Categories: ಲೇಖನ

ಗಾಳಿ, ನೀರು ಮಲಿನ, ಆಹಾರದಲ್ಲಿ ಕಲಬೆರಕೆ….

ಆಹಾರದಲ್ಲಿ ಕಲಬೆರಕೆ….

ಬಾಯಿಮುಚ್ಚಿಕೊಂಡು ಕುಳಿತುಕೊಳ್ಳುವಿರೋ ಅಥವಾ ಅನಾರೋಗ್ಯಕ್ಕೆ ತುತ್ತಾಗಿ ನರಳುವಿರೋ ಆಯ್ಕೆ ನಮ್ಮ ಮುಂದಿದೆ…..

ಮೊಟ್ಟೆಗಳಲ್ಲಿ ವಿಷ ಇದೆ,
ಹಾಲಿನಲ್ಲಿ ಯೂರಿಯಾ ಬೆರೆತಿದೆ,
ಸಕ್ಕರೆ ಅತ್ಯಂತ ಅಪಾಯಕಾರಿ,
ಉಪ್ಪು ರಕ್ತದೊತ್ತಡ ಹೆಚ್ಚಿಸುತ್ತದೆ,
ಮೈದಾ ಒಳ್ಳೆಯದಲ್ಲ,
ಬೇಕರಿ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ,
ಕಬಾಬ್, ಮಂಚೂರಿಗಳು ಅನಾರೋಗ್ಯಕಾರಿ,
ತರಕಾರಿಗಳಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕ ಅಂಶಗಳು ಸೇರಿವೆ,
ಮಾಂಸಹಾರಿ ಪದಾರ್ಥಗಳಲ್ಲಿ ಅತಿಯಾದ ಹಾನಿಕಾರಕ ಔಷಧಗಳನ್ನು ಬಳಸಲಾಗುತ್ತದೆ,
ಹೆಚ್ಚು ರೋಟಿ, ಚಪಾತಿಗಳು ತಿನ್ನುವುದರಿಂದ ಅನಾಹುತವಾಗಬಹುದು,
ಅನೇಕ ಹಣ್ಣುಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ,
ನಗರ ಪ್ರದೇಶಗಳ ಗಾಳಿಯಲ್ಲಿ ವಿಷಕಾರಕ ಧೂಳಿನ ಕಣಗಳಿವೆ,
ನೀರಿನಲ್ಲಿ ದೀರ್ಘಕಾಲದ ಅನೇಕ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳಿವೆ,
ನಾವು ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಹಾನಿಕಾರಕ ಕಣಗಳು ಪತ್ತೆಯಾಗಿವೆ,
ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಕ್ಯಾನ್ಸರ್ ಕಾರಕ ಅಂಶಗಳು ದೇಹ ಸೇರುತ್ತವೆ,
ಎಣ್ಣೆಗಳಲ್ಲಿ ಅತ್ಯಂತ ಅಪಾಯಕಾರಿ ಪೆಟ್ರೋಲಿಯಂ ಅಂಶಗಳನ್ನು ಸೇರಿಸಲಾಗುತ್ತದೆ,
ಸೊಪ್ಪುಗಳಲ್ಲಿಯೂ ಅತಿ ಹೆಚ್ಚು ರಾಸಾಯನಿಕ ಪದಾರ್ಥಗಳ ಬಳಕೆಯಾಗುತ್ತಿದೆ………..

ಹೀಗೆ ಹೇಳುತ್ತಾ ಹೋದರೆ ನಾವು ನೆಮ್ಮದಿಯಾಗಿ ಯಾವ ಆಹಾರ ಸೇವಿಸುವುದು , ಯಾವ ನೀರು ಕುಡಿಯುವುದು, ಯಾವ ಗಾಳಿ ಉಸಿರಾಡುವುದು, ಯಾವ ವಾತಾವರಣದಲ್ಲಿ ಬದುಕುವುದು. ಹೀಗೆ ಭಯ ಮತ್ತು ಆತಂಕ ಒಟ್ಟಿಗೆ ಆಗುತ್ತದೆ. ಪ್ರತಿನಿತ್ಯ ಮಾಧ್ಯಮ ಸಾಮಾಜಿಕ ಜಾಲತಾಣ ಮತ್ತು ನಮ್ಮ ಸುತ್ತಮುತ್ತಲ ಜನರ ಆರೋಗ್ಯದ ವಿಷಯಗಳನ್ನು ಕೇಳುತ್ತಿದ್ದರೆ ಭಯವಾಗುತ್ತದೆ.

ಸಹಜವಾಗಿ ಪ್ರಕೃತಿಗೆ ನಿಷ್ಠರಾಗಿ ಬದುಕಬೇಕಾಗಿದ್ದ ನಾವು ಅಸಹಜ ಜೀವನಶೈಲಿ, ಜೀವನ ಪದ್ಧತಿ, ಆಹಾರ ಕ್ರಮ ಅಳವಡಿಸಿಕೊಂಡು ಈಗ ನಮ್ಮ ನೆರಳಿಗೆ ನಾವೇ ಬೆಚ್ಚುವಂತಾಗಿದೆ.

ಕೆಲವೇ ವರ್ಷಗಳ ಹಿಂದೆ ಬಹುತೇಕ ಕೆಲ ಮದ್ಯಮ ಮತ್ತು ಬಡವರ್ಗದವರು ಎರಡು ಹೊತ್ತಿನ ಹೊಟ್ಟೆ ತುಂಬ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಇತ್ತು. ಇದೀಗ ತೀರ ಅತ್ಯಂತ ಕಡುಬಡವರನ್ನು ಹೊರತುಪಡಿಸಿ ಇತರರಿಗೆ ಸಾಕಷ್ಟು ಊಟದ ಆಯ್ಕೆಗಳಿವೆ. ಆದರೆ ಆಯ್ಕೆಗಳಲ್ಲಿಯೇ ವಿಷ ಇದೆ, ರಾಸಾಯನಿಕ ಇದೆ, ಕ್ಯಾನ್ಸರ್ ಕಾರಕ ಅಂಶಗಳಿದ್ದಾವೆ ಮುಂತಾದ ಭಯ ಹುಟ್ಟಿಸುವ ಅಥವಾ ವಾಸ್ತವದಲ್ಲಿ ಹಾಗೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಕಡೆ ಮಾನವೀಯ ಮೌಲ್ಯಗಳ ಕುಸಿತ, ಇನ್ನೊಂದು ಕಡೆ ದೇಹಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು ಆಹಾರ ಮಲಿನವಾಗಿದೆ. ಇಂತಹ ಭಯಾನಕ ಪರಿಸ್ಥಿತಿಯಲ್ಲಿ ನಾವು ಮಾತ್ರ ತುಂಬಾ ಒಳ್ಳೆಯ ಆಧುನಿಕ ವ್ಯವಸ್ಥೆಯ ಶಿಕ್ಷಣ, ಆರೋಗ್ಯ, ಮೊಬೈಲ್, ಇಂಟರ್ ನೆಟ್, ವಾಹನಗಳು, ಬಟ್ಟೆ, ಶೂ ಚಪ್ಪಲಿಗಳು, ಹೋಟೆಲ್ ಗಳು, ಪ್ರವಾಸಿ ತಾಣಗಳು, ವಿದೇಶಿ ಯಾತ್ರೆಗಳು, ಮಾಲು ಬಾರುಗಳು……

ಏನೋ ಮನುಷ್ಯ ಸುಖಲೋಲುಪತೆಯ ಉತ್ತುಂಗದಲ್ಲಿ ಇದ್ದಂತೆ ಭಾಸವಾಗುತ್ತಿದೆ…..

ಆದರೆ ಈ ಎರಡು ವಿರುದ್ಧ ವಿಷಯಗಳ ನಡುವೆ ನಿಜಕ್ಕೂ ಸಮನ್ವಯ ಸಾಧಿಸಬೇಕಾದ ಹಂತದಲ್ಲಿ ನಾವಿದ್ದೇವೆ. ಈ ಮೂಲ ವಿಷಯವನ್ನು ನಮ್ಮ ಆಡಳಿತ ಮಾಡುತ್ತಿರುವ ರಾಜಕೀಯ ಪಕ್ಷಗಳು ತಲೆಕೆಡಿಸಿಕೊಳ್ಳದೆ ತಮ್ಮದೇ ರೀತಿಯ ಅಭಿವೃದ್ಧಿ ರಾಜಕೀಯ ಮಾಡುತ್ತಾ, ಜನರ ಜೀವನದ ಜೊತೆ ಚೆಲ್ಲಾಟ ಮಾಡುತ್ತಿವೆ. ಜನರು ಸಹ ಹಿತಾನುಭವದಲ್ಲಿ ಭ್ರಮೆಗೆ ಒಳಗಾಗಿ ಸಾಧ್ಯವಾದಷ್ಟು ತಮ್ಮ ವೈಯಕ್ತಿಕ ಸುಖ ದುಃಖಗಳಲ್ಲಿಯೇ ಕಳೆದು ಹೋಗಿ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸದೆ ಪಲಾಯನ ಮಾಡುತ್ತಿದ್ದಾರೆ ಅಥವಾ ನಿರ್ಲಕ್ಷಿಸುತ್ತಿದ್ದಾರೆ.

ಅದರ ದುಷ್ಪರಿಣಾಮವನ್ನು ಇಡೀ ಸಾಮಾಜಿಕ ವ್ಯವಸ್ಥೆ ಅನುಭವಿಸುತ್ತಿದೆ.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಈ ವಿಷಪೂರಿತ, ಕಲಬೆರಕೆ ಆಹಾರ ವಸ್ತುಗಳ ಬಗ್ಗೆ ಯಾರೂ ಹೆಚ್ಚಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ತಮಗೆ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾದಾಗ ತಾವು ಅನುಭವಿಸುವ ಎಲ್ಲಾ ರೀತಿಯ ನೋವುಗಳನ್ನು ಕಂಡು ಆಗ ಪಶ್ಚಾತಾಪ ಪಡುತ್ತಾರೆ. ಆದರೆ ಈ ಕ್ಷಣದಲ್ಲಿ ಸರ್ಕಾರದ ಮೇಲೆ ಸಾಮೂಹಿಕ ಒತ್ತಡ ತಂದು, ಜನಸಂಖ್ಯೆ ಹೆಚ್ಚಳದಿಂದ ಜನರ ಬೇಡಿಕೆಗಳು ಎಷ್ಟೇ ಜಾಸ್ತಿಯಾಗಿದ್ದರು ಆಹಾರ ಕಲಬೆರಕೆ, ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಒಂದು ರೀತಿಯ ಮಾನವ ಆರೋಗ್ಯ ಕೇಂದ್ರಿತ ಅಭಿವೃದ್ಧಿಯ ಸಮತೋಲನವನ್ನು ಸಾಧಿಸಲು ಈಗಲೂ ಸಾಧ್ಯವಿದೆ…..

ಸರ್ಕಾರವೆಂಬ ಆಡಳಿತ ವ್ಯವಸ್ಥೆಗೆ ಕನಿಷ್ಠ ಪ್ರಮಾಣದ ಪ್ರಾಮಾಣಿಕತೆ, ದಕ್ಷತೆ, ಜನರ ಬಗ್ಗೆ ಕಳಕಳಿ ಇದ್ದರೆ ಇದೊಂದು ದೊಡ್ಡ ವಿಷಯವೇ ಅಲ್ಲ. ಆದರೆ ಇಡೀ ವ್ಯವಸ್ಥೆ ಮನಸ್ಸಿನಲ್ಲಿಯೇ ಗೊಣಗುತ್ತಾ, ಪರಿಹಾರ ಎಂಬುದು ಮುಖ್ಯವಾಗದೆ ಹಾಗೆ ಕೇವಲ ದಿನಗಳನ್ನು ತಳ್ಳುತ್ತಾ ಮುಂದೆ ಸಾಗುತ್ತಿದೆ. ಆಸ್ಪತ್ರೆಗಳು, ಪೊಲೀಸ್ ಸ್ಟೇಷನ್ ಗಳು, ನ್ಯಾಯಾಲಯಗಳು, ಮೆಡಿಕಲ್ ಲ್ಯಾಬೋರೇಟರಿಗಳು, ಸಿನಿಮಾ ಮಂದಿರಗಳು, ಪ್ರವಾಸಿ ಸ್ಥಳಗಳು, ಬಸ್ಸು ರೈಲು ವಿಮಾನ ನಿಲ್ದಾಣಗಳು ತುಂಬಿ ತುಳುಕಿ ಕಾಲ್ತುಳಿತಕ್ಕೆ ಸಿಲುಕಿ ಜನರು ಸಾಯುವ ಮುನ್ನ ನಾಗರಿಕತೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದು.

ಇಲ್ಲದಿದ್ದರೆ ಅರಾಜಕತೆಯ ಸಮಾಜದಲ್ಲಿ ಇದನ್ನೇ ಮಹಾಪ್ರಸಾದವೆಂದು ಒಪ್ಪಿಕೊಂಡು, ಬಂದದ್ದೆಲ್ಲಾ ಬರಲಿ ಎಂದು ಅನುಭವಿಸುತ್ತಾ, ಗುಲಾಮರಂತೆ ಬದುಕೋಣ ಎಂಬ ಮನಸ್ಥಿತಿ ಇಡೀ ಸಮಾಜ ವ್ಯಾಪಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಎಂದೋ ಬರುವ ಅನಾಹುತ ಕೆಲವೇ ದಿನಗಳಲ್ಲಿ ಘಟಿಸಿದರು ಆಶ್ಚರ್ಯವಿಲ್ಲ. ಮತ್ತೊಮ್ಮೆ ದಯವಿಟ್ಟು ಯೋಚಿಸಿ ಎಲ್ಲರೂ ಒಟ್ಟಾಗಿ ಕಾರ್ಯೋನ್ಮುಖರಾಗೋಣ ಧನ್ಯವಾದಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

11 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

11 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

12 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

12 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

19 hours ago

ಅನ್ನದಾತ ಅನಾಥನಾಗುವ ಮುನ್ನ……. ಅನ್ನಕ್ಕಾಗಿ ನಾವು ಪರದಾಡುವ ಮುನ್ನ……

ಡಿಸೆಂಬರ್ 23...... ರೈತರಿಗೂ ಒಂದು ದಿನವಂತೆ..... ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ...... ಇತರ ಕೆಟ್ಟ…

23 hours ago