
ದೊಡ್ಡಬಳ್ಳಾಪುರ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ‘ಉರ್ದು ಹಬ್ಬ’ ಆಚರಣೆಯನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಜನತಾದಳವು ಎಂದಿಗೂ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ. ಜಾತ್ಯತೀತ ನಿಲುವಿನ ಆಧಾರದ ಮೇಲೆಯೇ ಪಕ್ಷವನ್ನು ಕಟ್ಟಲಾಗಿದೆ. ಎಲ್ಲ ಧರ್ಮ, ಸಮಾಜ ಹಾಗೂ ಆಚಾರ-ವಿಚಾರಗಳನ್ನು ಗೌರವಿಸಿ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಹೀಗಾಗಿ ಉರ್ದು ಹಬ್ಬದ ವಿಚಾರವನ್ನು ವಿಶೇಷವಾಗಿ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದರು.
ಒಂದು ಧರ್ಮವನ್ನು ಓಲೈಸಲು ಮತ್ತೊಂದು ಧರ್ಮವನ್ನು ಕೀಳಾಗಿ ನೋಡುವ ಮನೋಭಾವದಿಂದ ಹೊರಬರಬೇಕು. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸ್ವಾಮೀಜಿಗಳ ಮುಂದೆ ಸಿಎಂ ಹೇಳಿಕೆ ಖಂಡನೀಯ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವೀರಶೈವ ಸ್ವಾಮೀಜಿಗಳ ವಿಚಾರವಾಗಿ ನೀಡಿರುವ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸ್ವಾಮೀಜಿಗಳ ಮುಂದೆ ನಿಂತು ಮಾತನಾಡಿರುವ ರೀತಿ ಬಹಳ ಖಂಡನೀಯ. ‘ನಮ್ಮ ಸೇವೆ ಮಾಡಿದರೆ ನಿಮಗೆ ಸಹಕಾರ ನೀಡುತ್ತೇವೆ’ ಎಂಬ ರೀತಿಯ ಮಾತುಗಳನ್ನು ಸ್ವಾಮೀಜಿಗಳ ಮುಂದೆ ಹೇಳುವುದು ಸರಿಯಲ್ಲ. ಇಂತಹ ಉದ್ಧಟತನ ಹಾಗೂ ದುರಹಂಕಾರದ ಮಾತುಗಳನ್ನು ಮುಖ್ಯಮಂತ್ರಿ ಅವರು ಬಿಡಬೇಕು ಎಂದು ಆಗ್ರಹಿಸಿದರು.
ಎಲ್ಲರನ್ನೂ ಹಾಗೂ ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ಧಾರ್ಮಿಕ ಮುಖಂಡರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.