ಗೌರಿ ಗಣೇಶ ಹಬ್ಬ: ಜಿಲ್ಲೆಯಾದ್ಯಾಂತ ಪಟಾಕಿ, ಡಿಜೆ ಸಂಪೂರ್ಣ ನಿಷೇಧ-ಪಿಒಪಿ ಗಣೇಶ ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ನಿಷೇಧ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಕರೆ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಸಾರ್ವಜನಿಕರು ಪರಿಸರಸ್ನೇಹಿಯಾಗಿ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಅವರು ಕರೆ ನೀಡಿದ್ದಾರೆ.

ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಸರಕ್ಕೆ ಹಾನಿಯುಂಟಾಗುವ ವಿಷಕಾರಿ ರಾಸಾಯನಿಕ, ಲೋಹದ ಲೇಪನ, ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಾದ‌ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವಂತಿಲ್ಲ. ಗಣೇಶ ಪ್ರತಿಷ್ಟಾಪನೆಗೆ ಹಾಗೂ ವಿಸರ್ಜನೆಗೆ ಅನುಮತಿ ಕಡ್ಡಾಯವಾಗಿದ್ದು ಪೊಲೀಸ್‌ ಇಲಾಖೆಯಿಂದ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದರು.

ತಹಶೀಲ್ದಾರ್ ನಗರ ಸ್ಥಳೀಯ ಸಂಸ್ಥೆ, ವಿದ್ಯುತ್ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಪರಿಸರ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಾಲ್ಲೂಕು ಮಟ್ಟದ ಸಮಿತಿಯು ಅನುಮತಿ ಸೇರಿದಂತೆ ಇತರೆ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು.

*ಮೂಲದಲ್ಲೇ ತಪಾಸಣೆ ಮತ್ತು ಜಪ್ತಿ*

ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ತಡೆಗಟ್ಟಲು ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಸಂಗ್ರಹಣಾ ಗೋದಾಮುಗಳು ಮತ್ತು ಮಾರಾಟ ಕೇಂದ್ರಗಳ ಮುಂಗಡ ತಪಾಸಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ತಯಾರಿಸಿದ, ಸಂಗ್ರಹಿಸಿದ ಅಥವಾ ಮಾರಾಟಕ್ಕೆ ಇಟ್ಟಿರುವ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟ, ವ್ಯಕ್ತಿಗಳು/ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

*ಆಹಾರ ಸುರಕ್ಷತೆ*

ಜನಸಂಖ್ಯೆ ಹೆಚ್ಚು ಸೇರುವ ಜಾಗಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡುವ ಆಹಾರವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿಯಲ್ಲಿ ಪರಿಶೀಲಿಸಿ ಗುಣಮಟ್ಟದ ಆಹಾರ ವಿತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

*ವಿಸರ್ಜನೆ, ಮೆರವಣಿಗೆ ಮತ್ತು ಜಲಮೂಲಗಳ ಸಂರಕ್ಷಣೆ*

ಮೆರವಣಿಗೆ ಮಾರ್ಗ ಪರಿಶೀಲನೆ ವಿಸರ್ಜನೆಯ ದಿನದಂದು ಪ್ರತಿಷ್ಠಾಪನ ಸ್ಥಳದಿಂದ ವಿಸರ್ಜಿಸುವ ಸ್ಥಳದ ಮೆರವಣಿಗೆ- ಮಾರ್ಗವನ್ನು ಕಡ್ಡಾಯವಾಗಿ ಮೊದಲೇ ನಿಗದಿಪಡಿಸತಕ್ಕದ್ದು, ಪೋಲೀಸ್ ಇಲಾಖೆಯವರು ಖುದ್ದು ಸ್ಥಳ ಪರಿಶೀಲಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ವಿದ್ಯುತ್ ತಂತಿ ಹಾದುಹೋಗುವುದನ್ನು ಪರಿಶೀಲಿಸಿ ಸಾರ್ವಜನಿಕ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಖಚಿತಪಡಿಸಿಕೊಂಡು ಅನುಮತಿ ನೀಡುವುದು.

*ಶಾಂತಿ ಮತ್ತು ಕೋಮು ಸೌಹಾರ್ದತೆ*

ಮೆರವಣಿಗೆಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ, ಶಾಂತಿಗೆ ಧಕ್ಕೆ ಉಂಟುಮಾಡದೇ ಹಾಗೂ ಕೋಮು ಭಾವನೆಗಳಿಗೆ ಅಗೌರವ ಮತ್ತು ಧಕ್ಕೆ ಉಂಟುಮಾಡುವ ಯಾವುದೇ ಪ್ರಚೋದನಾಕಾರಿ ಘೋಷಣೆಗಳಿಗೆ ಅವಕಾಶ ನೀಡಬಾರದು.

*ಕೃತಕ/ಸಂಚಾರಿ ವಿಸರ್ಜನಾ ತೊಟ್ಟಿಗಳು*

ನೈಸರ್ಗಿಕ ಜಲಮೂಲಗಳ ಮೇಲಿನ ವಿಸರ್ಜನೆಯ ಒತ್ತಡವನ್ನು ಕಡಿಮೆ ಮಾಡಲು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸೂಕ್ತ ಸ್ಥಳಗಳಲ್ಲಿ ಅಗತ್ಯ ಸಂಖ್ಯೆಯ ಮತ್ತು ಸಾಮರ್ಥ್ಯದ ತಾತ್ಕಾಲಿಕ ಕೃತಕ ವಿಸರ್ಜನಾ ತೊಟ್ಟಿಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.

*ನೈಸರ್ಗಿಕ ಜಲಮೂಲಗಳಲ್ಲಿ ಸೌಲಭ್ಯಗಳು* 

ನದಿಗಳು, ಕೆರೆಗಳು, ಕೊಳಗಳು ಅಥವಾ ಇತರ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜನೆ ಅನಿವಾರ್ಯವಾಗಿರುವಲ್ಲಿ, ನಿರ್ದಿಷ್ಟ ವಿಸರ್ಜನಾ ಸ್ಥಳಗಳನ್ನು ಬ್ಯಾರಿಕೇಡ್, ಸುರಕ್ಷತಾ ವ್ಯವಸ್ಥೆಗಳು, ಬೆಳಕು, ಪ್ರವೇಶ ಮಾರ್ಗಗಳು, ಸೂಚನಾ ಫಲಕಗಳು ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ನಿಗದಿಪಡಿಸುವುದು ಹಾಗೂ ತರಬೇತಿ ಪಡೆದ ಈಜುಗಾರರು/ರಕ್ಷಣಾ ತಂಡಗಳು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

*ಮೂಲದಲ್ಲೇ ತ್ಯಾಜ್ಯ ಪ್ರತ್ಯೇಕೀಕರಣ*

ವಿಸರ್ಜನೆಗೆ ಮೊದಲು, ಮೂರ್ತಿಯಿಂದ ಹೂವುಗಳು, ಎಲೆಗಳು, ಬಟ್ಟೆ, ಅಲಂಕಾರಿಕ ವಸ್ತುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಬೇರ್ಪಡಿಸಿ ಪರಿಸರ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕು.

*ಪಟಾಕಿ, ಡಿಜೆ ನಿಷೇಧ*

ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಗಣೇಶ ಪ್ರತಿಷ್ಠಾಪನೆ ಸಮಯದಲ್ಲಾಗಲಿ, ಗಣೇಶ ವಿಸರ್ಜನೆ ಸಮಯದಲ್ಲಾಗಲಿ, ಮೆರವಣಿಗೆ ಸಂದರ್ಭದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಾಗಲಿ ಮತ್ತು ಯಾವುದೇ ರಾಜಕೀಯ ಹಾಗೂ ಧಾರ್ಮಿಕ ಸಮಾವೇಶ ಕಾರ್ಯಕ್ರಮಗಳಲ್ಲಾಗಲಿ ಪಟಾಕಿ ಸಿಡಿಮದ್ದು ಮತ್ತು ಇನ್ನಿತರ ಸ್ಫೋಟಕ ವಸ್ತುಗಳನ್ನು ತಿಳಿಸುವುದನ್ನು ಹಾಗೂ ಗಣೇಶ ಹಬ್ಬದ ಕಾರ್ಯಕ್ರಮಗಳು ಮುಕ್ತಾಯವಾಗುವವರೆಗೂ ಯಾವುದೇ ರೀತಿಯ ಡಿಜೆ (ಡಿಸ್ಕ್ ಜಾಕಿ) ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

*ಸಾರ್ವಜನಿಕ ಗಣೇಶೋತ್ಸವ – ಬಿಗಿ ಪೊಲೀಸ್ ಬಂದೋಬಸ್ತ್: ಎಸ್.ಪಿ*

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಎಂ.ವಿ ಮಾತನಾಡಿ, ಜಿಲ್ಲಾದ್ಯಂತ ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನೆರವೇರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು. ಹೆಚ್ಚು ಜನ ಸೇರುವ ಎಲ್ಲಾ ಮೆರವಣಿಗೆಗಳನ್ನೂ ಸೂಕ್ಷ್ಮ ಎಂದು ಪರಿಗಣಿಸಿ ಸೂಕ್ತ ಬಂದೋಬಸ್ತ್ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರ ಭದ್ರತೆಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಮಸೀದಿ, ಚರ್ಚ್ ಮುಂಭಾಗ ಸೂಕ್ತ ಭದ್ರತಾ ಹಾಗೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಡಿವೈಎಸ್ಪಿ ಪಾಂಡುರಂಗ, ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

30 minutes ago

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

15 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

20 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

23 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago