Categories: ಲೇಖನ

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ…..

” ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ…..”

” ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. ( ಗಿರವಿ ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು ನಿಮಗೆ ಕೂಡಲೇ ಕೊಡುತ್ತೇವೆ, ನಿಮ್ಮ ಗೌರವ ಉಳಿಸುತ್ತೇವೆ…..”

ಹೀಗೆ ದಿನದ 24 ಗಂಟೆಯೂ ಟಿವಿಗಳಲ್ಲಿ ಪ್ರಖ್ಯಾತ ನಟನಟಿಯರು ವಿವಿಧ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡುತ್ತಾರೆ. ಅದು ಎಲ್ಲರಿಗೂ ತಿಳಿದಿದೆ.

ಗೆಳೆಯರೊಬ್ಬರು ಒಂದು ರಾತ್ರಿ ಕರೆ ಮಾಡಿ ದುಃಖದಿಂದ ಇದನ್ನು ವಿವರಿಸಿ ತುಂಬಾ ಭಾವುಕರಾದರು. ಬದುಕೇ ಜಿಗುಪ್ಸೆ ಮೂಡಿದೆ ಎಂದರು. ಆ ಜಾಹೀರಾತಿಗೂ ಅವರ ಜಿಗುಪ್ಸೆಗೂ ಇರುವ ಕಾರಣ ಸೂಕ್ಷ್ಮ ಮನಸ್ಸಿನವರಿಗೆ ಮತ್ತು ಈ ಸಮಾಜದ ಬಗ್ಗೆ ಆಳವಾಗಿ ತಿಳಿದಿರುವವರಿಗೆ ಖಂಡಿತ ಅರ್ಥವಾಗುತ್ತದೆ.

ಅವರು ಹೇಳಿದ್ದು
” ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಟಿವಿ ಸದಾ ಚಾಲನೆಯಲ್ಲಿರುತ್ತದೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ನೋಡುತ್ತಲೇ ಇರುತ್ತಾರೆ. ನಾವು ತಿಂಡಿ ಊಟ ಎಲ್ಲವನ್ನೂ ಟಿವಿ ನೋಡುತ್ತಲೇ ತಿನ್ನುತ್ತೇವೆ. ಆಗ ಈ ಜಾಹಿರಾತು ಪ್ರತಿ ಹತ್ತು ನಿಮಿಷಕ್ಕೆ ಬರುತ್ತಲೇ ಇರುತ್ತದೆ. ನಾನು ಕಳೆದ ವರ್ಷ ತೀರಾ ಅನಿವಾರ್ಯ ಕಾರಣದಿಂದ ನಮ್ಮ ಮನೆಯಲ್ಲಿದ್ದ ಒಡವೆ ಗಿರವಿ ಇಟ್ಟಿದ್ದೇನೆ. ಈ ಏಪ್ರಿಲ್ ನಲ್ಲಿ ಅದನ್ನು ಬಿಡಿಸಿಕೊಳ್ಳಲು ಒಂದು ಹಣಕಾಸಿನ ವ್ಯವಸ್ಥೆ ಮಾಡಿದ್ದೆ. ಆದರೆ ಯಾವುದೋ ಕಾರಣದಿಂದ ಆ ಹಣಕಾಸಿನ ಒಪ್ಪಂದ ಸಾಧ್ಯವಾಗಲಿಲ್ಲ. ಈಗ ಈ ಜಾಹೀರಾತು ನನ್ನ ಮನಸ್ಸಿನ ಮೇಲೆ ಅಗಾಧ ಒತ್ತಡ ಹೇರುತ್ತಿದೆ. ಅದನ್ನು ನೋಡಿದಾಗಲೆಲ್ಲ ನನ್ನ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತದೆ. ನೋವು ಅವಮಾನ ಅಸಹಾಯಕತೆಯಿಂದ ಮುದುಡುತ್ತದೆ. ಅದನ್ನು ಬಿಡಿಸಿ ಕೊಳ್ಳಲು‌ ಸಾಧ್ಯವಾಗದಿದ್ದಕ್ಕೆ ನನ್ನಲ್ಲಿ ಕೀಳರಿಮೆ ಉಂಟಾಗಿ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಊಟ ಸೇರುವುದಿಲ್ಲ. ಬಡ್ಡಿಯ ಕಂತುಗಳನ್ನು ಕೆಲವು ತಿಂಗಳುಗಳಿಂದ ಕಟ್ಟಿಲ್ಲ. ಬಹುಶಃ ಬಡ್ಡಿ ಜಾಸ್ತಿಯಾಗಿ ಆ ಒಡವೆಗಳು ನಮ್ಮಿಂದ ದೂರವಾಗಬಹುದು. ಈಗಾಗಲೇ ಕುಸಿದಿರುವ ನನ್ನ ಮಾನ ಮರ್ಯಾದೆ ಕುಟುಂಬದವರ ದೃಷ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಇಳಿಯುತ್ತದೆ. ಏನಾದರೂ ಮಾಡಿ ಆ ಜಾಹೀರಾತು ನಿಲ್ಲಿಸಲು ಸಾಧ್ಯವೇ ? ”

ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ? ಸಮಸ್ಯೆಯ ಮೂಲ ಇರುವುದಾದರೂ ಎಲ್ಲಿ ? ಬಡತನವೇ ಒಂದು ಶಾಪವಾಗಿ ಕಾಡುತ್ತಿರುವುದೇಕೆ ? ಸಾಲ ಇಲ್ಲದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುವುದು ಏಕೆ ? ಲಕ್ಷಾಂತರ ಹಣ ನೀಡಿ ಈ ರೀತಿಯ ಹತ್ತಾರು ಕಂಪನಿಗಳು ಜಾಹೀರಾತು ನೀಡುವಷ್ಟು ಬೆಳೆದಿರುವುದು ಈ ವ್ಯವಹಾರ ಎಷ್ಟು ಆಳವಾಗಿ ಬೆಳೆದಿದೆ ಎಂಬುದಕ್ಕೆ ಒಂದು ಉದಾಹರಣೆ ಎಂದು ಪರಿಗಣಿಸಿದರೆ ನಮ್ಮ ಜನರ ಪರಿಸ್ಥಿತಿ ಎಷ್ಟು ಅಧೋಗತಿಗೆ ಇಳಿದಿರಬಹುದು ?

ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲವಾಗಿ ನಿರ್ಮಿಸಲಾಗಿದೆ, ಅದರ ಪರಿಣಾಮ ವೈಯಕ್ತಿಕ ಮಾನಸಿಕ ಸ್ಥಿಮಿತತೆ ಕೂಡ ದುರ್ಬಲವಾಗಿದೆ. ಅದು ಕೌಟುಂಬಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.
ಅದರ ಫಲಿತಾಂಶ ಒಂದು ಜಾಹೀರಾತು ಸಹ ನಮ್ಮನ್ನು ಅಲುಗಾಡಿಸುತ್ತಿದೆ.

ಹಣದ ದುರ್ಬಲ ನಿರ್ವಹಣೆ ನಮ್ಮ ಸಾಮಾನ್ಯ ಜನರ ಬಹುದೊಡ್ಡ ಸಮಸ್ಯೆ. ಕುಟುಂಬದ ಬೇಡಿಕೆ ಮತ್ತು ಪೂರೈಕೆಗಳ ಮಧ್ಯೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸುತ್ತಮುತ್ತಲಿನ ಜನರ ಜೀವನ ಕ್ರಮದ ಒತ್ತಡ ನಮ್ಮ ಮೇಲೆ ಬೀಳುತ್ತದೆ. ಅವರಂತೆ ನಾವು ಅಥವಾ ಅವರಿಗಿಂತ ಹೆಚ್ಚು ಇರಬೇಕು ಎಂಬ ಮನೋಭಾವ, ಅವರ ದೌರ್ಬಲ್ಯ ಗುರುತಿಸದೆ ಬಾಹ್ಯ ಚಟುವಟಿಕೆಗಳು ಮಾತ್ರ ನಮ್ಮ ಕಣ್ಣಿಗೆ ಕಾಣುವುದು, ಹೆಂಡತಿ ಮಕ್ಕಳ ಆಸೆ ಪೂರೈಸುವ ತವಕ, ಸ್ವಂತ ಮನೆ, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್, ಮೊಬೈಲ್, ಕಾರು, ಪ್ರತಿಷ್ಠಿತ ಶಾಲೆ, ಬಟ್ಟೆಗಳು ಎಲ್ಲವನ್ನೂ ಈಗ ಅವಶ್ಯಕ ವಸ್ತುಗಳು ಎಂದು ಪರಿಗಣಿಸಿರುವುದು, ಅದಕ್ಕೆ ತಕ್ಕಂತೆ ನಿರ್ದಿಷ್ಟ ಆದಾಯ ಇಲ್ಲದಿರುವುದು, ಅದು ನಮಗೆ ಅರಿವಾಗದಿರುವುದು ಎಲ್ಲವೂ ಒಟ್ಟಾಗಿ ಸೇರಿ ನಮ್ಮ ಮೂಲ ಮಾನಸಿಕ ಸ್ಥಿತಿ ಸಂಪೂರ್ಣ ಬದಲಾಗಿದೆ. ಆದ್ಯತೆಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಗುರುತಿಸಿದರೂ ಕುಟುಂಬ ವ್ಯವಸ್ಥೆ ಅದನ್ನು ಪಾಲಿಸಲು ಬಿಡುತ್ತಿಲ್ಲ.

ಅದರ ಪರಿಣಾಮವೇ ಈ ಜಾಹೀರಾತುಗಳ ಉಗಮ. ಅದನ್ನು ತಡೆಯುವುದು ಸಾಧ್ಯವಿಲ್ಲ. ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು ನಿಜ, ಆದರೆ ಅದೂ ಕಷ್ಟ. ಮೊದಲೇ ಕುಂಟುತ್ತಾ ಸಾಗುತ್ತಿದ್ದ ಬಹಳಷ್ಟು ಜನರ ಜೀವನ ಅತಿಯಾದ ಬೆಲೆ ಏರಿಕೆ ಮತ್ತು ತೆರಿಗೆಯ ಕಾರಣದಿಂದ ಮಲಗಿಬಿಟ್ಟಿದೆ. ಬಹಿರಂಗವಾಗಿ ಹೇಳಿಕೊಳ್ಳಲಾಗದ ಒತ್ತಡ ಕುಟುಂಬದ ಜವಾಬ್ದಾರಿ ನಿರ್ವಹಿಸುವವರ ಮೇಲಿದೆ. ಮುಂದಿನ ಕೆಲವು ವರ್ಷಗಳು ಇನ್ನೂ ಒತ್ತಡ ಹೆಚ್ಚಿಸುತ್ತವೆ.

ಪರಿಹಾರ ?….

ಈ ವಿಚಿತ್ರ ಸನ್ನಿವೇಶಕ್ಕೆ ಎಲ್ಲರಿಗೂ ಸಮನಾಗಿ ಅನ್ವಯವಾಗುವ ಯಾವುದೇ ಫಾರ್ಮುಲ ಇಲ್ಲ. ಹಣದ ಹರಿವು ಹೆಚ್ಚಿಸಿಕೊಳ್ಳುವುದು ಕಷ್ಟ. ಒಬ್ಬೊಬ್ಬರ ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿ ಭಿನ್ನವಾಗಿದೆ. ಆದ್ದರಿಂದ ನಮ್ಮ ಇಡೀ ಪರಿಸ್ಥಿತಿಯನ್ನು ತಾವೇ ಪರಾಮರ್ಶಿಸಿಕೊಂಡು ಬಂದದ್ದೆಲ್ಲಾ ಬರಲಿ ಧೈರ್ಯವಾಗಿ ಎದುರಿಸೋಣ ಎಂದು ದೃಢ ನಿರ್ಧಾರ ಮಾಡಬೇಕು. ನಮಗಿಂತ ಕಷ್ಟದಲ್ಲಿರುವ ಎಷ್ಟೋ ಜನರನ್ನು ನೋಡಿ ಅವರಿಗಿಂತ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ ಎಂದು ಸಮಾಧಾನ ಮಾಡಿಕೊಳ್ಳಬೇಕು. ಮಾನ ಮರ್ಯಾದೆ ಅವಮಾನ ಎಂಬುದನ್ನು ಸ್ವಲ್ಪ ದಿನ ಮೂಟೆ ಕಟ್ಟಿ ಮನೆಯ ಅಟ್ಟದ ಮೇಲೆ ಇಡಬೇಕು. ಎಲ್ಲರ ನಿಂದನೆ ಸಹಿಸಿಕೊಳ್ಳುವ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಬೇಕು.

ಮುಂದಿನ ದಿನಗಳು ಯಾವುದೇ ಕ್ಷಣದಲ್ಲಿ ಬದಲಾಗಿ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ಆಶಾಭಾವನೆಯಿಂದ ಬದುಕನ್ನು ಎದುರಿಸಬೇಕು. ಕಷ್ಟಗಳನ್ನೇ ಸೋಲಿಸುವ, ಕಷ್ಟಗಳೇ ನಾಚಿಕೆ ಪಡುವಂತ, ಕಷ್ಟಗಳೇ ಅರಿವಾಗದಂತ ಮಾನಸಿಕ ಸ್ಥಿತಿ ತಲುಪಲು ಪ್ರಯತ್ನಿಸಬೇಕು. ಅದು ನಮ್ಮ ಮೊದಲ ಆದ್ಯತೆಯಾಗಬೇಕು. ಮುಂದೆ ನೋಡೋಣ.

” ಮಾನ್ಯ ಸಿನಿಮಾ ನಟ ನಟಿಯರೇ, ಟಿವಿ ನಿರೂಪಕ ನಿರೂಪಕಿಯರೇ, ಈ ರೀತಿಯ ಜಾಹೀರಾತುಗಳಲ್ಲಿ ಅಭಿನಯಿಸುವುದನ್ನು ದಯವಿಟ್ಟು ನಿಲ್ಲಿಸಿ. ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ. ಚಿನ್ನವನ್ನು ಹೇಗೆ ಸಂಪಾದಿಸಬೇಕು, ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಜಾಹೀರಾತು ನೀಡಬೇಕೆ ಹೊರತು ಮನೆಯಲ್ಲಿರುವ ಚಿನ್ನವನ್ನು ಮಾರಾಟ ಮಾಡಲು, ಗಿರವಿ ಇಡಲು ನಿಮ್ಮ ಸಲಹೆಗಳು ನಮಗೆ ಬೇಕಿಲ್ಲ. ಅದು ನಮಗೆ ಈಗಾಗಲೇ ಗೊತ್ತಿದೆ. ತೀರಾ ಅನಿವಾರ್ಯವಾದಾಗ ಬ್ಯಾಂಕುಗಳಿಗೆ ಹೋಗಿ ನಾವೇ ಅಡ ಇಡುತ್ತೇವೆ. ಈ ಸಮಾಜದ ಮೌಲ್ಯಗಳ ಬಗ್ಗೆ ಅರಿತು ನಿಮ್ಮ ಬದುಕನ್ನು ಶ್ರಮದಿಂದ, ಪ್ರತಿಭೆಯಿಂದ ರೂಪಿಸಿಕೊಳ್ಳಿ. ಸುಳ್ಳು, ಮೋಸ, ವಂಚನೆ,
ಅಪಮೌಲ್ಯದ ಜಾಹೀರಾತುಗಳಿಂದಲ್ಲ, ಧನ್ಯವಾದಗಳು……”

ಎಲ್ಲರಿಗೂ ಒಳ್ಳೆಯದಾಗಲಿ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣ: ವಿಚಾರಣೆಗೆ ಹಾಜರಾದ ರಕ್ಷಕ್ ಬುಲೆಟ್: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್…

7 minutes ago

ಒಳಮೀಸಲಾತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ…

2 hours ago

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ- 10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ- ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…

3 hours ago

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ ಕೇಸ್: ಅತ್ಯಾಚಾರ ಆರೋಪ ಸಾಬೀತು: ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ತೀರ್ಪು: ಶಿಕ್ಷೆಯ ಪ್ರಮಾಣ ನಾಳೆ ಪ್ರಕಟ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿದ್ದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಆರೋಪ ಸಾಬೀತಾಗಿದೆ. ಪ್ರಜ್ವಲ್ ರೇವಣ್ಣ ಅಪರಾಧಿ…

6 hours ago

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು: ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣಗಳ ಕಳವು

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬರುತ್ತಿದ್ದ ಸುಂದರ ಯುವತಿಯರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣಗಳನ್ನ ಕ್ಷಣ…

10 hours ago

ಸಿಂಗ್ರಹಳ್ಳಿ ಗ್ರಾಮದ ಗೋಮಾಳ ಜಮೀನು ಉಳ್ಳವರಿಂದಲೇ ಒತ್ತುವರಿ- ಮುನಿಆಂಜಿನಪ್ಪ ಆರೋಪ

ದೇವನಹಳ್ಳಿ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಿಂಗರಹಳ್ಳಿ ಗ್ರಾಮದ ಸರ್ವೆ ನಂಬರ್ -6 ರಲ್ಲಿ ಸುಮಾರು 60…

12 hours ago