ಕಾಲ್ತುಳಿತ ಎಂಬ ಸಾಮಾಜಿಕ – ಸಾಂಕ್ರಾಮಿಕ ರೋಗ ಮತ್ತು ಈ ವರ್ಷದ ದಸರಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ……..
ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆ
ತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು…..
ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, ಇನ್ನು ಕೆಲವು ಸಲ ಆಹಾರ ಪದಾರ್ಥಗಳ ಹಂಚಿಕೆಯ ಸಂದರ್ಭದಲ್ಲಿ ಅದನ್ನು ಪಡೆಯಲು ಕಾಲ್ತುಳಿತ ಉಂಟಾಗುತ್ತಿತ್ತು. ಪ್ರಖ್ಯಾತ ದೇವಸ್ಥಾನದ ಪ್ರವೇಶಕ್ಕಾಗಿ ಅಥವಾ ವಿಶೇಷ ಸಂದರ್ಭದಲ್ಲಿಯೂ ಕಾಲ್ತುಳಿತಗಳು ಉಂಟಾಗುತ್ತಿದೆ. ತಿರುಪತಿ, ಶಬರಿಮಲೆ, ವೈಷ್ಣೋದೇವಿ ಮುಂತಾದ ಕಡೆ ಆಗಾಗ ಕಾಲ್ತುಳಿತಗಳು ಸಂಭವಿಸುತ್ತಿರುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಕುಂಭಮೇಳ ಸಂದರ್ಭದಲ್ಲಿ, ಒರಿಸ್ಸಾದ ಜಗನ್ನಾಥ ರಥೋತ್ಸವದಲ್ಲಿ, ತೀರಾ ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಐಪಿಎಲ್ ಕ್ರಿಕೆಟ್ ವಿಜಯೋತ್ಸವದ ಸಂದರ್ಭದಲ್ಲಿ, ಇದೀಗ ತೀರ ಭೀಕರವಾಗಿ ತಮಿಳು ನಟ ವಿಜಯ್ ಅವರ ರಾಜಕೀಯ ಪ್ರಚಾರ ಸಭೆಯಲ್ಲಿ ಕಾಲ್ತುಳಿತ ಉಂಟಾಗಿ ಸರಿಸುಮಾರು 40 ಜನ ನಿಧನರಾಗಿ ಸಾಕಷ್ಟು ಜನ ಗಾಯಗೊಂಡಿದ್ದಾರೆ.
ಮೊದಲನೆಯದಾಗಿ ಕಾಲ್ತುಳಿತ ಎಂಬುದು ಒಂದು
ಸ್ವಯಂಕೃತಾಪರಾಧ, ಭಾವವೇಶದ ಮೂರ್ಖತನ, ಭದ್ರತಾ ವ್ಯವಸ್ಥೆಯ ವೈಫಲ್ಯ, ದಡ್ಡತನದ ಅನಾಗರಿಕ ವರ್ತನೆ ಎಂಬುದು ವಾಸ್ತವ. ಏಕೆಂದರೆ ಎಷ್ಟೋ ಬಾರಿ ಯಾವುದೇ ಪ್ರಚೋದನೆ ಇಲ್ಲದೇ ಅಥವಾ ಕೆಲವು ಕಿಡಿಗೇಡಿಗಳ ತುಂಟಾಟದಿಂದ ಅಥವಾ ಗುಂಪಿನ ಗಾಳಿಮಾತುಗಳಿಂದ ಅಥವಾ ಯಾವುದಾದರೂ ಪ್ರಚೋದನೆಯಿಂದ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿ ಜನರಲ್ಲಿ ಗಾಬರಿ ಉಂಟಾದಾಗ ಅನಾವಶ್ಯಕವಾಗಿ ಓಡಿ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆಗಳು ನಡೆಯುತ್ತವೆ.
ಈ ರೀತಿಯ ದುರ್ಘಟನೆಗಳು ನಡೆಯುವ ಸಂದರ್ಭದಲ್ಲಿ ಸರ್ಕಾರಗಳು ಪರಿಹಾರ ಘೋಷಿಸಿ, ತನಿಖೆಗೆ ಆದೇಶಿಸಿ ಕೈ ತೊಳೆದುಕೊಳ್ಳುತ್ತದೆ. ಅಲ್ಲಿಗೆ ವಿಷಯ ಮುಕ್ತಾಯವಾಗಿ ಮತ್ತೊಂದು ದುರ್ಘಟನೆಯವರೆಗೂ ಸುದ್ದಿಯೇ ಇರುವುದಿಲ್ಲ.
ವಾಸ್ತವವಾಗಿ ಇಂದಿನ ಆಧುನಿಕ ಕಾಲದಲ್ಲಿ ಕಾಲ್ತುಳಿತ ತಡೆಯಲು ಸಾಕಷ್ಟು ಮಾರ್ಗಗಳಿವೆ. ಸಂಪೂರ್ಣ ಅಲ್ಲದಿದ್ದರೂ ಕಾಲ್ತುಳಿತದ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ ರಾಜಕೀಯ ಮತ್ತು ಆಡಳಿತಗಾರರ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಈ ದುರಂತಗಳು ಮತ್ತೆ ಮತ್ತೆ ಸಂಭವಿಸುತ್ತದೆ.
ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭ, ಸಮಯ, ಅದಕ್ಕಾಗಿ ಸಿದ್ಧವಾಗಿರುವ ವೇದಿಕೆ ಮತ್ತು ಪ್ರದೇಶ, ಅದರಲ್ಲಿ ಭಾಗವಹಿಸುವವರ ಸಂಖ್ಯೆ, ಅತಿಥಿ ಯಾರು, ಸಮಯಕ್ಕೆ ಸರಿಯಾಗಿ ಆ ಕಾರ್ಯಕ್ರಮ ನಡೆಯುತ್ತದೆಯೇ, ನಿರೀಕ್ಷೆಗಿಂತ ಹಲವು ಪಟ್ಟು ಹೆಚ್ಚು ಜನರು ಬರಲು ಪ್ರಾರಂಭವಾದಾಗ ಪೋಲೀಸ್ ಗುಪ್ತಚರ ಇಲಾಖೆ ಅದನ್ನು ಗುರುತಿಸಿ ಮಾಹಿತಿ ನೀಡುವುದು ಮುಂತಾದ ಅನೇಕ ವಿಷಯಗಳು ಇಲ್ಲಿ ಅಡಕವಾಗಿರುತ್ತದೆ.
ಇದೆಲ್ಲವನ್ನು ಮೀರಿ ಜನರ ವಿವೇಚನೆಯೂ ಬಹಳ ಮುಖ್ಯವಾಗುತ್ತದೆ. ಟಿವಿ ಮಾಧ್ಯಮಗಳು, ಮೊಬೈಲ್ ಲೈವ್ ಗಳು ಇರುವಾಗ ಅನಾವಶ್ಯಕವಾಗಿ ಕೆಲವು ಕಾರ್ಯಕ್ರಮಗಳಿಗೆ ಹೋಗದೇ ಇರುವುದು, ಮಕ್ಕಳನ್ನು ಮತ್ತು ದೈಹಿಕ ದುರ್ಬಲರನ್ನು ಅಂತಹ ಕಾರ್ಯಕ್ರಮಗಳಿಂದ ದೂರ ಇಡುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಅನಾವಶ್ಯಕವಾಗಿ ಒಂದೇ ಜಾಗದಲ್ಲಿ ಲಕ್ಷಾಂತರ ಜನ ಸೇರುವುದು, ಸೇರಿದ ಮೇಲೆ ಹುಚ್ಚುಚ್ಚಾಗಿ ವರ್ತಿಸುವುದು, ದಿಢೀರನೆ ಭಯಗೊಳ್ಳುವುದು, ದಿಗ್ಭ್ರಮೆಯಾಗುವುದು, ತಾನು, ತನ್ನ ಕುಟುಂಬ ಮಾತ್ರ ಸುರಕ್ಷಿತವಾಗಬೇಕು ಎಂದು ಒಟ್ಟು ಪರಿಸ್ಥಿತಿಯನ್ನು ಅವಲೋಕಿಸದೆ ಓಡುವುದು, ಸಿಕ್ಕಸಿಕ್ಕರವನ್ನು, ಕೆಳಗೆ ಬಿದ್ದವರನ್ನು ತುಳಿಯುವುದು, ಅಂತಹ ಸಂದರ್ಭದಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಒದಗಿಸದೆ ಇರುವುದು, ಪೊಲೀಸರ ನಿರ್ಲಕ್ಷ್ಯ, ಸೂಕ್ಷ್ಮ ಗ್ರಹಿಕೆಯ ವೈಫಲ್ಯ ಎಲ್ಲವೂ ಸೇರಿ ಕಾಲ್ತುಳಿತಗಳು ನಿರಂತರವಾಗಿ ಸಂಭವಿಸುತ್ತಿರುತ್ತದೆ.
ಅಲ್ಲದೆ ಇತ್ತೀಚೆಗೆ ಇದೊಂದು ಸಾಂಕ್ರಾಮಿಕ, ಸಾಮಾಜಿಕ ರೋಗವಾಗಿ ಪರಿವರ್ತನೆ ಆಗಿರುವುದರಿಂದ ಈ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವುದು ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಮೈಸೂರು ದಸರಾ ಉತ್ಸವದ ಸಂದರ್ಭದ ಬಹುದೊಡ್ಡ ಗುಂಪನ್ನು ನಿಯಂತ್ರಿಸುವ ಸವಾಲು. ಬಹುಶಃ ನನಗಿರುವ ಮಾಹಿತಿಯಂತೆ ಮೈಸೂರು ದಸರಾ ಸಂದರ್ಭದಲ್ಲಿ ಅತ್ಯಂತ ಭೀಕರ ಎನ್ನುವ ಯಾವುದೇ ಕಾಲ್ತುಳಿತ ಇಲ್ಲಿಯವರೆಗೂ ಸಂಭವಿಸಿಲ್ಲ ಎನಿಸುತ್ತದೆ. ಅಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಸಣ್ಣಪುಟ್ಟ ಘಟನೆಗಳು ಆನೆ ರೊಚ್ಚಿಗೆದ್ದಾಗ ಆಗಿರುವ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಅಂತಹ ಗಂಭೀರ ಕಾಲ್ತುಳಿತ ಸಂಭವಿಸಿಲ್ಲ.
ಆದರೆ ಹಾಗೆಂದು ನಿರ್ಲಕ್ಷಿಸುವಂತಿಲ್ಲ. ಆಕಸ್ಮಿಕಗಳು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಸರಿಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಲ್ಲಿರುವ ದಸರಾ ಸಂದರ್ಭದಲ್ಲಿ ಮುಖ್ಯ ದಿನದಂದು ಈ ಪ್ರಮಾಣದ ಜನಸಂಖ್ಯೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟವಿದೆ. ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ನಾಗರೀಕರು ಸಹ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕು. ಇಲ್ಲದಿದ್ದರೆ ಹೇಗೆ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ನಂತರ ಆ ಕ್ರೀಡಾಂಗಣದಲ್ಲಿ ಸಧ್ಯಕ್ಕೆ ಕ್ರಿಕೆಟ್ ನಡೆಯಲು ನಿಷೇಧವಿದೆಯೋ ಹಾಗೆ ದಸರಾ ಸಂದರ್ಭದಲ್ಲಿ ಹೆಚ್ಚುಕಡಿಮೆಯಾದರೆ ದಸರಾ ಉತ್ಸವದಲ್ಲಿ ಜನರ ಪಾಲ್ಗೊಳ್ಳುವಿಕೆಯ ಮೇಲೆ ನಿಯಂತ್ರಣ ಹೇರಬಹುದು. ಆದ್ದರಿಂದ ಸಾಮಾನ್ಯ ಜನ ಹೆಚ್ಚು ಜವಾಬ್ದಾರಿಯಿಂದ, ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.
ಹಾಗೆಯೇ ಹೆಚ್ಚು ಜನರು ಭಾಗವಹಿಸುವ ಎಲ್ಲಾ ಮೆರವಣಿಗೆ, ಕಾರ್ಯಕ್ರಮ, ಉತ್ಸವ, ಜಾತ್ರೆಗಳ ಸಂದರ್ಭದಲ್ಲಿ ವಹಿಸುವ ಎಚ್ಚರಿಕೆಯ ಕ್ರಮಗಳ ಬಗ್ಗೆ ಪುನರ್ ವಿಮರ್ಶೆ ಮಾಡಿ ಹೊಸ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸಬೇಕಾಗಿದೆ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…