Categories: ಲೇಖನ

ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ…ಎಚ್ಚರಿಕೆ…. ಎಚ್ಚರಿಕೆ…. ಎಚ್ಚರಿಕೆ…….

ಎಚ್ಚರಿಕೆ…. ಎಚ್ಚರಿಕೆ…. ಎಚ್ಚರಿಕೆ……

ಚಂದ್ರ ಗ್ರಹಣ, ಅಲ್ಲ ರಕ್ತ ಚಂದ್ರ ಗ್ರಹಣ, ಅಲ್ಲ ಖಗ್ರಾಸ ಚಂದ್ರ ಗ್ರಹಣ, ಅಲ್ಲ ರಾಹು ಕೇತು ಶನಿ ಪ್ರವೇಶಿದ ಕಾಟ………

ಹೌದು,
ರಕ್ತದ ಬಣ್ಣ ಕೆಂಪು,
ಗ್ರಹಣದ ಪರಿಣಾಮ ಘೋರ,
ರಕ್ತದ ಅರ್ಥ ಸಾವು ನೋವು.
ಇದು ಭಯಂಕರ.
ನಮ್ಮ ಕನಸಿನ ಚಂದಮಾಮ ರಕ್ತ ವರ್ಣದಲ್ಲಿ,
ಇದು ಸಹಜ ಸ್ವಾಭಾವಿಕ ಅಲ್ಲ.
ಇದು ಪ್ರಳಯದ ಮುನ್ಸೂಚನೆ…..

ಅಲ್ಲೆಲ್ಲೋ ಭೂಕಂಪ, ಇನ್ನೆಲ್ಲೋ ಸುನಾಮಿ, ಮತ್ತೆಲ್ಲೋ ಅಗ್ನಿಯ ನರ್ತನ, ಮಗದೆಲ್ಲೋ ಮೇಘ ಸ್ಪೋಟ, ಅಪಘಾತ, ಅಪರಾಧ, ಅನಾರೋಗ್ಯ, ಬಾಂಬ್ ಸ್ಪೋಟ ಪ್ರಖ್ಯಾತರ ಸಾವು,
ಅಬ್ಬಬ್ಬಾ…………

ನಿಮ್ಮ ರಾಶಿ ಯಾವುದು,
ಅದಕ್ಕೆ ಅನುಗುಣವಾಗಿ ಗ್ರಹಣದ ಪರಿಣಾಮ ನಿಮ್ಮ ಮೇಲೆ.

ಭಯವಾಗುತ್ತಿದೆಯೇ…….

ಆದರೂ ಇದಕ್ಕೆ ಪರಿಹಾರವೂ ಇದೆ.
ಹೋಮ, ಹವನ, ಮಂತ್ರ ತಂತ್ರಗಳನ್ನು ಮಾಡಿ,
ಜಪ ತಪ ವ್ರತಗಳನ್ನು ಮಾಡಿ,
ನೇಮ ನಿಷ್ಠೆಗಳಿಂದ ಇದ್ದರೆ ಇದರ ಪರಿಣಾಮದ ತೀವ್ರತೆ ಕಡಿಮೆಯಾಗುತ್ತದೆ……….

ಇದು ನಿಜವೇ ? ಸುಳ್ಳೇ ? ನಂಬಿಕೆಯೇ ? ಮೂಲ ನಂಬಿಕೆಯೇ ? ಮೂಡ ನಂಬಿಕೆಯೇ ? ವೈಚಾರಿಕತೆಯೇ ? ವಾಸ್ತವವೇ ?
ಪ್ರಶ್ನಿಸಬೇಕೆ ಅಥವಾ ಒಪ್ಪಿಕೊಳ್ಳಬೇಕೆ ?

ಸೃಷ್ಟಿಯ ಅಗಾಧತೆಯಲ್ಲಿ ಕಲ್ಪನೆಗೂ ನಿಲುಕದ – ವಿಜ್ಞಾನಕ್ಕೂ ಭೇದಿಸಲಾಗದ ಅಸಂಖ್ಯಾತ ವಿಸ್ಮಯಗಳು ನಡೆಯುತ್ತದೆ. ಅನೇಕ ರಹಸ್ಯಗಳನ್ನು ಅದು ತನ್ನ ಒಡಲೊಳಗೆ ಅಡಗಿಸಿಕೊಂಡಿದೆ. ಕೆಲವೊಮ್ಮೆ ಅದರ ಸಹಜ ವರ್ತನೆಗಳು ಹುಲುಮಾನವರಾದ ನಮಗೆ ಕೌತುಕವನ್ನೂ, ಭಯವನ್ನೂ ಉಂಟುಮಾಡುತ್ತದೆ. ಎಲ್ಲಕ್ಕೂ ಮುಖ್ಯವಾಗಿ ಸಾವು ಸೋಲೆಂಬ ಭಯ ನಮ್ಮನ್ನು ಕಾಡುತ್ತದೆ. ಅದರ ಪರಿಣಾಮವೇ ಚಿತ್ರ ವಿಚಿತ್ರ ಆಲೋಚನೆಗಳು ಮೂಡುತ್ತದೆ.
ವಿಜ್ಞಾನಿಗಳು ತಮ್ಮ ಅರಿವಿಗೆ ನಿಲುಕಿದಷ್ಟು ಮುನ್ಸೂಚನೆ ಕೊಡುತ್ತಾರೆ. ಜ್ಯೋತಿಷಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಾರೆ.

ವಾಸ್ತವವೆಂದರೆ,
ನಾವೆಲ್ಲರೂ ಪ್ರಕೃತಿಯ ಕೂಸುಗಳು. ಹೇಗೆ ಅದರ ಎಲ್ಲಾ ಅಂಶಗಳನ್ನು ಅನುಭವಿಸುತ್ತಾ ಸಾಗುತ್ತೇವೆಯೋ ಹಾಗೆಯೇ ನಮ್ಮಿಂದ ನಿಯಂತ್ರಿಸಲಾಗದ ಅನೇಕ ಸಂಗತಿಗಳೂ ನಡೆಯುವುದನ್ನು ಸಹಜವಾಗಿ ಒಪ್ಪಿಕೊಂಡು ಸಂಕಷ್ಟಗಳು ಎದುರಾದಾಗ ಅದಕ್ಕೆ ಅಷ್ಟೇ ಸಹಜವಾಗಿ ಪ್ರತಿಕ್ರಿಯಿಸುತ್ತಾ ಸಹಸ್ರಾರು ವರ್ಷಗಳ ನಿರಂತರ ಬದಲಾವಣೆಗಳನ್ನು ಗಮನಿಸುತ್ತಾ ಮುನ್ನಡೆಯುವುದೇ ಅತ್ಯಂತ ಸೂಕ್ತ . ಇಲ್ಲದಿದ್ದರೆ ಅನಾವಶ್ಯಕ ಗೊಂದಲ, ಗಾಬರಿಗಳಿಗೆ ಒಳಗಾಗಿ ಮೂರ್ಖರ, ಅಜ್ಞಾನಿಗಳ, ಲಾಭಕೋರರ ಮಾತುಗಳಿಗೆ ಮರುಳಾಗಿ ಸೃಷ್ಟಿಯ ಸಹಜತೆಯನ್ನೇ ಭಯದಿಂದ ನೋಡುವ ಮನಸ್ಥಿತಿ ಬೆಳೆಯುತ್ತದೆ.

ಸೃಷ್ಟಿಯ ಶಿಶುಗಳು ನಾವು ಎಂಬುದನ್ನು ಮರೆಯದಿರೋಣ.
ನಕಲಿ ಜ್ಯೋತಿಷಿಗಳ ಮಾತಿಗೆ ಮರುಳಾಗದಿರೋಣ.
ಸೃಷ್ಟಿಗೆ ನಿಯತ್ತಾಗಿರೋಣ.
ಬಂದದ್ದೆಲ್ಲಾ ಬರಲಿ.
ಧೈರ್ಯವಾಗಿ ಎದುರಿಸೋಣ ಮತ್ತೆ ಪ್ರಕೃತಿಯಲ್ಲಿ ಲೀನವಾಗುವವರೆಗೂ……

ಇಂತಹ ಪ್ರಾಕೃತಿಕ ವೈಪರೀತ್ಯಗಳ ವಿಷಯದಲ್ಲಿ ಮಾಧ್ಯಮಗಳ ಮೂಲಕ ಯಾಕ್ರೀ ತಲೆ ತಿಂತೀರಾ ?

ಸೂರ್ಯ, ಚಂದ್ರ, ಭೂಮಿ, ಆಕಾಶಕಾಯಗಳ ಸಹಜ ನಡವಳಿಕೆಯ ಒಂದು ಭಾಗ ಗ್ರಹಣ. ಸೃಷ್ಟಿಯ ನಿರಂತರ ಮುಂದುವರಿಕೆಯ ಸ್ವಾಭಾವಿಕ ಲಕ್ಷಣ ಗ್ರಹಣ…….

ಒಳ್ಳೆಯದಾದರೂ ಅನುಭವಿಸಬೇಕು, ಕೆಟ್ಟದ್ದಾದರೂ ಅನುಭವಿಸಬೇಕು. ಸಧ್ಯಕ್ಕೆ ಅದನ್ನು ನಿಯಂತ್ರಿಸಲು ಮಾನವರಾದ ನಮಗೆ ಸಾಧ್ಯವಿಲ್ಲ. ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಅದರ ನೇರ ಅಥವಾ ಪರೋಕ್ಷ ಪರಿಣಾಮಗಳ ಬಗ್ಗೆ ನಮಗೆ ಅರಿವಾಗುವುದಿಲ್ಲ.

ಅಕಸ್ಮಾತ್ ಒಂದು ವೇಳೆ ಅದರ ಪರಿಣಾಮಗಳು ಏನಾದರೂ ಇದ್ದರೆ ,
ಇದರ ಬಗ್ಗೆಯೇ ಹಗಲಿರುಳು ಪ್ರತಿ ಕ್ಷಣ ನಿರಂತರವಾಗಿ ಅಧ್ಯಯನ ಮಾಡುತ್ತಿರುವ ಭಾರತ, ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ ಮುಂತಾದ ಇಡೀ ವಿಶ್ವದ ಖಗೋಳ ವಿಜ್ಞಾನಿಗಳು ಅದರ ಬಗ್ಗೆ ಅಧೀಕೃತ ಮಾಹಿತಿ ನೀಡುತ್ತಾರೆ. ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುತ್ತಾರೆ….

ಅದು ಬಿಟ್ಟು ಕೆಂಪಗಿದ್ದರೆ ರಕ್ತ ಚಂದ್ರ ಗ್ರಹಣ ಎಂತಲೂ, ಕಪ್ಪಗಿದ್ದರೆ ಕರಾಳ ಚಂದ್ರ ಗ್ರಹಣ ಎಂತಲೂ, ಬಿಳಿಯಾಗಿ ಕಾಣಿಸಿದರೆ ಶ್ವೇತ ಚಂದ್ರ ಗ್ರಹಣ ಎಂತಲೂ ಏನೇನೂ ಹೆಸರಿನಿಂದ ಕರೆದು ಯಾಕ್ರೀ ಭಯಪಡಿಸುತ್ತೀರಿ.

ಇಲ್ಲಿಯೇ, ಬೆಂಗಳೂರಿನಲ್ಲಿಯೇ ಇಸ್ರೋ ಎಂಬ ಭಾರತದ ಅಧೀಕೃತ ಬಾಹ್ಯಾಕಾಶ ಸಂಸ್ಥೆಯಿದೆ. ಅದರ‌ ವಿಜ್ಞಾನಿಗಳನ್ನು ಭೇಟಿ ಮಾಡಿ ವಿಷಯ ತಿಳಿದು ಅದನ್ನು ಜನರಿಗೆ ತಿಳಿಸಿ.

ಯಾರೋ ಕವಡೆ ಶಾಸ್ತ್ರದ ನಕಲಿ ಜ್ಯೋತಿಷಿಗಳನ್ನು ಮಾತನಾಡಿಸುತ್ತಾ, ಒಬ್ಬೊಬ್ಬರು ಒಂದೊಂದು ಭಯ ಹುಟ್ಟಿಸುತ್ತಾ, ಅದಕ್ಕೆ ನಿರೂಪಕರು ಇನ್ನಷ್ಟು ಮಸಾಲೆ ಸೇರಿಸುತ್ತಾ ಈ ದೇಶವನ್ನು ಹಿಂದಕ್ಕೆ ಎಳೆಯುತ್ತಿದ್ದಾರೆ.

ನೋಡಿ ಸತ್ಯ ಮತ್ತು ವಾಸ್ತವವನ್ನು ಜ್ಯೋತಿಷಿಗಳೇ ಹೇಳಲಿ, ವಿಜ್ಞಾನಿಗಳೇ ಹೇಳಲಿ, ಮಕ್ಕಳೇ ಹೇಳಲಿ ನಮಗೇನು. ಅದನ್ನು ಒಪ್ಪೋಣ. ಆದರೆ ಅದು ಸಾರ್ವತ್ರಿಕವಾಗಿರಬೇಕು. ನಿರ್ಧಿಷ್ಟ ಕಾರಣ, ಪರಿಣಾಮ ಮತ್ತು ಕಾಲದ ಅಗ್ನಿ ಪರೀಕ್ಷೆಯಲ್ಲಿ ಪ್ರಾಯೋಗಿಕವಾಗಿ ದೃಢಪಟ್ಟಿರಬೇಕು. ಸರ್ಕಾರವೆಂಬ ಜನರ ಬಹುದೊಡ್ಡ ಮತ್ತು ಏಕೈಕ ಸಂಸ್ಥೆ ಅದನ್ನು ಅಧೀಕೃತ ಎಂದು ದೃಢಪಡಿಸಬೇಕು.
ಆಗ ಅದೂ ಸಂಪೂರ್ಣ ಸತ್ಯವಲ್ಲದಿದ್ದರೂ ಇರುವ ಆಯ್ಕೆಯಲ್ಲಿ ಅದೇ ಅಂತಿಮ ಎಂದು ತಿಳಿಯಬಹುದು.

ಟಿವಿಯಲ್ಲಿ ಜ್ಯೋತಿಷಿಗಳು ಹೇಳುವ ಕಾರಣ ,ಪರಿಣಾಮಗಳು ನಿಜವೇ ಆಗಿದ್ದರೆ ಭಾರತ ಸರ್ಕಾರಕ್ಕೆ ಹೇಳಿ ಅವರಿಂದಲೇ ಹೋಮ, ಹವನ ಮಾಡಿಸಿ ಇಡೀ ರಾಷ್ಟ್ರವನ್ನು ದುಷ್ಪರಿಣಾಮಗಳಿಂದ ರಕ್ಷಿಸಿ ಜನರಿಗೆ ಒಳಿತು ಮಾಡಬಹುದಲ್ಲವೇ ?

ಅದುಬಿಟ್ಟು,
ದಾರಿಯಲ್ಲಿ ಹೋಗುವ ಪ್ರತಿಯೊಬ್ಬರು ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿರುವ , ಒಮ್ಮೆಯೂ ಬಾಹ್ಯಾಕಾಶ ಯಾತ್ರೆ ಮಾಡದ ಅಥವಾ ಹಿಂದಿನ ಕೆಲವು ಭಾರತೀಯ ತತ್ವಶಾಸ್ತ್ರಜ್ಞರು ಅಧ್ಯಯನ ಮತ್ತು ಅನುಭವದಿಂದ ಹೇಳಿರುವ ಒಂದು ಅಂದಾಜಿನ ಗ್ರಹಗಳ ಚಲನೆಯ ಬಗ್ಗೆ ಮಾಹಿತಿಯೂ ಇಲ್ಲದ, ಇದ್ದರೂ ಅದನ್ನು ಇಂದಿನ ಆಧುನಿಕ ಕಾಲದಲ್ಲಿ ಪರೀಕ್ಷೆಗೊಡ್ಡದ, ಕೇವಲ ಚಾನಲ್‌ನಲ್ಲಿ ಕಾರ್ಯಕ್ರಮ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಜನರನ್ನು ದಾರಿ ತಪ್ಪಿಸುತ್ತಿರುವ ಈ ಮಾಧ್ಯಮಗಳಿಗೆ ಇವತ್ತಿನ ಭಾರತದ ಪರಿಸ್ಥಿತಿಯಲ್ಲಿ ಖಂಡಿತ ಕ್ಷಮೆ ಇಲ್ಲ. ವಿವೇಚನಾರಹಿತರಂತೆ ವರ್ತಿಸುತ್ತಿರುವ ಅವರನ್ನು ಸಮಾಜದ ವೈಜ್ಞಾನಿಕ ಮನೋಭಾವದ ದ್ರೋಹಿಗಳು ಎಂದು ನಿಸ್ಸಂಶಯವಾಗಿ ಕರೆಯಬಹುದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಮದ್ದೂರಿನ ಗಣೇಶ – ಮಸೀದಿ – ಕಲ್ಲು ತೂರಾಟ ಮತ್ತು ಜನಸಾಮಾನ್ಯ……

ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…

4 hours ago

ಉಪರಾಷ್ಟ್ರಪತಿ‌ ಚುನಾವಣೆ: ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರಿಗೆ ಭರ್ಜರಿ ಗೆಲುವು

ಮಂಗಳವಾರ ನಡೆದ ಉಪರಾಷ್ಟ್ರಪತಿ‌ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್‌ ಅವರು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ಉಪರಾಷ್ಟ್ರಪತಿ…

15 hours ago

40 ಕೋಟಿ ಮೌಲ್ಯದ 6 ಎಕರೆ ಸರ್ಕಾರಿ ಆಸ್ತಿ ಸರ್ಕಾರದ ವಶ: ಡಿಸಿ ಕ್ರಮಕ್ಕೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಅಭಿನಂದನೆ ಸಲ್ಲಿಕೆ

ದೊಡ್ಡಬಳ್ಳಾಪುರ : 40 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ ಸರ್ಕಾರದ ವಶಕ್ಕೆ ಪಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜುರವರ…

17 hours ago

ಸಚಿವ ಕೆ.ಎಚ್.ಮುನಿಯಪ್ಪವರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಯಾವುದೇ ಕಾರಣಕ್ಕೂ ಕಡೆಗಣನೆ ಮಾಡಿಲ್ಲ- ಯೂತ್ ಕಾಂಗ್ರೆಸ್ ಸ್ಪಷ್ಟನೆ

ಆಹಾರ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪನವರು ಅನುಭವಿ, ಹಿರಿಯ ರಾಜಕಾರಣಿ. ಕೇಂದ್ರ, ರಾಜ್ಯ…

17 hours ago

ಜೈಲಿನಲ್ಲಿ ದರ್ಶನ್ ಗೆ ನರಕಯಾತನೆ: “ನಾನು ಬಿಸಿಲು ನೋಡಿ 30 ದಿನಗಳಾಗಿವೆ- ಕೈ ಎಲ್ಲಾ ಫಂಗಸ್ ಬಂದಿದೆ- ನನಗೆ ಪಾಯಿಸನ್ ಕೊಡಿ”- ಜಡ್ಜ್ ಬಳಿ ದರ್ಶನ್ ಮನವಿ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಗೆ ಈ ಬಾರಿ ಜೈಲಿನಲ್ಲಿ ಯಾವುದೇ ಸೌಕರ್ಯಗಳು…

23 hours ago

ಮರ ಬಿದ್ದು ಗರ್ಭಿಣಿ ಮತ್ತು ವಿದ್ಯಾರ್ಥಿನಿ ಸಾವು

ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿ ನಡೆದ ದುರಂತ ಘಟನೆಯಲ್ಲಿ, ಮರ ಕುಸಿದು ಬಿದ್ದ ಪರಿಣಾಮ ಐದು ತಿಂಗಳ ಗರ್ಭಿಣಿ ಸಾವಿತ್ರಿ…

1 day ago