Categories: ಲೇಖನ

ಗಾಂಧಿ ಬದಲು ರಾಮ….ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ ಮಸೂದೆ

ಬಯಲಾದ ಶ್ರೀ ನರೇಂದ್ರ ಮೋದಿಯವರ ಸೈದ್ಧಾಂತಿಕ ಮುಖವಾಡ.

ಗಾಂಧಿಯ ಬದಲು ರಾಮ….

ಇದು ನಮ್ಮ ರಾಜಕೀಯ ನಿಲುವಲ್ಲ. ಈ ದೇಶದ ಮಾನವೀಯ ಮೌಲ್ಯಗಳ ಅಸ್ಮಿತೆಗಾಗಿ ನಮ್ಮ ಒಂದು ಸಣ್ಣ ಧ್ವನಿ. ದೇಶದ ಮುಂದಿನ ಭವಿಷ್ಯದ ಉಳಿವಿಗಾಗಿ. ಸ್ವಲ್ಪ ಕಠಿಣವಾಗಿದ್ದರೆ ಕ್ಷಮೆ ಇರಲಿ. ಇದು ಈ ಸಂದರ್ಭದ ಅನಿವಾರ್ಯ ಮತ್ತು ನಮ್ಮ ಕರ್ತವ್ಯ.

ಮೋದಿಯವರನ್ನು ಅತ್ಯಂತ ತೀವ್ರವಾಗಿ ಇಷ್ಟಪಡುವವರು ಸಹ ಈ ವಿಷಯದಲ್ಲಿ ಅವರನ್ನು ವಿರೋಧಿಸಿ ಅವರು ಮನ:ಪರಿವರ್ತನೆಗೆ ದಯವಿಟ್ಟು ಆಗ್ರಹಿಸಿ ಎಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತಾ….

ಗಾಂಧಿಯವರನ್ನು ವಿಮರ್ಶಿಸಿ, ಟೀಕಿಸಿ, ವಿರೋಧಿಸಿ ಆದರೆ ದ್ವೇಷಿಸಬೇಡಿ. ಅವರು ಜಗತ್ತಿನ ನಿಜವಾದ ಶಾಂತಿದೂತ. ಭಾರತದ ನಿಜವಾದ ಆತ್ಮ…….

‌ನಮ್ಮ ನಿರೀಕ್ಷೆ ನಿಜವಾಗುತ್ತಿದೆ. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮುಖವಾಡ, ಅವರ ಕಾರ್ಯವಿಧಾನದ ಹಿಡನ್ ಅಜೆಂಡಾ ಸ್ಪಷ್ಟವಾಗಿ ಬಯಲಾಯಿತು. ಧರ್ಮಕ್ಕಿಂತ ದೇಶ ಮುಖ್ಯ ಎಂದು ಮೇಲ್ನೋಟಕ್ಕೆ ಹೇಳುತ್ತಾ, ಧರ್ಮ ಮುಖ್ಯ ಎನ್ನುವ ಕೆಲವು ಮೂಲಭೂತವಾದಿ ಮುಸ್ಲಿಮರ ಮಾತುಗಳನ್ನೇ ವಿಜೃಂಭಿಸುತ್ತಾ, ಇಡೀ ಸಮುದಾಯವನ್ನೇ ಅನುಮಾನದಿಂದ ನೋಡುವಂತೆ ಮಾಡಿ ಈಗ ತಾವು ಸಹ ದೇಶಕ್ಕಿಂತ ಧರ್ಮ ಮುಖ್ಯ ಎನ್ನುವುದನ್ನು ಸಾಬೀತು ಮಾಡಿ ದೇಶವನ್ನು ಅಸಹಿಷ್ಣುತೆಯ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಮುಂದೆ ಹೇಗೋ ಏನೋ.

ಏಕೆಂದರೆ, ಒಂದು ರಾಷ್ಟ್ರೀಯ ಯೋಜನೆಗೆ ಈ ದೇಶದ ನಿಜವಾದ ಆತ್ಮ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಾಯಿಸಿ ರಾಮನ ಹೆಸರನ್ನು ಪ್ರತಿಷ್ಠಾಪಿಸುವ ಮೂಲಕ ಈ ದೇಶದ ಮೌಲ್ಯಗಳಿಗೆ, ನಂಬಿಕೆಗಳಿಗೆ, ನ್ಯಾಯ ನೀತಿಗಳ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೆಲವು ಲೋಪ ದೋಷಗಳನ್ನು ತಿದ್ದುಪಡಿ ಮಾಡಿ ಹೊಸ ಮಸೂದೆ ಮಂಡಿಸುತ್ತಿರುವುದು ಸ್ವಾಗತಾರ್ಹ. ಆದರೆ ಮಹಾತ್ಮ ಗಾಂಧಿಯವರ ಹೆಸರನ್ನು ಬದಲಾಯಿಸುತ್ತಿರುವುದು ಮಾತ್ರ ಅತ್ಯಂತ ಘನ ಘೋರ ಅನ್ಯಾಯ. ಒಂದು ವೇಳೆ ರಾಜಕೀಯ ಕಾರಣಗಳಿಗಾಗಿ ನೆಹರು ಕುಟುಂಬದ ಕೆಲವರ ಹೆಸರನ್ನು ಬದಲಾಯಿಸುತ್ತಿದ್ದರೆ. ಅದನ್ನು ಟೇಕಿಸಿ, ಚುನಾವಣಾ ವಿಷಯವಾಗಿ ಪ್ರತಿಪಕ್ಷಗಳು ಆರೋಪ ಮಾಡಬಹುದು. ಅದೊಂದು ರಾಜಕೀಯ ನಿರ್ಧಾರ. ಆದರೆ ಮಹಾತ್ಮ ಗಾಂಧಿ ಯಾವುದೋ ಒಂದು ಪಕ್ಷದ ಅಥವಾ ಒಂದು ಧರ್ಮದ ಅಥವಾ ಒಂದು ಪ್ರದೇಶದ ವ್ಯಕ್ತಿಯಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬ ಬರಿ ಮೈ ಫಕೀರ ಮಾತ್ರವಲ್ಲ, ಭಾರತೀಯ ಮೌಲ್ಯಗಳಾದ ಸತ್ಯ, ಶಾಂತಿ, ಅಹಿಂಸೆ, ಸರಳತೆ, ಸತ್ಯಾಗ್ರಹ ಇನ್ನೊಬ್ಬರನ್ನು ಗೌರವಿಸುವುದು, ಇನ್ನೊಬ್ಬರನ್ನು ಪ್ರೀತಿಸುವುದು, ಈ ಎಲ್ಲದರ ಸಾಂಕೇತಿಕ ವ್ಯಕ್ತಿತ್ವ ಮಹಾತ್ಮ ಗಾಂಧಿಯವರದು.

ಒಳಗೆ ಗೋಡ್ಸೆ ಮನಸ್ಥಿತಿಯಿದ್ದು ಹೊರಗೆ ಗಾಂಧಿ ಮುಖವಾಡವನ್ನು ತೊಟ್ಟಿದ್ದ ನರೇಂದ್ರ ಮೋದಿಯವರು ನಿರ್ಧಿಷ್ಟವಾಗಿ ಈ ವಿಷಯದಲ್ಲಿ ಅತ್ಯಂತ ಕೆಟ್ಟ, ದೇಶದ್ರೋಹದ ತೀರ್ಮಾನವನ್ನು ಕೈಗೊಂಡಿದ್ದಾರೆ‌. ದೇಶದ ರಾಷ್ಟ್ರಪಿತನ ಹೆಸರನ್ನು ಬದಲಾಯಿಸಿ ಕಾಲ್ಪನಿಕ, ಪೌರಾಣಿಕ ಪಾತ್ರವಾದ ಶ್ರೀ ರಾಮನ ಹೆಸರನ್ನು ಮುನ್ನಲೆಗೆ ತರುವ ಮುಖಾಂತರ ಅವರ ನೈಜ ಮುಖವಾಡ ಬಯಲಾಗಿದೆ.

ಮಹಾತ್ಮ ಗಾಂಧಿಯವರು ಸಹ ಶ್ರೀರಾಮನ ಆದರ್ಶಗಳನ್ನು ಮೆಚ್ಚುತ್ತಿದ್ದರು. ಆದರೆ ಮಹಾತ್ಮ ಗಾಂಧಿಯವರ ಆದರ್ಶ ರಾಮ ಬೇರೆ, ನರೇಂದ್ರ ಮೋದಿಯವರ ರಾಮ ಬೇರೆ. ಮೋದಿಯವರ ರಾಮ ಕೇವಲ ಚುನಾವಣಾ ರಾಜಕೀಯದ, ವ್ಯಾಪಾರದ ಸರಕಿನ ಒಂದು ಭಾಗ ಮಾತ್ರ….

ಸ್ವಾತಂತ್ರ್ಯ ಭಾರತ ಇಂದು ತನ್ನ ತಳಹದಿಯ ಮೇಲೆ 79 ವರ್ಷಗಳ ನಂತರ ವಿಶ್ವಮಟ್ಟದಲ್ಲಿ ಒಂದು ಪ್ರತಿಷ್ಠಿತ ದೇಶವಾಗಿ ಮುನ್ನಡೆಯಲು ಕೊಡುಗೆ ಇರುವುದು ಮಹಾತ್ಮ ಗಾಂಧಿಯವರದೇ ಹೊರತು ಶ್ರೀರಾಮರದಲ್ಲ. ಮಹಾತ್ಮ ಗಾಂಧಿ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಲು ನಾಯಕತ್ವ ವಹಿಸಿ ಹೋರಾಡಿದವರು. ರಾಮ ತನ್ನ ಸ್ವಂತ ಕುಟುಂಬದ ಅಧಿಕಾರದ ಹಿತಾಸಕ್ತಿಯ ಪ್ರತೀಕವಾಗಿ, ಆಗಿನ ಕಾಲದ ಸಾಮಾಜಿಕ ಮೌಲ್ಯಗಳ ಆದರ್ಶವಾಗಿ ಚಿತ್ರಿತವಾಗಿರುವ ಪಾತ್ರ.

ಏಕೆ ಮಾನ್ಯ ನರೇಂದ್ರ ಮೋದಿಯವರೇ ಇಷ್ಟೊಂದು ದೊಡ್ಡ ತಪ್ಪು ಮತ್ತು ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿರಿ. ನಿಮ್ಮ ಎಲ್ಲಾ ಸರ್ವಾಧಿಕಾರಿ ಧೋರಣೆಗಳ ಮಧ್ಯೆಯೂ ಒಂದಷ್ಟು ಒಳ್ಳೆಯ ಕೆಲಸಗಳ ಬಗ್ಗೆ ಸಣ್ಣ ಸಹಾನುಭೂತಿ ನಮಗೆಲ್ಲಾ ಇತ್ತು. ಆದರೆ ಈ ನಿರ್ಧಾರದಿಂದ ಆ ಸಹಾನುಭೂತಿಯನ್ನು ಸಹ ನೀವು ಕಳೆದುಕೊಂಡಿರಿ.

ಈಗ ಅನಿಸುತ್ತಿದೆ ಇದರ ಹಿಂದೆ ನಿಮ್ಮ ವ್ಯವಸ್ಥಿತ ಪಿತೂರಿ, ಕಾರ್ಯಾಚರಣೆ ನಿರಂತರವಾಗಿ ನಡೆದುಕೊಂಡು ಬಂದು ಈಗ ಈ ಹಂತ ತಲುಪಿದೆ.

ಈ ದೇಶದ ನಿಮ್ಮ ಅಭಿಮಾನಿಗಳು, ಆರಾಧಕರು, ಭಕ್ತರು ಮಹಾತ್ಮ ಗಾಂಧಿಯವರ ವ್ಯಕ್ತಿತ್ವ ಮತ್ತು ಮೌಲ್ಯವನ್ನು ನಿಧಾನವಾಗಿ ಕಳೆದ ಹತ್ತು ವರ್ಷಗಳಿಂದ ಪ್ರತಿಕ್ಷಣ
ಅಪಮೌಲ್ಯ ಗೊಳಿಸುತ್ತಾ ಕೆಟ್ಟದಾಗಿ ಬಿಂಬಿಸುತ್ತಿರುವಾಗ, ನೀವು ಅದನ್ನು ಖಂಡಿಸದೆ ಮೇಲ್ನೋಟಕ್ಕೆ ಗಾಂಧಿಯವರ ಮುಖವಾಡ ತೊಟ್ಟುಕೊಂಡು ಈಗ ನೀವು ಅವರಿಗೆ ಸಂಪೂರ್ಣ ಪ್ರೋತ್ಸಾಹ ಕೊಡುವ ರೀತಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದು ಕ್ಷಮಿಸಲು ಸಾಧ್ಯವಿಲ್ಲದ ತಪ್ಪು.

ಮಾನ್ಯ ಮೋದಿಯವರೇ ನಿಮಗೆ ಗೋಡ್ಸೆ ಸುಲಭವಾಗಿ ಅರ್ಥವಾಗುತ್ತಾರೆ. ಆದರೆ ಗಾಂಧಿ ಖಂಡಿತ ಅರ್ಥವಾಗುವುದಿಲ್ಲ. ಆ ಸಾಧ್ಯತೆಯೂ ತುಂಬಾ ಕಡಿಮೆ. ಆದರೂ ನಾವೆಲ್ಲರೂ ನಿರೀಕ್ಷಿಸುತ್ತೇವೆ ನೀವು ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮಹಾತ್ಮಾ ಗಾಂಧಿಯವರ ವ್ಯಕ್ತಿತ್ವಕ್ಕೆ, ಘನತೆಗೆ, ತ್ಯಾಗಕ್ಕೆ ಮಸಿ ಬಳಿಯುವ ಕೆಲಸ ಮಾಡದೆ ಈ ದೇಶದ ಜನರ ಮನಸ್ಸಾಕ್ಷಿಯನ್ನು ಎತ್ತಿ ಹಿಡಿಯುತ್ತೀರೆಂದು.

ಮಾನ್ಯ ಪ್ರಧಾನಿಯವರೇ, ಗಾಂಧಿಯ ಮೌಲ್ಯಗಳನ್ನು ಮರೆತ ದೇಶ ಖಂಡಿತಾ ಸರ್ವಾಂಗೀಣವಾಗಿ, ನಿಮ್ಮ ಆಶಯದ ವಿಕಸಿತ ಭಾರತವಾಗಿ ಯಶಸ್ವಿಯಾಗುವುದು ಸಾಧ್ಯವಿಲ್ಲ. ಈಗಾಗಲೇ ಈ ದೇಶದ ಮೌಲ್ಯಗಳು ತಮ್ಮ ನೇತೃತ್ವದಲ್ಲಿ ಹಣ ಕೇಂದ್ರೀಕೃತವಾಗಿ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿವೆ. ಹಣವೇ ನಿನ್ನಯ ಗುಣ ಎಂಬ ಸಾಮಾನ್ಯ ಸಾಮಾಜಿಕ ವಾತಾವರಣ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ತಾವು ದೇಶವನ್ನು ಮೌಲ್ಯ ರಹಿತವಾಗಿ, ಹಿಮ್ಮುಖವಾಗಿ ಚಲಿಸುವಂತೆ ಮಾಡುತ್ತಿದ್ದೀರಿ. ಇದಕ್ಕಾಗಿ ಈ ದೇಶ ಬಹಳ ದೊಡ್ಡ ಗಂಡಾಂತರಕ್ಕೆ ಸಿಲುಕುತ್ತದೆ. ನಿಮ್ಮನ್ನು ಬೆಂಬಲಿಸಿದವರು ಪಶ್ಚಾತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗುಣವಿಲ್ಲದ ಹಣ ನಿಷ್ಪ್ರಯೋಜಕ ಮತ್ತು ಅಪಾಯಕಾರಿ. ತಾವು ಗಾಂಧಿಯವರನ್ನು ಏಕೆ ಗುರಿಯಾಗಿಸಿಕೊಂಡಿರಿ ಎಂಬುದು ಅರ್ಥವಾಗುತ್ತಿಲ್ಲ.

ಮಾನವೀಯ ಮೌಲ್ಯಗಳ ಪ್ರತಿಪಾದಕರಾದ, ಜಗತ್ತಿನ ಕೆಲವೇ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಗಾಂಧಿಯ ದ್ವೇಷ ಯಾಕಿಷ್ಟು ನಿಮಗೆ. ಬಹುಶಃ ಇದನ್ನು ನೋಡುತ್ತಿದ್ದರೆ ನಿಮ್ಮ ಮುಂದಿನ ಟಾರ್ಗೆಟ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಎಂದೆನಿಸುತ್ತದೆ. ಏಕೆಂದರೆ ಕೆಲವು ಮೂಲಭೂತವಾದಿ ಅಂಬೇಡ್ಕರ್ ವಾದಿಗಳು ತಪ್ಪು ಗ್ರಹಿಕೆಯಿಂದ ಮಹಾತ್ಮ ಗಾಂಧಿಯವರನ್ನು ನಿಮ್ಮಷ್ಟೇ ಟೀಕಿಸುತ್ತಾರೆ, ದ್ವೇಷಿಸುತ್ತಾರೆ. ಅದರ ಅರಿವು ನಿಮಗಿದೆ. ಅದರ ಭಾಗವಾಗಿ ಈಗ ಗಾಂಧಿಯವರನ್ನು ಏಕಾಂಗಿಯಾಗಿಸಿ ಅವರ ಚಿಂತನೆಗಳನ್ನು ಕೊಂದ ಬಳಿಕ ಮುಂದಿನ ಹೆಜ್ಜೆ ಬಹುಶಃ ಬಾಬಾ ಸಾಹೇಬರೇ ಆಗಿರುತ್ತಾರೆ.

ಬಾಬಾಸಾಹೇಬರ ಅನುಯಾಯಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಸಂಘಟಿತರಾಗಿರುವುದರಿಂದ ನೀವು ಮೇಲ್ನೋಟಕ್ಕೆ ಅವರನ್ನು ಟೀಕಿಸುವುದಿಲ್ಲ. ಗಾಂಧಿಯವರು ಇಂದು ನಿಮ್ಮ ಆಡಳಿತದಲ್ಲಿ, ಓಟಿನ ರಾಜಕೀಯದಲ್ಲಿ ಸವಕಲು ನಾಣ್ಯ. ಗಾಂಧಿಯವರನ್ನು ಬೆಂಬಲಿಸುವ, ಓಟಿನ ರಾಜಕೀಯ ಮಾಡುವ ಜನರ ಸಂಖ್ಯೆ, ಸಮುದಾಯಗಳ ಸಂಖ್ಯೆ ಇಲ್ಲದೇ ಇರುವುದರಿಂದ ನಿಮಗೆ ಇಷ್ಟೊಂದು ಧೈರ್ಯ ಬಂದಿರಬೇಕು. ಕಾಂಗ್ರೆಸ್ಸಿನ ತಪ್ಪುಗಳನ್ನೇ ಮುಂದೆ ಮಾಡಿ ಮಹಾತ್ಮ ಗಾಂಧಿಯವರನ್ನು ಜನರ ಮನಃಪಟಲದಿಂದ ದೂರ ತಳ್ಳುತ್ತಿರುವುದು ಭಾರತೀಯರಿಗೆ ನೀವು ಮಾಡುತ್ತಿರುವ ಬಹುದೊಡ್ಡ ದ್ರೋಹ.

ಸನ್ಮಾನ್ಯ ನರೇಂದ್ರ ಮೋದಿಯವರೇ, ಸತ್ಯಕ್ಕೆ ಜನಪ್ರಿಯತೆ ಮುಖ್ಯ ಅಲ್ಲ. ಸತ್ಯಕ್ಕೆ ಮನಸ್ಸಾಕ್ಷಿ ಮುಖ್ಯ. ಸತ್ಯ ಸಾರ್ವತ್ರಿಕವಾದದ್ದು, ಶಾಶ್ವತವಾದದ್ದು, ಜನಪ್ರಿಯತೆ ಕ್ಷಣಿಕವಾದದ್ದು. ಮೋದಿಯವರೇ, ನಿರ್ಧಿಷ್ಟವಾಗಿ ನಿಮ್ಮ ಈ ಯೋಜನೆಯ ಹೆಸರು ಬದಲಾವಣೆಗೆ ನಮ್ಮೆಲ್ಲಾ ಪ್ರಭುದ್ಧ ಮನಸ್ಸುಗಳ ಧಿಕ್ಕಾರ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

49 minutes ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

12 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

13 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

13 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

14 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

21 hours ago