ಕುಡಿಯುವ ನೀರು ನೀಡದಿದ್ದರೆ ಚುನಾವಣಾ ಬಹಿಷ್ಕಾರ ಗ್ಯಾರಂಟಿ- ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರ ಎಚ್ಚರಿಕೆ

ತಾಲೂಕಿನ ಅರ್ಕಾವತಿ ನದಿಪಾತ್ರದ ದೊಡ್ಡತುಮಕೂರು, ಮಜರಾಹೊಸಹಳ್ಳಿ, ಚಿಕ್ಕತುಮಕೂರಿನ ಕೆರೆಗಳು ಕಲುಷಿತವಾಗಿರುವುದಷ್ಟೇ ಅಲ್ಲದೇ ಕೊಳವೆಬಾವಿಗಳ ನೀರು, ಶುದ್ಧೀಕರಣದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಶುದ್ಧೀಕರಣ ಮಾಡುವ ಬಗ್ಗೆ ನಿರಂತರ ಹೋರಾಟಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನ ಕೈಗೊಂಡಿದ್ದು, ಸಮಸ್ಯೆ ಬಗೆಹರಿಯುವ ಲಿಖಿತ ಭರವಸೆ ದೊರೆಯದಿದ್ದರೆ, ಚುನಾವಣಾ ಪ್ರಚಾರಕ್ಕೆ ಯಾರನ್ನೂ ಗ್ರಾಮಕ್ಕೆ ಬಿಡುವುದಿಲ್ಲ ಎಂದು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹಾಗೂ ದೊಡ್ಡತುಮಕೂರು ಮಜರಾಹೊಸಹಳ್ಳಿ ಗ್ರಾ.ಪಂ ಕೆರೆ ಹೋರಾಟ ಸಮಿತಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಟಿ.ಎಚ್.ಆಂಜಿನಪ್ಪ, ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮತ್ತು ಕಾರ್ಖಾನೆಗಳ ತ್ಯಾಜ್ಯ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ಧೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಬರಿ ಕೆರೆ ನೀರು ಅಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ಧೀಕರಣದ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿ ಬಂದಿದೆ ಎಂದರು.

ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ನೀರು ಶುದ್ಧೀಕರಿಸುವ ಕಾರ್ಯ ಇನ್ನು ಕೈಗೊಂಡಿಲ್ಲ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರು. ಅದು ಈವರೆಗೂ ಭರವಸೆಯಾಗಿಯೇ ಉಳಿದಿದೆ. ರಾಸಾಯನಿಕಯುಕ್ತ ಕಲುಷಿತ ನೀರಿನಿಂದಾಗಿ ಕ್ಯಾನ್ಸರ್,  ಕಿಡ್ನಿ ಸಮಸ್ಯೆಗಳು ಕಾಡುತ್ತಿವೆ. ಇದು ಮುಂದಿನ ಪೀಳಿಗೆಗೂ ಹರಡುವ ಅಪಾಯಗಳಿವೆ. ಒಳಚರಂಡಿ ನೀರಿಗೆ ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂದರು.

ನಂತರ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಮಾತನಾಡಿ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗಳನ್ನು ಕೈಗೊಳ್ಳದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಣ್ಣ ಪ್ರಕರಣಗಳಿಗೆ ಗ್ರಾಮಗಳಿಗೆ ಧಾವಿಸುವ ಅಕಾರಿಗಳು ಇಂತಹ ಗಂಭೀರ ಸ್ಥಿತಿ ಇದ್ದರೂ ಏಕೆ ಬರುತ್ತಿಲ್ಲ. ಚುನಾವಣಾ ಬಹಿಷ್ಕಾರ ಶತಸಿದ್ಧವಾಗಿದ್ದು,  ನಮ್ಮ ಕೂಗು ಕೇಂದ್ರಕ್ಕೆ ಮುಟ್ಟಬೇಕಿದೆ ಎಂದರು.

ಹಿರಿಯ ಮುಖಂಡರಾದ ತಿ.ರಂಗರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಿಗೆ ಹರಿಸುತ್ತಿರುವ ಕೆ.ಸಿ.ವ್ಯಾಲಿ ನೀರು ಸಹ ಕಲುಷಿತವಾಗಿರುವ ವರದಿಗಳು ಬಂದಿವೆ. ಈ ದಿಸೆಯಲ್ಲಿ ಶುದ್ಧೀಕರಣ ಮೂರು ಹಂತದಲ್ಲಿ ಆಗಲೇಬೇಕಿದೆ ಎಂದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ಮಳೆ ನೀರಿನ ಹೊರತಾಗಿ ಇಲ್ಲಿನ ಯಾವುದೇ ಕೊಳವೆ ಬಾವಿ ನೀರು ವ್ಯವಸಾಯಕ್ಕೆ ಯೋಗ್ಯವಾಗಿಲ್ಲ. ಹಸುಗಳ ಹಾಲು ಸಹ ಕಲುಷಿತವಾಗಿದ್ದು, ಸಮಸ್ಯೆ ತೀವ್ರವಾಗಿದೆ ಎಂದರು.

ಮಜರಾಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ನಾರಾಯಣಮೂರ್ತಿ ಮಾತನಾಡಿ, ಗ್ರಾಮಸ್ಥರಿಂದ ಕಲುಷಿತ ನೀರಿನ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕಿದ್ದು, ಹೋರಾಟಕ್ಕೆ ತಮ್ಮ ಸಹಮತವಿರುವುದಾಗಿ ತಿಳಿಸಿದರು.

ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರಾದ ಸತೀಶ್, ವಸಂತ ಕುಮಾರ್, ರಮೇಶ್ ಮಾತನಾಡಿ,  ಕಲುಷಿತ ನೀರಿನಿಂದ ಹಲವಾರು ರೋಗ ರುಜಿನಗಳು ಹರಡುತ್ತಿವೆ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡುವುದಾಗಿ ಹೇಳಿದ್ದರೂ ಭರವಸೆ ಈಡೇರಿಲ್ಲ. ಎರಡನೇ ಹಂತದ ಶುದ್ಧೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಎರಡನೇ ಹಂತದ ಶುದ್ಧೀಕರಣ ಘಟಕವನ್ನು ಕೈ ಬಿಟ್ಟು ಮೂರನೇ ಹಂತದ ಶುದ್ಧೀಕರಣ ಘಟಕ ಮಾಡಬೇಕು. ನೀರು ನಮ್ಮ ಮೂಲಭೂತ ಹಕ್ಕು ಆಗಿರುವುದರಿಂದ ಸರ್ಕಾರ ಜನರಿಗೆ ಶುದ್ಧೀಕರಣದ ಕುಡಿಯುವ ನೀರು ಕೊಡಲು ಸಾಧ್ಯವಾಗದೇ ಇರುವುದರಿಂದ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತಿದೆ. ಇದಕ್ಕೆ ಪಕ್ಷಾತೀತವಾಗಿ, ಗ್ರಾಮದ ರಾಜಕೀಯ ಮುಖಂಡರು, ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಸಭೆಯಲ್ಲಿನ ಹಕ್ಕೊತ್ತಾಯಗಳು : 

ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರನ್ನು ಮೂರನೇ ಹಂತ ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು, ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆ  ಮಾಡಬೇಕೆಂದು ತಿಳಿಸಿದ್ದರೂ ಕೆಲವೇ ಹಳ್ಳಿಗಳಿಗೆ ಮಾತ್ರ ನೀರು ದೊರೆಯುತ್ತಿದ್ದು, ಎಲ್ಲಾ ಹಳ್ಳಿಗಳಿಗೂ ದೊರೆಯಬೇಕು.

ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ದು ಪದ್ಧತಿಯನ್ನು ಸಂಪೂರ್ಣ ವೆಚ್ಚ ಸರ್ಕಾರವೇ ಕೊಟ್ಟು ಅಥವಾ ಕಾರ್ಖಾನೆಗಳ ಧನ ಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ದು ಪದ್ಧತಿಯನ್ನು ಮಾಡಿಕೊಡಬೇಕು.

ಎರಡು ಪಂಚಾಯ್ತಿಗಳಲ್ಲಿ ಈಗಾಗಲೇ ಅನೇಕ ಜನಗಳಿಗೆ ಕ್ಯಾನ್ಸರ್ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಅಂತವರಿಗೆ ಮತ್ತು ಮುಂದೆ ಯಾರಿಗೆ ಸಮಸ್ಯೆ ಕಂಡು ಬಂದರೂ ಸರ್ಕಾರದಿಂದ ಅಂತವರಿಗೆ ನರವು ನೀಡಬೇಕು.

ಜನ, ಜಾನುವಾರುಗಳಿಗೆ ಈ ಹಿಂದೆ ಸಭೆಯಲ್ಲಿ ತಿಳಿಸಿದಂತೆ 12 ಕಿ.ಮೀ ದೂರದಿಂದ ಕೊಳವೆ ಬಾವಿಗಳ ನೀರನ್ನು ತಂದು ಜನರು ಉಪಯೋಗಿಸಲು ಮತ್ತು ಜನ ಜಾನುವಾರುಗಳು ಕುಡಿಯಲು ಅನುಕೂಲ ಮಾಡಿಕೊಡಬೇಕು.

ಸಭೆಯಲ್ಲಿ ಕೆರೆ ಹೋರಾಟ ಸಮಿತಿಯ ಮುಖಂಡರಾದ ಬಿ.ಎಚ್.ಕೆಂಪಣ್ಣ, ಆದಿತ್ಯ ನಾಗೇಶ್, ಚಿಕ್ಕಣ್ಣಪ್ಪ, ಸಂದೇಶ್, ಷಣ್ಮುಖಾಚಾರ್, ಟಿ.ಜಿ.ಮಂಜುನಾಥ್, ಲೀಲಮ್ಮ ಪಿಳ್ಳೇಗೌಡ, ರಾಮ್‍ದಾಸ್, ಸಂದೇಶ್, ಚೈತ್ರ ಭಾಸ್ಕರ್, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಹಾಜರಿದ್ದರು.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

6 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

11 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

14 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago