ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರ ಸಹಕಾರ ಅಗತ್ಯ- ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಕರೆ

ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಮನೆಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ, ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಹಸ್ತಾಂತರಿಸುವ ಮೂಲಕ ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ಅನುಷ್ಠಾನದ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸರ್ಕಾರವು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ನು ಅನುಷ್ಠಾನಗೊಳಿಸಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಒಣ ತ್ಯಾಜ್ಯ, ಹಸಿ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ಕಪ್ಪು ತ್ಯಾಜ್ಯವಾಗಿ ನಾಲ್ಕು ವಿಭಾಗದಲ್ಲಿ ತ್ಯಾಜ್ಯ ವಿಂಗಡಿಸಿ, ಸ್ವಚ್ಛ ವಾಹಿನಿ ವಾಹನಕ್ಕೆ ನೀಡುವಲ್ಲಿ ಸಹಕರಿಸಬೇಕು. ಇದರಿಂದ ಸ್ವಚ್ಚ ಹಾಗೂ ಸುಂದರ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.

ನಾವು ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ನಮ್ಮ ಆರೋಗ್ಯದ ಮೇಲೆಯೇ ದುಷ್ಪರಿಣಾಮ ಬೀರುತ್ತದೆ ಎನ್ನುವ ಸ್ಪಷ್ಟ ಅರಿವು ಸಾರ್ವಜನಿಕರಲ್ಲಿ ಇರಬೇಕು. ಪೌರಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳ ಸ್ವಚ್ಚ ವಾಹಿನಿ ವಾಹನ ಮನೆ ಬಾಗಿಲಿಗೆ ಬಂದಾಗ ವಿಂಗಡಿಸಿದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಕೊಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಿ ಉದ್ದೇಶಗಳಿಗೆ ಸೂಕ್ತ ಜಾಗ ಕೊಡಿಸಲು ಪ್ರಯತ್ನಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎಸ್ ರಮೇಶ್ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026 ಅನ್ನು ಏಪ್ರಿಲ್ 1, 2026 ರಂದು ಜಾರಿಗೆ ಬಂದಿದ್ದು, ಭಾರತವನ್ನು ಸ್ವಚ್ಛ, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರವಾಗಿಸುವ ಗುರಿಯನ್ನು ಹೊಂದಿವೆ.

ಹಸಿ ತ್ಯಾಜ್ಯ: ಆಹಾರದ ತುಣುಕುಗಳು, ತರಕಾರಿ ಸಿಪ್ಪೆಗಳು ಮತ್ತು ಅಡುಗೆ ತ್ಯಾಜ್ಯ.
ಒಣ ತ್ಯಾಜ್ಯ: ಕಾಗದ, ಪ್ಲಾಸ್ಟಿಕ್, ಲೋಹ ಮತ್ತು ಗಾಜು.
ನೈರ್ಮಲ್ಯ ತ್ಯಾಜ್ಯ: ಡೈಪರ್‌ಗಳು ಮತ್ತು ನೈರ್ಮಲ್ಯ ನ್ಯಾಪ್‌ಕಿನ್‌ಗಳು.
ವಿಶೇಷ ಆರೈಕೆ ತ್ಯಾಜ್ಯ: ಬ್ಯಾಟರಿಗಳು, ಔಷಧಗಳು, ಬಲ್ಬ್‌ಗಳು ಮತ್ತು ಅಂತಹುದೇ ವಸ್ತುಗಳು ನಾಲ್ಕು-ಮಾರ್ಗಗಳಲ್ಲಿ ಬೇರ್ಪಡಿಸುವುದು ಕಡ್ಡಾಯ ಎಂದರು.

ತ್ಯಾಜ್ಯ ನಿರ್ವಹಣಾ ಮಾನದಂಡಗಳನ್ನು ಪಾಲಿಸದ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸಂಸ್ಥೆಗಳು ಪರಿಸರ ದಂಡ ಪಾವತಿಸಬೇಕು. ದೊಡ್ಡ ವಸತಿ ಸಂಕೀರ್ಣಗಳು, ವಿಶ್ವವಿದ್ಯಾಲಯಗಳು, ಮಾಲ್‌ಗಳು ಮತ್ತು ಸರ್ಕಾರಿ ಕಟ್ಟಡಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರ ಮೇಲೆ ನಿಯಮಗಳು ಹೆಚ್ಚಿನ ಜವಾಬ್ದಾರಿಯನ್ನು ಇದ್ದು, ಅವರು ಉತ್ಪಾದಿಸುವ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸಂಸ್ಕರಿಸಬೇಕು.

ನಾವು ತ್ಯಾಜ್ಯವನ್ನು ಸರಿಯಾಗಿ ಬೇರ್ಪಡಿಸಿ ನಿಯಮಗಳನ್ನು ಅನುಸರಿಸಿದರೆ, ನಾವು ನಮ್ಮ ಪರಿಸರವನ್ನು ರಕ್ಷಿಸಬಹುದು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಂಚಾರಿ ಸಂಪತ್ ಅವರು ಮಾತನಾಡಿ, ಪರಿಸರ ಮಾಲಿನ್ಯ ತಪ್ಪಿಸಲು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026 ಪಾಲನೆ ಅತ್ಯವಶ್ಯಕವಾಗಿದೆ. ಕಸ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ರೇ ಮಾನವ ಸಮಾಜಕ್ಕೆ ಆಪತ್ತು ಗ್ಯಾರಂಟಿ ಎಂದು ಹೇಳಿದರು.

ನಾವೆಲ್ಲರೂ ದಿನಂಪ್ರತಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಸವಕಳಿ ಕುಂಠಿತವಾಗಲು ಕಾರಣವಾಗಲಿದೆ. ಸಾರ್ವಜನಿಕರು ನಾಲ್ಕು ವಿಧದಲ್ಲಿ ಕಸವನ್ನು ವಿಂಗಡಣೆ ಮಾಡುವುದರಿಂದ ಪಂಚಾಯತಿಗಳಿಗೆ ತ್ಯಾಜ್ಯ ನಿರ್ವಹಣೆಗೆ ತುಂಬಾ ಸಹಕಾರಿಯಾಗುತ್ತದೆ ಎಂದರು.

ಕಸ ಸಂಗ್ರಹಿಸುವ ಪೌರಕಾರ್ಮಿಕರ ಬಗ್ಗೆ ಗೌರವ ಇರಬೇಕು. ಇವರು ದಿನಂಪ್ರತಿ ನಿರ್ವಹಿಸುವ ಕಾರ್ಯದಿಂದಲೇ ಸಮಾಜವು ಸ್ವಚ್ಛ ಹಾಗೂ ಸ್ವಾಸ್ಥ್ಯದಿಂದ ಇರುವುದನ್ನು ಮರೆಯಬಾರದು ಎಂದು ಹೇಳಿದರು.

ಜನಪ್ರತಿನಿಧಿಗಳ ಪಾತ್ರ: ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ತ್ಯಾಜ್ಯ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಪ್ರತಿಯೊಂದು ಮನೆ ಹಂತದಿಂದ ತ್ಯಾಜ್ಯ ನಿರ್ವಹಣೆ ಆಗುವಂತೆ ಮಾಡಬೇಕು. ರೈತರು ಹಸಿ ಕಸದಿಂದ ಸಾವಯವ ಗೊಬ್ಬರ ಉತ್ಪಾದಿಸಿ, ರಾಸಾಯನಿಕ ಗೊಬ್ಬರ ಬಳಕೆ ತಡೆಗೆ ಉತ್ತೇಜಿಸಲು ಮುಂದಾಗಬೇಕು ಎಂದರು.

ತ್ಯಾಜ್ಯವನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಿ

ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ದೊಡ್ಡ ಪ್ರಮಾಣದ ವಲಸೆಯು ನಗರಗಳು ಮತ್ತು ಪಟ್ಟಣಗಳಲ್ಲಿ ತ್ಯಾಜ್ಯ ಉತ್ಪಾದನೆ ಮತ್ತು ಅದರ ವಿಲೇವಾರಿಯಲ್ಲಿ ಅಗಾಧ ಹೆಚ್ಚಳಕ್ಕೆ ಕಾರಣವಾಗಿದೆ.

ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಗಂಭೀರ ಪರಿಸರ ಮತ್ತು ಆರೋಗ್ಯದ ಅಪಾಯವನ್ನುಂಟುಮಾಡುತ್ತದೆ. ನಗರ ಘನತ್ಯಾಜ್ಯವು ಮನೆಯ ತ್ಯಾಜ್ಯವನ್ನು ಮಾತ್ರವಲ್ಲದೆ ಅಪಾಯಕಾರಿ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯ ಇತ್ಯಾದಿಗಳನ್ನು ಸಹ ಒಳಗೊಂಡಿದೆ ಎಂಬ ಅಂಶದಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಹೀಗಾಗಿ ತ್ಯಾಜ್ಯವನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಹಸಿ ಕಸದಿಂದ ಗೊಬ್ಬರ ತಯಾರಿಕೆ

ತ್ಯಾಜ್ಯವನ್ನು ಮನೆಯಲ್ಲಿ ವಿಂಗಡಿಸಿ ನಗರಸಭೆಯ ಸ್ವಚ್ಛ ವಾಹಿನಿ ವಾಹನಕ್ಕೆ ನೀಡಬೇಕು. ಇದರಿಂದ ಹಸಿಕಸವನ್ನು ರೈತರು ತಮ್ಮ ಹೊಲಗಳಿಗೆ ನೇರವಾಗಿ ಸಾವಯವ ಗೊಬ್ಬರವಾಗಿ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಬಲ್ಕ್ ವೇಸ್ಟ್

ಬಲ್ಕ್ ವೇಸ್ಟ್ ಎಂದರೆ ದಿನನಿತ್ಯ ಸಂಗ್ರಹವಾಗುವ ಕಸಕ್ಕಿಂತ 100 ಕೆ.ಜಿಗೂ ಹೆಚ್ಚು ಉತ್ಪಾದನೆಯಾಗುವ ಕಸವನ್ನು ಬಲ್ಕ್ ವೇಸ್ಟ್ ಎಂದು ಕರೆಯುತ್ತಾರೆ. ಅಪಾರ್ಟ್ಮೆಂಟ್ ಸಮುಚ್ಚಯಗಳು, ಹೋಟೆಲ್ಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್ಗಳನ್ನು ‘ಬಲ್ಕ್ ವೇಸ್ಟ್ ಜನರೇಟರ್ಸ್’ ಎಂದು ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಕಸವನ್ನು ನಾಲ್ಕು ವಿಧಗಳಲ್ಲಿ ಕಸವನ್ನು ವಿಂಗಡಣೆ ಮಾಡಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ 41 ಜನ ‘ಬಲ್ಕ್ ವೇಸ್ಟ್ ಜನರೇಟರ್ಸ್’ ಅನ್ನು ಗುರುತಿಸಲಾಗಿದೆ. ಇವರು ಸರಿಯಾಗಿ ಕಸವನ್ನು ವಿಂಗಡಣೆ ಮಾಡದೆ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದರು.

ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ರ ಸರ್ಕಾರಿ ಆದೇಶ ಪತ್ರವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ವಿತರಣೆ ಮಾಡಿದರು.

ಕಾರ್ಯಾಗಾರದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷರಾದ ವೆಂಕಟೇಶ್ ಬಂತಿ, ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರೇಮ್ ಕುಮಾರ್, ನಗರ ಸಭೆ, ಪುರಸಭೆ ಸದಸ್ಯರುಗಳು ಹಾಗೂ ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Ramesh Babu

Journalist

Recent Posts

ಬರ ವೀಕ್ಷಣೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ: ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

13 hours ago

28ಕ್ಕೂ ಹೆಚ್ಚು ಜಿಲ್ಲೆಗಳು ಬರದ ಸಂಕಷ್ಟದಲ್ಲಿ; ರೈತರಿಗೆ ತಕ್ಷಣ ₹10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

ತುಮಕೂರು: ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ಸಮರ್ಪಕ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ…

1 day ago

ಅತಿವೃಷ್ಟಿ–ಬರ ಎದುರಿಸಲು ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಯಾವ ಸಚಿವರಿಗೆ ಯಾವ ಜಿಲ್ಲೆ? ಸರ್ಕಾರದಿಂದ ಉಸ್ತುವಾರಿ ಪಟ್ಟಿ ಪ್ರಕಟ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರಿಗೆ…

1 day ago

ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷರಾಗಿ ಜಿ.ಲಕ್ಷ್ಮಿಪತಿ ಆಯ್ಕೆ

ದೊಡ್ಡಬಳ್ಳಾಪುರ: ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಮೂಲ ಧ್ಯೇಯವಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಲಯನ್ಸ್ ಕ್ಲಬ್ ಆಫ್ ಕೊನಘಟ್ಟ…

1 day ago

ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ; ₹5.50 ಲಕ್ಷ ಲಂಚ ಸ್ವೀಕರಿಸುವ ವೇಳೆ ಟ್ರ್ಯಾಪ್

ಮೈಸೂರು: ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ…

2 days ago

ಸಚಿವ ಸಂಪುಟ ವಿಸ್ತರಣೆ: 20 ಮಂದಿಗೆ ಸಚಿವ ಸ್ಥಾನ; ಶರತ್ ಬಚ್ಚೇಗೌಡಗೆ ಮತ್ತೆ ನಿರಾಸೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಹಂತದಲ್ಲಿ 20 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ…

2 days ago