‘ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಐಟಿ ದಾಳಿಗಳಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ- ಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯದಿಂದ‌ ಕೇಂದ್ರ ಬಿಜೆಪಿ‌ ಸರ್ಕಾರ ಐಟಿ- ಇಡಿ ದಾಳಿ ನಡೆಸುತ್ತಿದೆ’- ಸಿಎಂ ಸಿದ್ದರಾಮಯ್ಯ

ಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿಗಳು ಹಾಗೂ ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಐಟಿ- ಇಡಿ ದಾಳಿಗಳನ್ನು ನಡೆಸುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತನ್ನ ದುರುದ್ದೇಶ ಮತ್ತು ಭ್ರಷ್ಟತೆಯನ್ನು ಮುಚ್ಚಿಕೊಳ್ಳುವುದಕ್ಕಾಗಿಯೇ ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ನಡೆಸಲಾಗುತ್ತಿರುವ ಐಟಿ ದಾಳಿಗಳು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ, ಈ ಬಗ್ಗೆ ಯಾವುದಾದರೂ ಪುರಾವೆಗಳಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲು ಅವರು ಸ್ವತಂತ್ರರಿದ್ದಾರೆ. ತೆರಿಗೆ ವಂಚಕರ ವಿರುದ್ಧದ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

ಗುತ್ತಿಗೆದಾರರು ಖೊಟ್ಟಿ ಖರೀದಿ ರಸೀದಿಗಳು ಮತ್ತು ಉಪಗುತ್ತಿಗೆದಾರರಿಂದ ಅಪ್ರಾಮಾಣಿಕವಾದ ಖರ್ಚುವೆಚ್ಚದ ದಾಖಲೆಗಳ ಮೂಲಕ ಅದಾಯವನ್ನು ಕಡಿಮೆಗೊಳಿಸಿ ತೆರಿಗೆ ವಂಚನೆ ಮಾಡಿರುವುದು ದಾಳಿಯಲ್ಲಿ ಪತ್ತೆಯಾಗಿದೆ ಎಂದು ಐಟಿ ಇಲಾಖೆಯೇ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಯಾವುದೇ ರಾಜಕೀಯ ಪಕ್ಷದ ಜೊತೆಗಿನ ವ್ಯವಹಾರದ ಬಗ್ಗೆ ಉಲ್ಲೇಖವನ್ನು ಇಲಾಖೆಯೇ ಮಾಡದೆ ಇರುವಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎದೆ ಬಡಿದುಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವುದು ಯಾಕೆ? ಇವರದ್ದೇ ಸರ್ಕಾರದ ವರಮಾನ ತೆರಿಗೆ ಇಲಾಖೆಯ ಮೇಲೆಯೂ ಇವರಿಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪಂಚರಾಜ್ಯಗಳಲ್ಲಿ ಮಾತ್ರವಲ್ಲ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯ ಸೋಲು ಬಹುತೇಕ ಖಾತರಿಯಾಗಿರುವ ಕಾರಣ ಬಿಜೆಪಿಗೆ ಹಿಂದಿನಂತೆ ಹಣ ಸಂಗ್ರಹವಾಗುತ್ತಿಲ್ಲ, ಕರ್ನಾಟಕದಲ್ಲಿ 40% ಕಮಿಷನ್ ನ ಬಹುದೊಡ್ಡ ಮೂಲ ಕೂಡಾ ನಿಂತುಹೋಗಿದೆ. ಇದಕ್ಕಾಗಿ ಶ್ರೀಮಂತ ಉದ್ಯಮಿಗಳು ಮತ್ತು ಗುತ್ತಿಗದಾರರನ್ನು ಬ್ಲಾಕ್ ಮೇಲ್ ಮಾಡಿ ಬೆದರಿಸಿ ಹಣ ವಸೂಲಿ ಮಾಡಲು ಐಟಿ-ಇಡಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಶತಸಿದ್ದ. ತನ್ನ ಸೋಲಿಗೆ ಕಾರಣ ಹೇಳಲು ಬಿಜೆಪಿ ಈಗಲೇ ಕುಂಟುನೆಪಗಳನ್ನು ಹುಡುಕುತ್ತಿದೆ. ಕಾಂಗ್ರೆಸ್ ಪಕ್ಷದ ದುಡ್ಡಿನಬಲದಿಂದಾಗಿ ನಾವು ಸೋತುಹೋದೆವು ಎಂದು ಚುನಾವಣೆಯ ಮರುದಿನ ಬಿಜೆಪಿಯಿಂದ ಹೇಳಿಕೆ ಬಂದರೆ ಯಾರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.

ತಮ್ಮ ಚುನಾವಣಾ ರಾಜಕೀಯಕ್ಕಾಗಿ ಯಾವ ಪಕ್ಷ ಹಣ ದೋಚುವುದರಲ್ಲಿ ತೊಡಗಿದೆ ಎನ್ನುವುದು ಚುನಾವಣಾ ಬಾಂಡ್ ಗಳ ಮೂಲಕ ಬಿಜೆಪಿ ಸಂಗ್ರಹಿಸಿದ ಹಣದ ವಿವರವೇ ಸಾಕ್ಷಿಯಾಗಿದೆ. ಮಾರ್ಚ್‌ 2018ರಿಂದ ಜನವರಿ 2023ರ ವರೆಗಿನ ಅವಧಿಯಲ್ಲಿ 12,008 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮಾರಾಟವಾಗಿದ್ದು ಅದರಲ್ಲಿ ಬಿಜೆಪಿಗೆ ಸೇರಿರುವ ಬಾಂಡ್ ಗಳ ಒಟ್ಟು ಮೌಲ್ಯ 5,272 ಕೋಟಿ ರೂಪಾಯಿ. ಈ ಹಣವನ್ನು ಉದ್ಯಮಿಗಳು ಸ್ವಯಿಚ್ಚೆಯಿಂದ ನೀಡಿದರೇ? ಇಲ್ಲವೇ ಬ್ಲಾಕ್ ಮೇಲ್ ನಡೆಸಲಾಗಿತ್ತೇ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೋಟ್ಯಂತರ ರೂಪಾಯಿ ಲಂಚ ಹೊಡೆಯುತ್ತಿದ್ದಾಗಲೆ ಸಿಕ್ಕಿಬಿದ್ದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾದಾಗ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದ ಬಿಜೆಪಿ ನಾಯಕರು ಈಗ ಯಾವುದೋ ಖಾಸಗಿ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ. ಈ ನೈತಿಕತೆ ಬಿಜೆಪಿಗೆ ಇದೆಯೇ?‌ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿನ ಭ್ರಷ್ಟಾಚಾರದ ಇತಿಹಾಸವನ್ನು ತಿರುವಿಹಾಕಿದರೆ ಪುಟಪುಟಗಳಲ್ಲಿಯೂ ಬಿಜೆಪಿ ನಾಯಕರ ಮುಖಾರವಿಂದಗಳನ್ನು ಕಾಣಬಹುದಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಸಂಪಂಗಿಯಿಂದ ಹಿಡಿದು ಇತ್ತೀಚಿನ ಮಾಡಾಳು ವಿರೂಪಾಕ್ಷಪ್ಪನವರ ವರೆಗೆ ಬಿಜೆಪಿ ನಾಯಕರೆಲ್ಲರೂ ಭ‍್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದವರಾಗಿದ್ದಾರೆ. ಇವರು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ, ನಗೆಪಾಟಲಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮುನಿರತ್ನ, ಡಾ.ಸುಧಾಕರ್ ಮತ್ತು ಬಿ.ಸಿ.ಪಾಟೀಲ್ ಮೇಲೆ 40% ಕಮಿಷನ್ ಆರೋಪ ಇದೆ. ಬಿಟ್ ಕಾಯಿನ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿಬಂದಿದೆ. ಪಿಎಸ್ ಐ ನೇಮಕಾತಿ ಹಗರಣದಲ್ಲಿ ಡಾ.ಅಶ್ವತನಾರಾಯಣ, ಬಿ.ವೈ.ವಿಜಯೇಂದ್ರ ಮತ್ತು ಅರಗ ಜ್ಞಾನೇಂದ್ರ ಷಾಮೀಲಾಗಿರುವ ಆರೋಪ ಎದುರಿಸುತ್ತಿದ್ದಾರೆ. ಚುನಾವಣಾ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಿ.ಎಲ್.ಸಂತೋಷ್, ಸುನೀಲ್ ಕುಮಾರ್ ಮತ್ತು ಸಿ,ಟಿ.ರವಿ ಅವರ ಹೆಸರುಗಳನ್ನು ಆರೋಪಿಗಳೇ ಉಲ್ಲೇಖಿಸಿದ್ದಾರೆ. ಇವರೆಲ್ಲರೂ ಸೇರಿ ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಗುತ್ತಿಗೆದಾರರೊಬ್ಬರನ್ನು ಹಣಕ್ಕಾಗಿ ಪೀಡಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆಯೇ ಜೈಲಿಗೆ ಹೋಗಿ ಬಂದಿರುವ ಬಿ.ಎಸ್.ಯಡಿಯೂರಪ್ಪನವರು ಮತ್ತು ಅವರ ಮಗ ಕೂಡಾ ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾರ್ಪೊರೆಟ್‌ ಭ್ರಷ್ಟಾಚಾರದ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಹೊಡೆದು ದೇಶವನ್ನೇ ಅದಾನಿ ಕೈಗೆ ಒತ್ತೆಯಿಟ್ಟಿರುವ ಈ ಬಿಜೆಪಿಗರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದೊಡ್ಡ ಕುಚೋದ್ಯ! ಅದಾನಿ ಎನ್ನುವ ಉದ್ಯಮಿಯ ಒಂದೊಂದು ಹಗರಣಗಳು ಲಕ್ಷ ಕೋಟಿಗಳನ್ನು ದಾಟುತ್ತಿವೆ! ಸಾವಿರ ಕೋಟಿಗಳ ಅವ್ಯವಹಾರಕ್ಕೆ ಲೆಕ್ಕವೇ ಇಲ್ಲವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ಕೇಳಿರುವ ನೂರು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಹೇಳಲು ಬಿಜೆಪಿಯ ನಾಯಕರಿಗೆ, ವಿಶೇಷವಾಗಿ ಮೋದಿಯವರಿಗೆ ಈವರೆಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

Ramesh Babu

Journalist

Recent Posts

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

2 hours ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

13 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

13 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

17 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

19 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

22 hours ago