Categories: ಲೇಖನ

ಎಲೆಕ್ಟ್ರಾನಿಕ್ ಮಾಧ್ಯಮಗಳ ಸುದ್ದಿಯ ದಿವಾಳಿತನ……

ಕನ್ನಡ ಚಲನಚಿತ್ರ ನಟರೊಬ್ಬರ ಸಾಂಪ್ರದಾಯಿಕ ಮದುವೆಯನ್ನು ಅತ್ಯಂತ ಮಹತ್ವದ ಘಟನೆ ಎಂಬಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ್ದು ಅತಿರೇಕವೇ ಅಥವಾ ತಮ್ಮ ವಿವೇಚನಾಶೀಲತೆಯ ಕೊರತೆಯೇ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವೇ ಅಥವಾ ಸ್ವಾಭಿಮಾನದ ಮತ್ತು ಸುದ್ದಿಯ ಪ್ರಾಮುಖ್ಯತೆ ಅರಿಯುವ ಮಾನಸಿಕ ದಿವಾಳಿತನವೇ…….

ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರವರ್ಧಮಾನಕ್ಕೆ ಬಂದಿದ್ದು ಸಾಕಷ್ಟು ಹಿಂದೆಯೇ ಆದರೂ ನಿಜಕ್ಕೂ ಜನಪ್ರಿಯವಾಗಿ, ಪ್ರಭಾವಶೀಲವಾಗಿ ಬೆಳೆದದ್ದು ಸುಮಾರು 15/20 ವರ್ಷಗಳಿಂದ. ಪ್ರಾರಂಭದ ಹಂತದಲ್ಲಿ ಈ ರೀತಿಯ ಸಿನಿಮಾ ನಟನಟಿಯರ, ರಾಜಕಾರಣಿಗಳ, ಉದ್ಯಮಿಗಳ, ಜನಪ್ರಿಯ ವ್ಯಕ್ತಿಗಳ ಮದುವೆಗಳನ್ನು ಬೆಳಗಿನಿಂದ ಸಂಜೆವರೆಗೂ, ಅರಿಶಿಣ ಶಾಸ್ತ್ರದಿಂದ ಹನಿಮೂನ್ ವರೆಗೂ ಸಾಕಷ್ಟು ಪ್ರಚಾರ ಮಾಡುತ್ತಿದ್ದುದು ನಿಜ. ಹಾಗೆಯೇ ಜನರೂ ಸಹ ಸಾಕಷ್ಟು ಕುತೂಹಲ ಭರಿತವಾಗಿ ಈ ದೃಶ್ಯಗಳನ್ನು, ಸುದ್ದಿಗಳನ್ನು ನೋಡುತ್ತಿದ್ದುದೂ ನಿಜ.

ಆದರೆ ಇದೀಗ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಾಮಾಜಿಕ ಜಾಲತಾಣಗಳು ಪ್ರತಿಸ್ಪರ್ಧಿಗಳಾಗಿ, ಪರ್ಯಾಯವಾಗಿ ಬೆಳವಣಿಗೆ ಹೊಂದುತ್ತಿರುವ ಹೊತ್ತಿನಲ್ಲಿ ಈಗಲೂ ಈ ರೀತಿಯ ಸುದ್ದಿಗಳಿಗೆ ಮಹತ್ವ ಕೊಡಬೇಕೇ ಎನ್ನುವ ಆತ್ಮವಿಮರ್ಶೆಯನ್ನು ಕನ್ನಡ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ಮಾಡಿಕೊಳ್ಳಬೇಕಿದೆ.

ಆ ನಟ ಮದುವೆಯಾಗುತ್ತಿರುವುದು ಸಹ ತಾನು ಇಲ್ಲಿಯವರೆಗೂ ಸಾರ್ವಜನಿಕವಾಗಿ ಹೇಳಿಕೊಂಡು ಬರುತ್ತಿದ್ದ ಬಸವ ತತ್ವ, ಕುವೆಂಪು ಆದರ್ಶ, ವೈಚಾರಿಕ ಪ್ರಜ್ಞೆ, ಸರಳತೆ ಮುಂತಾದ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ, ತೀರಾ ಅದ್ದೂರಿತನವನ್ನು ಪ್ರದರ್ಶಿಸುತ್ತಿದ್ದಾರೆ ಹಾಗೂ ಕೆಂಡ ಹಾಯುವ ಸಂಪ್ರದಾಯದ ಅಪಾಯಕಾರಿ ಮೌಢ್ಯವನ್ನು ಸಹ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬಳಸುತ್ತಿದ್ದಾರೆ. ಅಂತಹ ವ್ಯಕ್ತಿಯ ಮದುವೆಯನ್ನು ದೊಡ್ಡ ಪ್ರಚಾರದೊಂದಿಗೆ ಸಾರ್ವಜನಿಕರಿಗೆ ಉಣಪಡಿಸುವ ಅವಶ್ಯಕತೆಯೇನು ಮಾಧ್ಯಮಗಳಿಗೆ ಇರಲಿಲ್ಲ. ಅದೊಂದು ತೀರ ಖಾಸಗಿಯಾದದ್ದು.

ಹಾಗೆಯೇ ಆಶ್ಚರ್ಯವಾಗುವುದೆಂದರೆ ಬಡತನದಲ್ಲಿ ಬೆಳೆದು ಬಂದು, ಅವಕಾಶವಿಲ್ಲದೆ ಶ್ರಮಪಟ್ಟು, ತಮ್ಮ ಪ್ರತಿಭೆಯಿಂದಲೇ ಅವಕಾಶ ಪಡೆದು, ಒಂದಷ್ಟು ಹಣ ಮಾಡಿ, ಬೆಳೆದ ನಂತರ ಮೌಲ್ಯಗಳ ಬಗ್ಗೆ, ಸಮಾಜದ ನೈತಿಕ ಆದರ್ಶಗಳ ಬಗ್ಗೆ ಮಾತನಾಡಬೇಕಾದ ವ್ಯಕ್ತಿ ಅತ್ಯಂತ ಸಣ್ಣತನದಿಂದ ಮತ್ತದೇ ಹಣ ಪ್ರದರ್ಶನದ ಗುಲಾಮಿತನಕ್ಕೆ ಬಿದ್ದದ್ದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ.

ಈ ಸಿನಿಮಾ ನಟ ಆಡಂಬರದ ಮದುವೆಗಿಂತ ಹೆಚ್ಚಿನ ಪ್ರಚಾರವನ್ನು ಸಿನಿಮಾ ರಂಗದಲ್ಲಿ ಮತ್ತಷ್ಟು ಸಾಧಿಸುವ ಮುಖಾಂತರ ಪಡೆಯಬಹುದಿತ್ತು ಮತ್ತು ಈಗಲೂ ಆ ಅವಕಾಶಗಳಿದೆ. ಆ ರೀತಿ ತನ್ನ ವ್ಯಕ್ತಿತ್ವದಿಂದ ಪ್ರಚಾರ ಪಡೆದಾಗ ಅದರ ತೂಕವೇ ಬೇರೆ. ಆದರೆ ಹೀಗೆ ಹಣದ ಪ್ರದರ್ಶನಗಳಿಂದ ತನ್ನ ಸಂಪರ್ಕ ಜಾಲವನ್ನು ವಿಸ್ತಾರಗೊಳಿಸಬಹುದು ಎಂಬ ಭ್ರಮೆ ಅವರಿಗೆ ಇರುವಂತಿದೆ. ಈಗಿನ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಅದು ನಿಜವಿರಲೂಬಹುದು. ಆದರೆ ಅದು ಟೀಕೆಗಳಿಗೆ ಒಳಗಾಗುವ ವಿಷಯವೇ ಹೊರತು ಪ್ರಶಂಸಾರ್ಹವಲ್ಲ. ಈ ಸಂಪರ್ಕಗಳು ಅವರು ಮಾರುಕಟ್ಟೆಯಲ್ಲಿ ಓಡುವ ಕುದುರೆ ಆಗಿರುವವರಿಗೆ ಮಾತ್ರವಿರುತ್ತದೆ. ಆದರೆ ಸಾಧನೆ ಮಾತ್ರ ಅವರ ಕೊನೆಯ ಉಸಿರಿರುವವರೆಗೂ ಜನಮನದಲ್ಲಿ ಶಾಶ್ವತವಾಗಿ ನಿಲ್ಲುತ್ತದೆ.

ಹಾಗೆಯೇ ಪತ್ರಕರ್ತರ ಸುದ್ದಿಯ ದಿವಾಳಿತನವನ್ನೂ ಒಪ್ಪತಕ್ಕದ್ದಲ್ಲ. ಏಕೆಂದರೆ ಈ ಬೃಹತ್ ವೈವಿಧ್ಯಮಯ ದೇಶದಲ್ಲಿ, ಅನೇಕ ಸಂಘರ್ಷ, ಸಂಕೀರ್ಣಮಯ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ವ್ಯವಸ್ಥೆಯಲ್ಲಿ ನಿಜಕ್ಕೂ ಇದಕ್ಕಿಂತ ಮಹತ್ವದ ಸುದ್ದಿಗಳನ್ನು ಹೆಕ್ಕಿ ವರದಿ ಮಾಡಲು ಸಾಕಷ್ಟು ಅವಕಾಶಗಳಿವೆ.

ಸಾಮಾಜಿಕ ಜಾಲತಾಣಗಳು ಒಡ್ಡುತ್ತಿರುವ ಸ್ಪರ್ಧೆಗೆ ಹೆದರಿ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಈ ರೀತಿಯ ಜನಪ್ರಿಯ ಸುದ್ದಿಗಳ ಹಿಂದೆ ಬೀಳುತ್ತಿರುವ ಅನುಮಾನ ಕಾಡುತ್ತಿದೆ. ಯಾವ ಸುದ್ದಿಗೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಕೊಡಬೇಕು, ಯಾವುದು ಮುಖ್ಯ ಸುದ್ದಿ ಆಗಬೇಕು ಎಂಬುದು ಬಹುತೇಕ ಪತ್ರಿಕೋದ್ಯಮದ ಮೊದಲ ಪಾಠವಾಗಿರುತ್ತದೆ. ಅದರ ಜೊತೆ ವ್ಯಾವಹಾರಿಕ ಚತುರತೆಯೂ ಬೇಕಾಗುತ್ತದೆ. ಅದನ್ನು ಹೊರತುಪಡಿಸಿದರೂ ಈಗಿನ ಈ ಸಿನಿಮಾ ನಟನ ಮದುವೆಯ ಸುದ್ದಿ ಬಾಲಿಶ ಮತ್ತು ಸುದ್ದಿಯ ದಿವಾಳಿತನ ಎಂದು ಕರೆಯಲು ಅಡ್ಡಿಯೇನಿಲ್ಲ.

ಏಕೆಂದರೆ,

” ನಾವು ಮಾರಾಟಕ್ಕಿಲ್ಲ ”
ಒಂದು ಟಿವಿ ನ್ಯೂಸ್ ಚಾನಲ್ ನವರ ಟ್ಯಾಗ್ ಲೈನ್

” ಇದು ಯಾರ ಆಸ್ತಿಯೂ ಅಲ್ಲ ” ಇನ್ನೊಂದು ಚಾನಲ್ ಘೋಷವಾಕ್ಯ.

” ನಾವು ಸುಳ್ಳು ಹೇಳುವುದಿಲ್ಲ ”
ಮತ್ತೊಂದು ಚಾನಲ್ ಶೀರ್ಷಿಕೆ.

” ಇದು ಭರವಸೆಯ ಬೆಳಕು ”
ಮಗದೊಂದು ಚಾನಲ್ ಉದ್ಘೋಷ.

” ನೇರ ದಿಟ್ಟ ನಿರಂತರ ”
ಇದು ಮತ್ತೊಂದು ಚಾನಲ್ ಘೋಷಣೆ.

” ಇದು ನಿಮ್ಮ ಚಾನಲ್ ”
ಮಗದೊಂದು ಚಾನಲ್ ಹೇಳಿಕೊಳ್ಳುವುದು.

” ಗ್ಯಾರಂಟಿ ” ಸುದ್ದಿ ಖಚಿತ ಎಂಬುದು ಹೊಸ ಚಾನೆಲ್ ಹೆಸರೇ ಆಗಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಈ ಟ್ಯಾಗ್ ಲೈನ್ ಘೋಷಣೆಗಳೇ ಇಂದಿನ ಟಿವಿ ನ್ಯೂಸ್ ಮಾಧ್ಯಮಗಳು ತಲುಪಿರುವ ಅಧೋಗತಿಯನ್ನು – ಜನರಲ್ಲಿ ಉಂಟುಮಾಡಿರುವ ಅಪನಂಬಿಕೆಯನ್ನು ಸೂಚಿಸುತ್ತದೆ.

ನಿಮ್ಮನ್ನು ಯಾರು ಕೇಳಿದರು ಸ್ವಾಮಿ,
ಇದು ಯಾರ ಆಸ್ತಿ, ನೀವು ಮಾರಾಟಕ್ಕಿಲ್ಲ, ನೀವು ಸುಳ್ಳು ಹೇಳುತ್ತೀರಿ, ನಿಮ್ಮ ಬಗ್ಗೆ ಭರವಸೆ ಇಲ್ಲ, ನಿಮ್ಮದು ದಿಟ್ಟತನವಲ್ಲದ ಸುದ್ದಿ, ಗ್ಯಾರಂಟಿ ಸುದ್ದಿಯೇ ಎಂದು. ಏಕೆ ನಿಮಗೇ ಅನುಮಾನ ಶುರುವಾಗಿದೆಯೇ ?

ಪತ್ರಿಕಾ ಧರ್ಮ ಎಂಬುದೇ ಪ್ರಾಮಾಣಿಕತೆಗೆ ನಿಸ್ಪಕ್ಷಪಾತತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ನ್ಯಾಯಕ್ಕೆ, ಸತ್ಯಕ್ಕೆ, ವೈಚಾರಿಕತೆಗೆ ಮತ್ತೊಂದು ಹೆಸರಾಗಿರುವಾಗ ಅದನ್ನು ಈಗ ಮತ್ತೆ ಮತ್ತೆ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿ ಏಕೆ ಉಂಟಾಗಿದೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಎಂತಹ ಸುಳ್ಳು, ವಿವೇಚನೆ ಇಲ್ಲದ ಅತ್ಯಂತ ಬಾಲಿಶ ತಿಳಿವಳಿಕೆ ನಿಮ್ಮದು ಎಂದರೆ……

ದೇಶದ ಈ ವರ್ಷದ ಆರ್ಥಿಕ ಸ್ಥಿತಿಗತಿಗಳನ್ನು ಜ್ಯೋತಿಷಿಗಳ ಮುಖಾಂತರ ನಿರ್ಧರಿಸುವಿರಿ,
ರಾಜಕೀಯ ಆಗುಹೋಗುಗಳನ್ನು ಸಂಖ್ಯಾಶಾಸ್ತ್ರದವರಿಂದ ಹೇಳಿಸುವಿರಿ,
ನೈಸರ್ಗಿಕ ವಿಕೋಪಗಳನ್ನು ಕವಡೆ ಶಾಸ್ತ್ರದವರಿಗೆ ಕೇಳುವಿರಿ,
ಮತೀಯ ಗಲಭೆಗಳ ಕೊಲೆಗಳನ್ನು ಚರ್ಚಿಸಲು ರಕ್ತದ ಕಲೆಗಳನ್ನು ಕೈಗೆ ಅಂಟಿಸಿಕೊಂಡಿರುವ ಧರ್ಮಾಂಧ ಮತಾಂಧರನ್ನೇ ಕರೆಸಿ ತಮ್ಮ ಅಮಾನವೀಯ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವಂತೆ ವೇದಿಕೆ ಕೊಡುವಿರಿ……

ಒಂದೇ – ಎರಡೇ ನಿಮ್ಮ ಬ್ರೇಕಿಂಗ್ ನ್ಯೂಸ್ ಹುಚ್ಚಾಟಗಳು.
ಮುಗ್ಧ, ಮೂರ್ಖ ಜನರ ಶಾಂತ ಸ್ವಭಾವ ಅಸಹನೆಯಿಂದ ಕುದಿಯುವಂತೆ ರಾಜಕಾರಣಿಗಳು ಮಾಡಿದರೆ,
ಅದಕ್ಕೆ ತುಪ್ಪ ಸುರಿಯುವ ಕೆಲಸ ಮತಾಂಧರು ಮಾಡಿದರೆ, ಅದಕ್ಕೆ ಬೆಂಕಿ ಹಚ್ಚುವ ಕೆಲಸ ನೀವು ಮಾಡುತ್ತಿರುವಿರಿ.
ನರಳಿ ಸುಡುತ್ತಿರುವುದು ಮಾತ್ರ ಹೆತ್ತ ತಾಯಿ ಕರುಳು.

ಸೂಕ್ಷ್ಮ ಮನಸ್ಥಿತಿಯ ನಿಮಗೆ ಇದಕ್ಕಿಂತ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲವೆನಿಸುತ್ತದೆ.
ಮಾಧ್ಯಮಗಳ ಚರ್ಚೆಗೆ ಹೊಸ ದಿಕ್ಕನ್ನು ಸೂಚಿಸುವ ಸಮಷ್ಠಿ ಪ್ರಜ್ಞೆಯ ಮಾರ್ಗ ಶೀಘ್ರ ಗೋಚರಿಸಲಿ ಎಂಬ ಆಶಯದೊಂದಿಗೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…..,

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ....., ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ.... ಶಾಂತಿ ದೂತ,…

9 minutes ago

ಒಂದು ವರ್ಷದೊಳಗೆ ಎತ್ತಿನಹೊಳೆ ನೀರು- ಸಚಿವ ಕೆ.ಎಚ್ ಮುನಿಯಪ್ಪ

ಎತ್ತಿನಹೊಳೆ ಯೋಜನೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು ಒಂದು ವರ್ಷದಲ್ಲಿ ಜಿಲ್ಲೆಗೆ ನೀರು ಹರಿಯುವ ವಿಶ್ವಾಸವಿದೆ ಎಂದು ಆಹಾರ ನಾಗರಿಕ ಸರಬರಾಜು…

14 hours ago

ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆ

ಡಿ.15 ರಂದು ಕಾಣೆಯಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ…

19 hours ago

ಬಸ್ಸಿನಲ್ಲಿ 55 ಲಕ್ಷ ಹಣ ಮತ್ತು ಬಿಲ್ಡಿಂಗ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬಸ್ಸಿನಲ್ಲಿ ಸಾಗಿಸುತ್ತಿದ್ದ 55 ಲಕ್ಷ ರೂ. ನಗದು ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳರನ್ನ ಬಂಧಿಸುವಲ್ಲಿ…

20 hours ago

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

24 hours ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

1 day ago