ಕಾಕ್ರೋಚ್ ಜನತಾ ಪಾರ್ಟಿ……

ಕಾಕ್ರೋಚ್ ಜನತಾ ಪಾರ್ಟಿ……

ಸಾಮಾಜಿಕ ಜಾಲತಾಣದ ಹೊಸ ರಾಜಕೀಯ ಚಳುವಳಿ ಎಂದು ಕಳೆದ ಐದಾರು ವಾರಗಳಿಂದ ಇಡೀ ದೇಶದಾದ್ಯಂತ ಬಹುದೊಡ್ಡ ಸುದ್ದಿ ಮಾಡುತ್ತಿದೆ.

ಕಾಕ್ರೋಚ್ ಎಂಬ ಪದ ಕೇಳಲು ಸ್ವಲ್ಪ ವಿಚಿತ್ರವೆನಿಸುತ್ತದೆ, ಆದರೆ ಈಗಾಗಲೇ ಜನಪ್ರಿಯವಂತು ಆಗಿ ಹೋಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯಕಾಂತ್ ಅವರ ಒಂದು ಅರ್ಜಿಯ ವಿಚಾರಣೆಯ ವಾದ ವಿವಾದಗಳ ಸಂದರ್ಭದಲ್ಲಿ ಸಹಜವಾಗಿ ಆಡಿದ ಮಾತು ಇದಕ್ಕೆ ಮೂಲ ಪ್ರೇರಣೆಯಾಗಿದ್ದರೂ, ಯುವಕರ ಆಕ್ರೋಶ ಈ ಮಟ್ಟಿಗೆ ಭುಗಿಲೇಳಲು ಕಾರಣವೇನಿರಬಹುದು…

ಕೆಲವು ನಿರುದ್ಯೋಗಿ ಯುವಕರು, ಸೋಮಾರಿಗಳು, ಮಾಹಿತಿ ಹಕ್ಕು ಕಾರ್ಯಕರ್ತರು ಸಾಮಾಜಿಕ ಜಾಲ ತಾಣಗಳಲ್ಲಿ ಜಿರಲೆಗಳಂತೆ ಸೇರಿಕೊಂಡು ವ್ಯವಸ್ಥೆಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಮುಖ್ಯ ನ್ಯಾಯಮೂರ್ತಿಯವರು ಹೇಳಿದ ಮಾತುಗಳಿವು.

ಜಿರಲೆ ಎಂಬುದು ಜೀವ ರಾಶಿಗಳ ಒಂದು ವಿಶಿಷ್ಟ ಕೀಟ. ಇದು ಗಠಾರದಿಂದ ನವತಾರ ಹೋಟೆಲ್ ವರೆಗೆ, ಮದುವೆಯಿಂದ ಸ್ಮಶಾನದವರೆಗೆ, ಎತ್ತಿನ ಗಾಡಿಯಿಂದ ವಿಮಾನದವರೆಗೆ ಹೀಗೆ ಎಲ್ಲೆಂದರಲ್ಲಿ ತನ್ನ ಜೀವನಕ್ಕಾಗಿ ಸ್ಥಳಗಳನ್ನು ಹುಡುಕಿಕೊಳ್ಳುತ್ತದೆ. ಇಡೀ ಜಗತ್ತು ಅಣುಬಾಂಬಿನಿಂದಲೋ ಅಥವಾ ಬೇರೆ ಸಾಂಕ್ರಾಮಿಕ ರೋಗಗಳಿಂದಲೋ ಅಥವಾ ಇನ್ಯಾವುದೋ ಪ್ರಾಕೃತಿಕ ವಿಕೋಪದಿಂದಲೋ ಸರ್ವನಾಶವಾದರೂ ಜಿರಳೆಗಳು ಮಾತ್ರ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ ಎಂದು ಯಾವುದೋ ವೈಜ್ಞಾನಿಕ ಪತ್ರಿಕೆಯಲ್ಲಿ ಓದಿದ ನೆನಪು.

ಇರಲಿ ಇಲ್ಲಿ ಜಿರಳೆ ಎಂಬ ಕೀಟ ಮುಖ್ಯವಲ್ಲ, ಯುವಕರು ಈ ಪಕ್ಷದ ವಿಚಾರಕ್ಕೆ ಆಕರ್ಷಿತವಾಗಿರುವ ಕಾರಣ ಮುಖ್ಯವಾಗುತ್ತದೆ.

ಸ್ವಾತಂತ್ರ್ಯ ನಂತರ ಸಂಪತ್ತಿನ ಕ್ರೂಡೀಕರಣ, ಸಮಾನ ಹಂಚಿಕೆ ಮಾಡದಿರುವುದು, ಖಾಸಗಿಕರಣ, ಜಾಗತೀಕರಣ, ಮುಕ್ತ ಮಾರುಕಟ್ಟೆ ಇವುಗಳು ಒಂದು ರೀತಿ ವರ್ಗ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಜಾತಿಯ ಅಸಮಾನತೆ ಅಮಾನವೀಯತೆಗಳ ನಡುವೆ ವರ್ಗ ಸಂಘರ್ಷ ಯುವ ಪೀಳಿಗೆಯ ಗಮನ ಸೆಳೆಯುತ್ತಿದೆ. ಒಂದು ಕಡೆ ಅತ್ಯಂತ ಶ್ರೀಮಂತ ವ್ಯಕ್ತಿಗಳ ವೈಭವೋಪೇತ ಜೀವನ, ಇನ್ನೊಂದು ಕಡೆ ಮಧ್ಯಮ ವರ್ಗದ ನಿರಂತರ ಸಂಘರ್ಷಮಯ ಬದುಕು ಮತ್ತು ಕನಸುಗಳು ಮತ್ತೊಂದು ಕಡೆ ಕಡುಬಡವರ ದೈನಸಿ ಜೀವನ ಇವುಗಳ ನಡುವೆ ನಮ್ಮ ದೇಶದಲ್ಲಿ ಸಮನ್ವಯ ಇನ್ನೂ ಸಾಧ್ಯವಾಗಿಲ್ಲ…..

ಮನುಷ್ಯನ ಬೇಡಿಕೆಗಳು ಅನಂತ, ನಿರಂತರ ಮತ್ತು ಚಲನಶೀಲವಾದದ್ದು. ಇನ್ನೂ ಬೇಕು ಇನ್ನೂ ಬೇಕು ಎಂದು ಸದಾ ತಹತಹಿಸುತ್ತಿರುತ್ತದೆ. ಅದರಲ್ಲೂ ಈ ಆಧುನಿಕ ಜಗತ್ತಿನಲ್ಲಿ ತೃಪ್ತಿ ಎಂಬುದೇ ಇಲ್ಲ. ಸಮೂಹ ಸಂಪರ್ಕ ಕ್ರಾಂತಿಯ ಈ ಸಂದರ್ಭದಲ್ಲಿ ಎಲ್ಲ ರೀತಿಯ ಮಾಹಿತಿಗಳು ಎಲ್ಲರಿಗೂ ಸಿಗುತ್ತವೆ. ಇದು ಒಬ್ಬರನ್ನೊಬ್ಬರು ನೋಡಿ ಆತೃಪ್ತಿಯನ್ನು ಸೃಷ್ಟಿ ಮಾಡುತ್ತದೆ. ಇದಕ್ಕೆ ತುಪ್ಪ ಸುರಿಯುವಂತೆ ರಾಜಕೀಯ ಭ್ರಷ್ಟಾಚಾರ, ಕಾರ್ಪೊರೇಟ್ ಸಂಸ್ಕೃತಿಯ ದಬ್ಬಾಳಿಕೆ, ಕೊಳ್ಳುಬಾಕ ಸಂಸ್ಕೃತಿಯ ವಿಜೃಂಭಣೆ, ಯುವಕರಲ್ಲಿ ನಿರಂತರ ಅತೃಪ್ತಿಯನ್ನು ಉಂಟು ಮಾಡುತ್ತಿರುತ್ತದೆ. ಅದರ ಪರಿಣಾಮವೇ ಈ ರೀತಿಯ ಹೊಸ ಅಶೋತ್ತರಗಳಿಗೆ ಸಿಗುವ ಸ್ಪಂದನೆ.

ಇತ್ತೀಚೆಗಷ್ಟೇ ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ಎಂಬ ಸಿನಿಮಾ ನಟ ಮುನ್ನಡೆಗೆ ಬರಲು ಈ ಮನೋಭಾವವೇ ಕಾರಣ….

ಸಮೂಹ ಪ್ರತಿಕ್ರಿಯೆ ಎಂಬುದು ವಿವಿಧ ರೀತಿಯಲ್ಲಿ ಪ್ರಕಟವಾಗುತ್ತವೆ. ಮುಖ್ಯವಾಗಿ ಕ್ರಮಬದ್ಧವಾದ, ಸಂಘಟನಾತ್ಮಕವಾದ, ಸೈದ್ಧಾಂತಿಕ ಬದ್ಧತೆಯ, ಕಾನೂನಾತ್ಮಕ ಮತ್ತು ಮೌಲ್ಯಯುತ ಪ್ರತಿಕ್ರಿಯೆ. ಇನ್ನೊಂದು ತತ್ತಕ್ಷಣದ ಘಟನೆಯ ಆಧಾರಿತ ಅಥವಾ ದೀರ್ಘಕಾಲದ ತೃಪ್ತಿ
ಅತೃಪ್ತಿಗಳ, ಆಂತರಿಕ ತುಮಲಗಳ ಪ್ರಕಟ. ಸಂಘಟನಾತ್ಮಕವಲ್ಲದ, ಸೈದ್ಧಾಂತಿಕ ಬದ್ಧತೆ ಇಲ್ಲದ ಆದರೆ ಒಂದು ನಿರ್ದಿಷ್ಟ ಉದ್ದೇಶದ ಕ್ರೇಜಿ ಪ್ರತಿಕ್ರಿಯೆ.

ಇವು ತಾತ್ಕಾಲಿಕ ಪರಿಣಾಮ ಬೀರಬಹುದು ಅಥವಾ ಧೀರ್ಘಕಾಲದ ಪರಿಣಾಮ ಬೀರಬಹುದು. ಯಶಸ್ವಿಯು ಆಗಬಹುದು ಅಥವಾ ವಿಫಲವೂ ಆಗಬಹುದು. ಹೊಸ ಇತಿಹಾಸ ಸೃಷ್ಟಿಸಬಹುದು, ಪ್ರಗತಿಪರ ಬದಲಾವಣೆಯನ್ನು ಮಾಡಬಹುದು. ಇದನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ. ಆದರೆ ಇಂತಹ ಪ್ರಯತ್ನಗಳಿಗೆ ಒಂದಷ್ಟು ಒಳ್ಳೆಯ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಬಹುದು.

ಈಗ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯವನ್ನು ಮುಖ್ಯ ಮಾಡಿಕೊಂಡು ಕೇಂದ್ರದ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಒಂದಷ್ಟು ಹೋರಾಟಗಳು ನಡೆಯುತ್ತಿವೆ. ರಾಜೀನಾಮೆಗಿಂತ ಮುಖ್ಯವಾಗಿ ಶೈಕ್ಷಣಿಕ ಸುಧಾರಣೆಗಳು, ಪರೀಕ್ಷೆ ಪದ್ಧತಿಯ ಹೊಸ ವಿಧಾನಗಳ ಆವಿಷ್ಕಾರ ಈ ಪ್ರತಿಭಟನೆಯ ಮುಖ್ಯ ವಿಷಯವಾಗಬೇಕು. ಇಡೀ ವ್ಯವಸ್ಥೆಯಲ್ಲಿ ಕೇವಲ ಸರ್ಕಾರದ ಪಾತ್ರ ಮಾತ್ರವಲ್ಲ ಪೋಷಕರ ಅತಿಯಾದ ದುರಾಸೆ ಅಥವಾ ಒತ್ತಡವು ಸಹ ಈ ಪರೀಕ್ಷಾ ಪದ್ಧತಿ ವಿಫಲವಾಗಲು ಕಾರಣವಾಗಿದೆ. ಅದನ್ನು ಸಮಾಜ ನಿರ್ವಹಿಸಬೇಕಿದೆ.

ಹಾಗೆಯೇ ಕೇಂದ್ರ ಸರ್ಕಾರ ಸಹ ಅತ್ಯಂತ ಬೇಜವಾಬ್ದಾರಿಯಿಂದ ಪರೀಕ್ಷಾ ಪದ್ಧತಿಯನ್ನು ನಿರ್ವಹಿಸುತ್ತಿದೆ. ಅದಕ್ಕೆ ಹೊಣೆಗಾರಿಕೆಯೂ ಹೆಚ್ಚಬೇಕಾಗಿದೆ. ಧರ್ಮದ ಹೆಸರಿನಲ್ಲಿ ಚುನಾವಣೆ ಗೆಲ್ಲುವುದೇ ಜನಪ್ರಿಯತೆಯ ಮಾನದಂಡ ಎಂದು ಇಂತಹ ಚಳುವಳಿಗಳನ್ನು ನಿರ್ಲಕ್ಷಿಸಿ, ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ. ಅದೂ ಸಹ ಅಪಾಯಕಾರಿ.

ಇಡೀ ದೇಶದ ಒಟ್ಟು ಶಿಕ್ಷಣ ಕ್ರಮದಲ್ಲೇ ಕೆಲವು ದೋಷಗಳನ್ನು ಸರಿಪಡಿಸುವ ಕೆಲಸವಾಗಬೇಕಿದೆ. ಉದ್ಯೋಗಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಸಂದರ್ಶನ ಕ್ರಮಗಳಲ್ಲೇ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಯೋಚಿಸಬೇಕಾಗಿದೆ. ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಜಾತಿಯ ನಿರ್ಮೂಲನೆಗೂ ಪ್ರಯತ್ನಿಸಬೇಕಿದೆ.

ಇದನ್ನು ಒಂದು ಸೈದ್ಧಾಂತಿಕ ಬದ್ಧತೆಯ ಸರ್ಕಾರದ ಯೋಜನೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸಿದರೆ ಮಾತ್ರ ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಅಪಾಯ ಇರುವುದಿಲ್ಲ. ಇಲ್ಲದಿದ್ದರೆ ಈ ರೀತಿಯ ಸಾಮಾಜಿಕ ಜಾಲತಾಣಗಳ ಚಳುವಳಿಗಳು ಸೆರಗಿನ ಕೆಂಡದಂತೆ ಸದಾ ಅತೃಪ್ತವಾಗಿ ಒಳಗೊಳಗೆ ಕುದಿಯುತ್ತಾ ಒಮ್ಮೆಲೆ ಜ್ವಾಲಾಮುಖಿಯಂತೆ ಸ್ಫೋಟವಾಗುತ್ತದೆ. ಭಾರತದಂತ ದೇಶಕ್ಕೆ ಇದು ಅತ್ಯಂತ ಅಪಾಯಕಾರಿ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಯೋಚಿಸುವಂತಾಗಲಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!