Categories: ಲೇಖನ

ಗಾಂಧಿ ಎಂಬ ವ್ಯಕ್ತಿಯ ವ್ಯಕ್ತಿತ್ವ ಎಂತಹುದು….?

ಗಾಂಧಿ ವ್ಯಕ್ತಿತ್ವ…….

ಗಾಂಧಿ ಎಂಬ ವ್ಯಕ್ತಿಯ ವ್ಯಕ್ತಿತ್ವ ಎಂತಹುದು, ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ಗುಜರಾತಿನ ಓರ್ವ ವ್ಯಕ್ತಿ, ವಕೀಲರು, ಸ್ವಾತಂತ್ರ್ಯ ಹೋರಾಟಗಾರರು, ಭಾರತ ಎಂಬ ಬೃಹತ್ ದೇಶದ ರಾಷ್ಟ್ರಪಿತ ಎಂಬ ಗೌರವಕ್ಕೆ ಪಾತ್ರರಾಗಿರುವವರು, ಮಹಾತ್ಮ ಗಾಂಧಿ ಎಂದು ಕರೆಸಿಕೊಳ್ಳುವವರು ಯಾವ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರು…….

ಈ ಪ್ರಶ್ನೆ ಸುಮಾರು 75/80 ವರ್ಷಗಳಿಂದ ಸತತವಾಗಿ ಚರ್ಚೆಗೊಳಪಡುತ್ತಲೇ ಇದೆ. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಅಭಿಪ್ರಾಯಗಳನ್ನು ಹೊರ ಸೂಸುತ್ತಾ ಮುನ್ನಡೆಯುತ್ತಿದೆ…..

ಪ್ರಾರಂಭದಲ್ಲಿ ಬಹುತೇಕರು ಮಹಾತ್ಮ ಎಂಬುದನ್ನು ನಿರ್ವಿವಾದವಾಗಿ ಒಪ್ಪಿಕೊಂಡಿದ್ದರು. ಎಲ್ಲೋ ಕೆಲವರು ಮಾತ್ರ ಟೀಕೆ ಮಾಡುತ್ತಿದ್ದರು. ಆದರೆ
ಬರಬರುತ್ತಾ ಗಾಂಧಿಯ ವ್ಯಕ್ತಿತ್ವವನ್ನು ಹೆಚ್ಚು ಹೆಚ್ಚು ಪ್ರಶ್ನೆ ಮಾಡ ತೊಡಗಿದರು. 90ರ ದಶಕದ ನಂತರ ಗಾಂಧಿಯನ್ನು ಹೆಚ್ಚು ಹೆಚ್ಚು ವಿಮರ್ಶೆಗೆ ಒಳಪಡಿಸುತ್ತಾ, ಅವರ ನಿರ್ಧಾರಗಳನ್ನು ಟೀಕಿಸುತ್ತಾ, ಬರಹಗಳು, ಭಾಷಣಗಳು ನಡೆಯುತ್ತಿದ್ದವು. ಅದೇ ಒಂದು ವರ್ಗವಾಗಿ ಸೃಷ್ಟಿಯಾಗಿತ್ತು.

ಆದರೆ ಇತ್ತೀಚಿನ 10/15 ವರ್ಷಗಳಲ್ಲಿ ಗಾಂಧಿಯ ಮಹಾತ್ಮ ಎಂಬ ಪದಕ್ಕೆ ವಿರುದ್ಧವಾಗಿ ದುರಾತ್ಮ ಎನ್ನುವವರ ಸಂಖ್ಯೆ ಹೆಚ್ಚಾಗ ತೊಡಗಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳೆಂಬ ವೇದಿಕೆಗಳ ಬೆಳವಣಿಗೆ ಮತ್ತು ವ್ಯವಸ್ಥೆಯಲ್ಲಿ ಯೋಚನಾ ಶಕ್ತಿಯ ಸಂಕುಚಿತತೆ ಮತ್ತು ಮೌಲ್ಯಡಳ ಕುಸಿತ ಕಾರಣವಾಗಿರಬಹುದು.

ಇದೀಗ ಗಾಂಧಿಯವರ ಬಗ್ಗೆ ಕುತೂಹಲ ಇರುವವರು ಸತತವಾಗಿ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಗಾಂಧಿಯವರನ್ನು ಮಹಾತ್ಮ ಎನ್ನುವವರ ಜೊತೆ ದುರಾತ್ಮ ಎನ್ನುವವರು ಸಹ ಅಷ್ಟೇ ಪ್ರಬಲವಾಗಿ ಅವರ ವಿರುದ್ಧ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಮ ಚಿತ್ತದ ಅಥವಾ ಯಾವುದೇ ಇಸಂಗಳಿಗೆ
ಒಳಪಡದ ಜನರಲ್ಲಿ ಗೊಂದಲವಾಗುತ್ತಿದೆ.

ಹಾಗಾದರೆ ಗಾಂಧಿ ವ್ಯಕ್ತಿತ್ವ ಎಂತಹದು ಎಂಬ ಪ್ರಶ್ನೆ ಕಾಡಬಹುದು. ಅದಕ್ಕಾಗಿ ದೀರ್ಘವಾದ, ಆಳವಾದ ಅಧ್ಯಯನ ಮಾಡುವ ಆಸಕ್ತಿ, ಸಮಯ ಅಥವಾ ವೈಯಕ್ತಿಕ ಆಸಕ್ತಿ ಯಾರಿಗೂ ಇಲ್ಲ. ಸರಳವಾಗಿ, ಸಂಕ್ಷಿಪ್ತವಾಗಿ ಅವರು ನಂಬಿರುವ ಯಾರಾದರೂ ಏನು ಹೇಳುತ್ತಾರೋ ಅದರ ಆಧಾರದ ಮೇಲೆ ಗಾಂಧಿಯ ವ್ಯಕ್ತಿತ್ವವನ್ನು ನಿರ್ಧರಿಸುತ್ತಾರೆ.

ಗಾಂಧಿಯನ್ನು ಅತ್ಯಂತ ಹೆಚ್ಚು ಗೌರವಿಸುವ, ಪ್ರೀತಿಸುವ ಜನರು ಅವರಲ್ಲಿ ಮಾನವೀಯ ಮೌಲ್ಯಗಳ ಅತ್ಯಂತ ಎತ್ತರದ ಗುಣಗಳನ್ನು ಗುರುತಿಸುತ್ತಾರೆ. ಅವರ ಸತ್ಯ, ಅಹಿಂಸೆ, ಸರಳತೆಗಳನ್ನೊಳಗೊಂಡ ಇಡೀ ಬದುಕಿನ ಪ್ರಯೋಗವನ್ನು ತುಂಬಾ ತುಂಬಾ ಇಷ್ಟಪಡುತ್ತಾರೆ ಮತ್ತು ಮೆಚ್ಚುತ್ತಾರೆ. ಹಾಗೆಯೇ ಅವರ ವಿರೋಧಿಗಳು ಭಾರತದ ವಿಭಜನೆಯನ್ನು, ಹೆಣ್ಣು ಮಕ್ಕಳ ಜೊತೆ ಬ್ರಹ್ಮಚರ್ಯ ಪರೀಕ್ಷೆ ಮಾಡಿದ ರೀತಿ ನೀತಿಗಳನ್ನು, ಅವರ ಅಹಿಂಸೆ, ಸತ್ಯಾಗ್ರಹ ಚಳುವಳಿಗಳನ್ನು ತೀರಾ ಕೆಟ್ಟದ್ದಾಗಿ ಬಿಂಬಿಸುತ್ತಾರೆ.

ಈಗಿನ ನಮ್ಮೆಲ್ಲರ ಜೀವನ ಶೈಲಿಯ ಒತ್ತಡ ಹೇಗಿದೆ ಎಂದರೆ ವೇಗ, ಸ್ಪರ್ಧೆ, ಅಸಹನೆ, ಅಸಹಿಷ್ಣುತೆ, ನಿರಾಸೆ, ದುರಾಸೆ, ಜಿಗುಪ್ಸೆ, ವಿತಂಡವಾದ, ಜಗಳಗಂಟ ಮನಸ್ಥಿತಿ, ಬೇಗ ಫಲಿತಾಂಶ ಬರಬೇಕು, ಹೆಚ್ಚು ಹೆಚ್ಚು ಗಳಿಸಬೇಕು, ಬದುಕು ತುಂಬಾ ಚಿಕ್ಕದು ಬೇಗ ಅನುಭವಿಸಿ ಬಿಡಬೇಕು, ನಾವು ಸಮಾಜದಲ್ಲಿ ಹಣ ಗಳಿಸಬೇಕು, ಅಧಿಕಾರ ಪಡೆಯಬೇಕು, ತಾವು ಯಾವಾಗ ಬೇಕಾದರೂ ಸಾಯಬಹುದು, ಆದ್ದರಿಂದ ಎಲ್ಲವನ್ನು ಬೇಗ ಅನುಭವಿಸಬೇಕು ಎಂದು ಲೆಕ್ಕಹಾಕಿ ಬದುಕುತ್ತಿರುವಾಗ, ಹಣ ಕೇಂದ್ರಿತ ಸಮಾಜ ನಿರ್ಮಾಣವಾಗಿರುವಾಗ, ಸುಮಾರು 78 ವರ್ಷಗಳನ್ನು ಬದುಕಿನ ಒಂದು ಪ್ರಯೋಗಶಾಲೆಯಾಗಿ ಮಾಡಿಕೊಂಡ ಗಾಂಧಿಯನ್ನು ಅರ್ಥ ಮಾಡಿಸುವುದು ಹೇಗೆ ಎಂಬುದು ಬಹುದೊಡ್ಡ ಸವಾಲಾಗಿದೆ.

ಗಾಂಧಿಯನ್ನು ಅರ್ಥ ಮಾಡಿಕೊಳ್ಳಲು ಓದು, ಅಧ್ಯಯನ, ಚಿಂತನೆ, ಚರ್ಚೆ, ಉಪನ್ಯಾಸಗಳು ಖಂಡಿತಾ ಸಾಕಾಗುವುದಿಲ್ಲ. ಅದು ಅವರ ಬಗೆಗಿನ ಮಾಹಿತಿಯನ್ನು ಕೊಡಬಹುದಷ್ಟೇ. ಸ್ವತಃ ಅವರೇ ಬರೆದ ಆತ್ಮಚರಿತ್ರೆಯನ್ನು ಓದಿದರೂ ಸಹ ಗಾಂಧಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಮನುಷ್ಯ ಎಂಬ ಜೀವಿಯ ನಾಗರಿಕ ಸಮಾಜದ ಪ್ರಾರಂಭ, ಭಾರತ ಎಂಬ ಭೂಪ್ರದೇಶ, ಇಲ್ಲಿನ ವೈವಿಧ್ಯತೆ, ಸಂಘರ್ಷಗಳು, ಅಕ್ರಮಣಗಳು, ಬ್ರಿಟಿಷರ ಆಳ್ವಿಕೆ, ಅದರ ವಿರುದ್ಧ ನಡೆದ ಚಳುವಳಿಗಳು, ಒಂದು ದಿನ ಅದಕ್ಕೆ ಸಿಕ್ಕ ಯಶಸ್ಸು, ಜೊತೆಗೆ ಈ ರೀತಿಯ ವಿಶ್ವದ ಇತರ ಹೋರಾಟಗಳು, ಅದಕ್ಕಾಗಿ ಅನುಸರಿಸಿದ ಮಾರ್ಗಗಳು, ಜೊತೆಗೆ ನಮ್ಮ ವೈಯಕ್ತಿಕ ಬದುಕಿನ ಮಾನಸಿಕತೆ ಎಲ್ಲವನ್ನೂ ಒಂದಷ್ಟು ವಿಮರ್ಶೆಗೊಳಪಡಿಸಿ, ತದನಂತರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಜೊತೆಗೆ ನಮ್ಮ ಸಾಮಾಜಿಕ ವ್ಯವಸ್ಥೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಾಂಧಿ ಎಂಬ ವ್ಯಕ್ತಿಯ ವ್ಯಕ್ತಿತ್ವದ ಅನಾವರಣಗೊಳ್ಳಬಹುದು ಅಥವಾ ಸ್ವಲ್ಪಮಟ್ಟಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಮನುಷ್ಯನ ಮೂಲಭೂತ ಅವಶ್ಯಕತೆಗಳೇನು, ಬೇಡಿಕೆಗಳೇನು, ಕಷ್ಟದಲ್ಲಿದ್ದಾಗ ಹೇಗೆ ವರ್ತಿಸುತ್ತಾನೆ, ಅನಕ್ಷರಸ್ಥನಿದ್ದಾಗ ಹೇಗೆ ವರ್ತಿಸುತ್ತಾನೆ, ವಿದ್ಯಾವಂತನಾದಾಗ ಹೇಗೆ ವರ್ತಿಸುತ್ತಾನೆ, ಅಧಿಕಾರ ದೊರೆತಾಗ ಹೇಗೆ, ಇದ್ದಾಗ ಹೇಗೆ, ಸತ್ತಾಗ ಹೇಗೆ ಮಾತನಾಡಿಕೊಳ್ಳುತ್ತಾನೆ ಒಮ್ಮೆ ಯೋಚಿಸಿ ನೋಡಿ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದೇ ಭಾರತೀಯರು ಮಹಾತ್ಮ ಗಾಂಧಿಯವರನ್ನು ದೇವರೆಂದು ಭಾವಿಸಿದ್ದರು. ನಮ್ಮ ಸ್ವಾತಂತ್ರ್ಯ ವಿಮೋಚಕ ಎನ್ನುತ್ತಿದ್ದವರು ಅದು ಹೇಗೆ ಇತ್ತೀಚಿಗೆ ಕೆಟ್ಟವರಾಗಿದ್ದಾರೆ. ಬದುಕಿದ್ದಾಗ ಒಳ್ಳೆಯವರಾಗಿದ್ದವರು ಸತ್ತ ನಂತರ ಏನೂ ಮಾಡದೆ ಕೆಟ್ಟವರಾಗುವುದು ಹೇಗೆ.

ಅದು ಹಾಗಲ್ಲ ಗಾಂಧಿಯವರನ್ನು ಅವರ ನಿಧನದ ನಂತರ ಅಧಿಕಾರಕ್ಕೆ ಬಂದ ಪಕ್ಷ ಅನಾವಶ್ಯಕವಾಗಿ ವಿಜೃಂಭಿಸಿ, ಇತರರನ್ನು ನಿರ್ಲಕ್ಷಿಸಿ, ಅಧಿಕಾರದ ಸ್ವಾರ್ಥಕ್ಕಾಗಿ ಗಾಂಧಿಯನ್ನು ಮಹಾತ್ಮ ಪಟ್ಟಕ್ಕೆ ಏರಿಸಿದೆ. ಗಾಂಧಿ ಆಸ್ಥಾನಕ್ಕೆ ಅರ್ಹರಲ್ಲ ಎಂದು ವಾದ ಮಂಡಿಸುತ್ತಾರೆ. ವಕೀಲಿಕೆಯ ಸಾಮರ್ಥ್ಯದಲ್ಲಿ, ಈ ಕ್ಷಣದ ನಮ್ಮ ಅರಿವಿನ ಪ್ರಜ್ಞೆಯಲ್ಲಿ ಹೇಗೆ ಬೇಕಾದರೂ ವಾದ ಮಂಡಿಸಬಹುದು. ಆ ವಾದಗಳಲ್ಲೂ ಒಂದಷ್ಟು ನಿಜಾಂಶಗಳು ಇರುವ ಸಾಧ್ಯತೆಯೂ ಇರುತ್ತದೆ. ಆದರೆ ವ್ಯಕ್ತಿತ್ವವನ್ನು ಗುರುತಿಸುವುದು ವಾದದ ಮುಖಾಂತರವಲ್ಲ, ಬದುಕಿನ ಒಟ್ಟು ಗುಣಮಟ್ಟದ ಆಧಾರದ ಮೇಲೆ…..

ಗಾಂಧಿ ಪ್ರತಿಪಾದಿಸಿದ್ದು ಸತ್ಯ, ಅಹಿಂಸೆ, ಸರಳತೆಯೇ ಹೊರತು ಹಿಂಸೆ, ದ್ವೇಷ, ಅಸೂಯೆ, ಆಕ್ರಮಣವನ್ನಲ್ಲ.
ಗಾಂಧಿ ಪ್ರಸಿದ್ಧ ಪ್ರತಿಪಾದಿಸಿದ್ದು ಈ ಕ್ಷಣಕ್ಕೂ ಅತ್ಯಂತ ಮಹತ್ವದ ಮಾನವೀಯ ಮೌಲ್ಯಗಳನ್ನೇ ಹೊರತು ಹಣಕೇಂದ್ರಿತ ದುಷ್ಟ ಸಮಾಜವನ್ನಲ್ಲ, ಗಾಂಧಿ ಪ್ರತಿಪಾದಿಸಿದ್ದು ಮೌಲ್ಯಯುತ ಬದುಕನ್ನೇ ಹೊರತು ಇತರರಿಗೆ ತೊಂದರೆ ಕೊಡುವ ದುರಾಸೆಯ ಬದುಕನ್ನಲ್ಲ, ಗಾಂಧಿ ಹೇಳಿದ್ದು ಹಂಚಿಕೊಂಡು ತಿನ್ನೋಣವೆಂದೇ ಹೊರತು ಕಿತ್ತುಕೊಂಡು ತಿನ್ನೋಣವೆಂದಲ್ಲ,
ಅಂದರೆ ಗಾಂಧಿ ಪ್ರತಿಪಾದಿಸಿದ್ದು ಅತ್ಯುತ್ತಮ ನಾಗರಿಕ ಮೌಲ್ಯಗಳನ್ನು ಅಲ್ಲವೇ, ಹಾಗಿದ್ದರೆ ಅವರನ್ನು ತೀರ ಕೆಟ್ಟವರೆಂದು ಬಿಂಬಿಸುವುದು ವಿಚಿತ್ರವಲ್ಲವೇ, ಅದೇ ಈ ಕ್ಷಣದ ಭಾರತೀಯ ಮೌಲ್ಯಗಳ ಕುಸಿತ.

ಗಾಂಧಿ ಅಕ್ಷರಶಃ ಒಂದು ಸ್ವಚ್ಛ ಕನ್ನಡಿ ಇದ್ದಂತೆ. ಅವರೊಂದು ನಮ್ಮ ಆತ್ಮದ ಪ್ರತಿಬಿಂಬ. ಒಳ್ಳೆಯತನದ ಸಂಕೇತ. ಬದುಕನ್ನು ಅತ್ಯಂತ ಪ್ರೀತಿಯಿಂದ, ವಿಶಾಲವಾಗಿ, ನೈತಿಕ ನೆಲಗಟ್ಟಿನಲ್ಲಿ, ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ನಾವು ಅನುಭವಿಸಿದಾಗ ಮಾತ್ರ ಗಾಂಧಿ ಹೆಚ್ಚು ಸ್ಪಷ್ಟವಾಗಿ ಅರ್ಥವಾಗುತ್ತಾರೆ. ಎಲ್ಲೋ ಕೆಲವು ಹೇಳಿಕೆಗಳಿಂದ, ಯಾವುದೋ ರಾಜಕೀಯ ನಿರ್ಧಾರಗಳಿಂದ, ಅವುಗಳು ಮುಂದೆ ನೀಡಿದ ಫಲಿತಾಂಶಗಳ ಆಧಾರದ ಮೇಲೆ ಗಾಂಧಿಯವರನ್ನು ವಿಮರ್ಶಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ.
ಗಾಂಧಿಯ ವ್ಯಕ್ತಿತ್ವ ಅತ್ಯಂತ ಪ್ರಾಮಾಣಿಕ, ನೈತಿಕ ಮತ್ತು ಶ್ರೇಷ್ಠವಾದದ್ದು‌.

ಹೌದು ಸಹಜವಾಗಿ ಒಂದಷ್ಟು ತಪ್ಪುಗಳು ಇದ್ದೇ ಇರುತ್ತವೆ. ಯಾರು ಸಹ ಪರಿಪೂರ್ಣರಲ್ಲ. ಆದರೆ ಗಾಂಧಿ ಅತ್ಯಂತ ಪಾರದರ್ಶಕವಾಗಿ ಬದುಕಿನೊಂದಿಗೆ, ಸತ್ಯದೊಂದಿಗೆ, ಮೌಲ್ಯಗಳೊಂದಿಗೆ ನಡೆಸಿದ ಪ್ರಯೋಗವಿದೆಯಲ್ಲ, ಅದು ಇಡೀ ಜಗತ್ತಿಗೆ ಅತ್ಯುತ್ತಮ ಮಾದರಿ. ಆದ್ದರಿಂದ ಗಾಂಧಿಯವರನ್ನು ಖಂಡಿಸುವ ಯಾವುದೇ ನೈತಿಕತೆ ಜನಸಾಮಾನ್ಯರಾದ ನಮಗಿಲ್ಲ. ಗಾಂಧಿಯ ಚಿಂತನೆಗಳನ್ನು ವಿರೋಧಿಸಬಹುದು, ವಿಮರ್ಶಿಸಬಹುದು. ಆದರೆ ದ್ವೇಷಿಸುವಷ್ಟು ಗಾಂಧಿಯ ವ್ಯಕ್ತಿತ್ವ ಕೆಟ್ಟದ್ದಲ್ಲ.

ಒಂದು ವೇಳೆ ಗಾಂಧಿಯವರನ್ನು ದ್ವೇಷಿಸಿದರೆ ನಮ್ಮನ್ನು ನಾವೇ ಕೆಳದರ್ಜೆಗೆ ಇಳಿಸಿಕೊಂಡಂತೆ. ಬದುಕಿನ ಈ ಕ್ಷಣದ ಅನುಭವಗಳೊಂದಿಗೆ, ಎಲ್ಲವನ್ನು ಕಳೆದುಕೊಂಡು ತಟಸ್ಥ ಸ್ಥಳದಲ್ಲಿ ನಿಂತು, ಅತ್ಯಂತ ಪ್ರಾಮಾಣಿಕವಾಗಿ, ಆತ್ಮಸಾಕ್ಷಿಗನುಗುಣವಾಗಿ, ಯಾವುದೇ ಇಸಂಗೆ ಒಳಗಾಗದೆ, ಪ್ರಕೃತಿಯ ಮೂಲದಿಂದ, ಸಾಮಾಜಿಕ ನೆಲಗಟ್ಟಿನಲ್ಲಿ, ನಾಗರಿಕ ಸಮಾಜದಲ್ಲಿ ನಿಂತು, ನನ್ನೆಲ್ಲಾ ಗೃಹಿಕೆಯನ್ನು ಒಟ್ಟುಗೂಡಿಸಿ ಹೇಳುತ್ತೇನೆ ” ಗಾಂಧಿ ಎಂಬುದು ಮಾನವ ಜನಾಂಗದ ಅತ್ಯುತ್ತಮ, ಅತ್ಯದ್ಭುತ ವ್ಯಕ್ತಿತ್ವ ” ದಯವಿಟ್ಟು ಸ್ವೀಕರಿಸಿ, ಅರ್ಥ ಮಾಡಿಕೊಳ್ಳಿ, ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

6 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

9 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

19 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

22 hours ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

23 hours ago

ದೊಡ್ಡಬಳ್ಳಾಪುರ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕ: ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನೂತನ ತಹಶೀಲ್ದಾರ್ ಮಲ್ಲಪ್ಪ

ದೊಡ್ಡಬಳ್ಳಾಪುರದ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕಗೊಂಡಿದ್ದಾರೆ. ಈ ಹಿನ್ನೆಲೆ ಇಂದು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ…

1 day ago