ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ(95) ನಿಧನ

ರಾಜ್ಯ ರಾಜಕಾರಣದ ಹಿರಿಯ ಧುರೀಣ, ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ(95) ಅವರು ಇಂದು (ಡಿ.14) ಸಂಜೆ ನಿಧನರಾಗಿದ್ದಾರೆ.

ಕಳೆದ ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕದ ರಾಜಕೀಯದಲ್ಲಿ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಅವರು ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧ ಸರ್ಕಾರಗಳಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿ ಕೂಡ ಅಪಾರ ಕೊಡುಗೆ ನೀಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರಾಗಿದ್ದು ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದರಾಗಿದ್ದಾರೆ.

ಗಣ್ಯರ ಸಂತಾಪ

ನಾಡಿನ ಹಿರಿಯ ರಾಜಕಾರಣಿಗಳು, ಮಾಜಿ ಮಂತ್ರಿಗಳು, ಉದ್ಯಮಿಗಳು ಆಗಿದ್ದ ಸರಳ ಸಜ್ಜನಿಕೆಯ ನಾಯಕರಾದ ಶ್ರೀ ಶ್ಯಾಮನೂರು ಶಿವಶಂಕರಪ್ಪನವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ವೈಯಕ್ತಿಕವಾಗಿ ನಾನು ಬಹಳ ಗೌರವಿಸುತ್ತಿದ್ದ ನಾಯಕರು ಅವರಾಗಿದ್ದರು. ರಾಜಕಾರಣ ಮಾತ್ರವಲ್ಲದೆ ಶಿಕ್ಷಣ, ಉದ್ಯಮ, ಸಮಾಜಸೇವೆ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸಿ ಮಾದರಿ ವ್ಯಕ್ತಿತ್ವದ ಸಾಧಕರಾಗಿದ್ದರು. ನೇರ ನಡೆನುಡಿಯ ಅವರು ಸಚಿವರಾಗಿಯೂ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕೆ ಮೀಸಲಿಟ್ಟು ದುಡಿದರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವಾಗಿದೆ.

ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮ ಶಿವನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏 ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ….

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು, ಹಿರಿಯ ನಾಯಕರು ಹಾಗೂ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನವು ನನಗೆ ಹಾಗೂ ವೀರಶೈವ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ವೀರಶೈವ ಲಿಂಗಾಯತ ಸಮಾಜದ ಗಣ್ಯ ನಾಯಕರೆಂದೇ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರು ತಮ್ಮ ನೇರ ನುಡಿ, ದೃಢ ನಿರ್ಧಾರ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ನಮಗೆಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರು ವಸತಿ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಹಾಗೂ ಕೊಡುಗೈ ದಾನಿಯಾಗಿ ಸಮಾಜಕ್ಕೆ ನೀಡಿದ ಸೇವೆ ಅಪಾರ.

‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಖ್ಯಾತಿಯಾದ ದಾವಣಗೆರೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯನ್ನು ಬಲಪಡಿಸಲು ಅವರು ಸಲ್ಲಿಸಿದ ಸೇವೆ ಸ್ಮರಣೀಯ.

ಶಾಮನೂರು ಶಿವಶಂಕರಪ್ಪ ಅವರು ನನ್ನ ತಂದೆ ಪೂಜ್ಯ ಶ್ರೀ ಭೀಮಣ್ಣ ಖಂಡ್ರೆ ಅವರಿಗೆ ಹಾಗೂ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಅವರ ನಿಧನವು ನನಗೆ ವೈಯಕ್ತಿಕವಾಗಿ ತುಂಬಾ ಆಘಾತವನ್ನುಂಟು ಮಾಡಿದೆ.

ಪರಮಾತ್ಮರು ಶಾಮನೂರು ಶಿವಶಂಕರಪ್ಪ ಅವರ ಆತ್ಮಕ್ಕೆ ಶಾಂತಿ ನೀಡಲಿ. ಈ ದುಃಖದ ಸಮಯದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹಾಗೂ ಶಾಮನೂರು ಕುಟುಂಬದ ಎಲ್ಲ ಸದಸ್ಯರಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. 🙏 ಭಾವಪೂರ್ಣ ಶ್ರದ್ಧಾಂಜಲಿ💐 🙏 ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ…

ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಬೆಂಬಲಿಗರಿಗೆ ಈ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಡಿಸಿಎಂ ಡಿಕೆಶಿ ಸಂತಾಪ ಸೂಚಿಸಿದ್ದಾರೆ…

ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನವಾರ್ತೆ ನೋವುಂಟುಮಾಡಿದೆ.
ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು, ಸಿಕ್ಕ ಅಧಿಕಾರವನ್ನು ಜನಕಲ್ಯಾಣಕ್ಕಾಗಿಯೇ ಮುಡುಪಿಟ್ಟಿದ್ದ ಮುತ್ಸದ್ದಿ ನಾಯಕನ ಅಗಲಿಕೆಯಿಂದ ಸಮಾಜ ಬಡವಾಗಿದೆ.
ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಿದ ಶಿವಶಂಕರಪ್ಪನವರ ಕಾರ್ಯಗಳು ಅವರನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿಸಲಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಮತ್ತವರ ಕುಟುಂಬಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

Ramesh Babu

Journalist

Recent Posts

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

2 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

14 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

14 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

15 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

15 hours ago

ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ: ಜಿಲ್ಲೆಯ 99,828 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ- ಸಚಿವ ಕೆ.ಎಚ್ ಮುನಿಯಪ್ಪ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…

22 hours ago