Categories: ಲೇಖನ

ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು……

ಶೌರ್ಯ, ಕ್ರೌರ್ಯ, ಆದರ್ಶ ಮತ್ತು ಎಚ್ಚರಿಕೆ…….

ಇಸ್ರೇಲ್ ದೇಶದ ದ್ವೇಷದ ಬೆಂಕಿ ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ…..

ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿದೆ. ತನ್ನ ವಿರೋಧಿಗಳನ್ನೆಲ್ಲಾ ಸರ್ವನಾಶ ಮಾಡಿ ತಾನು ಮಾತ್ರ ಅತ್ಯಂತ ಸುರಕ್ಷಿತವಾಗಿ ಇರಬೇಕು ಎನ್ನುವ ಸ್ವಾರ್ಥ ಮತ್ತು ಮಹತ್ವಕಾಂಕ್ಷೆ ಹೊಂದಿದೆ. ಅಂದರೆ ಸುಮಾರು ಒಂದು ಕೋಟಿ ಜನರ ಹಿತಕ್ಕಾಗಿ ಉಳಿದ ಸುಮಾರು 699 ಕೋಟಿ ಜನ ಕಷ್ಟ ಪಡಬೇಕಾಗಿದೆ. ಇದು ಕ್ರೌರ್ಯದ ಪರಾಕಾಷ್ಟೇ.

ಹೋಗಲಿ, ಇಸ್ರೇಲ್ ತನ್ನ ಸುರಕ್ಷತೆಗಾಗಿ ಮಾಡುತ್ತಿರುವ ಕಸರತ್ತುಗಳು ಶಾಂತಿ, ಸೌಹಾರ್ದತೆ, ಮಾತುಕತೆಯಿಂದಲ್ಲ, ಬದಲಾಗಿ ತನ್ನಲ್ಲಿರುವ ಬಾಂಬು, ಬಂದೂಕು, ದ್ರೋಣ್, ಮಿಸ್ಸೈಲ್, ಹಣ, ಆಧುನಿಕ ತಂತ್ರಜ್ಞಾನ ಮತ್ತು ಮೊಸಾದ್ ಎಂಬ ತನ್ನದೇ ಅತ್ಯಂತ ಬುದ್ಧಿವಂತ ಬೇಹುಗಾರಿಕೆ ಸಂಸ್ಥೆಯನ್ನು ಉಪಯೋಗಿಸಿಕೊಂಡು ತಾನು ಉಳಿಯಲು ಇತರರನ್ನು ನಾಶಪಡಿಸುತ್ತಿದೆ.

ಒಂದು ದೇಶ ಒಂದು ಹಂತಕ್ಕೆ ತನ್ನ ಭದ್ರತೆಗಾಗಿ ಮಾಡಿಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಅದು ತುಂಬಾ ಅತಿರೇಕಕ್ಕೆ ಹೋಗಿ ವಿಶ್ವದ ಬುಡಕ್ಕೇ ಬಂದಾಗ ಅದನ್ನು ಖಂಡಿಸಬೇಕಾಗಿರುವುದು ನಮ್ಮ ಕರ್ತವ್ಯವಲ್ಲವೇ. ಈಗ ಯುದ್ಧಕ್ಕಿಂತ ಮಾತುಕತೆ ಮತ್ತು ಹೊಂದಾಣಿಕೆ ಅನಿವಾರ್ಯವಲ್ಲವೇ.

ತನ್ನ ಸುತ್ತ ಇರುವ ಲೆಬನಾನ್ ಇರಾನ್, ಇರಾಕ್, ಟರ್ಕಿ, ಸಿರಿಯಾ, ಯೆಮನ್ ಮುಂತಾದ ಎಲ್ಲಾ ದೇಶಗಳನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಳ್ಳುವ ಹಪಾಹಪಿ ದುಷ್ಟತನ, ಸರ್ವಾಧಿಕಾರಿ ಮನೋಭಾವ ಮತ್ತು ವಾಸ್ತವವಲ್ಲದ ಚಿಂತನೆಯಲ್ಲದೇ ಮತ್ತೇನು ಅಲ್ಲ.

ಏಕೆಂದರೆ ಇಡೀ ವಿಶ್ವದಲ್ಲಿ ಎಂತಹುದೇ ಸಾಮ್ರಾಜ್ಯವೂ ಸಹ ಸದಾಕಾಲ ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಮೆರೆಯಲು ಸಾಧ್ಯವಿಲ್ಲ. ಒಂದಲ್ಲಾ ಒಂದು ಹಂತದಲ್ಲಿ ಪ್ರತಿಕ್ಷಣವೂ ಶತ್ರುಗಳಿಂದಲೇ ಸುತ್ತುವರಿದ ಸಮಾಜದಲ್ಲಿ ಬದುಕಬೇಕಿದೆ. ಆಗ ಆಯುಧಗಳ ಜೊತೆಗೆ ಶಾಂತಿ, ಸೌಹಾರ್ದತೆಯ ಮಾತುಕತೆಗಳು ಅಷ್ಟೇ ಮುಖ್ಯವಾಗುತ್ತದೆ.

ಇಲ್ಲಿ ಇಸ್ರೇಲ್ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ತನ್ನ ಶೌರ್ಯ ಪ್ರದರ್ಶಿಸಲು ಕ್ರೌರ್ಯವನ್ನು ಮೆರೆಯುತ್ತಿದೆ. ಇದು ವಿಶ್ವಕ್ಕೇ ಮಾರಕವಾಗುತ್ತಿರುವುದರಿಂದ ಇಸ್ರೆಲ್ ವರ್ತನೆಯನ್ನು ವಿಶ್ವದ ಪ್ರತಿ ಶಾಂತಿ ಪ್ರಿಯ ನಾಗರಿಕರು ಖಂಡಿಸಲೇಬೇಕಾಗಿದೆ.

ಅದರ ಜೊತೆಗೆ ಡೊನಾಲ್ಡ್ ಟ್ರಂಪ್ ಎಂಬ ವಿಕೃತ ವ್ಯಕ್ತಿಯೊಬ್ಬ ಇಸ್ರೇಲ್ ಜೊತೆ ಸಹಕರಿಸುತ್ತಿರುವುದರಿಂದ ಅದು ಇನ್ನಷ್ಟು ವಿಕೋಪಕ್ಕೆ ಹೋಗುತ್ತಿದೆ. ಇಲ್ಲಿಯವರೆಗೂ ಇಸ್ರೇಲ್ ನ ಶೌರ್ಯ ಸಾಹಸಗಳನ್ನು, ಆಧುನಿಕ ತಂತ್ರಜ್ಞಾನವನ್ನು ವಿಶ್ವ ಕೊಂಡಾಡುತ್ತಿತ್ತು. ಇದೀಗ ಅದರ ಕ್ರೌರ್ಯದ ಮುಖವಾಡ ಬಯಲಾಗಿದೆ.

ತನ್ನನ್ನು ತಾನು ಶಾಂತಿದೂತ ಜೀಸಸ್ ಎಂದು ಸ್ವತಃ ತನ್ನ ಸಾಮಾಜಿಕ ಜಾಲತಾಣ ಟ್ರುತ್ನಲ್ಲಿ ಹೇಳಿಕೊಳ್ಳುವ, ಪ್ರಚಾರ ಮಾಡುವ ಡೊನಾಲ್ಡ್ ಟ್ರಂಪ್ ಒಬ್ಬ ಮಾನಸಿಕ ಅಸ್ವಸ್ಥ ಎನ್ನಲು ಬೇರೆ ಕಾರಣ ಬೇಕಿಲ್ಲ. ಎಲ್ಲಿಯ ಜೀಸಸ್?ಎಲ್ಲಿಯ ಟ್ರಂಪ್? ಎರಡು ಸಂಪೂರ್ಣ ವಿರುದ್ಧ ದಿಕ್ಕಿನ ವ್ಯಕ್ತಿತ್ವಗಳು….

ಕೆಲವೊಮ್ಮೆ ಡೊನಾಲ್ಡ್ ಟ್ರಂಪ್ ಗೆ ಸಂಧಾನದ ಆಸಕ್ತಿ ಇದ್ದರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತ್ರ ಕೇವಲ ತನ್ನ ಶಕ್ತಿಯ ಮೇಲೆ ನಂಬಿಕೆ ಇಟ್ಟುಕೊಂಡು ಸರ್ವನಾಶದ ಪ್ರಯತ್ನಕ್ಕೆ ಮುನ್ನಡಿ ಬರೆಯುತ್ತಿದ್ದಾರೆ. ಅವರ ದಾಳಿಗಳು ಅತ್ಯಂತ ಭೀಕರವಾಗಿದೆ.

ಇಸ್ರೇಲ್ ಸುರಕ್ಷಿತವಾಗಿರಬೇಕಿದ್ದರೆ ತನ್ನ ಸುತ್ತಲಿನ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳನ್ನು ಸರ್ವನಾಶ ಮಾಡಬೇಕು ! ಅದು ಸಾಧ್ಯವೇ ?ಅಥವಾ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳು ಇಸ್ರೇಲನ್ನು ನಾಶ ಮಾಡಬೇಕು ! ಅದು ಒಳ್ಳೆಯದೇ ?ಖಂಡಿತ ಎರಡೂ ತಪ್ಪು. ಎಲ್ಲರೂ ಹೊಂದಾಣಿಕೆಯಿಂದ ಬದುಕಬೇಕಾಗಿರುವುದೇ ಈ ಕ್ಷಣದ ವಾಸ್ತವ.

ಕೆಲವೊಂದು ಮಿತಿಯನ್ನು ಹಾಕಿಕೊಳ್ಳದಿದ್ದರೆ ಮೂರನೇ ಮಹಾಯುದ್ಧಕ್ಕೆ ನೇರ ಹೊಣೆ ಇಸ್ರೇಲ್ ಮತ್ತು ಅದರ ಪ್ರಧಾನಿ
ನೆತನ್ಯಾಹು ಹೊರಬೇಕಾಗುತ್ತದೆ. ಜೊತೆಗೆ ಇಸ್ರೇಲ್ ಕೂಡ ಸರ್ವನಾಶದ ಭೀತಿಯನ್ನು ಎದುರಿಸಬೇಕಾಗುತ್ತದೆ.

ಇಸ್ರೇಲ್ ಎಂಬ ಜಗತ್ತಿನ ಅದ್ಬುತ ದೇಶ ಮತ್ತು ಭಾರತಕ್ಕೆ ಎಂದೂ ಮಾದರಿಯಾಗಲು ಸಾಧ್ಯವಿಲ್ಲದ ‌ದೇಶ….

ಭಾರತದ ಬಹಳಷ್ಟು ಜನರಿಗೆ ಇಸ್ರೇಲ್ ಎಂಬ ದೇಶದ ಬಗ್ಗೆ ತುಂಬಾ ಅಭಿಮಾನ, ಮೆಚ್ಚುಗೆ ಮತ್ತು ಪ್ರೀತಿ ಇದೆ. ಭಾರತ ಇಸ್ರೇಲ್ ಮಾದರಿಯಲ್ಲಿ ಬೆಳೆಯಬೇಕು ಎಂಬ ಆಸೆ ಇದೆ.

ಅದಕ್ಕೆ ವಿರುದ್ಧವಾಗಿ ಅದೇರೀತಿ ಮುಸ್ಲಿಮರು ವಿಶ್ವದಲ್ಲಿ ಅತ್ಯಂತ ಹೆಚ್ಚು ದ್ವೇಷಿಸುವ ದೇಶ ಕೂಡ ಇಸ್ರೇಲ್ ಆಗಿದೆ. ಅದು ಸಂಪೂರ್ಣ ನಾಶವಾಗಲಿ ಎಂದು ಅವರ ಒಳ ಮನಸ್ಸು ಹೇಳುತ್ತದೆ.

ಹಾಗಾದರೆ ಏನಿದು ಇಸ್ರೇಲ್ ಎಂಬ ದೇಶದ ವಿಶೇಷತೆ.

ಇಸ್ರೇಲ್ ದೇಶದ ಮೂಲ, ಅದರ ಉಗಮ, ಧರ್ಮ, ಅಲ್ಲಿನ ಜನಜೀವನ, ವಿಶ್ವಸಂಸ್ಥೆಯ ಮಾನ್ಯತೆ, ಪ್ಯಾಲಿಸ್ಟೈನ್ ಸಂಘರ್ಷ ಎಲ್ಲವನ್ನೂ ಗೂಗಲ್ ನಲ್ಲಿ ಓದಬಹುದು. ಆದರೆ ಇಲ್ಲಿ ಮುಖ್ಯವಾಗಿ ಇಸ್ರೇಲ್ ಮತ್ತು ಅದರ ಈಗಿನ ಪ್ರಭಾವವನ್ನು ನಾವು ಹೇಗೆ ಗ್ರಹಿಸಬಹುದು ಎಂಬುದರ ಸುತ್ತ ಒಂದು ನೋಟ…..

ಹೌದು, ಸುಮಾರು 90 ಲಕ್ಷ ಜನಸಂಖ್ಯೆ, ಸುಮಾರು 8000 ಚದರ ಮೈಲಿಯ ಚಿಕ್ಕ ದೇಶ ಇಸ್ರೇಲ್. ಆದರೆ ಅದರ ಸೈನಿಕ ಶಕ್ತಿ, ಅರ್ಥಿಕ ಶಕ್ತಿ, ತಂತ್ರಜ್ಞಾನ ವಿಶ್ವ ಶ್ರೇಷ್ಠ ಮಟ್ಟದಲ್ಲಿದೆ.

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ, ಭಾರತದ ರಾ, ಪಾಕಿಸ್ತಾನದ ಐಏಸ್ಐ ಏಜೆನ್ಸಿಗಳಿಗಿಂತ ಇಸ್ರೇಲ್ ನ ಮೊಸಾದ್ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಮತ್ತು ಸಾಬೀತು ಪಡಿಸಿದೆ.

ಮ್ಯೂನಿಚ್ ಒಲಂಪಿಕ್ಸ್ ನಲ್ಲಿ ಅದರ ಪುಟ್ಬಾಲ್ ಆಟಗಾರರನ್ನು ಪ್ಯಾಲಿಸ್ಟೈನ್ ಉಗ್ರರು ಮಾಡಿದ ಹತ್ಯಾಕಾಂಡ, ಮಾನವ ಇತಿಹಾಸದ ಭಯಾನಕ ಘಟನೆಗಳಲ್ಲಿ ಒಂದಾಗಿ ದಾಖಲಾಗಿದೆ.

ಅದೇರೀತಿ ಭಯೋತ್ಪಾದಕರಿಂದ ಇಸ್ರೇಲ್ ವಿಮಾನ ಅಪಹರಣವಾದಾಗ ಅದನ್ನು ಅದ್ಬುತ ಸಾಹಸ ಮಾಡಿ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು ಅದರ ಸಾಮರ್ಥ್ಯಕ್ಕೆ ಸಾಕ್ಷಿ.

ಇಡೀ ಇಸ್ರೇಲ್ ದೇಶವನ್ನು ಅದರ ಅಜನ್ಮ ಶತ್ರುಗಳಾದ ಮುಸ್ಲಿಂ ದೇಶಗಳು ಸುತ್ತುವರಿದಿವೆ. ಭಯೋತ್ಪಾದನೆಯ ಉತ್ತುಂಗದ್ದಾಗ ಐಸಿಸ್ ಕೂಡ ಅದರ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಅದು ಇಸ್ರೇಲ್ ದೇಶದ ಬಹುದೊಡ್ಡ ಸಾಮರ್ಥ್ಯ.

ಹಾಗಾದರೆ ಇಸ್ರೇಲ್ ಒಂದು ಶ್ರೇಷ್ಠ ದೇಶ ಮತ್ತು ಭಾರತಕ್ಕೆ ಅನುಕರಣೀಯ ದೇಶ ಎಂದು ಪರಿಗಣಿಸಬಹುದೆ ?

ಇಲ್ಲ, ಖಂಡಿತ ಇಲ್ಲ. ಇಸ್ರೇಲ್ ದೇಶದ ಅಸ್ತಿತ್ವವೇ ಒಂದು ವಿವಾದಾತ್ಮಕ ವಿಷಯ. ಅದನ್ನು ಹೊರತುಪಡಿಸಿ ಕಡಿಮೆ ಜನಸಂಖ್ಯೆಯ ಇಸ್ರೇಲ್ ಜ್ಯೂಯಿಷ್ ಜನಾಂಗವೇ ಒಂದು ಬಲಿಷ್ಠ ಅನುವಂಶೀಯ ಗುಣಗಳನ್ನು ಹೊಂದಿದೆ. ದೈಹಿಕ ಮತ್ತು ಮಾನಸಿಕ ಗಟ್ಟಿತನ ಅಪರೂಪವಾಗಿದೆ. ಅದರ ವಿದೇಶಾಂಗ ನೀತಿ ಆ ದೇಶ ಮಾತ್ರ ಅನುಸರಿಸಬಹುದಾದ ಅತ್ಯಂತ ಕಠಿಣ ನಿಯಮಗಳನ್ನು ಒಳಗೊಂಡಿದೆ. ನ್ಯಾಯ. ನೀತಿ. ಧರ್ಮಕ್ಕಿಂತ ಉಳಿವಿಗಾಗಿ ಎಂತಹ ಕೃತ್ಯಕ್ಕೂ ಸಿದ್ದವಾಗಿರುವುದು ಅದರ ಕಠೋರ ವಿದೇಶಾಂಗ ನೀತಿ.

ಅದನ್ನು ವಿಶ್ವದ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ, ಆಧ್ಯಾತ್ಮಿಕ ವಿಷಯದಲ್ಲಿ ಆಳವಾದ ನಂಬಿಕೆ ಇಟ್ಟಿರುವ, ಅನೇಕ ಪರಕೀಯರ ದಾಳಿಗೆ ಒಳಗಾಗಿರುವ, ವೈವಿಧ್ಯತೆ ಹೊಂದಿರುವ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ, ಬೃಹತ್ ಜನಸಂಖ್ಯೆಯ, ಅಲಿಪ್ತ ನೀತಿಯ ಭಾಗವಾಗಿರುವ ಭಾರತ ಯಾವ ಕೋನದಿಂದಲೂ ಅನುಸರಿಸಲು ಸಾಧ್ಯವಿಲ್ಲ.

ಒಬ್ಬ ಹಿಂದು ಧರ್ಮದ ವ್ಯಕ್ತಿ, ಮುಸ್ಲಿಮರನ್ನು ನಾನಾ ಕಾರಣಗಳಿಗಾಗಿ ದ್ವೇಷಿಸುವವರಾಗಿದ್ದರೆ,
ಮುಸ್ಲಿಮರ ಪ್ರಬಲ ವೈರಿಯಾದ ಕಾರಣಕ್ಕೆ ಇಸ್ರೇಲ್ ಅನ್ನು ಇಷ್ಟಪಡುವುದು ಒಂದು ರೀತಿಯ ಯೋಚನೆಯಾದರೆ,
ತನ್ನ ಧರ್ಮದ ಜನರು ವಾಸಿಸುವ ಪ್ರದೇಶವನ್ನು ಅತಿಕ್ರಮಣ ಮಾಡಿರುವ ಮತ್ತು ಅವರ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವ ಕಾರಣಕ್ಕಾಗಿ ಮುಸ್ಲಿಮರು ಇಸ್ರೇಲನ್ನು ದ್ವೇಷಿಸುವುದು ಇನ್ನೊಂದು ರೀತಿಯದು.

ನ್ಯಾಯ ನೀತಿ ಧರ್ಮದ ಆಧಾರದಲ್ಲಿ, ಇಸ್ರೇಲ್ ಎಂಬ ದೈತ್ಯ ಶಕ್ತಿಯ ದೇಶವನ್ನು, ಅದರ ದೌರ್ಜನ್ಯ, ಭೂಪ್ರದೇಶದ ಅತಿಕ್ರಮಣ ಮಾಡಿ ತಮ್ಮ ಅಧಿಪತ್ಯ ಸ್ಥಾಪಿಸಿರುವ, ಈಗಲೂ ಎರಡೂ ಕಡೆಯ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿರುವ ವಿವಾದಾತ್ಮಕ ದೇಶವನ್ನು ಭಾರತ ಯಾವ ಕಾರಣಕ್ಕೂ ಅನುಕರಿಸಬಾರದು ಮತ್ತು ಅದು ಸಾಧ್ಯವೂ ಇಲ್ಲ. ಆದರೆ ಅದರ ಶಕ್ತಿ ಸಾಮರ್ಥ್ಯಗಳನ್ನು, ತಂತ್ರಜ್ಞಾನದ ಬಳಕೆಯನ್ನು, ಶ್ರಮಜೀವನವನ್ನು ಒಳ್ಳೆಯ ಉದ್ದೇಶಗಳಿಗಾಗಿ ನಾವು ಕಲಿಯಬಹುದು.

ಕೆಲವು ವಿಷಯಗಳಲ್ಲಿ ಇಸ್ರೇಲ್ ಅತ್ಯಂತ ಸ್ಪೂರ್ತಿದಾಯಕ ಮತ್ತು ಕೆಲವು ವಿಷಯಗಳಲ್ಲಿ ಅತ್ಯಂತ ಕಠೋರ ನೀತಿ ನಿಯಮಗಳನ್ನು ಹೊಂದಿದೆ.

ಕೆಲವು ಪ್ರತಿಭೆಗಳು, ಸಾಮರ್ಥ್ಯಗಳು ಸ್ವಾಭಾವಿಕವಾಗಿ ಕೆಲವರಿಗೆ ಒಲಿದಿರುತ್ತವೆ. ಅದು ಕ್ರೀಡೆ, ಸಂಗೀತ, ರಾಜಕೀಯ, ವಿಜ್ಞಾನ, ಕಲೆ, ನಟನೆ ಏನೇ ಇರಲಿ ಅದನ್ನು ಅನುಕರಣೆ ಮಾಡುವುದಕ್ಕೆ ಬದಲಾಗಿ ಒಂದಷ್ಟು ಅಂಶಗಳನ್ನು ಅಳವಡಿಸಿಕೊಳ್ಳಬಹುದು. ಆದರೆ ನಮ್ಮದೇ ದಾರಿಯಲ್ಲಿ ಸಾಗುವುದು ಯಾವಾಗಲೂ ಉತ್ತಮ.

ವರ್ಷದ 24 ಗಂಟೆಯೂ ಯುದ್ಧ ಮಾಡುತ್ತಾ, ತನಗಾದ ಹಿಂಸೆಯ ಅನುಭವವನ್ನೇ ಇತರರಿಗೂ ನೀಡುತ್ತಿರುವ ಇಸ್ರೇಲ್ ಮಾನಸಿಕತೆ ಸ್ವೀಕಾರಾರ್ಹವಲ್ಲ….

ಅದೇರೀತಿ ಇಸ್ರೇಲ್ ನಮಗೆ ಆದರ್ಶ ಮತ್ತು ಎಚ್ಚರಿಕೆ ಎರಡನ್ನೂ ಹೇಳುತ್ತದೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

10 hours ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

1 day ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

2 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago