆ ಸಂಯುಕ್ತ ರಸಗೊಬ್ಬರ ಬಳಕೆ ಮಾಡಲು ಕೃಷಿ ಇಲಾಖೆ…
ಹೊಸಕೋಟೆ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ KSRTC ಬಸ್ ಹಾಗೂ ಕಂಟೇನರ್ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ಹೊಸಕೋಟೆ ಸಮೀಪದ…
ಬೆಂಗಳೂರು: 2026ರ ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಕರ್ನಾಟಕದಿಂದ ರಾಜ್ಯಸಭೆಗೆ…