Categories: ಲೇಖನ

ಕಂಗನಾ ರಣಾವತ್ ಮೇಲಿನ ಕಪಾಳಮೋಕ್ಷ…..ಪರ-ವಿರೋಧ ಚರ್ಚೆ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯೆಯಾದ ಖ್ಯಾತ ಸಿನಿಮಾ ನಟಿ ಕಂಗನಾ ರಣಾವತ್ ಅವರ ಮೇಲೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ……..

ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ. ಅನೇಕ ರೈತ ಸಂಘಟನೆಗಳು ಆಕೆಯ ಪರವಾಗಿ ನಿಂತಿದ್ದರೆ ಇನ್ನೊಂದಷ್ಟು ಜನ ಕಂಗನಾ ರಣಾವತ್ ಪರವಾಗಿಯೂ ಸಹ ವಾದ ಮಾಡುತ್ತಿದ್ದಾರೆ…..

ಒಂದು ವಿಷಯವನ್ನು ಸಮಗ್ರವಾಗಿ ನೋಡಿ ನಿರ್ದಿಷ್ಟ ಅಭಿಪ್ರಾಯಕ್ಕೆ ಬರಲು ಈ ವಿಷಯ ಹೆಚ್ಚು ಸೂಕ್ತವಾಗಿದೆ. ಸಹಜ ನ್ಯಾಯ, ಕಾನೂನಿನ ನ್ಯಾಯ, ನಾಗರಿಕತೆಯ ನ್ಯಾಯ, ಮಾನವೀಯತೆ ನ್ಯಾಯ ಯಾರ ಪರ ಮತ್ತು ಹೇಗೆ ಇದಕ್ಕೆ ಅನ್ವಯವಾಗುತ್ತದೆ ಎಂಬುದು ಬಹಳ ಮುಖ್ಯ. ಇವೆಲ್ಲದರ ನಡುವೆ ವಾಸ್ತವ ನ್ಯಾಯ ಹೇಗಿರಬೇಕು ಎಂಬುದು ಸಹ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ…..

ನಮ್ಮೆಲ್ಲರ ಆತ್ಮಾವಲೋಕನಕ್ಕೆ ಈ ವಿಷಯ ತುಂಬಾ ಸೂಕ್ತವಾದದ್ದು. ಇದರ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ಗಮನಿಸೋಣ…..

ಭಾರತ ಹಳ್ಳಿಗಳ ದೇಶ.
ಕೃಷಿ ಇಲ್ಲಿನ ಪ್ರಧಾನ ವೃತ್ತಿ. ರೈತರನ್ನು ಅನ್ನದಾತರು ಎಂದೇ ಕರೆಯಲಾಗುತ್ತದೆ. ಅಂತಹ ರೈತರು ಕೆಲವು ತಿಂಗಳುಗಳ ಹಿಂದೆ ದೆಹಲಿಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಬೃಹತ್ ಚಳವಳಿ ಮಾಡುತ್ತಾರೆ. ಅನೇಕ ರೈತರು ಹುತಾತ್ಮರಾಗುತ್ತಾರೆ. ಈಗಲೂ ಒಂದಷ್ಟು ಚಳವಳಿ ನಡೆಯುತ್ತಲೇ ಇದೆ……

ಆದರೆ ಕೃತಕ ಬಣ್ಣದೊಂದಿಗೆ, ಕೃತಕ ಬೆಳಕಿನೊಂದಿಗೆ, ಮತ್ಯಾರೋ ಬರೆದುಕೊಟ್ಟ ಸಂಭಾಷಣೆಯೊಂದಿಗೆ, ಸಂಕಲನ, ಸಂಗೀತದ ಸಂಯೋಜನೆಯೊಂದಿಗೆ ಅಭಿನಯಿಸುವ ಸಿನಿಮಾ ನಟಿ ಕಂಗನಾ ರಣಾವತ್ ಆ ರೈತ ಹೋರಾಟದ ಮಹಿಳೆಯರ ಬಗ್ಗೆ ಒಂದು ಹೇಳಿಕೆಯನ್ನು ನೀಡುತ್ತಾರೆ. ಆ ಚಳವಳಿಯಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳು ನೂರು ರೂಪಾಯಿಯ ಬಾಡಿಗೆ ಹೋರಾಟಗಾರರು ಎಂಬರ್ಥದಲ್ಲಿ ಅತ್ಯಂತ ತುಚ್ಛವಾಗಿ ಮಾತನಾಡುತ್ತಾರೆ. ಖಂಡಿತವಾಗಲೂ ಇದೊಂದು ಅಯೋಗ್ಯ, ಅಸೂಕ್ಷ್ಮ, ವಿವೇಚನೆ ಇಲ್ಲದ, ದುರಹಂಕಾರಿ ಹೇಳಿಕೆ. ನೂರು ರೂಪಾಯಿಗೆ ಪ್ರತಿಭಟನೆಗೆ ಇಳಿದು ದೀರ್ಘಕಾಲ ಪ್ರತಿಭಟನೆ ಮಾಡುವುದು ಕೋಟ್ಯಂತರ ಹಣ ಪಡೆದು ಸಿನಿಮಾದಲ್ಲಿ ಅಭಿನಯಿಸಿದಂತಲ್ಲ. ಅದೊಂದು ಬದುಕಿನ ಹೋರಾಟ. ಸ್ವಾಭಿಮಾನದ ಸಂಕೇತ. ಹಕ್ಕುಗಳಿಗಾಗಿ ಬಡಿದಾಟ…..

ಜೊತೆಗೆ ಆ ಬೇಡಿಕೆಗಳ ಮಹತ್ವ ಕಂಗನಾ ಅವರಿಗೆ ಅರ್ಥವಾದಂತಿಲ್ಲ. ರೈತರ ಸಂಕಷ್ಟಗಳು ಅವರಿಗೆ ತಿಳಿದಿಲ್ಲ. ಅವರಿಗೆ ವಿರೋಧವಿದ್ದರೆ ಆ ರೈತ ಹೋರಾಟವನ್ನು ಸೈದ್ಧಾಂತಿಕವಾಗಿ ವಿರೋಧಿಸಬಹುದಿತ್ತೇ ಹೊರತು ಆ ರೀತಿಯ ಪದಗಳಿಂದ ನಿಂದಿಸಲು ಅವರಲ್ಲಿರುವ ಕಠಿಣ, ಕಠೋರ, ವಿಷಯುಕ್ತ ಮನಸ್ಥಿತಿಯೇ ಕಾರಣ…..

ಆದ್ದರಿಂದ ಆಕೆಯ ಆ ಹೇಳಿಕೆ ನಿಜಕ್ಕೂ ಅನೇಕರಿಗೆ ಬೇಸರ ಮೂಡಿಸಿದೆ ಮತ್ತು ಕೆಲವರಿಗೆ ಆಕ್ರೋಶವನ್ನು ಉಂಟು ಮಾಡಿದೆ. ಆ ಹೇಳಿಕೆ ಖಂಡನಾರ್ಹ……

ಹಾಗೆಯೇ ಇದಕ್ಕೆ ಇನ್ನೊಂದು ಮುಖವೂ ಇದೆ. ದೇಶದ ಅನೇಕ ಮುಖ್ಯ ಸ್ಥಳಗಳ ರಕ್ಷಣೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ್ನು ರಚಿಸಲಾಗಿದೆ. ಅದೊಂದು ಸರ್ಕಾರಿ ಉದ್ಯೋಗ. ರಕ್ಷಣೆಯೇ ಬಹಳ ಮುಖ್ಯ. ಹಾಗಿದ್ದ ಸಂದರ್ಭದಲ್ಲಿ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ರಕ್ಷಣಾ ಪಡೆಯ ಯೋಧೆಯ ತಾಯಿಯು ಆ ಚಳವಳಿಯಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ಕಂಗನ ರಣಾವತ್ ಅವರ ಹೇಳಿಕೆ ಬಹಳ ನೋವನ್ನುಂಟು ಮಾಡಿರುತ್ತದೆ. ಅದು ಸಹಜ…..

ಆದರೆ ಆ ಅಕ್ರೋಶವನ್ನು ಆಕೆ ಕಂಗನಾ ರಣಾವತ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗಾಗಿ ನಿಂತಿರುವಾಗ ಕಪಾಳಕ್ಕೆ ಹೊಡೆದು ವ್ಯಕ್ತಪಡಿಸುವುದು ಅತ್ಯಂತ ಖಂಡನೀಯ ಮತ್ತು ಅಮಾನವೀಯ. ಇಲ್ಲಿ ಕಾನೂನು ಮತ್ತು ಮಾನವೀಯತೆ ಎರಡಕ್ಕೂ ಈ ಘಟನೆ ವಿರೋಧವಾಗಿದೆ. ಆಕೆಗೆ ಆಕ್ರೋಶವಿದ್ದಲ್ಲಿ ಅದನ್ನು ವ್ಯಕ್ತಪಡಿಸಲು ಅನೇಕ ಮಾರ್ಗಗಳಿವೆ……

ಪ್ರತಿಭಟಿಸಬಹುದು, ಧಿಕ್ಕಾರ ಕೂಗಬಹುದು, ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು ಅಥವಾ ಆಕೆ ನಿಂತಿದ್ದ ಚುನಾವಣಾ ಸಂದರ್ಭದಲ್ಲಿ ಆಕೆಯ ವಿರುದ್ಧ ಸ್ಪರ್ಧಿಸಿ ಸೋಲಿಸಬಹುದು ಹೀಗೆ ನಾನಾ ಸಾಧ್ಯತೆಗಳಿವೆ. ಆದರೆ ಅದನ್ನು ಮಾಡಲು ಮೊದಲಿಗೆ ಆಕೆ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕು. ರಕ್ಷಕರೇ ಈ ರೀತಿಯ ಹಿಂಸಾಕೃತ್ಯದಲ್ಲಿ ತೊಡಗುವುದು ಖಂಡಿತ ವಿಷಯ ಯಾವುದಾದರು ಒಪ್ಪತಕ್ಕದ್ದಲ್ಲ. ಆದ್ದರಿಂದ ರೈತ ಸಂಘಟನೆಗಳು ಪ್ರತಿಭಟನೆ ಮಾಡುವುದು ಸಹ ಸರಿಯಲ್ಲ….

ಹೀಗೆ ಇನ್ನೂ ಒಂದು ವಾದವಿದೆ. ಹಾಗಾದರೆ ಈ ಸಮಾಜದ ತಿಂದು ಕೊಬ್ಬಿದ, ಶ್ರಮವಹಿಸದ, ರಾಜಕಾರಣಿಗಳು, ಅಧಿಕಾರಿಗಳು, ಸ್ವಾಮೀಜಿಗಳು, ಸಿನಿಮಾನಟರು, ಹೋರಾಟಗಾರರು ಹೇಗೆಂದರೆ ಹಾಗೆ ಬಾಯಿಗೆ ಬಂದಂತೆ ಮಾತನಾಡಬಹುದೇ ಎನ್ನುವ ಪ್ರಶ್ನೆಯು ಹಲವರಲ್ಲಿ ಉದ್ಭವವಾಗುತ್ತದೆ. ಪ್ರಜಾಪ್ರಭುತ್ವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಪ್ಪಿಕೊಂಡ ಮೇಲೆ ಅದರ ಈ ರೀತಿಯ ಸ್ವೇಚ್ಛಾಚಾರವನ್ನು ಸಹ ಒಂದಷ್ಟು ಮಟ್ಟಿಗೆ ಸಹಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ನಾಳೆ ಕಾನೂನು ಮತ್ತು ಸಮಾಜ ಹಿಡಿತಕ್ಕೆ ಸಿಗುವುದಿಲ್ಲ. ನಮ್ಮ ಧ್ವನಿ ಮತ್ತು ಬೆಂಬಲ ಯೋಧೆಯ ಸಾತ್ವಿಕ ಆಕ್ರೋಶದ ಪರವಾಗಿ ಇದ್ದರೂ, ನಮ್ಮ ವಿರೋಧ ಕಂಗನಾ ರಣಾವತ್ ಅವರ ಹೇಳಿಕೆ ಬಗ್ಗೆ ಇದ್ದರೂ ಸಹ, ನ್ಯಾಯಾಂಗ ವ್ಯವಸ್ಥೆ, ಮಾನವೀಯತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ವಿಷಯವನ್ನು ಪರಾಮರ್ಶಿಸಿ ನೋಡಬೇಕಾಗುತ್ತದೆ……

ನಮಗೆ ಸರಿ ಎನಿಸಿದ ನ್ಯಾಯವು ಸರಿಯೇ ಆಗಿರಬೇಕೆಂದೇನೂ ಇಲ್ಲ. ಅಲ್ಲಿ ನಿಂತು, ಇಲ್ಲಿ ನಿಂತು, ಸುತ್ತಲೂ ನೋಡಿ, ದೂರಕ್ಕೆ ನೋಡಿ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಆಗ ಅನೇಕ ಸಮಸ್ಯೆಗಳು ಸಹಜವಾಗಿ, ಸರಳವಾಗಿ ಬಗೆಹರಿಯುತ್ತದೆ……

ಇದನ್ನೂ ಮೀರಿದ ಇನ್ನೂ ಕೆಲವು ಆಯಾಮಗಳು ಇರಬಹುದು. ಅದನ್ನೂ ಸ್ವಾಗತಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ ಎಚ್. ಕೆ

Ramesh Babu

Journalist

Recent Posts

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

3 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

4 hours ago

ಕೆ.ಸಿ.ವ್ಯಾಲಿಯಿಂದ ಜಿಲ್ಲೆಯ ರೈತರ ಬದುಕು ಹಸನು- ಕಾಂಗ್ರೆಸ್‌ ಮುಖಂಡ ಜನಪಹಳ್ಳಿ ನವೀನ್‌

ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್‌ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…

15 hours ago

ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು  ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…

15 hours ago

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

18 hours ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

1 day ago