ಜೂ.19ರಂದು ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ಸಭೆಯಲ್ಲಿ ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು-ಚರ್ಚೆ ಮಾಡಿ‌ ಪರಿಹಾರ ಒದಗಿಸಬೇಕು- ರೈತ ಸಂಘ ಒತ್ತಾಯ

ಜೂ.19ರಂದು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಶಾಶ್ವತ  ನೀರಾವರಿ ಯೋಜನೆ ಜಾರಿ, ಭೂಸ್ವಾಧೀನ ಕೈ ಬಿಡುವುದು, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮೊದಲಾದ ವಿಚಾರಗಳ ಬಗ್ಗೆ ಚರ್ಚೆಯಾಗಿ, ಇವಕ್ಕೆ ಪರಿಹಾರ ದೊರೆಯಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವಕಾಶ ನೀಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಆಡಳಿತ ವಿಕೇಂದ್ರೀಕರಣದ ಭಾಗವಾಗಿ ನಂದಿ ಬೆಟ್ಟದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯಲಿದೆ. ಅಭಿವೃದ್ದಿ ವಿಚಾರದಲ್ಲಿ ಬೆಂಗಳೂರನ್ನೇ ಕೇಂದ್ರೀಕರಿಸಿ, ಇತರೆ ಜಿಲ್ಲೆಗಳನ್ನು ನಿರ್ಲಕ್ಷಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೈಗಾರಿಕೆಗಳು ವಿಕೇಂದ್ರಿಕರಣ ಮಾಡಬೇಕು. ಬೆಂಗಳೂರಿನ ಜನತೆಗೆ ನಮ್ಮ ಭಾಗದ ರೈತರು ಬೆಳೆಯುವ ತರಕಾರಿ, ಹಣ್ಣು, ಹಾಲು ಸರಬರಾಜು ಆಗುತ್ತಿದೆ. ಇಂತಹ ಫಲವತ್ತಾದ ಭೂಮಿಗಳನ್ನ ಕೆಐಎಡಿಬಿಗೆ ನೀಡಿ ರೈತರನ್ನ ಬೀದಿಗೆ ತರಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಅಭಿವೃದ್ಧಿಯ ಹೆಸರಲ್ಲಿ ರೈತರನ್ನ ಒಕ್ಕಲೆಬ್ಬಿಸಲಾಗುತ್ತಿದೆ. ನೆಲಮಂಗಲದಿಂದ ದಾಬಸ್ ಪೇಟೆವರೆಗೆ, ಯಲಹಂಕದಿಂದ ದೊಡ್ಡಬಳ್ಳಾಪುರದವರೆಗೆ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳನ್ನು ಸರ್ಕಾರ ಕೈಗಾರಿಕಾಭಿವೃದ್ಧಿಯ ಹೆಸರಲ್ಲಿ ಭೂಮಿಯನ್ನ ಕಸಿದುಕೊಳ್ಳುತ್ತಿದೆ. ಕ್ವಿನ್ ಸಿಟಿ ಹೆಸರಲ್ಲಿ ಸಾವಿರಾರರು ಎಕರೆ ವಶಪಡಿಸಿಕೊಳ್ಳಲಾಗುತ್ತಿದೆ.  ಇದು ಹೀಗೆ ಮುಂದುವರೆದರೆ ಕೃಷಿ, ಹೈನುಗಾರಿಕೆ ಸಂಪೂರ್ಣ ನಶಿಸಿ ಹೋಗಿ ಮುಂದಿನ ದಿನಗಳಲ್ಲಿ ಆಹಾರ ಕೊರತೆ ಎದುರಿಸಬೇಕಾಗುತ್ತದೆ ಎಂದರು.

ಎತ್ತಿನಹೊಳೆ ಯೋಜನೆ ದಿಕ್ಕು ತಪ್ಪಿದ್ದು ನಮ್ಮ ಜಿಲ್ಲೆಗಳಿಗೆ ನೀರು ಸಿಗುವ ನಿರೀಕ್ಷೆಯೇ ಇಲ್ಲ. ಈ ಯೋಜನೆ ಸರ್ಕಾರದ ಪಾಲಿಗೆ ಹಣ ಮಾಡುವ ಯೋಜನೆಯಾಗಿ ಮಾರ್ಪಟ್ಟಿದೆ. ಪೈಪ್ ಲೈನ್ ಅಳವಡಿಸಿರುವ ರೈತರಿಗೂ ಸೂಕ್ತ ಪರಿಹಾರ ಧನ ನೀಡಿಲ್ಲ. ಸಾವಿರಾರು ಕೋಟಿ ರೂ. ಖರ್ಚು ಮಾಡಿ ನೀರಾವರಿ ಯೋಜನೆಗಳಿಗಿಂತ ಸ್ಥಳೀಯವಾಗಿ ಸಿಗುವ ನೀರಿನ ಮೂಲಗಳಿಂದ ಕೆಲವಾರು ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸಬಹುದಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸಬೇಕು ಎಂದರು.

ಶಾಶ್ವತ ನೀರಾವರಿಗಾಗಿ ಬಯಲು ಸೀಮೆಯ ಜಿಲ್ಲೆಯಲ್ಲಿ ಈಗಾಗಲೇ ಹಲವು ಹೋರಾಟಗಳು ನಡೆದಿವೆ. ಆದರೆ, ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ತಾಲೂಕಿನ ಬೈರಗೊಂಡ್ಲು ಭಾಗದಲ್ಲಿ 10 ಟಿಎಂಸಿ ಡ್ಯಾಂ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ 2 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ರೈತರು ಬೆಳೆಯುವ ತರಕಾರಿ, ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲ ಹೀಗಾಗಿ ಬೆಲೆ ಭದ್ರತೆಯನ್ನ ನೀಡಬೇಕು ಎಂದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಕೈಗಾರಿಕೆಗಳಿದ್ದರೂ ತ್ಯಾಜ್ಯ ಶುದ್ದೀಕರಣ ಘಟಕ ಸ್ಥಾಪನೆಯಾಗಿಲ್ಲ. ಕೆ.ಸಿ ವ್ಯಾಲಿ, ಎಚ್.ಎನ್ ವ್ಯಾಲಿಗಳ ನೀರಿನ ಶುದ್ದೀಕರಣಕ್ಕೆ ಸುಪ್ರೀಂಕೋರ್ಟ್ ನ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ದೂರುಗಳಿವೆ. ಕೆರೆಗಳಿಗೆ ತ್ಯಾಜ್ಯ ನೀರು ಹರಿಯುತ್ತಿದೆ. ತಾಲೂಕಿನಲ್ಲಿ ಶುದ್ದೀಕರಣ ಸ್ಥಾಪಿಸುವ ಕುರಿತು ಹಣಕಾಸು ಇಲಾಖೆ ಮುಂದಿರುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಬೇಕು. ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸರ್ಕಾರ ಬಂದ ಕೂಡಲೇ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು 5 ರೂ.ಗಳಿಂದ 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಎರಡೂ ವರ್ಷ ಕಳೆದರೂ ಜಾರಿಯಾಗಿಲ್ಲ. ಸರ್ಕಾರ ನುಡಿದಂತೆ ನಡೆದಿಲ್ಲ. ಇದೇ ಸಚಿವ ಸಂಪುಟ ಸಭೆಯಲ್ಲಿಯೇ ಈ ತೀರ್ಮಾನ ಜಾರಿಯಾಗಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ದೊಡ್ಡಬಳ್ಳಾಪುರಕ್ಕೆ ಉದ್ದೇಶಿತ ಯೋಜನೆಯಾದ ವೃಷಭಾವತಿ ಸಂಸ್ಕರಿತ ನೀರನ್ನ ತರುವುದು ಬೇಡ. ಹಾಲಿ ಕಾಮಗಾರಿ ಪ್ರಗತಿಯಲ್ಲಿರುವ ಎತ್ತಿನಹೊಳೆ ನೀರನ್ನ ಅಥವಾ ಕಾವೇರಿ ನೀರನ್ನ ಮಾತ್ರ ನಮ್ಮ ತಾಲೂಕಿಗೆ ನೀಡಬೇಕು ಎಂದರು.

ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟಕ್ಕೆ ಮನವಿಗೆ ಅವಕಾಶ ಕೊಡಿ, ಇಲ್ಲವಾದರೆ. ನಮ್ಮೆಲ್ಲ ಬೇಡಿಕೆಗಳನ್ನು ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟದ ಸಭೆಯಲ್ಲಿ ಈಡೇರಿಸಬೇಕು. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಡಲು ಜಿಲ್ಲಾಡಳಿತ ನಮಗೆ ಅವಕಾಶ ಮಾಡಿ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್, ಮುಖಂಡರಾದ ಮೂರ್ತಿ, ಶಿವಣ್ಣ, ಮುರಳಿ, ಧನಂಜಯ, ಹನುಮಂತರಾಯಪ್ಪ, ಚೆಲುವಮೂರ್ತಿ, ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ಮತ್ತಿತ್ತರರು ಇದ್ದರು.

Ramesh Babu

Journalist

Recent Posts

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

2 hours ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

3 hours ago

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

16 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

16 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

17 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

23 hours ago