ಕೊಳಚೆ ನೀರು ಶುದ್ಧೀಕರಣಕ್ಕೆ STP ಘಟಕ ಸ್ಥಾಪನೆಗೆ ಆಗ್ರಹ: ಆ.15ರಂದು ಗಾಂಧಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ

ದೊಡ್ಡಬಳ್ಳಾಪುರ: ನಗರದಿಂದ ಗ್ರಾಮಗಳ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಲು ಎಸ್‌ಟಿಪಿ (STP) ಘಟಕ ಸ್ಥಾಪಿಸುವಂತೆ ಆಗ್ರಹಿಸಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟ ಸಮಿತಿ ವತಿಯಿಂದ ಆಗಸ್ಟ್ 15ರಂದು ನಗರದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖ ಸತೀಶ್, ದೊಡ್ಡತುಮಕೂರು ಹಾಗೂ ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಸಮಸ್ಯೆ ಪರಿಹಾರಕ್ಕಾಗಿ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ಹಿಂದಿನ ಹೋರಾಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಹೋರಾಟ ಕೈಬಿಡುವಂತೆ ಮನವಿ ಮಾಡಲಾಗಿತ್ತು. ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ. ಹೀಗಾಗಿ ಹೋರಾಟದ ಮುಂದುವರಿದ ಭಾಗವಾಗಿ ಆ.15ರಂದು ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯ ಮುಖಂಡ ವಸಂತ್ ಕುಮಾರ್ ಮಾತನಾಡಿ, ನಗರದಿಂದ ಗ್ರಾಮಗಳ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಲು ಎಸ್‌ಟಿಪಿ ಘಟಕ ಸ್ಥಾಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಆದರೆ ಈವರೆಗೂ ಘಟಕ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೋರಾಟ ಮುಂದುವರಿಕೆ: ಎಸ್‌ಟಿಪಿ ಘಟಕ ಸ್ಥಾಪನೆಯಾಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಹೋರಾಟ ಜೀವಂತವಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಉದ್ದೇಶದಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅರ್ಕಾವತಿ ನದಿ ಪಾತ್ರ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಕಾಳೇಗೌಡ, ಅಂಜನ್ ಮೂರ್ತಿ, ರಾಮಕೃಷ್ಣಪ್ಪ, ಅಂಜಿನಪ್ಪ, ಸುವಂತಪ್ಪ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!