ಎರಡು ಸಾವಿರ ನಿವೇಶನ ಸಿದ್ಧಪಡಿಸಲು ಗಡುವು-ಸಚಿವ ಕೆ.ಎಚ್ ಮುನಿಯಪ್ಪ

ದೆವನಹಳ್ಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವ ಸಂಬಂಧ ಮೇ 15 ರೊಳಗೆ ಎರಡು ಸಾವಿರ ನಿವೇಶನ ಸಿದ್ಧಪಡಿಸಲು ಅಧಿಕಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಗಡುವು ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಹಕ್ಕುಪತ್ರ ನೀಡುವ ಸಂಬಂಧ ಬುಧವಾರದಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಹೋಬಳಿ ಸೇರಿದಂತೆ ತಾಲ್ಲೂಕಿನಲ್ಲಿ ಬಡವರಿಗೆ, ನಿವೇಶನ ರಹಿತರಿಗೆ ಸೈಟ್ ಹಂಚಿಕೆ ಮಾಡಬೇಕು. ಸರ್ಕಾರ ಬಂದು ಮೂರು ವರ್ಷ ಪೂರೈಸಿದೆ. ಬಡವರಿಗೆ ನಿವೇಶನ, ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿ ಆಗಿದೆ. ನಿವೇಶನ ಹಕ್ಕುಪತ್ರ ವಿತರಣೆ ವಿಳಂಬ ಆಗಬಾರದು.

ಈಗಾಗಲೇ ಎಲ್ಲೆಲ್ಲಿ ಸೈಟ್ ಅಭಿವೃದ್ಧಿ ಪಡಿಸಲಾಗಿದೆ ಅವುಗಳಿಗೆ ಫಲಾನುಭವಿಗಳ ಆಯ್ಕೆ ಹಾಗೂ ಹಕ್ಕುಪತ್ರ ರೆಡಿ ಮಾಡಿ. ನಿವೇಶನ ಅಭಿವೃದ್ಧಿ ಪಡಿಸುತ್ತಿರುವ ಜಾಗಗಳಲ್ಲಿ ಎಲ್ಲೆಲ್ಲಿ ತಕರಾರು, ಅಡಚಣೆ ಇದೆ ಅಲ್ಲಿಗೆ ತಹಶೀಲ್ದಾರ್, ಇಒ, ಸರ್ವೇಯರ್, ಆರ್.ಐಗಳು, ಸ್ಥಳೀಯ ಮುಖಂಡರು ಖುದ್ದು ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಮೇ‌.15 ರೊಳಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2000 ಸೈಟ್ ಗಳು ಸಿದ್ದ ಇರಬೇಕು ಇದು ಡಿಸಿ, ಸಿಇಒ ಜವಾಬ್ದಾರಿ ಎಂದರು.

*ಕುಡಿಯುವ ನೀರು ಸಮಸ್ಯೆ ತ್ವರಿತ ಪರಿಹಾರ ಒದಗಿಸಲು ಸೂಚನೆ* 

ಜಿಲ್ಲೆಯಾದ್ಯಂತ ಎಲ್ಲೆಲ್ಲಿ ಕುಡಿಯುವ ನೀರು ಸಮಸ್ಯೆ ಉಲ್ಬಣವಾಗಿದೆ.  ಅಲ್ಲಿ ಪರ್ಯಾಯವಾಗಿ ಖಾಸಗಿ ಬೋರ್ವೆಲ್, ರೈತರ ಬೊರ್ವೆಲ್ ಗಳ ಮೂಲಕ ನೀರು ಪೂರೈಕೆ ಮಾಡಿ. ಯಾವುದೇ ಗ್ರಾಮ, ನಗರ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ ಎಂದು ವರದಿ ಬರಬಾರದು. ಪಂಚಾಯಿತಿ ಪಿಡಿಒಗಳು ಬೆಳಿಗ್ಗೆ ಇಂದ ಸಂಜೆ ತನಕ ಕೇಂದ್ರ ಸ್ಥಾನದಲ್ಲಿ ಇದ್ದು, ಕುಡಿಯುವ ನೀರು ಸಮಸ್ಯೆ ನಿರ್ವಹಣೆ ಮಾಡಬೇಕು.‌ ಈಗಾಗಲೇ ಕುಡಿಯುವ ನೀರು ಸಮಸ್ಯೆ ಇರುವ ಜಾಗಗಳಲ್ಲಿ ಶೀಘ್ರ ಹೊಸ ಕೊಳವೆಬಾವಿಗಳನ್ನು ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪೂರೈಕೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಸಿಇಒ ಡಾ. ವಾಸಂತಿ ಅಮರ್, ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಗ್ಯಾರಂಟಿ ಯೋಜನೆ ಸಮಿತಿ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!