ಗ್ರಾಮ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು- ಸಿಎಂ ಸಿದ್ದರಾನಯ್ಯ ಸೂಚನೆ

ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿಯನ್ನು ಒಂದು ರೂಪಾಯಿ ಲಂಚವಿಲ್ಲದೇ, ಮಧ್ಯವರ್ತಿಗಳ ಹಾವಳಿಯಿಲ್ಲದೇ ಮಾಡಲಾಗಿದೆ. ಸದಾ ಇಷ್ಟೇ ಪಾರದರ್ಶಕ ನೇಮಕಾತಿ ನಡೆದರೆ ಅರ್ಹರಿಗೆ ಉದ್ಯೋಗ ದೊರೆಯುತ್ತದೆ, ಯೋಗ್ಯರು ಸರ್ಕಾರಿ ಸೇವೆಗೆ ದೊರೆತು ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಣೆ ಮಾಡಿ, ಮಾತನಾಡಿದರು.

ಹಿಂದೆ 94-95 ರಲ್ಲಿ ಗೋವಿಂದೇಗೌಡರು ಇದ್ದ ಸಂದರ್ಭದಲ್ಲಿ ಒಂದು ಲಕ್ಷ ಉಪಾಧ್ಯಾಯರನ್ನು ಲಂಚವಿಲ್ಲದೇ, ಮಧ್ಯವರ್ತಿಗಳಿಲ್ಲದೇ ನೇಮಕಾತಿ ಮಾಡಲಾಗಿತ್ತು. ಪ್ರಸ್ತುತ ಆರು ಲಕ್ಷ ಅರ್ಜಿಗಳಲ್ಲಿ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಆಯ್ಕೆಯಾಗಿದ್ದು, ಆಯ್ಕೆಯಾಗಿರುವವರು ಪುಣ್ಯವಂತರು ಎಂದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದೀರಿ. 9,834 ಒಟ್ಟು ಗ್ರಾಮ ಆಡಳಿತಾಧಿಕಾಗಳಿದ್ದು, ಅದರಲ್ಲಿ 8003 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 1000 ಜನ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಗ್ರಾಮ ಆಡಳಿತಾಧಿಕಾರಿಯ ಹುದ್ದೆ ಖಾಲಿ ಇಲ್ಲದಂತೆ ಭರ್ತಿ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ. ಇಂದು ಆಯ್ಕೆಯಾದವರು ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಮಾಡುವ ಗ್ರಾಮಗಳಲ್ಲಿಯೇ ವಾಸ ಮಾಡುವುದು ಉತ್ತಮ ಎಂದು ತಿಳಿಸಿದರು.

ನಮ್ಮ ದೇಶ ಗ್ರಾಮಗಳ ದೇಶ. ಕೃಷಿ ಪ್ರಮುಖವಾದ ಉದ್ಯೋಗವಾಗಿದ್ದು, ಶೇ.60 ಕ್ಕೂ ಹೆಚ್ಚು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಜಮೀನುಗಳ ಲೆಕ್ಕ ಇಡುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ. ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ನೆಲೆಸಲು ದಾಖಲಾತಿಗಳು ಸರಿಯಾಗಿರಬೇಕು. ದಾಖಲೆಗಳನ್ನು ಬಹಳ ಕರಾರುವಾಕ್ಕಾಗಿ ಇಡುವುದು ಅವಶ್ಯಕ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳೆದಿದೆ. ಈಗ ಪ್ರತಿಯೊಂದೂ ಡಿಜಿಟಲೀಕರಣವಾಗಿದೆ. ಆನ್ ಲೈನ್ ನಲ್ಲಿ ದಾಖಲಾತಿಗಳನ್ನು ಪಡೆಯುವ ವ್ಯವಸ್ಥೆ ಬಂದ ನಂತರ ನಾವು ಯಾವುದೇ ಕಾರಣಕ್ಕೂ ತಪ್ಪುಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ ಬಹಳ ಮಹತ್ವದ್ದು. ರೈತರಿಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಹತ್ತಿರದ ಸಂಬಂಧವಿದ್ದು, ಪ್ರತಿಯೊಬ್ಬ ರೈತರ ಪರಿಚಯ ಅವರಿಗಿರುತ್ತದೆ. ಅವರ ಭೂಮಿಯ ಕುರಿತು ಮಾಹಿತಿ ಗೊತ್ತಿರುತ್ತದೆ. ಅವರ ಪರಿಚಯವಿಟ್ಟುಕೊಂಡು ಅಗತ್ಯ ದಾಖಲಾತಿಗಳನ್ನು ಒದಗಿಸುವುದು ನಿಮ್ಮ ಕೆಲಸ ಎಂದರು.

ಗ್ರಾಮ ಆಡಳಿತಾಧಿಕಾರಿಗಳು ಉತ್ತಮ ನಡತೆ, ಸಂಪರ್ಕವನ್ನು ಹೊಂದಿದ್ದರೆ ರೈತರು ನಿಮ್ಮ ಮಾತನ್ನು ಕೇಳುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳು ಒಳ್ಳೆ ರೀತಿಯ ಕೆಲಸ ಮಾಡಿಕೊಟ್ಟರೆ ಅವರ ಮೇಲೂ ಗೌರವವಿರುತ್ತದೆ. ಜನರ ಕೆಲಸ ದೇವರ ಕೆಲಸ ಎಂದು ನೆನೆಪಿಟ್ಟುಕೊಳ್ಳಬೇಕು. ನಾವಿರುವುದೇ ಜನರ ಸೇವೆಗಾಗಿ ಎನ್ನುವುದನ್ನು ಮರೆಯಬಾರದು. ಆರು ಲಕ್ಷ ಜನ ಸರ್ಕಾರಿ ನೌಕರರು ಅವರಿಗಾಗಿಯೇ ಇರುವುದು. ರಾಜಕಾರಣಿಗಳು ಜನರಿಂದ ಆಯ್ಕೆಯಾದರೆ, ಸರ್ಕಾರದಿಂದ ಆಯ್ಕೆಯಾದ ಸರ್ಕಾರಿ ನೌಕರರು ಜನಸೇವೆಯನ್ನು ಧ್ಯೇಯವಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕಂದಾಯ ಇಲಾಖೆಯದ್ದು ಅತ್ಯಂತ ಜವಾಬ್ದಾರಿಯುತ ಕೆಲಸ. ಇಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಬೇಕೆಂದು ಕೃಷ್ಣಬೈರೇಗೌಡರಿಗೆ ಸೂಚಿಸಿದ್ದೆ, ಅವರು ಈಗಾಗಲೇ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಅವರಿಗೆ ಇನ್ನಷ್ಟು ಸುಧಾರಣೆಗಳನ್ನು ತರುವ ಶಕ್ತಿ ಇದೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವ್ಯಾಪ್ತಿಯ ಪಂಚಾಯಿತಿಯ ಕೇಂದ್ರಸ್ಥಾನದಲ್ಲಿಯೇ ವಾಸ್ತವ್ಯವಿರುವುದರಿಂದ ರೈತರಿಗೆ ಎಲ್ಲ ಸಮಯದಲ್ಲಿಯೂ ಲಭ್ಯವಿರಲು ಸಾಧ್ಯವಾಗುತ್ತದೆ. ರೈತರ ಮನೆಮನೆಗೆ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಬೇಕು. ಗ್ರಾಮ ಆಡಳಿತಾಧಿಕಾರಿಗಳ 9,834 ಮಂಜೂರಾದ ಹುದ್ದೆಗಳಿಗೆ ಲ್ಯಾಪ್‌ಟಾಪ್ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲನೇ ಹಂತದಲ್ಲಿ 4,000 ಲ್ಯಾಪ್ ಟಾಪ್ ಗಳನ್ನು ಇಂದು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡುವುದಾಗಲಿ, ಭ್ರಷ್ಟಾಚಾರಕ್ಕಾಗಲಿ ಅವಕಾಶ ಕೊಡಬಾರದು. ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರಿಗೆ ಅನುಕೂಲ ಕಲ್ಪಿಸುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದರು.

ಕೃಷಿ ಲಾಭದಾಯಕ ವೃತ್ತಿಯಾಗಿ ಉಳಿದುಕೊಂಡಿಲ್ಲ. ಅನ್ನದಾತರು ನಾಡಿನ ಒಳಿತಿಗೆ ಕೆಲಸ ಮಾಡುತ್ತಿರುವವರು ಎಂಬ ಅರಿವಿರಬೇಕು. ರೈತರಿಗೆ ಭೂಮಿ ಬೀಟ್ ಕಾರ್ಯಕ್ರಮ ಸರ್ಕಾರ ಜಾರಿಗೆ ತಂದಿದೆ. ವಿದ್ಯಾರ್ಥಿದೆಸೆಯಲ್ಲಿ ವ್ಯವಸಾಯ ಕೈಗೊಂಡ ಸಂದರ್ಭದಲ್ಲಿ ಪಕ್ಕದ ರೈತನೊಬ್ಬ ನಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದರು. ಈ ಬಗ್ಗೆ ಕೊನೆಗೆ ಪಂಚಾಯತಿ ನಡೆಸಿದ್ದರು. ಜಮೀನುಗಳ ಅತಿಕ್ರಮಣದ ಇಂತಹ ಸಮಸ್ಯೆಗಳನ್ನು ನಿವಾರಿಸಲು ಭೂಮಿ ಬೀಟ್ ಕಾರ್ಯಕ್ರಮ ಅನುಕೂಲ ಕಲ್ಪಿಸಿದೆ ಎಂದು ಹೇಳಿದರು.

ಗ್ರಾಮ ಆಡಳಿತಾಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ರೈತರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಬೇಕು. ಜಮೀನಿನ ದಾಖಲಾತಿಗಳ ಹಾಗೂ ಸರ್ವೇಗಳು ಸಮರ್ಪಕವಾಗಿ ನಡೆದರೆ ಗ್ರಾಮಗಳಲ್ಲಿ ಭೂಮಿ ಕಲಹವಿಲ್ಲದೇ ಬಹುಮಟ್ಟಿಗೆ ನೆಮ್ಮದಿ ನೆಲಸಲು ಸಾಧ್ಯವಿದೆ. ಇಂದು ನೇಮಕಗೊಂಡಿರುವ ಗ್ರಾಮ ಆಡಳಿತಾಧಿಕಾರಿಗಳು ಉದಾಸೀನತೆಯ ಭಾವನೆಯನ್ನು ತಳೆಯದೇ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ತಿಳಿಸಿದರು.

ಹಿಂದೆ ಗ್ರಾಮಗಳಲ್ಲಿ ಜಮೀನಿನ ವಿವರಗಳನ್ನು ಶಾನುಭೋಗರು ನೋಡಿಕೊಳ್ಳುತ್ತಿದ್ದರು. ಶಾನುಭೋಗರು ಎಂದರೆ ರೈತರಿಗೆ ಗುರುಗಳಿದ್ದಂತೆ. ಶಾನುಭೋಗರು ಹೇಳಿದ್ದೇ ಅಂತಿಮ ಎಂಬಂತಿತ್ತು. ಕೆಲವರು ಉತ್ತಮ ಕೆಲಸ ಮಾಡುತ್ತಿದ್ದರೆ, ಕೆಲವರು ಕಿತಾಪತಿಯನ್ನೂ ಮಾಡುತ್ತಿದ್ದರು. ಶಾನುಭೋಗರು ದಾಖಲೆ ಬರೆಯುತ್ತಿದ್ದರು. ಅವರು ಏನು ಬರೆದಿದ್ದರು ಎಂದು ಯಾರಿಗೂ ಓದಿ ಹೇಳುತ್ತಿರಲಿಲ್ಲ. 1978 ರಲ್ಲಿ ತಾಲ್ಲೂಕು ಮಂಡಳಿ ಚುನಾವಣೆಗೆ ನಿಂತಾಗ ನನ್ನ ತಂದೆ ಶಾನುಬೋಗರ ಬಳಿ ನನ್ನನ್ನು ಚುನಾವಣೆಗೆ ನಿಲ್ಲಿಸಬೇಕೋ ಬೇಡವೋ ಎಂದು ಕೇಳಿ ನಿಲ್ಲಬಾರದು ಎಂದು ಹಠ ಮಾಡಿದ್ದರು, ನಂತರ ನಾನು ಅವರ ಮಾತು ಕೇಳದೆ ಸ್ಪರ್ಧಿಸಿ ಗೆದ್ದಿದ್ದೆ. ಚುನಾವಣೆಗೆ ಆಗ ₹3,500 ಮಾತ್ರ ವೆಚ್ಚವಾಗಿತ್ತು ಎಂದರು.

Ramesh Babu

Journalist

Recent Posts

ನಾಳೆ (ಜು.29) ರಂದು ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ: ಭಕ್ತರಿಗೆ ವಿಶೇಷ ಆಹ್ವಾನ: ವಿಶೇಷ ಪೂಜೆ, ಭಕ್ತರಿಗೆ ಭೋಜನೆ ವ್ಯವಸ್ಥೆ

ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…

7 hours ago

“ಉತ್ತರ ಕರ್ನಾಟಕದ ಗ್ರಾಮೀಣ ನಾಗರ ಪಂಚಮಿ: ಹೆಣ್ಮಕ್ಕಳ ಜೋಕಾಲಿ ಸಂಭ್ರಮ”

ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…

7 hours ago

ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಜಿಪಂ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…

9 hours ago

RCB ಕಾಲ್ತುಳಿತ ಪ್ರಕರಣ: ಪೊಲಿಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ರಾಜ್ಯ ಸರ್ಕಾರ: ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾದ ಸರ್ಕಾರದ ನಡೆ

ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…

9 hours ago

ದೇವಸ್ಥಾನದಲ್ಲಿ ಕಳ್ಳನ ಕೈಚಳಕ: ಬೈಕ್ ಸಮೇತ ಕಳ್ಳನ ಬಂಧನ

ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…

12 hours ago

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

20 hours ago